ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಬರಲೇ ಇಲ್ಲ ಸಿ.ಡಿ. ರಹಸ್ಯ!

Last Updated 5 ಮಾರ್ಚ್ 2017, 5:00 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌  ಹಾಗೂ ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ಮಂಗಳವಾರ ಘರ್ಷಣೆ ನಡೆದು, ಸದಸ್ಯೆಯೊಬ್ಬರು ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕೆ ಕಾರಣವಾಗಿದ್ದು ಕಾಂಗ್ರೆಸ್‌ನ  ಜಿ.ಕೆ.ವೆಂಕಟೇಶ್‌ ಪ್ರದರ್ಶಿಸಿದ ಸಿ.ಡಿ.
‘ಈ ಸಿ.ಡಿ.ಯಲ್ಲಿ ಬಿಜೆಪಿ ಮುಖಂಡರ ಅಕ್ರಮಗಳ ಕುರಿತ ದಾಖಲೆಗಳಿವೆ’ ಎಂದು ಅವರು ಹೇಳುತ್ತಿದ್ದಂತೆಯೇ ಕಮಲ ಪಾಳಯದ ಸದಸ್ಯರೆಲ್ಲ ಮುಗಿಬಿದ್ದರು. 
ಅದರಲ್ಲಿ ನಿಜಕ್ಕೂ ಏನಿತ್ತು ಎಂಬುದು ಬಿಜೆಪಿಯವರಿಗೆ ಮಾತ್ರವಲ್ಲ, ಕಾಂಗ್ರೆಸ್‌ ಸದಸ್ಯರ ಪಾಲಿಗೂ ನಿಗೂಢವಾಗಿಯೇ ಉಳಿದಿದೆ.
‘ಸಿ.ಡಿ.ಯಲ್ಲಿ ದಾಖಲೆಗಳಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಿಂದ ನಮ್ಮ ಪಕ್ಷಕ್ಕೆ ಲಾಭವೇ ಆಯಿತು’ ಎಂದು ಕಾಂಗ್ರೆಸ್‌ನ ಕೆಲವು ಸದಸ್ಯರು ಖಾಸಗಿಯಾಗಿ ಹೇಳಿದರು.
ಈ ಸಿ.ಡಿ.ಯ ವಿಚಾರವನ್ನೇ ದೊಡ್ಡದು ಮಾಡಿ ‘ಪೌರುಷ’ ಮೆರೆದು,  ಮಾಧ್ಯಮಗಳಿಂದ ‘ಅಶಿಸ್ತಿನ ವರ್ತನೆ’ ಎಂದು ಹಣೆಪಟ್ಟಿ ಕಟ್ಟಿಸಿಕೊಂಡ ಬಿಜೆಪಿ ಸದಸ್ಯರು ವೆಂಕಟೇಶ್‌ ಅವರಿಗೆ ಸುಖಾ ಸುಮ್ಮನೆ ಪ್ರಚಾರ ದೊರಕಿಸಿಕೊಟ್ಟಿದ್ದಕ್ಕೆ  ಬೇಸರಪಟ್ಟುಕೊಳ್ಳುತ್ತಿದ್ದಾರೆ.
‘ಸಿ.ಡಿ.ಯಲ್ಲಿರುವುದನ್ನು ಎರಡು ದಿನಗಳಲ್ಲಿ ಬಹಿರಂಗ ಮಾಡುತ್ತೇನೆ’ ಎಂದಿದ್ದ ವೆಂಕಟೇಶ್‌,  ಅಲ್ಲಿಂದೀಚೆಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.   ಹಾಗಾಗಿ  ಸಿ.ಡಿ.ಯಲ್ಲಿ ನಿಜಕ್ಕೂ ದಾಖಲೆಗಳಿದ್ದವೇ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಫಿಫ್ಟಿ–ಫಿಪ್ಟಿ: ಸಾಯೋದು ನಾವೇ...

ಮಂಡ್ಯ: ‘ರೈತರ ಸಾಲ ಮನ್ನಾ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ‘ಫಿಫ್ಟಿ–ಫಿಫ್ಟಿ’ ಆಡುವ ಬಗ್ಗೆ ಹೇಳುತ್ತಿವೆ. ಅವರು ಆಡದಿದ್ದರೆ ಅವರಿಗೇನು ನಷ್ಟ ಇಲ್ಲ. ಸಾಯೋದು ನಾವೇ...’ ಎಂದು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಹೇಳಿದರು.
ಸಾಲ ಮನ್ನಾ ವಿಷಯವನ್ನು ಕ್ರಿಕೆಟ್‌ಗೆ ಹೋಲಿಸಿ ಮಾತನಾಡಿದ ಅವರು, ಜತೆಗಿದ್ದವರಲ್ಲಿ ನಗೆಯುಕ್ಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ವಿಷಯ ಬಂದಾಗಲೆಲ್ಲ, ‘ ಕೇಂದ್ರ ಸರ್ಕಾರ ಅರ್ಧದಷ್ಟು ಸಾಲ ಮನ್ನಾ ಮಾಡಲಿ. ನಾನೂ ಮಾಡುತ್ತೇನೆ’ ಎನ್ನುತ್ತಾರೆ. ಇದಕ್ಕೆ ಬಿಜೆಪಿ ನಾಯಕರು, ‘ಮೊದಲು ನೀವು ಮಾಡಿ. ಆ ಮೇಲೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ’ ಎನ್ನುತ್ತಾರೆ. ಇವರಿಬ್ಬರ ಆಟದ ನಡುವೆ ನಾವು ಸಾಯುತ್ತಿದ್ದೇವೆ ಎಂದು ವಿಶ್ಲೇಷಿಸಿದರು.

ಪಿ.ವಿ.ಪ್ರವೀಣ್‌ ಕುಮಾರ್‌, ಬಸವರಾಜ ಹವಾಲ್ದಾರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT