ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟಣೆ ತಡೆಯಲು ಇವೆ ‘ಹಲವು ಮಾರ್ಗ’

ಉಕ್ಕಿನ ಸೇತುವೆ ರದ್ದಾದರೂ ಚಿಂತೆ ಅನಗತ್ಯ: ಸಾರಿಗೆ ತಜ್ಞರ ಅಭಿಪ್ರಾಯ
Last Updated 4 ಮಾರ್ಚ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ವಿಮಾನ ನಿಲ್ದಾಣ ತಲುಪುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಮಾಡಲು   ಅನೇಕ ಮಾರ್ಗೋಪಾಯಗಳಿವೆ.
ಈ ಪೈಕಿ  ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಸುಲಭದ ಹಾಗೂ ಕಡಿಮೆ ವೆಚ್ಚದಲ್ಲಿ ಈಡೇರಿಸಬಹುದಾದ ಉಪಾಯ ಎನ್ನುತ್ತಾರೆ ಸಂಚಾರ ತಜ್ಞರು.

ದುಬಾರಿ ಉಕ್ಕಿನ ಸೇತುವೆಯನ್ನು ಕೈಬಿಟ್ಟಿರುವ ಸರ್ಕಾರ ತ್ವರಿತಗತಿಯಲ್ಲಿ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಆಗ ನಗರದ ಎಲ್ಲ ಕಡೆಯ ವಾಹನಗಳು ಒಂದೇ ಮಾರ್ಗವನ್ನು ಬಳಸಿ ವಿಮಾನ ನಿಲ್ದಾಣವನ್ನು ತಲುಪುವುದು ತಪ್ಪುತ್ತದೆ.  ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಇದನ್ನು ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಸಾರಿಗೆ ತಜ್ಞ ಎಂ.ಎನ್‌.ಶ್ರೀಹರಿ.

ಪರ್ಯಾಯ ಮಾರ್ಗಗಳು ಯಾವುವು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ  ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಹೆಣ್ಣೂರು ಮುಖ್ಯರಸ್ತೆ, ಥಣಿಸಂದ್ರ ರಸ್ತೆ ಹಾಗೂ ಮಾಗಡಿ ರಸ್ತೆ ಮೂಲಕ ಪರ್ಯಾಯ ಮಾರ್ಗಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಪೈಕಿ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.  ಇನ್ನೊಂದೆಡೆ,  ಹೊಸಕೋಟೆ ಕಡೆಯಿಂದ ಹಾಗೂ ರಾಜಾನುಕುಂಟೆ ಕಡೆಯಿಂದ ವಿಮಾನನಿಲ್ದಾಣಕ್ಕೆ ತಲುಪುವ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವಗಳನ್ನೂ ಲೋಕೋಪಯೋಗಿ ಇಲಾಖೆ ಹೊಂದಿದೆ.

 ಹೆಣ್ಣೂರು ಮುಖ್ಯ ರಸ್ತೆ
(ಪೂರ್ವ ಕಾರಿಡಾರ್‌)

ಹೆಣ್ಣೂರು ರಸ್ತೆಯು ಬೆಂಗಳೂರು ಹೃದಯ ಭಾಗದಿಂದ ಪುಲಕೇಶಿ ನಗರ (ಫ್ರೇಜರ್‌ ಟೌನ್‌) ಮಾರ್ಗವಾಗಿ ಹೆಣ್ಣೂರು ರಸ್ತೆ (ಹೊರ ವರ್ತುಲ ರಸ್ತೆ ವೃತ್ತ)– ಕಣ್ಣೂರು ವೃತ್ತ– ಬಾಗಲೂರು ವೃತ್ತ– ಬಂಡಿಕೊಡಿಗೇಹಳ್ಳಿ– ಮೈಲನಹಳ್ಳಿ ಮಾರ್ಗವಾಗಿ ವಿಮಾನ ನಿಲ್ದಾಣದ ನೈರುತ್ಯ  ತಡೆಗೋಡೆಯನ್ನು ಸಂಪರ್ಕಿಸುತ್ತದೆ.  ಇಂದಿರಾನಗರ, ಬಾಣಸವಾಡಿ ಕಡೆಯವರೂ ಈ ರಸ್ತೆಯನ್ನು ಬಳಸಬಹುದು. 

ಹೊರವರ್ತುಲ ರಸ್ತೆ– ಹೆಣ್ಣೂರು ವೃತ್ತದಿಂದ ವಿಮಾನ ನಿಲ್ದಾಣಕ್ಕೆ ಒಟ್ಟು ದೂರ 21.48 ಕಿ.ಮೀ. ಪ್ರಸ್ತುತ ನಗರದ ಪೂರ್ವ ಭಾಗದ ನಾಗರಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಅಂದಾಜು  26.30 ಕಿ.ಮೀ  ಕ್ರಮಿಸಬೇಕು. ಪರ್ಯಾಯ ಮಾರ್ಗದಿಂದ ಅಂದಾಜು 4.82 ಕಿ.ಮೀ. ಉಳಿತಾಯವಾಗುತ್ತದೆ.

ಈ ಹಿಂದೆ ಹೊರವರ್ತುಲ ರಸ್ತೆಯಿಂದ ಮೈಲನಹಳ್ಳಿವರೆಗಿನ ರಸ್ತೆಯನ್ನು ಬಿಬಿಎಂಪಿ  ಅಭಿವೃದ್ಧಿ ಪಡಿಸಿತ್ತು. ಈಗ  ಲೋಕೋಪಯೋಗಿ ಇಲಾಖೆ  ಮೈಲನಹಳ್ಳಿ– ಬೇಗೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ರಸ್ತೆ ಅಭಿವೃದ್ಧಿ ಮಾಡುತ್ತದೆ. ವಿಮಾನನಿಲ್ದಾಣದ ನೈರುತ್ಯ ತಡೆಗೋಡೆಯನ್ನು ಒಡೆದು ಸಂಪರ್ಕ ಕಲ್ಪಿಸಲಾಗಿದೆ.

ಮಾಗಡಿ ರಸ್ತೆ (ಪಶ್ಚಿಮ ಕಾರಿಡಾರ್‌): ನಗರದ ಪಶ್ಚಿಮ ಭಾಗದಿಂದ ವಿಮಾನ ನಿಲ್ದಾಣಕ್ಕೆ ಮಾಗಡಿ ರಸ್ತೆಯಿಂದ ಬಸವೇಶ್ವರನಗರ ವೃತ್ತ– ಮಹಾಲಕ್ಷ್ಮಿ ಬಡಾವಣೆ (ಕಂಠೀರವ ಸ್ಟುಡಿಯೊ ವೃತ್ತ)– ಜಾಲಹಳ್ಳಿ ವೃತ್ತ– ಗಂಗಮ್ಮ ವೃತ್ತ– ಎಂ.ಎಸ್‌.ಪಾಳ್ಯ ವೃತ್ತ– ಮದರ್‌ ಡೇರಿ ವೃತ್ತ– ಯಲಹಂಕ ಠಾಣೆ ವೃತ್ತ– ಕೋಗಿಲು ಮಾರ್ಗವಾಗಿ ಬಳ್ಳಾರಿ ರಸ್ತೆಗೆ ಸಂಪರ್ಕಿಸಬಹುದು.  ಈ ಮಾರ್ಗದಲ್ಲಿ ಹೊರವರ್ತುಲ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಒಟ್ಟು ದೂರ 30.36 ಕಿ.ಮೀ. ಪಶ್ಚಿಮ ಭಾಗದ ಜನರಿಗೆ ವಿಮಾನ ನಿಲ್ದಾಣಕ್ಕೆ ತೆರಳಲು  ಈ ಬಳಸಬಹುದು. ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ.

ಥಣಿಸಂದ್ರ ಮುಖ್ಯ ರಸ್ತೆ (ಪೂರ್ವ ಕಾರಿಡಾರ್‌): ಥಣಿಸಂದ್ರ ರಸ್ತೆಯು ಬೆಂಗಳೂರು ಮಧ್ಯ ಭಾಗದಿಂದ ಶಿವಾಜಿನಗರ ಮಾರ್ಗವಾಗಿ ಟ್ಯಾನರಿ ರಸ್ತೆ– ಶಾಂಪುರ ರಸ್ತೆ– ನಾಗವಾರ ರಸ್ತೆ– ಥಣಿಸಂದ್ರ ರಸ್ತೆ– ಬೆಳ್ಳಹಳ್ಳಿ ವೃತ್ತ– ಬಾಗಲೂರು ರಸ್ತೆ– ಸಾತನೂರು ರಸ್ತೆ– ಬಾಗಲೂರು ಗ್ರಾಮ– ಬಂಡಿಕೊಡಿಗೇಹಳ್ಳಿ– ಮೈಲನಹಳ್ಳಿ ಮಾರ್ಗವಾಗಿ ವಿಮಾನ ನಿಲ್ದಾಣ ಸಂಪರ್ಕಿಸಬಹುದು. ಹೊರವರ್ತುಲ ರಸ್ತೆಯ ನಾಗವಾರ ವೃತ್ತದಿಂದ ವಿಮಾನ ನಿಲ್ದಾಣಕ್ಕೆ 20.63 ಕಿ.ಮೀ  ದೂರ ಇದೆ.

ಪ್ರಸ್ತುತ ನಗರದ ಕೇಂದ್ರ ಭಾಗದ ಜನರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು ಒಟ್ಟು ದೂರ 22 ಕಿ.ಮೀ   ಆಗುತ್ತದೆ. ಪರ್ಯಾಯ ಮಾರ್ಗದಿಂದ 1.57 ಕಿ.ಮೀ. ಕಡಿತ ಆಗಲಿದೆ. ಥಣಿಸಂದ್ರ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ  ಚಾಲನೆ ನೀಡಲಾಗಿದೆ. ರಜಾಕ್‌ ಪಾಳ್ಯ, ಹೂವಿನಾಯಕನಹಳ್ಳಿ, ಮಹದೇವ ಕೊಡಿಗೇಹಳ್ಳಿ ಮೂಲಕ ಸಿಂಗಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳನ್ನು ಬಳಸಿ ಮೈಲನಹಳ್ಳಿ ತಲುಪುವುದು ಸುಲಭವಾಗಲಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.

ಬೂದಿಗೆರೆ ಕ್ರಾಸ್‌ ಮಾರ್ಗ: ಹೊಸಕೋಟೆ, ಬೂದಿಗೆರೆ ಕ್ರಾಸ್‌ನಿಂದ ಮೈಲನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು  ಲೋಕೋಪಯೊಗಿ ಇಲಾಖೆ ಮುಂದಿದೆ. ಬೂದಿಗೆರೆ ಕ್ರಾಸ್‌ನಿಂದ ಮೈಲನಹಳ್ಳಿ ರಸ್ತೆ (23 ಕಿ.ಮೀ. ದೂರ) ವೈಟ್‌ ಫೀಲ್ಡ್‌, ಕೆ.ಆರ್‌.ಪುರ ಕಡೆಯ ಪ್ರಯಾಣಿಕರಿಗೆ ಈ ಮಾರ್ಗ ಅನುಕೂಲಕರ. ಸದ್ಯಕ್ಕೆ ಎರಡು ಪಥಗಳನ್ನು ಹೊಂದಿರುವ ಈ ರಸ್ತೆಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಲು ಇಲಾಖೆ ಯೋಜನೆ ರೂಪಿಸಿದೆ. ಆನೇಕಲ್‌–ಕಾಡುಗೋಡಿ – ಹೊಸಕೋಟೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಇಲಾಖೆ ಹೊಂದಿದೆ. ಈ ಪ್ರದೇಶಗಳ ಜನರು ನಗರದ ಕೇಂದ್ರ ಪ್ರದೇಶವನ್ನು ಬಳಸದೆಯೇ ವಿಮಾನ ನಿಲ್ದಾಣವನ್ನು ತಲುಪಲು ಇದರಿಂದ ಸಾಧ್ಯವಾಗಲಿದೆ.

ಬೂದಿಗೆರೆಯಿಂದ ಬಾಗಲೂರು ರಸ್ತೆಯನ್ನು ಅಭಿವೃದ್ಧಿಪಡಿಸುವ  ₹ 27 ಕೋಟಿ ವೆಚ್ಚದ ಯೋಜನೆಯನ್ನು ಲೊಕೋಪಯೋಗಿ ಇಲಾಖೆ ಈಗಾಗಲೇ ಅನುಷ್ಠಾನಗೊಳಿಸುತ್ತಿದೆ. 

ರಾಜಾನುಕುಂಟೆ ಮಾರ್ಗ: ದೊಡ್ಡಬಳ್ಳಾಪುರ– ರಾಜಾನುಕುಂಟೆ–ದೇವನಹಳ್ಳಿ ಮಾರ್ಗವನ್ನೂ ಇಲಾಖೆ ಅಭಿವೃದ್ಧಿಪಡಿಸುವ ಪ್ರಸ್ತಾವ ಹೊಂದಿದೆ.  ಸದ್ಯಕ್ಕೆ ಎರಡು ಪಥಗಳನ್ನಷ್ಟೇ ಹೊಂದಿರುವ ಈ ರಸ್ತೆಯನ್ನು ಚತುಷ್ಪಥಗೊಳಿಸುವ ಉದ್ದೇಶವಿದೆ.  ನೆಲಮಂಗಲ, ಹೆಸರಘಟ್ಟ, ದಾಬಸ್‌ಪೇಟೆ ಕಡೆಯಿಂದ ವಿಮಾನನಿಲ್ದಾಣವನ್ನು ತಲುಪುವವರು ಈ ಮಾರ್ಗವನ್ನು ಬಳಸಿಕೊಳ್ಳಬಹುದು. ಈ ಮಾರ್ಗವು ವಿದ್ಯಾನಗರ ಕ್ರಾಸ್‌ ಬಳಿ ಬಳ್ಳಾರಿ ರಸ್ತೆಯನ್ನು ಸೇರುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT