ಮೊದಲ ಓದು

‘ಮೂಡಲ ಮನೆ’ ಟೀವಿ ಧಾರಾವಾಹಿಯ ಶೀರ್ಷಿಕೆ ಗೀತೆ ‘ರೆಂಬಿಕೊಂಬಿಯಮ್ಯಾಲ...’ವನ್ನು ಬಾಲ್ಯದಲ್ಲಿ ಕೇಳಿ ಪ್ರೇರಿತನಾದ ಹುಡುಗನೊಬ್ಬ ಮುಂದೆ ಬರೆದ ಈ ಬರಹವೇ ‘ವಿಂಡೋ ಸೈಡ್‌ ಸೀಟ್‌’.

ವಿಂಡೋ ಸೈಡ್‌ ಸೀಟ್‌

ವಿಂಡೋ ಸೈಡ್‌ ಸೀಟ್‌
ಲೇ:
ಅರುಣಕುಮಾರ್‌ ನಾಗರಾಜ ದಿವಾಣಜೀ
ಪ್ರ: ಭಾರತ್‌ ಪ್ರಕಾಶನ, ಗೊವುರ, ಅಫಜಲ್‌ಪುರ ತಾಲ್ಲೂಕು, ಕಲಬುರ್ಗಿ

(ಪು: 136 ಬೆ: ₹ 120)

‘ಮೂಡಲ ಮನೆ’ ಟೀವಿ ಧಾರಾವಾಹಿಯ ಶೀರ್ಷಿಕೆ ಗೀತೆ ‘ರೆಂಬಿಕೊಂಬಿಯಮ್ಯಾಲ...’ವನ್ನು ಬಾಲ್ಯದಲ್ಲಿ ಕೇಳಿ ಪ್ರೇರಿತನಾದ ಹುಡುಗನೊಬ್ಬ ಮುಂದೆ ಬರೆದ ಈ ಬರಹವೇ ‘ವಿಂಡೋ ಸೈಡ್‌ ಸೀಟ್‌’. ಇದರ ಲೇಖಕರು ಅರುಣಕುಮಾರ್‌ ನಾಗರಾಜ ದಿವಾಣಜೀ. ಆ ಹಾಡೇ ಈ ಲೇಖಕರಿಗೆ ಬರವಣಿಗೆಯ ದಾರಿಯನ್ನು ತೋರಿದೆ. ಈ ಪುಸ್ತಕದಲ್ಲಿ ಇದು ಯಾವ ಬಗೆಯ ಬರಹ ಎಂಬ ಉಲ್ಲೇಖವಿಲ್ಲ. ಓದಿದ ಬಳಿಕ ಓದುಗರು ತಮ್ಮ ತಮ್ಮ ಭಾವ ಮತ್ತು ಭಕುತಿಗೆ ಅನುಸಾರವಾಗಿ ಇದಕ್ಕೆ ಹೆಸರನ್ನು ಕೊಟ್ಟುಕೊಳ್ಳಬಹುದು.

ಈ ಬರಹ ಮುಗ್ಧ ಹುಡುಗನೊಬ್ಬ ತನ್ನ ಅಮಾಯಕ ಕಣ್ಣುಗಳಲ್ಲಿ ಲೋಕವನ್ನು ನೋಡಿದ ಬಗೆಯನ್ನು ವರ್ಣಿಸುತ್ತದೆ. ಇದರಲ್ಲಿ ಬಾಲ್ಯದಿಂದ ಇನ್ನೂ ಬಿಡುಗಡೆಗೊಳ್ಳದ ಹುಡುಗನಿದ್ದಾನೆ. ಆತ ತನಗೆ ಕಂಡ ವ್ಯಕ್ತಿ, ನಗರ, ಹಳ್ಳಿ, ಪರಿಸರವನ್ನು ಸುಮ್ಮನೆ ದಾಖಲಿಸುತ್ತಾ ಹೋಗುತ್ತಾನೆ. ಇಲ್ಲಿ ಒಳ್ಳೆಯದು ಕೆಟ್ಟದರ ದ್ವಂದ್ವ ಇದೆ. ಕಿಟಕಿಯ ಬದಿ ಕುಳಿತ ಪ್ರಯಾಣಿಕ ತಾನು ಕೇಳಿದ, ಓದಿದ ವಿಷಯಗಳನ್ನು, ಕತೆಗಳನ್ನು, ಬದುಕಿನ ಆಗುಹೋಗುಗಳನ್ನು ಮೆಲುದನಿಯಲ್ಲಿ ವಿವರಿಸುತ್ತಾ ಹೋಗುವ ಬಗೆ ಇಲ್ಲಿದೆ. ಮುಗ್ಧತೆ ಮತ್ತು ಮುಕ್ತತೆ ಅರುಣಕುಮಾರ್‌ ಅವರ ಬರಹದ ಗುಣಗಳಾಗಿವೆ. ಆದ್ದರಿಂದ ಈ ಬರಹ ಬಾಲ್ಯವನ್ನು ದಾಟಿ ಬಂದ ಎಲ್ಲರ ಒಳಗೂ ಇಳಿಯಬಹುದು, ಆಪ್ತ ಎನ್ನಿಸಬಹುದು.

**

ರಾಘವಾಂಕ ಕವಿಯ ವಚನ ಹರಿಶ್ಚಂದ್ರ ಚಾರಿತ್ರ
ಲೇ: ಡಾ. ಜಿ. ಕೃಷ್ಣಪ್ಪ
ಪ್ರ: ವಂಶಿ ಪಬ್ಲಿಕೇಷನ್ಸ್‌, ನಂ. 4, ಗಾಯತ್ರಿ ಕಾಂಪ್ಲೆಕ್ಸ್‌, ಟಿ.ಬಿ. ಬಸ್‌ ನಿಲ್ದಾಣದ ಹತ್ತಿರ, ಬಿ.ಎಚ್. ರಸ್ತೆ, ಸುಭಾಷ್‌ನಗರ,ನೆಲಮಂಗಲ, ಬೆಂಗಳೂರು – 562123

(ಪು: 120 ಬೆ: ₹ 120)

‌ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಬೇಂದ್ರೆ ಕೃಷ್ಣಪ್ಪ ಅವರು ಸರಳಗನ್ನಡದಲ್ಲಿ ನಿರೂಪಿಸಿ ಕೊಟ್ಟಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಹರಿಶ್ಚಂದ್ರ ಕಥೆ ಓದುಗರ ಆಸಕ್ತಿಯನ್ನು, ಕುತೂಹಲವನ್ನು ಹೆಚ್ಚಿಸಿದ ಕಥಾನಕವಾಗಿತ್ತು. ಈಗಿನ ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಈ ಗದ್ಯ ನಿರೂಪಣೆ ರಾಘವಾಂಕನ ಮೂಲ ಕಾವ್ಯದತ್ತ ಓದುಗರನ್ನು ಕರೆದೊಯ್ಯಲು ನೆರವಾಗುವಂತಿದೆ ಮತ್ತು ರಾಘವಾಂಕನನ್ನು ಹೊಸದಾಗಿ ನೋಡುವಂತೆ ಮಾಡುತ್ತದೆ.

ಮೂಲಕಾವ್ಯದ ಎಲ್ಲ ವಿವರಗಳನ್ನು ಒಳಗೊಂಡು, ರಾಘವಾಂಕನ ಕವಿಸಮಯಗಳು ಮುಕ್ಕಾಗದಂತೆ ಗದ್ಯದಲ್ಲಿ ಮರುನಿರೂಪಿಸುವುದು ಕಷ್ಟದ ಕೆಲಸ. ಇದು ಅರ್ಥವನ್ನು ದಾಟಿಸುವ ಕಾಯಕವಲ್ಲ. ಕೃಷ್ಣಪ್ಪ ಅವರು ತಮ್ಮ ಕಾವ್ಯಗಂಧೀ ಗದ್ಯದಲ್ಲಿ ರಾಘವಾಂಕನನ್ನು ಮತ್ತೆ ಕಡೆದಿದ್ದಾರೆ. ಆ ಕಾವ್ಯಕ್ಕೆ ತಮ್ಮನ್ನು ತಾವು ಕೊಟ್ಟುಕೊಂಡು ಮಾಡಿರುವ ಈ ಬರವಣಿಗೆಯು ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದಾಗಿದೆ. ಹಾಗೆಂದೇ ಅವರು ಓದುಗರ ಆಸಕ್ತಿ ತುಂಡಾಗದಂತೆ, ರಾಘವಾಂಕನ ಕಾವ್ಯದ ಓದಿನಿಂದ ಓದುಗರು ತಣಿಯುವಂತೆ ಇದನ್ನು ಬರೆದಿದ್ದಾರೆ. ಜಿ.ಕೆ. ಶಿವಣ್ಣ ಅವರ ಸುಂದರವಾದ ಜಲವರ್ಣದ ಚಿತ್ರಗಳು ಬರವಣಿಗೆಯ ಕಾಂತಿಯನ್ನು, ಪ್ರಭೆಯನ್ನು ಹೆಚ್ಚಿಸಿವೆ.

**

ಬೆಳ್ಳಿ ಚೂರು ಮತ್ತು ಇತರ ಕವನಗಳು
ಲೇ:
ವಿಲಿಯಂ
ಪ್ರ: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ, ಶಿವಮೊಗ್ಗ ಜಿಲ್ಲೆ- 577429

(ಪು: 108 ಬೆ: ₹ 100)

ವಿಲಿಯಂ ಅವರ ‘ಬೆಳ್ಳಿ ಚೂರು ಮತ್ತು ಇತರ ಕವನಗಳು’ ಕವನ ಸಂಗ್ರಹ ತನ್ನ ವಿಶಿಷ್ಟ ಉಕ್ತಿಕ್ರಮದಿಂದ ಆಸಕ್ತರ ಗಮನ ಸೆಳೆಯುತ್ತದೆ. ಇಲ್ಲಿ ಕವಿತೆಗಳ ಜೊತೆಗೆ ಕಿರುಗವನಗಳೂ ಇವೆ. ‘ಗತಿಯೇನು?’ ಎಂಬ ಕಿರುಗವನ – ‘ದೇಹದೊಳಗೆ ರಕ್ತ/ ಹರಿಯುವ ಬದಲು/ ಜಾತಿಯೇ ಹರಿದರೆ/ ಹೃದಯದ ಗತಿಯೇನು?’ ಎಂದು ಕೇಳುತ್ತದೆ. ಮಾನವೀಯ ಸ್ತರದಲ್ಲಿ ವಿಸ್ತಾರವಾದ ಬದುಕಿನ ಕುರಿತು ಮಾತನಾಡುವ ಅವರ ಕವಿತೆಗಳು ಕ್ರಿಸ್ತನ ಅಂತಃಕರಣವನ್ನು ತಮ್ಮೊಳಗೆ ಇಟ್ಟುಕೊಂಡಿವೆ.

ಮುನ್ನುಡಿಯಲ್ಲಿ ಕೆ.ವಿ, ಅಕ್ಷರ ಅವರು, ವಿಲಿಯಂ ಅವರ ಕಾವ್ಯ ‘ಸೀಮಿತದೊಳಗಿನ ವೈಶಾಲ್ಯ’ವನ್ನು ತೋರುವಂತಹದ್ದು ಎಂದು ಗುರುತಿಸಿದ್ದಾರೆ. ಈ ಪರಿಕಲ್ಪನೆ ವಿಲಿಯಂ ಅವರ ಕಾವ್ಯವನ್ನು ಸರಿಯಾದ ರೀತಿಯಲ್ಲಿ ವಿವರಿಸುತ್ತದೆ. ‘ಬೆಳ್ಳ ಚೂರು’, ‘ಲೂಸಿ’, ‘ಮರ’, ‘ಗುರಿಕಾರ’, ಸ್ಥಾವರ’ ಕವಿತೆಗಳು ಇಲ್ಲಿನ ಮುಖ್ಯ ಕವಿತೆಗಳಾಗಿವೆ. ವಿಲಿಯಂ ಅವರ ಕಾವ್ಯದ ಸಾಲುಗಳ ಮಿಂಚುಗಳು ಓದುಗರನ್ನು ಸೆಳೆವ ಚುಂಬಕ ಗುಣವನ್ನು ಹೊಂದಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017