ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದ ಸಂತೆ, ಸಂಚಾರ ದಟ್ಟಣೆಯದ್ದೆ ಚಿಂತೆ

ಗುರುಮಠಕಲ್‌ ಇಂದಿರಾಗಾಂಧಿ ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಿರಿಕಿರಿ
ಅಕ್ಷರ ಗಾತ್ರ
ಗುರುಮಠಕಲ್: ಸೋಮವಾರ ಬಂತೆಂದರೆ ತರಕಾರಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರದ ನಿರೀಕ್ಷೆ. ಸುತ್ತ ಮುತ್ತಲಿನ ನಿವಾಸಿಗಳಿಗೆ ಕೈಗೆಟಕುವ ಬೆಲೆಗೆ ತರಕಾರಿ ಲಭ್ಯವಾಗುತ್ತಿದೆ. ಆದರೆ  ಪಟ್ಟಣದಿಂದ ನಾರಾಯಣ ಪೇಟಗೆ ತೆರಳುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮಾರುಕಟ್ಟೆಯ ರಸ್ತೆಯಲ್ಲಿನ  ಸಂಚಾರ ದಟ್ಟಣೆ ಕಿರಿಕಿರಿ ಅನುಭವಿಸುತ್ತಿದ್ದಾರೆ.
 
ಇದು ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಯಿಂದಾಗಿ ರಸ್ತೆಯಲ್ಲಿ ಸಂಚರಿಸಲು ಪ್ರಾಯಸ ಪಡುವ ವಾಹನ ಸವಾರರ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಂಕಟವಾಗಿದೆ.
 
ಬಸ್ ನಿಲ್ದಾಣದ ಎದುರಿನಿಂದ ಆರಂಭವಾಗುವ ರಸ್ತೆಯಲ್ಲಿ ಸಾಮಾನ್ಯ ದಿನಗಳಲ್ಲಿ ಯಾವ ತೊಂದೆರೆಯೂ ಇರುವುದಿಲ್ಲ, ಆದರೆ ಸಂತೆ ನಡೆಯುವ ದಿನದಂದು ಸುತ್ತಲಿನ ಗ್ರಾಮಗಳಿಂದ ಜನರು ಬರುವುದರಿಂದ ಜನದಟ್ಟಣೆ ಹೆಚ್ಚಿರುತ್ತದೆ. ತರಕಾರಿ ಖರೀದಿಗೆ, ಮಾರಾಟಕ್ಕೆಂದು ಬರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತದೆ ಹೀಗಾಗಿ ರಸ್ತೆ ದಟ್ಟಣೆಯಿಂದ ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಮನೋಹರಕುಮಾರ, ಮಂಜುನಾಥ, ಸಾಬವ್ವ ಹಾಗೂ ಕಾಶಮ್ಮ.
 
ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಹೊರಗಡೆಯ ರಸ್ತೆಯ ಬದಿಗಳಲ್ಲಿಯೂ ತರಕಾರಿ ಹಾಗೂ ಇತರೆ ವಸ್ತುಗಳ ಮಾರಾಟಗಾರರು ತಮ್ಮ ವ್ಯಾಪಾರದಲ್ಲಿ ತೊಡಗಿರುವುದರಿಂದಾಗಿ ಖರೀದಿಸಲು ನಿಲ್ಲುವ ಸಾರ್ವಜನಿಕರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ವಾಹನಗಳು ಎದುರು ಬದುರು ಬಂದರೆ  20ರಿಂದ 30 ನಿಮಿಷದವರೆಗೆ ಸಮಸ್ಯೆಯುಂಟಾಗುತ್ತದೆ. ಹೀಗೆ ದಿನವಿಡೀ ಸಮಸ್ಯೆ ಪುನರಾವರ್ತನೆಗೊಳ್ಳುತ್ತಿದೆ ಎನ್ನುತ್ತಾರೆ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ.
 
ನಮ್ಮಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು ಆಯಾ ವೃತ್ತಗಳಲ್ಲಿ ಹಾಗೂ ಸಂತೆ ನಡೆಯುವ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದ್ದು, ಇತರೆ ಸಂಘ–ಸಂಸ್ಥೆಗಳೊಡನೆ ಸೇರಿ ಸಾರ್ವಜನಿಕರ ಸಹಕಾರವನ್ನು ಪಡೆದು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ಮಾಡಲಾಗುತ್ತಿದೆ ಎಂದು ಸಿಪಿಐ ಶಿವಾನಂದ ವಾಲೀಕಾರ್ ಹೇಳಿದ್ದಾರೆ. 
 
‘ಏನ್ ಮಾಡ್ಬೇಕ್ರಿ ಸಾರ, ಸಂತ್ಯಾಗ ಒಳಗ ಕುಂತು ಮಾರಕ ನಮ್ದೇನು ಬಾಳ ತರಕಾರಿ ಇರಲ್ಲ ಮತ್ತು  ಒಳಗೂ ಜಾಗ ಖಾಲಿ ಇರಲ್ಲ, ಅದಕ್ಕೆ ರಸ್ತೆಯ ಪಕ್ಕ ಮಾರಾಟ ಮಾಡ್ತೀವಿ’ ಎನ್ನುತ್ತಾರೆ ಬೀದಿ ಬದಿಯ ವ್ಯಾಪಾರಿಗಳು.
 
ಸಮಸ್ಯೆಯ ಕುರಿತು ಪುರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ‘ ಸಂಚಾರ ದಟ್ಟಣೆ ಕುರಿತು ಪುರಸಭೆ ಗಮನಕ್ಕೆ ಬಂದಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿವಿಧ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು’ ಎಂದು ಪುರಸಭೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
 
ಒಟ್ಟಾರೆಯಾಗಿ ಸೋಮವಾರದ ಸಂತೆ ಮಾರಾಟಗಾರರು, ಗ್ರಾಹಕರು ಹಾಗೂ ಅಧಿಕಾರಿಗಳಿಗೆ ದಟ್ಟಣೆಯ ಚಿಂತೆಯನ್ನು ಉಂಟುಮಾಡಿದೆ. ಅಧಿಕಾರಿಗಳು ಶೀಘ್ರವೇ ಸಮಸ್ಯೆಗೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
 
* ಸಂತೆ ನಡೆಯುವ ವೇಳೆ ವಾಹನ ಹಾಗೂ ಜನ ದಟ್ಟಣೆಯಿಂದಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಸಾಬರೆಡ್ಡಿ ಸಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT