ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದು ಮಾಯವಾದ ರೋಜ್ ಸ್ಟಾರ್ಲಿಂಗ್

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದಲ್ಲಿ ಮರಗಳ ಮೇಲೆ, ಕೆರೆಗಳ ಸುತ್ತಲೂ, ಬಂಡೆಗಲ್ಲುಗಳಲ್ಲಿ, ಗಿಡಗಂಟೆಗಳ ಪೊಟರೆಗಳಲ್ಲಿ, ಮೊಬೈಲ್ ಟವರ್ ಮೇಲೆ ಹೀಗೆ ಎಲ್ಲಿ ನೋಡಿದರಲ್ಲಿ ಅಲೆಅಲೆಯಾಗಿ ಕೇಳಿಬಂದ ಚಿಲಿಪಿಲಿ ಗಾನ ಈಗಷ್ಟೇ ಮರೆಯಾಗಿದೆ.

ಯುರೋಪ್ ಖಂಡದಿಂದ ಗ್ರಾಮಕ್ಕೆ ಬಂದಿದ್ದ ಚೆಂದುಳ್ಳಿ ಚೆಲುವೆಯಾದ ರೋಜ್ ಸ್ಟಾರ್ಲಿಂಗ್ ಹಕ್ಕಿಗಳು ಚಳಿಗಾಲ ಮುಗಿಸಿ ತಮ್ಮ ಗೂಡಿಗೆ ಮರಳಿಹೋಗಿವೆ. ಎದೆಯಲ್ಲಿ ತಿಳಿ ಗುಲಾಬಿ ಬಣ್ಣ ಹೊಂದಿರುವ ಕಪ್ಪು ಬಣ್ಣದ ಈ ಕಾಬಕ್ಕಿಗಳು ಎರಡು ತಿಂಗಳು ಮೂಡಿಸಿದ್ದ ಇಂಚರಗಾನ ಗ್ರಾಮಸ್ಥರಲ್ಲಿ ಸದಾ ಹಚ್ಚಹಸಿರು.

ಬೆಳಗಿನ ಜಾವನಲ್ಲಿ ಈ ಹಕ್ಕಿಗಳನ್ನು ನೋಡಿದಾಗ ಅದೇನೋ ಗಡಿಬಿಡಿ. ‘ಆಹಾರ ಹುಡುಕಲು ಎಲ್ಲೆಲ್ಲಿಗೆ ಹೋಗೋಣ...’ ಎಂದು ತಂತಮ್ಮಲ್ಲೇ ಸಂಭಾಷಣೆ ನಡೆಯುತ್ತಿದೆಯೇನೊ ಎಂಬಂತೆ ಭಾವ. ಇದನ್ನು ನೋಡುತ್ತಿದ್ದರೆ ಈ ಹಕ್ಕಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಆಸೆ ಮೂಡಿದ್ದು ನಿಜ.

ರೋಜಿ ಸ್ಟಾರಲಿಂಗ್ (ಗುಲಾಬಿ ಕಾಬಕ್ಕಿ) ಎಂದು ಕರೆಯುವ ಈ ಪಕ್ಷಿ ಮೂಲತಃ ಯುರೋಪ್ ಖಂಡದ ಪಶ್ಚಿಮ ದೇಶಗಳಿಗೆ ಸೇರಿದೆ. ನೈಜೀರಿಯಾ, ಯುರೋಪ್, ಮಧ್ಯ ಏಷಿಯಾದಲ್ಲಿ ಈ ಸಮಯದಲ್ಲಿ ಚಳಿ ಹೆಚ್ಚಾಗುತ್ತಿದ್ದಂತೆ ಹಿಮಾಲಯ ಪರ್ವತ ಶ್ರೇಣಿ ದಾಟಿ ನಿರಂತರ ತಿಂಗಳಾನುಗಟ್ಟಲೆ ಹಾರಿ ಬರುತ್ತವೆ. ಇಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಮತ್ತೆ ತವರಿಗೆ ಮರು ಪ್ರಯಾಣ ಬೆಳೆಸುತ್ತವೆ ಎಂದು ಪಕ್ಷಿಗಳ ಛಾಯಾಗ್ರಾಹಕ ಕುಷ್ಟಗಿಯ ಪಾಂಡುರಂಗ ಆಶ್ರೀತ್ ಹೇಳುತ್ತಾರೆ.

ಅನುಭವಿ ಹಿರಿಯ ಹಕ್ಕಿಗಳ ಮಾರ್ಗದರ್ಶನದಲ್ಲಿ ಕಿರಿಯ ಹಕ್ಕಿಗಳು ಸಾಗುತ್ತವೆ. ಹೀಗೆ ಹಾರುವಾಗ ನದಿಗಳು, ಅಣೆಕಟ್ಟುಗಳು, ಪರ್ವತಗಳ ಸಾಲು, ಬೆಟ್ಟಗುಡ್ಡಗಳು, ಕಟ್ಟಡಗಳು ಮುಂತಾದ ಭೌಗೋಳಿಕ ನೆಲೆಗಳು, ಇವುಗಳಿಗೆ ಮಾರ್ಗದರ್ಶಕವಾಗುತ್ತವೆ. ಹಕ್ಕಿಗಳ ಕೊಕ್ಕಿನಲ್ಲಿರುವ ಅಯಸ್ಕಾಂತೀಯ ಶಕ್ತಿ ಭೂಮಿಯ ಅಯಸ್ಕಾಂತೀಯ ದಿಕ್ಕನ್ನು ಅನುಸರಿಸುತ್ತವೆ.

ಚಳಿಗಾಲಕ್ಕೆ ವಲಸೆ ಬರುವ ಈ ಹಕ್ಕಿಗಳು ಉತ್ತರದ ಗೋಳಾರ್ಧದ ಸೈಬೀರಿಯಾ, ಆರ್ಕಟಿಕ್, ಯುರೋಪ್ ಭಾಗದಲ್ಲಿ ಬೇಸಿಗೆಯಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿ, ಮಳೆಗಾಲದಲ್ಲಿ ಮರಿಗಳನ್ನು ಬೆಳೆಸಿಕೊಂಡು, ಚಳಿಗಾಲದಲ್ಲಿ ಈ ಭಾಗಕ್ಕೆ ವಲಸೆ ಬರುತ್ತವೆ ಎಂದು ಪಕ್ಷಿಗಳ ಚಲನವಲನದ ಮೇಲೆ ಅಭ್ಯಾಸ ಮಾಡಿರುವ ಪಾಂಡುರಂಗ ಹೇಳುತ್ತಾರೆ.

ಕಿವಿಗಡಚಿಕ್ಕುವ ಹಕ್ಕಿಗಳ ಕಲರವ
ಸುತ್ತಮುತ್ತಲಿನ ಕೆರೆ, ತೋಟ, ಗದ್ದೆಗಳೆಡೆ ಗುಂಪಾಗಿ ಹಾರಿ ಹೋಗುತ್ತವೆ. ಇವು ಸಾಮಾನ್ಯವಾಗಿ ಗುಂಪಾಗಿಯೇ ಚಲಿಸುವುದರಿಂದ ಹಾರುವಾಗ ಬಾನು ಮರೆಯಾಗುವಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ.

ಹಕ್ಕಿಗಳ ಹಿಂಡಿನಲ್ಲಿ ಒಂದು ರೀತಿಯ ಗಡಿಬಿಡಿ ಕೂಡಿರುತ್ತದೆ. ‘ಸಾಯಂಕಾಲ ಹಾರಿಬರುವ ಈ ಹಕ್ಕಿಗಳನ್ನು ನೋಡುವುದು ಬಲು ಸೊಗಸು, ಮಕ್ಕಳು ಹಕ್ಕಿಗಳಿಗಾಗಿ ಮಾಳಗಿ ಏರಿ ಕುಳಿತಿದ್ದರು’ ಎಂದು ನೆನೆಯುತ್ತಾರೆ ಗ್ರಾಮದ ಮಲ್ಲಿಕಾರ್ಜುನ ಮೆದಿಕೇರಿ.

ಈ ಭಾಗದಲ್ಲಿ ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳ  ತೋಟಗಳು, ಈ ಸಮಯದಲ್ಲಿ ಧಾನ್ಯಗಳ ರಾಶಿ ನಡೆದಿರುವುದರಿಂದ ಅಲ್ಲಲಿ ಉದುರಿ ಬಿದ್ದ ಜೋಳ, ನವಣೆ, ಗೋಧಿಯ ಕಾಳುಗಳು ಹಾರಿ ಬಂದ ಈ ವಿದೇಶಿ ಹಕ್ಕಿಗಳ ಆಹಾರ.

ಈ ಭಾಗದಲ್ಲಿ ಬೇಸಿಗೆಯ ಪ್ರಖರತೆ ಆರಂಭವಾಗುತ್ತಿದ್ದಂತೆ ತಾಯ್ನಾಡಿಗೆ ಓಡಿಹೋಗುತ್ತವೆ. ಮತ್ತೆ ಚಳಿಗಾಲ ಸಮೀಪಿಸಿದಾಗ ಮತ್ತೆ ಇತ್ತ ಮುಖ ಮಾಡುತ್ತವೆ. ಇದು ನಾಲ್ಕಾರು ವರ್ಷಗಳಿಂದ ನಡೆದು ಬಂದ ಸಾಮಾನ್ಯ ದೃಶ್ಯವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT