ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಖಾಲಿ ಮಾಡಿರಲು ಸಾಧ್ಯ ಇಲ್ಲಾ ಸಾರ್!

ಕಚೇರಿಯಲ್ಲಿ ಕುಳಿತು ಸುಳ್ಳು ಹೇಳುವ ನೀರಾವರಿ ಇಲಾಖೆ ಎಂಜಿನಿಯರ್‌ಗಳು
Last Updated 7 ಮಾರ್ಚ್ 2017, 9:19 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ರೆಡ್ಡಿಹಳ್ಳಿ ಕೆರೆಯಲ್ಲಿ ನಿನ್ನೇ ನೀರು ತೆಗೆದಿದ್ದಾರಾ? ಇಲ್ಲವಲ್ಲಾ? ಆ ರೀತಿ ನಮಗೆ ಮಾಹಿತಿ ಬಂದಿಲ್ಲಾ. ಕೆರೆ ಖಾಲಿ ಮಾಡಿರಲು ಖಂಡಿತ ಸಾಧ್ಯ ಇಲ್ಲಾ ಸಾರ್! ಕೆರೆ ನೀರು ಇಂಗಿದೆ, ಇಲ್ಲಾ ಆವಿಯಾಗಿದೆ. ಇದು ಸತ್ಯ’ 
 
‘ನಿನ್ನೆಯಿಂದ ರಸ್ತೆ ಗುತ್ತಿಗೆದಾರ ಕೆರೆ ನೀರು ಎತ್ತುತ್ತಿಲ್ಲಾ. ಖಾಸಗಿ ಕೊಳವೆ ಬಾವಿಯಲ್ಲಿ ನೀರು ತೆಗೆದುಕೊಳ್ಳುತ್ತಿದ್ದಾರೆ. ನಾವು ನಿನ್ನೆಯಿಂದಲೇ ಇಲಾಖೆ ಚೌಡಿಗಳನ್ನು (ನೀರುಗಂಟಿ) ಕೆರೆ ಕಾವಲಿಗೆ ನೇಮಕ ಮಾಡಿದ್ದೇವೆ. ಟ್ಯಾಂಕರ್‌ ನೀರು ತೆಗೆದುಕೊಂಡರೆ ಕೆರೆ ಹೇಗೆ ಖಾಲಿಯಾಗುತ್ತೆ ಸರ್‌?’
 
–ಇವು ತಾಲ್ಲೂಕಿನ ದೊಡ್ಡಪೈಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರೊಬ್ಬರು ರಸ್ತೆ ನಿರ್ಮಾಣ ಕಾಮಗಾರಿಗೆ ರೆಡ್ಡಿಹಳ್ಳಿ ಕೆರೆಯನ್ನು ಬರಿದು ಮಾಡಿ, ಬಳಿಕ ಚಿಕ್ಕಪೈಲಗುರ್ಕಿ ಹೊಸಕೆರೆಯ ನೀರು ಬಳಸಿಕೊಳ್ಳುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಪ್ರದೀಪ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಡಿ.ಹೇಮಂತ್ ಅವರು ನೀಡಿದ ಉತ್ತರಗಳು.
 
‘ಪ್ರಜಾವಾಣಿ’ ವರದಿಗಾರ ಭಾನುವಾರ ರೆಡ್ಡಿಹಳ್ಳಿ ಕೆರೆಗೆ ಭೇಟಿ ನೀಡಿದ ವೇಳೆ ಆ ಕೆರೆ ಅಂಗಳದಲ್ಲಿ ಗುತ್ತಿಗೆದಾರರಿಗೆ ಸೇರಿದ ಟ್ಯಾಂಕರ್‌ಗಳು ನೀರು ತುಂಬಿಸಿಕೊಂಡು ಹೋಗಿ ರಸ್ತೆ ಸುರಿಯುತ್ತಿದ್ದದ್ದು ಗೋಚರಿಸಿತ್ತು. ಅಕ್ರಮವಾಗಿ ಕೆರೆ ನೀರನ್ನು ಬಳಸಿಕೊಳ್ಳುತ್ತಿರುವುದನ್ನು ಕುರಿತು ಸೋಮವಾರ ಪ್ರಶ್ನಿಸಿದಾಗ ಈ ಇಬ್ಬರು ಅಧಿಕಾರಿಗಳು ಮಾತ್ರ ಸುಳ್ಳು ಮಾಹಿತಿಯನ್ನೇ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿದರು.
 
ಸಹಾಯಕ ಎಂಜಿನಿಯರ್‌ ಪ್ರದೀಪ್‌ ಅವರಿಗೆ ‘ರೆಡ್ಡಿಹಳ್ಳಿ ಕೆರೆಗೆ ನೀವು ಭೇಟಿ ನೀಡಿದ್ದೀರಾ?’ ಎಂದಾಗ ‘ಹೌದು’ ಎಂದರು. ‘ನೀರು ಹೇಗೆ ತೆಗೆಯುತ್ತಿದ್ದಾರೆ’ ಎಂದು ಪ್ರಶ್ನಿಸುವ ಮುನ್ನವೇ ‘ಟ್ಯಾಂಕರ್‌ನಲ್ಲಿ’ ಎಂದು ಉತ್ತರಿಸಿದ್ದರು. ಬಳಿಕ ‘ರೆಡ್ಡಿಹಳ್ಳಿ ಕೆರೆಯಂಗಳಲ್ಲಿ ಸುಮಾರು 200 ಮೀಟರ್‌ ಉದ್ದದ ದೊಡ್ಡ ಕಾಲುವೆಯನ್ನು ಯಾರು ತೆಗೆದಿದ್ದಾರೆ’ ಎಂದು ಪ್ರಶ್ನಿಸಿದರೆ ‘ಅದರ ಬಗ್ಗೆ ಮಾಹಿತಿ ಇಲ್ಲಾ. 9 ದಿನಗಳ ಹಿಂದೆ ಕೆರೆಗೆ ಭೇಟಿ ನೀಡಿದ್ದೆ. ಸೋಮವಾರ ತಹಶೀಲ್ದಾರ್ ನಮಗೆ ಚಿಕ್ಕಪೈಲಗುರ್ಕಿ ಹೊಸಕೆರೆ ಬಗ್ಗೆ ದೂರು ಹೇಳಿದ್ದರು ಹೀಗಾಗಿ ಆ ಕೆರೆಗಷ್ಟೇ ಹೋಗಿ ಬಂದಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
 
ಇದೇ ವೇಳೆ ಅವರು, ‘ನಮಗೆ ಜಿಲ್ಲಾಧಿಕಾರಿ ಅವರು ಕೊಟ್ಟಿರುವ ಆದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಕೆರೆ ನೀರು ಬಿಡಬಾರದು ಎಂದಷ್ಟೇ ಇದೆ. ಶನಿವಾರ ಈ ಬಗ್ಗೆ ದೂರು ಬಂದಾಗ ಎಇಇ ಜತೆಗೆ ಮಾತನಾಡಿದಾಗ ನನ್ನ ಸಂದೇಹ ಪರಿಹರಿಯಿತು’ ಎಂದರು! 
 
ವಾರದ ಹಿಂದೆಯೇ ರೈತರು ದೂರು ಕೊಟ್ಟರೂ ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಹೇಮಂತ್ ಅವರನ್ನು ಪ್ರಶ್ನಿಸಿದಾಗ, ‘ನನ್ನ ವ್ಯಾಪ್ತಿಯಲ್ಲಿ 5 ತಾಲ್ಲೂಕುಗಳಿವೆ. ಈ ತಾಲ್ಲೂಕಿಗೆ ಸಂಬಂಧಪಟ್ಟಂತೆ ಸಹಾಯಕ ಎಂಜಿನಿಯರ್‌ ಪ್ರದೀಪ್‌ ಇದ್ದಾರೆ. ಅವರ ಗಮನಕ್ಕೆ ತಂದಿದೆ’ ಎಂದು ಹೇಳಿದರು.
 
ಈ ಕುರಿತು ಪ್ರದೀಪ್‌ ಅವರನ್ನು ಪ್ರಶ್ನಿಸಿದರೆ, ‘ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ರೈತರು ಕೊಟ್ಟಿದ್ದ ದೂರು ನಮಗೆ ಶನಿವಾರ ಸಂಜೆ ತಲುಪಿದೆ. ನಿನ್ನೆಯಿಂದ ಕೆರೆ ಕಾವಲಿಗೆ ಚೌಡಿಗಳನ್ನು ನೇಮಕ ಮಾಡಿದ್ದೇವೆ. ಸೋಮವಾರ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಲಿಖಿತ ದೂರು ಕೊಟ್ಟಿದ್ದೇವೆ. ಕೆರೆ ನೋಡಿಕೊಳ್ಳುವವನು ನಾನಾದರೂ ಎಇಇಗೆ ವರದಿ ನೀಡಬೇಕು’ ಎಂದು ತಿಳಿಸಿದರು.
 
ವರದಿ ಕೊಟ್ಟಿದ್ದೀರಾ? ಕೆರೆ ಖಾಲಿ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದೀರಾ? ಇಂತಹ ಅಪರಾಧಕ್ಕೆ ಏನು ಶಿಕ್ಷೆ ಎಂದಾಗ, ‘ಕೆರೆ ನೀರು ಬಳಸದಂತೆ ಸೂಚನೆ ನೀಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಏನು ಶಿಕ್ಷೆ ಇದೆಯೋ ನನಗೂ ಗೊತ್ತಿಲ್ಲ’ ಎಂದು ಹೇಳಿದರು.
 
ನಾಲ್ಕು ದಿನ ಹೊಡೆದ್ದಿದ್ದಾರೆ ಅಷ್ಟೇ!
‘ಗುತ್ತಿಗೆದಾರರು ಕೆರೆ ನೀರು ಜಾಸ್ತಿ ದಿನ ಬಳಸಿಲ್ಲ. ನಾಲ್ಕು ದಿನಾ ಹೊಡೆದಿದ್ದಾರೆ ಅಷ್ಟೇ. ಟ್ಯಾಂಕರ್‌ಗಳ ಮೂಲಕ ನೀರು ತೆಗೆದುಕೊಂಡರೆ ಕೆರೆ ಹೇಗೆ ಖಾಲಿಯಾಗುತ್ತೆ’ ಎಂದು ಮರು ಪ್ರಶ್ನಿಸಿದ ಡಿ.ಹೇಮಂತ್, ‘ಗಮನಕ್ಕೆ ಬಂದ ಮೇಲೆ ಬಂದ್‌ ಮಾಡಿಸಿದ್ದೇವೆ. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗೆ ದೂರು ನೀಡಿದ್ದೇವೆ’ ಎಂದರು. 
 
ಅಧಿಕಾರಿಗಳಿಗೆ ಶಾಸಕರ ಭಯ: ‘ಗುತ್ತಿಗೆದಾರನ ವಿರುದ್ದ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಗಳು ಹಾರಿಕೆ ಉತ್ತರ ನೀಡುತ್ತಾರೆ. ಗುತ್ತಿಗೆದಾರ ಶಾಸಕರಿಗೆ ಬೇಕಾಗಿರುವವರು. ಅವರ ವಿರುದ್ಧ ದೂರು ದಾಖಲಿಸಿದರೆ ಎಲ್ಲಿ ನಮ್ಮ ತಲೆದಂಡವಾಗುತ್ತದೋ ಎನ್ನುವ ಭಯದಲ್ಲಿ ಅಧಿಕಾರಿಗಳು ದೂರು ದಾಖಲಿಸಲು ಮುಂದಾಗುತ್ತಿಲ್ಲ.

ಇತ್ತೀಚೆಗೆ ಜಿಲ್ಲೆಯ ಎಸ್ಪಿಯೇ ಸ್ವತಃ  ಸಂಸದ ಕೆ.ಎಚ್.ಮುನಿಯಪ್ಪ ಅವರ ಎದುರು ಶಾಸಕರು ನೀಡುವ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?’ ಎಂದು ರೆಡ್ಡಗೊಲ್ಲವಾರಹಳ್ಳಿ ನಿವಾಸಿ ನಾರಾಯಸ್ವಾಮಿ ತಿಳಿಸಿದರು. 
 
ದೂರು ದಾಖಲಿಸಲು ತಹಶೀಲ್ದಾರ್‌ ಮೀನಮೇಷ!
‘ಪ್ರಜಾವಾಣಿ’ ಸೋಮವಾರದ ಸಂಚಿಕೆಯಲ್ಲಿ ‘ರಸ್ತೆ ಕಾಮಗಾರಿಗೆ ಕೆರೆ ಖಾಲಿ!’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಅದನ್ನು ಗಮನಿಸುತ್ತಿದ್ದಂತೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ಬೆಳಿಗ್ಗೆಯೇ ತಹಶೀಲ್ದಾರ್‌ ಆರ್‌.ಮೋಹನ್‌ ಅವರಿಗೆ ಕರೆ ಮಾಡಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.

ಸಂಜೆ ಪ್ರಕರಣ ಕುರಿತಂತೆ ಪ್ರಶ್ನಿಸಿದಾಗ ಜಿಲ್ಲಾಧಿಕಾರಿ, ‘ದೂರು ದಾಖಲಾಗಿದೆಯಲ್ಲಾ’ ಎಂದು ಮರುಪ್ರಶ್ನಿಸಿದರು. ‘ಇಲ್ಲಾ’ ಎನ್ನುತ್ತಿದ್ದಂತೆ ಆ ಸಂದರ್ಭದಲ್ಲಿ ಕಚೇರಿಯಲ್ಲಿಯೇ ಇದ್ದ ತಹಶೀಲ್ದಾರ್‌ ಅವರಿಂದ ಮಾಹಿತಿ ಪಡೆಯುವ ಜತೆಗೆ ‘ಕೂಡಲೇ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದರು. ಬಳಿಕ ‘ಖಂಡಿತ ಇವತ್ತು ದೂರು ದಾಖಲಿಸುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
 
ದಂಡ ವಿಧಿಸಲು ಸೂಚನೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್‌ ಅವರು ಸೋಮವಾರ ಚಿಕ್ಕಪೈಲಗುರ್ಕಿ ಹೊಸಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು ಯಾವುದೇ ಕಾರಣಕ್ಕೂ ಕೆರೆಯ ನೀರನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಕೂಡದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಅವರಿಗೆ ತಾಕೀತು ಮಾಡಿದರು. ಜತೆಗೆ ಕೆರೆ ನೀರು ಬಳಕೆ ಮಾಡಿಕೊಂಡ ಗುತ್ತಿಗೆದಾರನಿಂದ ದಂಡ ವಸೂಲಿ ಮಾಡುವಂತೆ ನಿರ್ದೇಶನ ನೀಡಿದರು.
 
* ಕೆರೆ ನೀರು ಬಳಕೆ ಮಾಡಿದ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್‌ ಅವರಿಗೆ ನಿರ್ದೇಶನ ನೀಡಿರುವೆ. ಖಂಡಿತ ಪ್ರಕರಣ ದಾಖಲಿಸುತ್ತೇವೆ.
-ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT