ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,808 ಆಟೊಗಳಿಗೆ ಟಾಪ್‌ ನಂಬರ್

ಆಟೊ ಚಾಲಕರು ದಾಖಲಾತಿ ಹೊಂದಿರುವ ವಿವರ
Last Updated 6 ಮಾರ್ಚ್ 2017, 7:05 IST
ಅಕ್ಷರ ಗಾತ್ರ
ಬೀದರ್‌: ಪದೇ ಪದೇ ದಾಖಲೆಗಳ ಪರಿಶೀಲನೆಯಿಂದಾಗಿ ಆಟೊ ಚಾಲಕರಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುವ ಹಾಗೂ ಪೊಲೀಸರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಪೊಲೀಸ್‌ ಇಲಾಖೆ ನಗರದಲ್ಲಿ ಆಟೊಗಳಿಗೆ ‘ಟಾಪ್‌ ನಂಬರ್’ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
 
ಆಟೊ ಚಾಲಕರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪ್ರತಿಯೊಂದು ಆಟೊರಿಕ್ಷಾಗೆ  ಟೋಕನ್‌ ಸಂಖ್ಯೆ ಕೊಟ್ಟು ನಗರದಲ್ಲಿ ಪರ್ಮಿಟ್‌ ಇಲ್ಲದೇ ಸಂಚರಿಸುವ ಹಾಗೂ ಕಳ್ಳತನದ ಆಟೊರಿಕ್ಷಾಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಹೊಸ ಮಾರ್ಗ ಕಂಡುಕೊಂಡಿದೆ.
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ ನಿರ್ದೇಶನದಂತೆ ಸಂಚಾರ ಪೊಲೀಸರು ಡಿಸೆಂಬರ್‌ನಲ್ಲಿ ಆಟೊರಿಕ್ಷಾ ಚಾಲಕರ ಹಾಗೂ ಮಾಲೀಕರ ಸಭೆ ಕರೆದು ಆಟೊಗಳ ಅಗತ್ಯ ದಾಖಲೆಗಳನ್ನು ಒದಗಿಸಿ ನೋಂದಣಿ ಮಾಡಿಕೊಂಡು ಟೋಕನ್‌ ಸಂಖ್ಯೆ ಪಡೆಯುವಂತೆ ಸೂಚಿಸಿದ್ದರು. ಅರ್ಧಕ್ಕಿಂತ ಹೆಚ್ಚು ಚಾಲಕರ ಬಳಿ  ಡ್ರೈವಿಂಗ್ ಲೈಸೆನ್ಸ್‌ ಇರಲಿಲ್ಲ. ಹೀಗಾಗಿ ಪೊಲೀಸರೇ  ಇವರಿಗೆಲ್ಲ ಲೈಸೆನ್ಸ್‌ ಕೊಡಿಸುವ ಭರವಸೆ ಕೊಟ್ಟಿದ್ದರು. ಜನವರಿ 15ರವರೆಗೂ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದರು. 
 
ಪೊಲೀಸರ ನಿರ್ಧಾರವನ್ನು ಬೆಂಬಲಿಸಿ 400 ಜನ ಆಟೊ ಚಾಲಕರು ತಮ್ಮ ವಾಹನ ಚಾಲನಾ ಲೈಸೆನ್ಸ್‌, ವಿಳಾಸದ ಅಧಿಕೃತ ದಾಖಲೆ ಪತ್ರ ಹಾಗೂ ಆಟೊರಿಕ್ಷಾ ಪರ್ಮಿಟ್‌, ಇನ್ಶೂರೆನ್ಸ್, ಮಾಲಿನ್ಯ ತಪಾಸಣೆ ಪತ್ರದ ಪ್ರತಿಗಳನ್ನು ಸಲ್ಲಿಸಿದ್ದರು. ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಪ್ರತಿಯೊಂದು ಆಟೊರಿಕ್ಷಾಗೆ ಟೋಕನ್‌ ಸಂಖ್ಯೆಯನ್ನು ಕೊಟ್ಟಿದ್ದಾರೆ. ಈ ಸಂಖ್ಯೆಯನ್ನು ಆಟೊ ಮುಂಭಾಗ ಹಾಗೂ ಹಿಂಭಾಗದ ಮೇಲೂ ಬರೆಯಲಾಗಿದೆ.
 
ಬೀದರ್ ನಗರದಲ್ಲೇ ನಾಲ್ಕೂವರೆ ಸಾವಿರ ಆಟೊಗಳಿರುವ ಮಾಹಿತಿ ಇದೆ. ಅವುಗಳ ನಿಖರ ಮಾಹಿತಿ ಸಂಗ್ರಹಿಸುವುದು, ಆಟೊ ಪರ್ಮಿಟ್‌, ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ರಯಾಣಿಕರ ಸುರಕ್ಷತೆಯ  ದೃಷ್ಟಿಯಿಂದ ಇನ್ಶೂರೆನ್ಸ್‌ ಪರಿಶೀಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್.
 
2,808 ಆಟೊರಿಕ್ಷಾ ಚಾಲಕರು ದಾಖಲೆಗಳನ್ನು ಒದಗಿಸಿ ಟೋಕನ್ ಸಂಖ್ಯೆ ಪಡೆದಿದ್ದಾರೆ. ಸುಮಾರು 1,200 ಚಾಲಕರು ಯಾವುದೇ ಮಾಹಿತಿ ನೀಡಿಲ್ಲ. ಡ್ರೈವಿಂಗ್‌ ಲೈಸೆನ್‌ ಪಡೆಯಲು 275 ಆಟೊ ಚಾಲಕರು ಅರ್ಜಿ ಸಲ್ಲಿಸಿದ್ದರು. 150 ಜನರಿಗೆ ಜನವರಿ 15ರಂದು ರಸ್ತೆ ಸುರಕ್ಷತಾ ಸಪ್ತಾಹದ ದಿನ ಡಿಎಲ್ ಕೊಡಲಾಗಿದೆ. 75 ಜನ ಸರಿಯಾದ ದಾಖಲೆ ಕೊಟ್ಟಿಲ್ಲ. ಅವರು ಠಾಣೆಗೆ ಬಂದು ವಿಚಾರಿಸಿಯೂ ಇಲ್ಲ. ಹೀಗಾಗಿ ಎರಡನೇ ಸಲ ಫೆಬ್ರುವರಿ 15ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಕೆಲವರು ಆಸಕ್ತಿ ತೋರಿಲ್ಲ ಎನ್ನುತ್ತಾರೆ ಅವರು.
 
ಅನಕ್ಷರಸ್ಥರೇ ಇದ್ದಾರೆ
ಆಟೊ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. 4,5ನೇ ತರಗತಿ ನಂತರ ಶಾಲೆ ಬಿಟ್ಟವರೇ ಆಟೊರಿಕ್ಷಾ ಓಡಿಸುತ್ತಿದ್ದಾರೆ. ಶೈಕ್ಷಣಿಕ ಅರ್ಹತೆ ಇಲ್ಲದ ಕಾರಣ ಲೈಸೆನ್ಸ್‌ ಪಡೆಯಲು ಸಾಧ್ಯವಾಗಿಲ್ಲ ಎಂದು ವಿವರಿಸುತ್ತಾರೆ ಯುವ ಆಟೊ ಚಾಲಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಖೇಮಶೆಟ್ಟಿ.

ಟಾಪ್‌ ಸಂಖ್ಯೆ ಕೊಟ್ಟ ಮೇಲೆ ಆಟೊಚಾಲಕರಿಗೆ ಪೊಲೀಸರ ಕಿರಿಕಿರಿ ಇಲ್ಲವಾಗಿದೆ. ನೆರೆಯ ರಾಜ್ಯಗಳಿಂದ ಬರುತ್ತಿದ್ದ ಆಟೊಗಳ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಟಾಪ್‌ ನಂಬರ್‌ನಿಂದ ಪ್ರಾಮಾಣಿಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ.
 
₹2.27 ಲಕ್ಷ ದಂಡ
ಟೋಕನ್‌ ಸಂಖ್ಯೆ ಇಲ್ಲದ ಆಟೊರಿಕ್ಷಾಗಳ ದಾಖಲೆ ಪರಿಶೀಲಿಸಿ ಒಂದು ತಿಂಗಳಲ್ಲಿ ನಾನೊಬ್ಬನೇ 750 ಆಟೊ ಚಾಲಕರಿಂದ ₹2,27, 500 ದಂಡ ವಸೂಲಿ ಮಾಡಿದ್ದೇನೆ. ಆದರೂ ಕೆಲವರು ವಾಹನ ಚಾಲನಾ ಪರವಾನಗಿ  ಪಡೆದಿಲ್ಲ ಎನ್ನುತ್ತಾರೆ ಸಂಚಾರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಎಚ್‌.ಎಸ್‌.ರಾಘವೇಂದ್ರ.

ನಿತ್ಯ 20 ರಿಂದ 30 ಆಟೊರಿಕ್ಷಾಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಗರಿಷ್ಠ ₹ 6 ಸಾವಿರ ವರೆಗೂ ದಂಡ ವಿಧಿಸಲು ಅವಕಾಶ ಇದೆ. ಆದರೂ ಕನಿಷ್ಠ ದಂಡ ವಿಧಿಸಿ ಚಾಲಕರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದೇವೆ ಎನ್ನುತ್ತಾರೆ ಅವರು.
 
ಚಾಲಕರಿಗೆ ಸಮವಸ್ತ್ರ ವಿತರಣೆ
ಬಡ ಕುಟುಂಬದ 100 ಆಟೊರಿಕ್ಷಾ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಿಸಲಾಗಿದೆ. ಪ್ರಸ್ತುತ ಶೇ 70ರಷ್ಟು ಆಟೊ ಚಾಲಕರ ಬಳಿ ಸಮವಸ್ತ್ರ ಇದೆ. ಸಮವಸ್ತ್ರ ಹಾಕಿಕೊಳ್ಳುವಂತೆ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ಇನ್ನು ಅವರಿಗೆ ಹೆಚ್ಚು ಸಮಯ ನೀಡಲಾಗದು. ದಾಖಲೆಗಳಿಲ್ಲದ ಆಟೊಗಳನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು  ಆರಂಭಿಸಲಾಗುವುದು ಎಂದು ಎಸ್ಪಿ ಹೇಳಿದರು.
 
ಗರಿಷ್ಠ ದಂಡ: ನಿರ್ಧಾರ
ಮಾಲಿನ್ಯ ತಪಾಸಣೆ ಪ್ರಮಾಣಪತ್ರ ಇಲ್ಲದಿದ್ದರೆ ₹1,000, ಇನ್ಶೂರೆನ್ಸ್‌ ಇಲ್ಲದಿದ್ದರೆ ₹500, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದಿದ್ದರೆ ₹500, ಸಮವಸ್ತ್ರ ಧರಿಸದ, ಸಂಚಾರ ನಿಯಮ ಉಲ್ಲಂಘಿಸಿದ ಹಾಗೂ ಅನುಚಿತ ವರ್ತನೆಗೆ ತಲಾ ₹100 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.  ಆಟೊ ಪರ್ಮಿಟ್ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದವರಿಗೆ ಗರಿಷ್ಠ ದಂಡ ವಿಧಿಸಲು ನಿರ್ಧರಿಸಲಾಗಿದೆ.
 
ಆಟೊಗಳ ವಿವರ
100 ಚಾಲಕರಿಗೆ ಪೊಲೀಸರಿಂದ ಉಚಿತ ಸಮವಸ್ತ್ರ ವಿತರಣೆ
4,500 ಬೀದರ್ ನಗರದಲ್ಲಿರುವ ಆಟೊಗಳ ಸಂಖ್ಯೆ
150 ಆಟೊ ಚಾಲಕರಿಗೆ ಡ್ರೈವಿಂಗ್‌ ಲೈಸೆನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT