ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಸಾವಿರ ಮಿನಿ ಮೇವು ಕಿಟ್‌ ವಿತರಣೆ

ಹೈನುರಾಸುಗಳಿಗೆ ಹಸಿರು ಮೇವಿನ ಕೊರತೆ ನೀಗಿಸಲು ಕ್ರಮ: ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ರೇವಣ್ಣ ಹೇಳಿಕೆ
Last Updated 7 ಮಾರ್ಚ್ 2017, 7:29 IST
ಅಕ್ಷರ ಗಾತ್ರ
ಹಾಸನ: ಬರಗಾಲದ ಕಾರಣದಿಂದ ಹೈನುರಾಸುಗಳಿಗೆ ಹಸಿರು ಮೇವಿನ ಕೊರತೆ ಉಂಟಾಗುವುದನ್ನು ನಿವಾರಿಸಲು ಹಾಲು ಉತ್ಪಾದಕರಿಗೆ ಸುಮಾರು ₹ 85 ಲಕ್ಷ ವೆಚ್ಚದಲ್ಲಿ ಉಚಿತವಾಗಿ 40 ಸಾವಿರ ಮಿನಿ ಮೇವು ಕಿಟ್‌ ವಿತರಿಸಲಾಗುವುದು ಹಾಸನ ಹಾಲು ಒಕ್ಕೂಟದ (ಹಾಮೂಲ್‌) ಅಧ್ಯಕ್ಷ ಎಚ್.ಡಿ.ರೇವಣ್ಣ ತಿಳಿಸಿದರು. 
 
200 ಕ್ವಿಂಟಲ್‌ ಮೇವಿನ ವೆಚ್ಚವನ್ನು ಒಕ್ಕೂಟವೇ ಭರಿಸಲಿದೆ. ರಾಸುಗಳಿಗೆ ಉತ್ಕೃಷ್ಟ ಮೇವು ಪೊರೈಸುವ ಉದ್ದೇಶದಿಂದ ಸುಮಾರು 50 ಕ್ವಿಂಟಲ್ ದ್ವಿದಳ ಮೇವಿನ ವೆಲ್ವೆಟ್ ಬೀನ್ಸ್  ಬೀಜದ ₹ 4 ಲಕ್ಷ ವೆಚ್ಚದ 1 ಸಾವಿರ ಮಿನಿ ಕಿಟ್‌ಗಳನ್ನು ಉಚಿತವಾಗಿ ಉತ್ಪಾದಕರಿಗೆ ನೀಡಲಾಗುವುದು. ನೀರಾವರಿ ಸೌಲಭ್ಯ ಇರುವ ಉತ್ಪಾದಕರು ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮೇವು ಬೆಳೆದು, ಸಂಬಂಧಪಟ್ಟ ಸಂಘಗಳಲ್ಲಿ ವಾಪಸ್ ಖರೀದಿಸಿ ಬೇಡಿಕೆ ಇರುವ ಉತ್ಪಾದಕರಿಗೆ ವಿತರಿಸಲಾಗುತ್ತದೆ.
 
ಒಕ್ಕೂಟದ ಡೇರಿ ಮತ್ತು ಶೀತಲೀಕರಣಗಳಲ್ಲಿ  ಖಾಲಿ ಇರುವ ಸುಮಾರು 10ರಿಂದ 15 ಎಕರೆ ಪ್ರದೇಶದಲ್ಲಿ ಜೋಳ ಬೆಳೆದು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ಆಹಾರ ಸಮತೋಲನ ಕಾರ್ಯಕ್ರಮದಡಿ ಆಯಾ ಗ್ರಾಮಗಳಲ್ಲಿ ಸಂಪನ್ಮೂಲ ವ್ಯಕ್ತಿ ನೇಮಿಸಿ ಸಾಫ್ಟ್‌ವೇರ್ ಅಳವಡಿಸಿರುವ ಲ್ಯಾಪ್‌ಟಾಪ್‌ ನೀಡಲಾಗಿದೆ. ಇವರು ಉತ್ಪಾದಕರ ಮನೆಗೆ ಭೇಟಿ ನೀಡಿ ಹಾಲು ಕರೆಯುವ ರಾಸುಗಳ ತೂಕ ಮತ್ತು ಹಾಲಿನ ಇಳುವರಿಗೆ ಅನುಗುಣವಾಗಿ ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಪಶು ಆಹಾರ ತಯಾರಿಸುವುದನ್ನು ಹೇಳಿಕೊಡುತ್ತಾರೆ. ರಾಸುಗಳ ಆರೋಗ್ಯ ತಪಾಸಣೆ, ಇಳುವರಿ, ಆಹಾರ ಗುಣಮಟ್ಟದ ಪ್ರಮಾಣದ ಅಂಶವನ್ನು ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೆ ಎಂದರು.
 
ಬೀಜೋತ್ಪಾದನೆ ಕಾರ್ಯಕ್ರಮದಲ್ಲಿ  ಉತ್ಪಾದಕರಿಗೆ ಜೋಳದ ಬೀಜ ವಿತರಿಸಿ ಬೆಳೆದ ಜೋಳವನ್ನು ಒಕ್ಕೂಟವೇ ದರ ನಿಗದಿ ಮಾಡಿ ಖರೀದಿಸಲಿದೆ.  ಉತ್ಪಾದಕರು ರೈತರು ಹಸಿರು ಮೇವು  ಉತ್ಪಾದಿಸಲು ನೆರವಾಗುವಂತೆ ಒಕ್ಕೂಟದ ಮುಖ್ಯ ಡೇರಿ ಹಾಗೂ ಶೀತಲೀಕರಣ ಕೇಂದ್ರಗಳಲ್ಲಿ ಅಭಿವೃದ್ಧಿ ಪಡಿಸಿರುವ ಮೇವಿನ ಬೆಳೆಗಳ ಬಿತ್ತನೆ ಕಾಂಡಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಉಚಿತವಾಗಿ ವಿತರಿಸಲಾಗುವುದು.
 
ಬೇಸಿಗೆ ಹಾಗೂ ಇತರೆ ಸಂಕಷ್ಟದ ಕಾಲದಲ್ಲಿ ರಾಸುಗಳಿಗೆ ಹಸಿರು ಮೇವಿನ ಲಭ್ಯತೆಗಾಗಿ ಅಸಂಪ್ರದಾಯಿಕ ಮೇವಿನ ಗಿಡಗಳಾದ ಅಗಸೆ, ನುಗ್ಗೆ ಹಾಗೂ ಇತರೆ ಮೇವಿನ ಮರಗಳ ಸಸಿಗಳನ್ನು ಶೇ.60 ರಿಯಾಯಿತಿ ದರದಲ್ಲಿ ಉತ್ಪಾದಕರಿಗೆ ಪೂರೈಸಲಾಗುವುದು. ಇದುವರೆಗೆ 1 ಲಕ್ಷ ಸಸಿಗಳನ್ನು ಸಂಘಗಳ ಮೂಲಕ ವಿತರಿಸಲಾಗಿದೆ ಎಂದು ವಿವರಿಸಿದರು.
 
ಜಿಲ್ಲೆಯಲ್ಲಿ ನಿರ್ವಹಣೆ ಮಾಡುತ್ತಿರುವ ಯುಎಚ್‌ಟಿ ಘಟಕವನ್ನು ₹ 55 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತಿದೆ.  ಹಾಲಿನ ಪ್ರಮಾಣ  2ರಿಂದ 4 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ಇದಕ್ಕೆ ಯೂರೋಪ್‌ನಿಂದ ₹ 15 ಕೋಟಿ ವೆಚ್ಚದ ಯಂತ್ರೋಪಕರಣ ತರಿಸಲಾಗುತ್ತಿದೆ. ಮೇ ಅಂತ್ಯಕ್ಕೆ ಐಸ್‌ಕ್ರೀಂ ತಯಾರಿಕ ಘಟಕ ಆರಂಭಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ   ಒಕ್ಕೂಟದ ವ್ಯವಸ್ಧಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.
 
ಮೆಗಾ ಡೇರಿಗೆ ಪ್ರಸ್ತಾವ
ಹಾಸನ:
ಜಿಲ್ಲೆಯಲ್ಲಿ ₹ 320 ಕೋಟಿ ವೆಚ್ಚದ ಮೆಗಾ ಡೇರಿ ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಸಂಸದ ಎಚ್.ಡಿ.ದೇವೇಗೌಡರ ಜತೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಸಕಾರತ್ಮಕ ಸ್ಪಂದನೆ ಸಿಕ್ಕಿದೆ.  ಕೇಂದ್ರ ₹ 100 ಕೋಟಿ ಅನುದಾನ ನೀಡುವ ಸಾಧ್ಯತೆ ಇದ್ದು, ಉಳಿದ ಹಣವನ್ನು ಹಾಮೂಲ್‌ ಭರಿಸಲಿದೆ. ಮೆಗಾ ಡೇರಿಯಲ್ಲಿ ₹ 15ರಿಂದ 20 ಲಕ್ಷ ಲೀಟರ್‌ ಹಾಲಿನ ನಿರ್ವಹಣೆ ಮಾಡಬಹುದು ಎಂದು ರೇವಣ್ಣ ತಿಳಿಸಿದರು.
 
* ಪ್ರತಿ ವರ್ಷ ಸುಮಾರು 700ರಿಂದ 800 ಕ್ವಿಂಟಲ್ ಮುಸುಕಿನ ಜೋಳವನ್ನು ಬೀಜೋತ್ಪಾದನೆ ಕಾರ್ಯಕ್ರಮಗಳಲ್ಲಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿಸಲಾಗುವುದು
-ಎಚ್‌.ಡಿ.ರೇವಣ್ಣ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT