ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟದ ಕಿಚ್ಚನ್ನು’ ಬಿಚ್ಚಿಟ್ಟ ಸುಕ್ರಿ ಬೊಮ್ಮುಗೌಡ

‘ಜನಪದ ಹಕ್ಕಿ’ಗೆ ಸಾಮಾಜಿಕ ಕಳಕಳಿ, ಸಮುದಾಯಕ್ಕಾಗಿ ಹೋರಾಟದ ಕನಸು
Last Updated 7 ಮಾರ್ಚ್ 2017, 5:35 IST
ಅಕ್ಷರ ಗಾತ್ರ
ಚಿತ್ರದುರ್ಗ: ಜನಪದ ಕಣಜ. ಹಾಲಕ್ಕಿ ಒಕ್ಕಲಿನ ಕೊಂಡಿ. ಅಪರೂಪದ ಗಾನ ಕೋಗಿಲೆ, ಹಾಲಕ್ಕಿಯವರ ತಾರ್ಲೆಗುಣಿತವನ್ನು, ಪುನರುಜ್ಜೀವಗೊಳಿಸಿದವರು ಸುಕ್ರಿ ಬೊಮ್ಮುಗೌಡ, ಗಾಯನದ ಜತೆಗೆ ಸಮುದಾಯದ ರಕ್ಷಣೆಗಾಗಿ ಹೋರಾಟಕ್ಕೂ ಅಣಿಯಾಗಿದ್ದಾರೆ. ‘ಪದ್ಮಶ್ರೀ’ ಪುರಸ್ಕೃತರಾದರೂ, ಆ ಪ್ರಶಸ್ತಿ ಬಗ್ಗೆ ಸಮಾಧಾನ ವ್ಯಕ್ತಪಡಿಸದ ಅವರು, ನಮ್ಮ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕು, ಮದ್ಯಪಾನ ನಿಷೇಧಿಸಬೇಕು ಎಂದು ಮನವಿ ಮಾಡುತ್ತಾರೆ. 
 
ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಮತ್ತು ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್  ಸಂಸ್ಥೆಯ ಅಭಿನಂದನಾ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದ ಈ ಜನಪದ ಕೋಗಿಲೆ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರೊಂದಿಗೆ ನಡೆಸಿದ  ಸಂದರ್ಶನದ ಆಯ್ದ ಭಾಗ ಇಲ್ಲಿದೆ.
 
‘ಪದ್ಮಶ್ರೀ’ ಪ್ರಶಸ್ತಿ ಬಂದಿದೆ. ಖುಷಿಯಾಯಿತಾ ?  
ಹಾಲಕ್ಕಿ ಜನಾಂಗದ ಉಳಿವಿಗೆ ಹೋರಾಡುತ್ತಿರುವ ನನಗೆ ಪ್ರಶಸ್ತಿ ಸಿಕ್ಕಿರುವುದು ಸಂತೋಷವೂ ಅಲ್ಲ. ಆಶ್ಚರ್ಯವೂ ಅಲ್ಲ.  ಇದಕ್ಕಿಂದ ಮುಖ್ಯವಾಗಿ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು. ಇದಕ್ಕಾಗಿ ಆರು ಬಾರಿ ದೆಹಲಿಗೆ ಹೋಗಿದ್ದೇನೆ. ಪ್ರಯೋಜನವಾಗಿಲ್ಲ. ಮುಂದೆ ಮುಖ್ಯಮಂತ್ರಿಯನ್ನು ಭೇಟಿ ಯಾಗುತ್ತೇನೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಹಾಲಕ್ಕಿ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಕೊನೆಯ ಉಸಿರಿರುವತನಕ ನಿರಂತರವಾಗಿ ಹೋರಾಡುತ್ತೇನೆ. ಈ ಹೋರಾಟಕ್ಕಿಂತ ದೊಡ್ಡ ಪ್ರಶಸ್ತಿ ನನಗೆ ಬೇರೆ ಯಾವುದೂ ಇಲ್ಲ.
 
ಹಾಲಕ್ಕಿ ಜನಾಂಗದ ಪರಿಸ್ಥಿತಿ ಈಗ ಹೇಗಿದೆ ?
ಉತ್ತರ ಕನ್ನಡ ಭಾಗದ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಕೊಡಗು ಜಿಲ್ಲೆಯ ಮಡಿಕೇರಿ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಲಕ್ಕಿ ಸಮುದಾಯದವರಿದ್ದಾರೆ. ಅವರಲ್ಲಿ ಅರಣ್ಯವಾಸಿಗಳೇ ಹೆಚ್ಚು. ಈ ಸಮುದಾಯದವರಿಗೆ ವಸತಿ ಇಲ್ಲ. ಜಮೀನಿಲ್ಲ. ಹಾಗಾಗಿ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಸರ್ಕಾರ ಇಂಥವರನ್ನು ತೆರವುಗೊಳಿಸಿ ಬೀದಿಗೆ ತಳ್ಳುವ ಬದಲು, ಅಕ್ರಮ ಸಕ್ರಮಗೊಳಿಸಬೇಕು. ಈ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಎರಡು ದಶಕಗಳಿಂದ ಹೋರಾಟ ಮಾಡುತ್ತಿದ್ದೇನೆ.
 
ನಿಮ್ಮ ಹೋರಾಟದ ಹಾದಿಯ ಬಗ್ಗೆ  ಹೇಳಿ
ನಾನು ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕಾಗಿ ಹೋರಾಡು ತ್ತಿದ್ದೇನೆ. ಇದಕ್ಕೂ ಮುನ್ನ ಮದ್ಯಪಾನ ನಿಷೇಧವಾಗಬೇಕು ಎಂಬುದು ನನ್ನ ಧ್ಯೇಯವಾಗಿದೆ. ಮದ್ಯಾಪಾನದ ಚಟದಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರ ನಡೆ ಯುತ್ತಿವೆ. ಈಗಾಗಲೇ ಮದ್ಯಪಾನ ನಿಷೇಧ ಕುರಿತು  ಶಿರಸಿ, ಬೆಳಗಾವಿ ಅಂಕೋಲ, ಕಾರವಾರ, ಚಿತ್ತಾಪುರ, ಸೊರಬ ಮತ್ತಿತರರ ಕಡೆಗಳಲ್ಲಿ ಹೋರಾಟಗಳನ್ನು ಮಾಡಿದ್ದೇನೆ.  
 
ನಿಮ್ಮ ಗಾಯನ, ಜನಪದ ನೃತ್ಯದ ಬಗ್ಗೆ ಹೇಳಿ ?
ಎಂಟನೇ ವಯಸ್ಸಿನಲ್ಲೇ ಅಮ್ಮ ಹಾಗೂ ಅಜ್ಜಿಯ ಜತೆಯಲ್ಲಿ ಹಾಡುತ್ತಿದ್ದೆ.  ಜನಪದ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡೆ. ಅಮ್ಮ, ಅಜ್ಜಿ ಹಾಗೂ ಅಕ್ಕ-ಪಕ್ಕದ ಹಿರಿಯರು ಮದುವೆ, ತುಳಸಿ ಹಬ್ಬ, ಗದ್ದೆ ನಾಟಿ ಮಾಡುವಾಗ ಮತ್ತು ವಿವಿಧ ಶುಭ ಸಂದರ್ಭಗಳಲ್ಲಿ ದನಿಗೂಡಿಸುತ್ತಿದ್ದೆ.  ಚಿಕ್ಕವಯಸ್ಸಿಗೆ ಮದುವೆಯಾಯಿತು. ಸಾಂಪ್ರದಾಯಿಕ ತಾರ್ಲೆ ಕುಣಿತ ಕಲಿತೆ. ಉರುವಲು ತರುತ್ತಿದ್ದ ಮಹಿಳೆಯರಿಗೆ ತಾರ್ಲೆ ಕುಣಿಯಲು ಉತ್ತೇಜಿಸುತ್ತಿದ್ದೆ. ಅವಕಾಶ ಸಿಕ್ಕಾಗ ತಾರ್ಲೆ ಕುಣಿಯುವುದಕ್ಕೆ ಹಾಡು ಹೇಳಲು ಹುರಿದುಂಬಿಸುತ್ತಿದ್ದೆ.  ಈ ಮೂಲಕ ಹಾಲಕ್ಕಿಯವರ ತಾರ್ಲೆಕುಣಿತವನ್ನು, ಪುನರುಜ್ಜೀ ವನಗೊಳಿಸಲು ಪ್ರಯತ್ನಿಸಿದ್ದೇನೆ.
 
ಯುವ ಪೀಳಿಗೆಗೆ ನಿಮ್ಮ ಕಿವಿಮಾತು ಏನು ?
ಜಾನಪದ ಉಳಿವಿಗಾಗಿ ರಾಜ್ಯದ 80 ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದ್ದೇನೆ.  ಜನಪದ ಉಳಿಸಲಿಕ್ಕಾಗಿ ಇಳಿವಯಸ್ಸಿನಲ್ಲಿಯೂ ಹಾಡುತ್ತಿದ್ದೇನೆ. ಇಂದಿನ ಯುವಕರು ಜಾನಪದ ಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಸರ್ಕಾರ ಜನಪದ ಉಳಿಸುವತ್ತ ಗಮನ ಹರಿಸಬೇಕು.  

ಜನಪದ ಸಂಸ್ಕೃತಿಯ ಕಣಜ
ಸುಕ್ರಿ ಅವರ ತವರು ಜನಪದ ಸಂಸ್ಕೃತಿಯ ಕಣಜ. ಹಾಗಾಗಿ ಗದ್ದೆಗಳಲ್ಲಿ ಕೆಲಸ ಮಾಡುವಾಗ ಜನಪದ ಗಾಡುಗಾರ್ತಿಯರ ಜೊತೆ ಕೆಲಸ ಮಾಡುತ್ತಾ   ಜನಪದ ಸಾಹಿತ್ಯವನ್ನು ಅವರು ತನ್ನದಾಗಿಸಿಕೊಂಡರು. ಹಬ್ಬ ಹುಣ್ಣಿಮೆಯ ಹಾಡುಗಳು, ಮದುವೆ, ಚೊಳಂಗಿ, ಬಸುರಿ ಬಾಣಂತಿ ಹಾಡುಗಳೂ, ಸಾಮಾಜಿಕ ಪೌರಾಣಿಕ ಕಥನಪುರ ಹಾಡುಗಳು, ತಾರ್ಲೆ ಹಾಡುಗಳು   ನೆನಪಿನ ಕಣಜದಲ್ಲಿ ಒಟ್ಟುಗೂಡಿದ್ದವು.
 
ಇಂಥ ಜನಪದ ಗಾನಕೋಗಿಲೆಗೆ, ಸಾಮಾಜಿಕ ಕಳಕಳಿಯ ಚೇತನಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜೋತ್ಸವ ಪ್ರಶಸ್ತ್ರಿ, ಜಾನಪದ ಶ್ರೀ ಪ್ರಶಸ್ತಿ, ಮಾಧವ ಪ್ರಶಸ್ತಿ, ಜಾನಪದ ಪ್ರಕಾಶನ ಪ್ರಶಸ್ತಿ,  ಅಳ್ವಾಸ್ ನುಡಿಸಿರಿ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಸನ್ಮಾನಿಸಿವೆ.  ಆದರೆ ಅವೆಲ್ಲವನ್ನೂ ಹಿಂದಕ್ಕಿಡುವ ಸುಕ್ರಿ ಬೊಮ್ಮುಗೌಡ, ಪ್ರಶಸ್ತಿಗಳಿಗಿಂತ ಜನಪದವನ್ನು ಉಳಿಸಿ ಬೆಳೆಸುವುದೇ ನನ್ನ ದೊಡ್ಡ ಗುರಿ’ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT