ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನೆಗಲ್‌ ದೇಶಕ್ಕೆ ಬೆಂಗಳೂರಿನ ಶೌಚಾಲಯ

₹12 ಸಾವಿರ ವೆಚ್ಚದಲ್ಲಿ ಸರಳ ಶೌಚಾಲಯ ನಿರ್ಮಾಣ ಮಾಡಿರುವ ಎಂಜಿನಿಯರ್‌ ರಾಜಸಿಂಹ
Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ನಗರದ ಎಂಜಿನಿಯರ್‌ ಎಚ್‌.ರಾಜಸಿಂಹ ಅವರು ಅಭಿವೃದ್ಧಿಪಡಿಸಿರುವ ಕಡಿಮೆ ವೆಚ್ಚದ, ಸರಳ ಶೌಚಾಲಯದ ಮಾದರಿಯನ್ನು ಅಳವಡಿಸಿಕೊಳ್ಳಲು ಸೆನೆಗಲ್‌ ದೇಶದ ಜಿಂಗ್ವಿನ್‌ಚೊರ್‌ ನಗರ ಒಪ್ಪಂದ ಮಾಡಿಕೊಂಡಿದೆ.
 
ಏನಿದರ ವಿಶೇಷ: ಶೌಚಾಲಯ ನಿರ್ಮಿಸಲು ಅಗತ್ಯವಿರುವ  ಕಮೋಡ್‌, ಕಾಂಕ್ರೀಟ್‌ ಹಲಗೆಗಳು, ಬಾಗಿಲು, ಜಂಕ್ಷನ್‌ ಬಾಕ್ಸ್‌, ಪಿಟ್‌ಗಳಲ್ಲಿ ಅಳವಡಿಸುವ ಮಲ್ಟಿ ವಾಲ್ವ್‌ ಪಾಲಿಕಾರ್ಬೋನೇಟ್‌ ಹಾಳೆ, ನಟ್‌ ಹಾಗೂ ಬೋಲ್ಟ್‌ಗಳನ್ನು ಹೊಂದಿರುವ  ಕಿಟ್‌ ಅನ್ನು ರಾಜಸಿಂಹ  ಅವರು ರೂಪಿಸಿದ್ದಾರೆ.

ಇದನ್ನು ಬಳಸಿ ಒಂದೇ ದಿನದಲ್ಲಿ   ಶೌಚಾಲಯವನ್ನು ನಿರ್ಮಿಸಬಹುದು. ಇದಕ್ಕೆ ತಗಲುವ ವೆಚ್ಚ ಕೇವಲ ₹ 12 ಸಾವಿರ. 
ಮೇಸ್ತ್ರಿ, ಪ್ಲಂಬರ್‌ ಬೇಕಿಲ್ಲ: ಈ ಶೌಚಾಲಯ ನಿರ್ಮಿಸಲು ಮೇಸ್ತ್ರಿ ಹಾಗೂ ಪ್ಲಂಬರ್‌ ಅಗತ್ಯವಿಲ್ಲ. ಮನೆಯವರೇ ನಿರ್ಮಿಸಲು ಸುಲಭವಾಗುವಂತಹ ವಿನ್ಯಾಸವನ್ನು ಇದು ಹೊಂದಿದೆ. 
 
‘ಒಂದೂವರೆ ಇಂಚು ದಪ್ಪದ ಕಾಂಕ್ರೀಟ್‌ (ಎಂ40 ದರ್ಜೆ) ಹಲಗೆಗಳನ್ನು ನೆಟ್‌ ಹಾಗೂ ಬೋಲ್ಟ್‌ಗಳ ಸಹಾಯದಿಂದ ಜೋಡಿಸಿದರೆ  ಗೋಡೆಗಳು ಹಾಗೂ ಚಾವಣಿ ಸಿದ್ಧ.  ಅದರೊಳಗೆ  ಕಮೋಡ್‌ ಅಳವಡಿಸಬಹುದು.  ಎರಡು ಇಂಗುಗುಂಡಿಗಳಿಗೆ  ಸಂಪರ್ಕ ಕಲ್ಪಿಸುವ ಕೊಳವೆಗಳನ್ನೂ ಸೇರಿಸುವ ಜಂಕ್ಷನ್‌ ಬಾಕ್ಸ್‌ಗೆ ಕಮೋಡ್‌ ಅನ್ನು ಜೋಡಿಸಬೇಕು.
 
ಒಂದು ಇಂಗುಗುಂಡಿಗೆ  ಸಂಪರ್ಕ ಕಲ್ಪಿಸುವಾಗ, ಇನ್ನೊಂದು ಗುಂಡಿಯ ಕೊಳವೆ ಮುಚ್ಚುವಂತೆ ಇದನ್ನು ರೂಪಿಸಲಾಗಿದೆ. ಈ ಮಾದರಿಗೆ ನಾನು ಪೇಟೆಂಟ್‌ ಪಡೆದಿದ್ದೇನೆ’ ಎಂದು  ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ತಾಂತ್ರಿಕ ಸಲಹೆಗಾರರಾಗಿರುವ ರಾಜಸಿಂಹ ವಿವರಿಸಿದರು. 
 
ಕಡಿಮೆ ಜಾಗ: ‘ಇಡೀ ಶೌಚಾಲಯಕ್ಕೆ (ಇಂಗುಗುಂಡಿ ಸಹಿತ ) 11x8 ಅಡಿ ಜಾಗ ಸಾಕು. ಕೊಠಡಿ ನಿರ್ಮಿಸಲು 3x4  ಅಡಿ ಜಾಗ ಸಾಕು. ಚಾವಣಿಯಲ್ಲಿ ನೀರಿನ ತೊಟ್ಟಿ ಹಾಗೂ ಸೌರ ದೀಪ ಅಳವಡಿಸಲು ಹೆಚ್ಚುವರಿ ವೆಚ್ಚವಾಗುತ್ತದೆ. ಗುಜರಾತ್‌ನ ಆನಂದ್‌ನಲ್ಲಿ  1 ಸಾವಿರ  ಹಾಗೂ ದಿಯುವಿನಲ್ಲಿ 500 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೇವೆ’ ಎಂದರು. 
 
‘ಜಿಂಗ್ವಿನ್‌ಚೊರ್‌ ನಗರ 2.3 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ 45ರಷ್ಟು ಮನೆಗಳಲ್ಲಿ ಶೌಚಾಲಯ ಇಲ್ಲ. ಕಡಿಮೆ ವೆಚ್ಚದಲ್ಲಿ ಸದೃಢ ಶೌಚಾಲಯ ನಿರ್ಮಿಸುವ ಕುರಿತು  ಇಂಟರ್‌ನೆಟ್‌ನಲ್ಲಿ ಪರಿಶೀಲಿಸಿದಾಗ ಜಯಸಿಂಹ ಅವರು ಅಭಿವೃದ್ಧಿಪಡಿಸಿದ ಮಾದರಿ ಕಣ್ಣಿಗೆ ಬಿತ್ತು’ ಎಂದು ಅಲ್ಲಿನ ಮೇಯರ್‌ ಸೆಡೌ ಸಾನೆ ತಿಳಿಸಿದರು.
 
‘ಪ್ರಾಯೋಗಿಕವಾಗಿ 200 ಶೌಚಾಲಯಗಳನ್ನು ನಿರ್ಮಿಸುತ್ತೇವೆ.  ಜನರಿಗೆ  ಮೆಚ್ಚುಗೆಯಾದರೆ ಇನ್ನಷ್ಟು ಶೌಚಾಲಯ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ಈ ಯೋಜನೆಗೆ ವಿಶ್ವಬ್ಯಾಂಕ್‌ ಹಾಗೂ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ನೆರವು ಒದಗಿಸುತ್ತಿದೆ’ ಎಂದು ಮೇಯರ್‌ ಜೊತೆಗೆ ಬಂದಿರುವ ಆಫ್ರಿಕನ್‌ ಬಯೊರಿಸೋರ್ಸ್‌ ಕಂಪೆನಿಯ ಪ್ರಧಾನ ವ್ಯವಸ್ಥಾಪಕಿ ನದೆಯೇ ಫತಾವು ಕೌಲಿಬಾಲಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಕಡಿಮೆ ವೆಚ್ಚದ ಸಮುದಾಯ ಶೌಚಾಲಯ’
‘ಪುರುಷರಿಗೆ ಹಾಗೂ ಮಹಿಳೆಯರಿಗೆ ತಲಾ ಆರು ಶೌಚಾಲಯ, ನಿರ್ವಹಣಾ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಸೌಲಭ್ಯ ಇರುವ ಸಮುದಾಯ ಶೌಚಾಲಯದ ಮಾದರಿಯನ್ನು ಅಭಿವೃದ್ಧಿಪಡಿಸಿದ್ದೇನೆ’ ಎಂದು ರಾಜಸಿಂಹ  ತಿಳಿಸಿದರು.
ಶಾಲೆಗಳಿಗೆ ಪ್ರತ್ಯೇಕ ಮಾದರಿ: ಶಾಲೆಗಳಿಗಾಗಿ, ಶೌಚಾಲಯ ಹಾಗೂ ಮೂತ್ರಾಲಯಗಳ ಸೌಲಭ್ಯವಿರುವ ಮಾದರಿಯನ್ನು ಅವರು  ಅಭಿವೃದ್ಧಿಪಡಿಸಿದ್ದಾರೆ.

‘ಇದರಲ್ಲಿ ಎರಡು ಶೌಚಾಲಯ, ಐದು ಮೂತ್ರಾಲಯ, ಎರಡು ಕೈತೊಳೆಯುವ ಬೇಸಿನ್‌ಗಳನ್ನುಅಳವಡಿಸಬಹುದು.  ಶಾಲೆಗಳಲ್ಲಿ ಒಂದು ಕಮೋಡ್‌, ಒಂದು ಮೂತ್ರಾಲಯ ಹಾಗೂ ಕೈತೊಳೆಯುವ ಬೇಸಿನ್‌ ಹೊಂದಿರುವ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಈಗ ₹1.2 ಲಕ್ಷ ವೆಚ್ಚ ಮಾಡುತ್ತಿದೆ. ನಾನು ಅಭಿವೃದ್ಧಿ ಪಡಿಸಿದ ಮಾದರಿಯ ಶೌಚಾಲಯವನ್ನು  ಅಷ್ಟೇ ವೆಚ್ಚದಲ್ಲಿ ನಿರ್ಮಿಸಬಹುದು’ ಎಂದರು.
 
* ಜನರು ಸುಲಭದಲ್ಲಿ ಶೌಚಾಲಯ ನಿರ್ಮಿಸಬೇಕೆಂಬುದು ನನ್ನ ಉದ್ದೇಶ. ಯಾರಾದರೂ, ಮುಂದೆ ಬಂದರೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಒದಗಿಸಲು  ನಾನು ಸಿದ್ಧ
ಎಚ್‌.ರಾಜಸಿಂಹ, ಕೆಐಎಡಿಬಿ, ತಾಂತ್ರಿಕ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT