ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ವ ಪರೀಕ್ಷೆಯ ಸಮಯವಿದು...

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆ ವಿದ್ಯಾಭ್ಯಾಸದ ಅನಿವಾರ್ಯ ಅಂಗ. ವಿದ್ಯಾರ್ಥಿ ಎಷ್ಟು ಗ್ರಹಿಸಿದ್ದಾನೆ ಎಂದು ತಿಳಿಯಲು ನಡೆಸುವ ಒಂದು ಮಾಪನಕ್ರಿಯೆ. ವಿದ್ಯಾರ್ಥಿ ತಾನು ತಿಳಿದಿದ್ದನ್ನು ಎಷ್ಟು ತಿಳಿಯಾಗಿ ತಿಳಿಸಬಲ್ಲ ಎಂದು ಶಿಕ್ಷಕರು ತಿಳಿಯುವ ಪರಿ ಈ ಪರೀಕ್ಷೆ. ಮನಸ್ಸೆಂಬ ಗ್ರಹಣ ಉಪಕರಣದ ಸಾಮರ್ಥ್ಯವನ್ನಳೆಯಲು ಪ್ರಶ್ನೆಗಳ ವರ್ಷಕ್ಕೆ ವಿದ್ಯಾರ್ಥಿಗಳು ಎದೆಗೊಟ್ಟು ನಿಂತು ಪ್ರತಿಯಾಗಿ ಉತ್ತರದ ಬಾಣಗಳನ್ನು ಪ್ರಯೋಗಿಸಬೇಕಾಗುತ್ತದೆ.

ಇದಕ್ಕೆ ತಯಾರಿ ಶೈಕ್ಷಣಿಕ ವರ್ಷಾರಂಭದಿಂದಲೇ ನಡೆದಿರುತ್ತದೆ. ‘Beware the ides of March...”  ಎಂದಿದ್ದಾನೆ ಶೇಕ್ಸ್‌ಪಿಯರ್ (Ju*ius Caesar, Act I, Sc II, *ine 20). ಅವನು ಹೇಳಿದ್ದು ಸೀಸರಿನಿಗಾದರೂ ಈ ಕಾಲಘಟ್ಟದಲ್ಲಿ ಅದು ನಮ್ಮ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ.

ಮೊನ್ನೆ ನಡೆದ ಪೂರ್ವಭಾವಿ ಪರೀಕ್ಷೆಯ ಸಂದರ್ಭ. ಕೊಠಡಿಗಳಿಗೆ ಪ್ರಶ್ನೆಪತ್ರಿಕೆ ರವಾನೆಯಾದ ಬಳಿಕ ಆರಾಮವಾಗಿ ಕಾಫಿ ಕುಡಿಯಲು ಬಟ್ಟಲು ಕೈಗೆತ್ತಿಕೊಂಡೆ. ಅಷ್ಟರಲ್ಲಿ ಮೊದಲ ಮಹಡಿಯ ಕೊಠಡಿಯಿಂದ ಅಧ್ಯಾಪಕರೊಬ್ಬರು, “ಸಾರ್, ಗಿರೀಶನಿಗೆ ಹುಷಾರಿಲ್ಲ. ಅಟೆಂಡರ್ ಜೊತೆ ಮಾಡಿ ಕೆಳಗೆ ಕಳಿಸುತ್ತಿದ್ದೇನೆ’’ ಎಂದು ಕೂಗಿ ಹೇಳಿದರು.

ನಾನು ಕಚೇರಿ ಗುಮಾಸ್ತರಿಗೆ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ತಗೆದಿರಿಸಿಕೊಳ್ಳಲು ಸೂಚಿಸಿ ಎರಡು ಗುಟುಕು ಕಾಫಿ ಕುಡಿದೆ. ಆ ವೇಳೆಗೆ ಧಾವಿಸಿ ಬಂದ ಅಟೆಂಡರ್, “ ಸಾರ್, ಗಿರೀಶ ಮೆಟ್ಟಿಲ ಬಳಿ ಕುಸಿದುಬಿಟ್ಟಿದ್ದಾನೆ....” ಎಂದು ವರದಿ ಒಪ್ಪಿಸಿದರು.

ನಾನು ಕಾಫಿ ಲೋಟ ಕುಕ್ಕಿ ಓಡಿದೆ. ಇನ್ನಿಬ್ಬರು ವಿದ್ಯಾರ್ಥಿಗಳ ಸಹಾಯದಿಂದ ಅವನನ್ನು ಆಫೀಸಿಗೆ ನಡೆಸಿಕೊಂಡು ಬಂದು ಫ್ಯಾನಿನ ಕೆಳಗೆ ಕೂರಿಸಿದೆ. ನೋಡ ನೋಡುತ್ತಿದ್ದಂತೆ ಮತ್ತಷ್ಟು ಕುಸಿದ ಅವನು. ಕಣ್ಣು ಮೇಲೆ ತೇಲಿಸಿ ನಿಶ್ಚೇಷ್ಟಿತನಾದ. ಕೈ–ಕಾಲು ತಣ್ಣಗಾಗುತ್ತಾ ಬಂತು. ಅಟೆಂಡರ್‌ಗಳು ಅಳಲು ಆರಂಭಿಸಿದರು.

ಪರೀಕ್ಷೆ ಆಗತಾನೆ ಆರಂಭವಾಗಿದ್ದರಿಂದ ನಾನು ಹೊರಗೆ ಹೋಗುವಂತಿರಲಿಲ್ಲ. ಆಂಬುಲೆನ್ಸ್‌ಗೆ ಕಾಯುವಷ್ಟು ತಾಳ್ಮೆಯೂ ಇರಲಿಲ್ಲ. ತಕ್ಷಣ ಇನ್ನೊಬ್ಬರು ಅಧ್ಯಾಪಕರನ್ನು ಜೊತೆ ಮಾಡಿ ಆಟೋದಲ್ಲಿ ಅವನನ್ನು ಹತ್ತಿರವೇ ಇದ್ದ ಆಸ್ಪತ್ರೆಗೆ ರವಾನಿಸಿದೆ. ಇತ್ತ ಎಲ್ಲ ಕೊಠಡಿಗಳನ್ನು ಪರಿವೀಕ್ಷಿಸುತ್ತಾ ಅವನು ಪರೀಕ್ಷೆ ಬರೆಯುತ್ತಿದ್ದ ಕೊಠಡಿಯ ಮೇಲ್ವಿಚಾರಕರನ್ನು ವಿಚಾರಿಸಿದೆ.

“ಪ್ರಶ್ನೆಪತ್ರಿಕೆ ವಿತರಿಸುವ ಬೆಲ್ ಮೊಳಗಿದಾಗ ನಾನು ಪ್ರಶ್ನೆಪತ್ರಿಕೆ ವಿತರಿಸಿದೆ ಸಾರ್. ಅವನು ಅದನ್ನು ಕೈಗೆ ತೆಗೆದುಕೊಂಡು ಅದರ ಮೇಲೆ ಕಣ್ಣಾಡಿಸುತ್ತಲೇ ಕೈಕಾಲು ನಡುಗಿ ಎದೆ ಹಿಡಿದುಕೊಂಡು ಮಲಗಿಬಿಟ್ಟ ಸಾರ್” ಎಂದರು. ಓಹೋ, ಇದು ಪರೀಕ್ಷಾರಾವಣನ ಕರಾಮತ್ತು ಎಂದು ಅರ್ಥಮಾಡಿಕೊಂಡೆ.

ಭಯದ ಹತ್ತು ತಲೆಗಳು ಹೊತ್ತಿ ಕುಣಿಯುವ ಹೊತ್ತು ಪರೀಕ್ಷೆ. ಪೂರ್ವತಯಾರಿ ಇಲ್ಲದವರನ್ನು ಇದು ಹೆಚ್ಚಾಗಿ ಕಾಡುತ್ತದಾದರೂ ಕೆಲವೊಮ್ಮೆ ಚೆನ್ನಾಗಿ ತಯಾರಾದವರೂ ಸ್ಥೈರ್ಯ ಕುಸಿದು ಪರೀಕ್ಷಾಪಿಶಾಚದ ಕಾಟಕ್ಕೆ ಸಿಲುಕಿಬಿಡುತ್ತಾರೆ. ತಮ್ಮ ಬುದ್ಧಿಶಕ್ತಿಯ ಒರೆಗಲ್ಲು ಈ ಪರೀಕ್ಷೆ. ಇದರ ಫಲಿತಾಂಶದ ಮೇಲೆ ಈ ಸಮಾಜ ತಮ್ಮ ಸಾಮರ್ಥ್ಯವನ್ನು ಅಳೆಯುತ್ತದೆ ಎಂಬ ಆಲೋಚನೆಯನ್ನು ವಿದ್ಯಾರ್ಥಿಗಳು ಬಿಡಬೇಕು.

ಹಿಂದೆಯೇ ಹೇಳಿದಂತೆ ಪರೀಕ್ಷೆ ವಿದ್ಯಾಭ್ಯಾಸದ ಒಂದು ಅಂಗವೇ ಹೊರತು ಅದು ಇಡೀ ಜೀವನವನ್ನು ಕಾಡುವ ಅಂಕವಲ್ಲ. ಇದನ್ನು ಹೆಚ್ಚು ಉಪೇಕ್ಷಿಸಲೂ ಬಾರದು ಹಾಗೇ ಅದನ್ನೇ ಪೆಡಂಭೂತವಾಗಿಸಿಕೊಳ್ಳಲೂ ಬಾರದು. ಅದನ್ನು ಒಂದು ಅಂತರದಲ್ಲಿಟ್ಟು ಅದನ್ನು ದಾಟಿಕೊಂಡು ಹೋಗುವ ಪ್ರಯತ್ನವನ್ನು ಮಾಡಬೇಕು.

ಪರೀಕ್ಷಾಭಯ ನಿವಾರಣೆಗೆ ಸಹಾಯಕಾರಿ ಈ ಸೂತ್ರಗಳು:
1. ಪರೀಕ್ಷೆಯನ್ನು ದ್ವೇಷಿಸಬೇಡಿ, ಪರೀಕ್ಷೆಗೆ ಹೆದರಲೂಬೇಡಿ. ಆದರೆ ನಿನಪಿರಲಿ – ಎಷ್ಟೇ ಧೈರ್ಯಶಾಲಿಗಳಾದರೂ ಅಲ್ಪಪ್ರಮಾಣದ ಭಯ ಇರುತ್ತದೆ. ಇದು ನಮ್ಮ ಯಶಸ್ಸಿಗೆ ಇಂಧನವೂ ಆಗಬಹುದು. ಈ ಸಕಾರಾತ್ಮಕ ಭಯವನ್ನು Performance Anxiety  ಎನ್ನುತ್ತಾರೆ. ಆದರೆ ನಿಮಗೆ ಬಹಳ ಭಯವಾಗುತ್ತಿದ್ದರೆ, ನಿಮ್ಮೆಲ್ಲ ಪ್ರಯತ್ನ ಮೀರಿ ಭಯ ನಿಮ್ಮನ್ನು ಕಾಡಿದರೆ, ತಕ್ಷಣ ತಜ್ಞರ ನೆರವು ಪಡೆಯಿರಿ.

2. ಪರೀಕ್ಷೆಗೆ ತಯಾರಿ ಚೆನ್ನಾಗಿ ನಡೆಸುತ್ತಿದ್ದೀರೆಂಬ ಆತ್ಮವಿಶ್ವಾಸ ಇರಲಿ. ಮುಖ್ಯ ಅಂಶಗಳನ್ನು ಬರೆದು ಟಿಪ್ಪಣಿ ಮಾಡಿ. ಅಧ್ಯಯನದಲ್ಲಿ ಬರವಣಿಗೆ ಬಹಳ ಮುಖ್ಯ. ಮಾನಸಿಕ ತಜ್ಞರು ತಿಳಿಸುವಂತೆ ನಾವು ಬರೆದಾಗ ಮಿದುಳಿನಲ್ಲಿ ಅಸಿಟೈಲ್‌ಕೊಲೀನ್ ಎಂಬ ರಾಸಾಯನಿಕ ಉತ್ಪತ್ತಿಯಾಗಿ ಆ ವಿಷಯವನ್ನು ಸಂಗ್ರಹಿಸುವ ಜ್ಞಾಪಕರೇಖೆ ನಿರ್ಮಾಣವಾಗುತ್ತದಂತೆ. ಹಾಗಾಗಿ ಬರೆಯುವ ಅಭ್ಯಾಸ ಇರಲಿ.

3.  ಪ್ರಶ್ನೆಗಳಿಗೆ ಸಮಯವನ್ನು ನಿಗದಿಪಡಿಸಿಕೊಳ್ಳಿ. ನಿಗದಿಪಡಿಸಿದ ಅಂಕಕ್ಕೆ ಎಷ್ಟು ಬೇಕೋ ಅಷ್ಟು ಬರೆಯಿರಿ.

4. ಪರೀಕ್ಷೆಯೆಂಬುದು ಕ್ರಿಕೆಟ್ ಮ್ಯಾಚ್ ಎಂದು ಭಾವಿಸಿ. ಮೊದಲಿಗೇ ಚೆಂಡನ್ನು ಬೌಂಡರಿಗೆ ಅಟ್ಟಲು ಪ್ರಯತ್ನಿಸಬೇಡಿ. ಚೆಂಡು ನಿಮ್ಮ ಬ್ಯಾಟಿಗೆ ನಾಲ್ಕಾರು ಬಾರಿ ಬಡಿದು, ನಿಮಗೆ ಪಿಚ್ಚು, ಚೆಂಡಿನ ವೇಗ, ಸೆಳೆತ ತಿಳಿದ ಮೇಲೆ ಭಾರಿ ಹೊಡೆತಗಳಿಗೆ ಪ್ರಯತ್ನಿಸಬಹುದು. ಹಾಗೆಯೇ ಮೊದಲಿಗೆ ನಿಮಗೆ ಖಚಿತವಿರುವ, ಗೊತ್ತಿರುವ ಒಂದಂಕ, ಎರಡಂಕದ ಪ್ರಶ್ನೆಗಳಿಗೆ ಉತ್ತರಿಸಿ. ಆ ಬಳಿಕ ಉದ್ದುದ್ದ ಉತ್ತರದ 4–6 ಅಂಕದ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ನಿಮಗೆ ಕೊನೆಗಳಿಗೆಯ ಆವೇಗ ತಪ್ಪುತ್ತದೆ. ಸುಲಭದ, ಗೊತ್ತಿರುವ ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರಿಸೋಣವೆಂದು ಮೊದಲಿಗೆ ಕಷ್ಟದ ಪ್ರಶ್ನೆಗಳಿಗೆ ತಿಣುಕುತ್ತಾ ಕುಳಿತರೆ, ಕೊನೆಗೆ ಟೈಮ್ ಔಟ್ ಆಗಿಬಿಡುತ್ತೇವೆ. ಇದನ್ನು ನಿವಾರಿಸಿಕೊಳ್ಳಿ.

5. ಕ್ರೀಸಿನಲ್ಲಿ ಹೆಚ್ಚು ಹೊತ್ತು ಉಳಿದಷ್ಟೂ ಹೆಚ್ಚು ರನ್ ಗಳಿಸುವ ಸಾಧ್ಯತೆ. ಆದುದರಿಂದ ಗೊತ್ತಿರುವ ಉತ್ತರಗಳಷ್ಟನ್ನೇ ಬರೆದು ಎದ್ದು ಬರಬೇಡಿ. ಪರೀಕ್ಷಾಕೊಠಡಿಯಲ್ಲೇ ಕುಳಿತು ಮನಸ್ಸನ್ನು ಸ್ವಲ್ಪ ಚಿಂತನೆಗೆ ಹಚ್ಚಿ. ಒಂದೋ ಎರಡೋ ಅಂಶ ಹೊಳೆದು ನಿಮಗೆ ಒಂದಿಷ್ಟು ಅಂಕ ಹೆಚ್ಚಾಗಿ ಬರುವ ಸಾಧ್ಯತೆಯಿಂದ ವಂಚಿತರಾಗಬೇಡಿ. ಪರೀಕ್ಷಾ ಅವಧಿಯ ಪೂರ್ಣ ಉಪಯೋಗ ಪಡೆದುಕೊಳ್ಳಿ.

6. ನಿದ್ದೆಗೆಟ್ಟು ಓದುವ, ವಿಪರೀತ ಚಹಾ/ಕಾಫಿ ಸೇವಿಸುವ ಅಥವಾ ನಿದ್ರೆ ಬರುತ್ತದೆ ಎಂದು ಉಪವಾಸವಿದ್ದು ಓದಲು ಕೂರುವ ಪ್ರಯತ್ನ ಮಾಡಬೇಡಿ. ನಿಮ್ಮ ಎಂದಿನ ಸಹಜ ಆಹಾರ, ನಿದ್ರಾಶೈಲಿ ಮುಂದುವರೆಸಿ. ಮನಸ್ಸು ಸಹಜವಾಗಿರಲಿ ಉದ್ವೇಗ, ಆತಂಕ ಬೇಡ.

7.  ಯೋಗಾಸನ, ಪ್ರಾಣಾಯಾಮ ಮಾಡುತ್ತಿರುವವರು ಬಿಡದೆ ಮುಂದುವರೆಸಿ. ಪರೀಕ್ಷೆ ಬಂತೆಂದು ಇಂತಹ ಆರೋಗ್ಯಕಾರಿ ಚಟುವಟಿಕೆಗಳನ್ನು ಬಿಡಬೇಡಿ. ಇಂತಹ ಅಭ್ಯಾಸ ಇಲ್ಲದವರು ಕಡೇಪಕ್ಷ ದೀರ್ಘ ಉಸಿರಾಟವನ್ನು ಮಾಡಿ ಆತಂಕ, ಒತ್ತಡ ಕಡಿಮೆಮಾಡಿಕೊಳ್ಳಿ.

8. ನೆನಪಿರಲಿ, ಪಿಯು ಮಂಡಳಿಯಾಗಲೀ ಶಿಕ್ಷಕರಾಗಲೀ ನಿಮಗೆ ಪರೀಕ್ಷೆಯ ಶಿಕ್ಷೆ ವಿಧಿಸಿಲ್ಲ, ಆದರೆ ನೀವು ಆಯ್ದುಕೊಂಡ ವಿಷಯಗಳಲ್ಲಿ ನಿಮ್ಮ ತಿಳಿವಳಿಕೆಯ ಮಟ್ಟವನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಪೂರ್ಣವ್ಯಕ್ತಿತ್ವದ, ಸಾಮರ್ಥ್ಯದ ಬಿಂಬವು ನೀವು ಗಳಿಸುವ ಅಂಕವಲ್ಲ ಎಂಬ ಅರಿವು ಎಲ್ಲ ಹಿರಿಯರಿಗೂ ಇದೆ. ನಿರಾಳವಾಗಿದ್ದಷ್ಟೂ ನಿಮ್ಮ ಉತ್ತರಗಳು ಸುಂದರವಾಗಿ ಮೂಡುತ್ತವೆ.
ಶುಭವಾಗಲಿ ಎಲ್ಲ ಪರೀಕ್ಷಾರ್ಥಿಗಳಿಗೆ.

ವಿದ್ಯಾರ್ಥಿಗಳ ಗಮನಕ್ಕೆ...
*ಪ್ರವೇಶಪತ್ರ ಪಡೆದುಕೊಳ್ಳುವಾಗ ನಿಮ್ಮ ಹೆಸರು, ತಂದೆ ತಾಯಿಯ ಹೆಸರು, ಪರೀಕ್ಷಾಕೇಂದ್ರದ ಹೆಸರು, ಆಯ್ಕೆ ಮಾಡಿಕೊಂಡಿರುವ ವಿಷಯಗಳು, ಪರೀಕ್ಷೆಯ ದಿನಾಂಕ, ಸಮಯ ಸರಿಯಿದೆಯೇ ಪರಿಶೀಲಿಸಿ.
*‘ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ’ವು ದ್ವಿತೀಯ ಪಿಯುಸಿ ಪರೀಕ್ಷೆಗೆಂದೇ ಸಾಮಾನ್ಯ ಟಿಪ್ಸ್ ಹಾಗೂ ವಿಷಯವಾರು ಟಿಪ್ಸ್ ಅನ್ನು ಸೊಗಸಾಗಿ ತಯಾರಿಸಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರ ಮೂಲಕ ಇದನ್ನು ಪಡೆದುಕೊಂಡು ಇದರ ಪೂರ್ಣಪ್ರಯೋಜನ ಪಡೆದುಕೊಳ್ಳಬಹುದು.
*ಪರೀಕ್ಷಾ ದಿನದಂದು ಲಘು ಉಪಹಾರ ಸೇವಿಸಿ, ಹೆಚ್ಚು ಪಾನೀಯ ಬೇಡ. ಧರಿಸುವ ಬಟ್ಟೆ ಆರಾಮದಾಯಕವಾಗಿರಲಿ.
*ಪರೀಕ್ಷೆಗೆ ಸಂಬಂಧಿಸಿದ ಪ್ರವೇಶಪತ್ರ, ನಿಮ್ಮ ಗುರುತಿನ ಚೀಟಿ , ಸೂಕ್ತ ಲೇಖನ ಸಾಮಗ್ರಿ ನಿಮ್ಮೊಂದಿಗಿರಲಿ.
*ಕೊಠಡಿ ಮೇಲ್ವಿಚಾರಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
*ಗ್ರಾಫ್, ಚಿತ್ರ, ನಕ್ಷೆ ಕುರಿತ ಪ್ರಶ್ನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉತ್ತರಿಸಿ, ಜೊತೆಗೆ ವಿವರಣೆ ನೀಡಿ. ಈ ಪ್ರಶ್ನೆಗಳಲ್ಲಿ ನೀವು ಪೂರ್ಣಾಂಕ ಪಡೆಯುವುದು ಸುಲಭ.
*ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ... ಇತ್ಯಾದಿ ಸುದ್ದಿಗಳಿಗೆ, ಫೇಸ್‌ಬುಕ್, ವಾಟ್ಸಾಪ್ ಸಂದೇಶದ ಗುಲ್ಲುಗಳಿಗೆ ಮನಗೊಡದಿರಿ. ಇಂತಹ ಅನೈತಿಕ ವಿಚಾರದಲ್ಲಿ ತೊಡಗುವುದು, ಭಾಗಿಯಾಗುವುದು ಮಾರಕ. ಇದು ಶಿಕ್ಷಾರ್ಹ ಅಪರಾಧ ಎನ್ನುವುದು ನೆನಪಿರಲಿ.

ಅಧ್ಯಾಪಕರ ಗಮನಕ್ಕೆ...
*ಆಡಳಿತಮಂಡಳಿಗಳು ಉತ್ತಮ ಫಲಿತಾಂಶ ಬೇಡುತ್ತವೆ ಎಂದಮಾತ್ರಕ್ಕೆ ವಿದ್ಯಾರ್ಥಿಗಳ ಮೇಲೆ ಒತ್ತಡ ಬೇಡ. ವಿದ್ಯಾರ್ಥಿಗಳು ಜೂಜಿನ ಕುದುರೆಗಳಲ್ಲ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಅಂಕ ಗಳಿಸುತ್ತಾರೆ. ಜೀವನದ ಅಂಕದಲ್ಲಿ ಈ ಅಂಕವಿಲ್ಲದೆ ಗೆದ್ದವರು ಅನೇಕ ಜನರಿದ್ದಾರೆ.
*ನೆನಪಿರಲಿ – ನಿಮ್ಮ ಒಂದು ನುಡಿ ವಿದ್ಯಾರ್ಥಿಗಳನ್ನು ಕಟ್ಟಬಹುದು ಅಥವಾ ಕೆಡವಲೂಬಹುದು. ಹಂಗಿಸದಿರಿ, ಭಂಗಿಸದಿರಿ.
*ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಿ. ಅದರಲ್ಲೂ ಪರೀಕ್ಷಾ ದಿನಗಳಲ್ಲಿ ಅವರು ಗೊಂದಲ, ಆತಂಕ, ಒತ್ತಡಗಳ ಕುಲುಮೆಯಾಗಿರುತ್ತಾರೆ.
* ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಆತಂಕದಿಂದ ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚು. ಆದುದರಿಂದ ಸೂಚನೆಗಳನ್ನು ಸ್ಪಷ್ಟವಾಗಿ, ನಿಧಾನವಾಗಿ ನೀಡಿ. ಅಕಸ್ಮಾತ್ ತಪ್ಪಾದಲ್ಲಿ ಪ್ರೀತಿಯಿಂದ ತಿದ್ದಿ.
* ಕೆಲವು ವಿದ್ಯಾರ್ಥಿಗಳಿಗೆ ವಿಪರೀತ ಪರೀಕ್ಷಾಭೀತಿ ಇರುತ್ತದೆ. ಇಂತಹ ವಿದ್ಯಾರ್ಥಿಗಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು. ನಡುಕ, ಕುಸಿತ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಕೂಡಲೆ ಮುಖ್ಯ ಅಧೀಕ್ಷಕರ ಗಮನಕ್ಕೆ ತರಬೇಕು.
*ಗುರುಗಳನ್ನು ದೇವರೆಂದು ಕಾಣುವ ಬಾರತೀಯ ಶಿಷ್ಯಮನಸ್ಸು ಇಂದಿಗೂ ಜೀವಂತವಾಗಿದೆ. ನಿಮ್ಮ ವಿದ್ಯಾರ್ಥಿಗಳಿಗೆ ನೀವೇ ಆರಾಧ್ಯರು. ಆದುದರಿಂದ ಅವರು ಯಾವುದೇ ಸಮಯದಲ್ಲಿ ಅಹವಾಲು ಸಲ್ಲಿಸಿದರೂ ತಾಳ್ಮೆಯಿಂದ ಕೇಳುವ ಕಿವಿ, ಸ್ಪಂದಿಸುವ ಹೃದಯ ನಿಮ್ಮದಾಗಿರಲಿ.

ಪಾಲಕ–ಪೋಷಕರ ಗಮನಕ್ಕೆ...
* ವಿದ್ಯಾರ್ಥಿಗಳ ಮೇಲೆ ಅತಿ ಒತ್ತಡ ಬೇಡ. ಹಾಗೇ ತಾತ್ಸಾರವೂ ಬೇಡ.
*ಪ್ರವೇಶಪತ್ರದ 3 ಪ್ರತಿ ಜೆರಾಕ್ಸ್ ಮಾಡಿಸಿಟ್ಟುಕೊಂಡಿರಿ. ಒಂದು ಮನೆಯಲ್ಲಿರಲಿ, ಮತ್ತೊಂದು ವಿದ್ಯಾರ್ಥಿಯ ಬ್ಯಾಗಿನಲ್ಲಿರಲಿ, ಮೂರನೆಯದು ನಿಮ್ಮ ಕಿಸೆಯಲ್ಲಿರಲಿ. ಜೊತೆಗೆ ವಿದ್ಯಾರ್ಥಿಯ ಫೋಟೊಗಳು ಕೂಡ ಇರಲಿ. ಮೂಲ ಪ್ರವೇಶಪತ್ರ ಕಳೆದುಹೋದರೆ ಇವು ನೆರವಿಗೆ ಬರುತ್ತವೆ.
*ಯಾವುದೇ ಕಾರಣಕ್ಕೂ ಮಕ್ಕಳನ್ನು ನಿಂದಿಸಬೇಡಿ. ಖಲೀಲ್ ಗಿಬ್ರಾನನ ಮಾತು ನೆನಪಿರಲಿ: “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಜೀವದ ಸ್ವಪ್ರೇಮದ ಪುತ್ರ–ಪುತ್ರಿಯರು ಅವರು... ನಿಮ್ಮ ಪ್ರೀತಿಯನ್ನು ಅವರಿಗೆ ನೀವು ನೀಡಬಹುದು. ಆದರೆ ನಿಮ್ಮ ಆಲೋಚನೆಗಳನ್ನಲ್ಲ... ಅವರಂತಿರಲು ನೀವು ಪ್ರಯತ್ನಿಸಬಹುದು, ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ...”.
*ಮಕ್ಕಳು ಸರಿಯಾಗಿ ಊಟ, ತಿಂಡಿ, ನಿದ್ದೆ ಮಾಡುತ್ತಿದ್ದಾರೆಯೆ ಗಮನಿಸಿ. ಪೌಷ್ಟಿಕಾಹಾರ ನೀಡಿ. ಅವಶ್ಯವೆನಿಸಿದಲ್ಲಿ ಆಪ್ತಸಲಹಾಗಾರರ ನೆರವು ಪಡೆಯಿರಿ.
*ಟೀವಿ ಮೊದಲಾದ ಉಪಕರಣಗಳ ಬಳಕೆ ಕಡಿಮೆ ಮಾಡಿ. ಮಕ್ಕಳ ಪರೀಕ್ಷಾ ಅವಧಿಯಲ್ಲಿ ವಾಹಿನಿಗಳ ಅಬ್ಬರವಿಲ್ಲದಿರಲಿ.
*ಊಹಾಪೋಹಗಳಿಗೆ ಕಿವಿಗೊಡದಿರಿ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಇತ್ಯಾದಿ ಗುಲ್ಲು ಬಂದರೆ ಸಂಬಂಧಪಟ್ಟ ಇಲಾಖೆಗೆ, ಪೊಲೀಸರಿಗೆ ತಿಳಿಸಿ.
*ದ್ವಿತೀಯ ಪಿ.ಯು. ಪರೀಕ್ಷೆ ಕುರಿತ ವಿವರ, ಮಾಹಿತಿಗಳಿಗಾಗಿ ಪ.ಪೂ. ಶಿಕ್ಷಣ ಇಲಾಖೆಯ ವೆಬ್‌ಸೈಟ್ (www.pue.kar.nic.in) ಗಮನಿಸುತ್ತಿರಿ. ಇಲಾಖೆಯ ಸಹಾಯವಾಣಿಯ ಸೇವೆಯನ್ನು ಪಡೆದುಕೊಳ್ಳಲು ಹಿಂಜರಿಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT