ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಿಂದ ಸಾಹಿತ್ಯ ಸಮ್ಮೇಳನ

ಕಡೂರು: ಅನನ್ಯ ಸಾಧಕನಿಗೆ ನುಡಿಜಾತ್ರೆಯ ಸಾರಥ್ಯ
Last Updated 7 ಮಾರ್ಚ್ 2017, 9:57 IST
ಅಕ್ಷರ ಗಾತ್ರ
ಕಡೂರು: ಬರದ ಬೀಡಿನಲ್ಲಿ ಮತ್ತೊಂದು ನುಡಿಜಾತ್ರೆಯ ಸಂಭ್ರಮ. ರೈತಾಪಿ ವರ್ಗ ಕಷ್ಟದಲ್ಲಿರುವಾಗ ಸಾಹಿತ್ಯ ಸಮ್ಮೇಳನ ಅಗತ್ಯವೇ ಎಂಬ ಗೊಂದಲ ಹಲವರಿದ್ದರೂ ಇಲ್ಲಿ ಬಂದಿರುವುದು ಪ್ರಾಕೃತಿಕ ಬರ.  ಸೃಜನಶೀಲ ಮನಸ್ಸಿಗಲ್ಲ ಎಂಬುದು ಸಾಹಿತ್ಯಾಸಕ್ತರ ಉತ್ಸಾಹ. ಅಂತೆಯೇ ತಾಲ್ಲೂಕಿನ ಸಿಂಗಟಗೆರೆಯಲ್ಲಿ ಇದೇ 10 ಮತ್ತು 11 ರಂದು ಕಡೂರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಸಾಹಿತ್ಯ ಪರಿಚಾರಕ ಪ್ರೊ. ಕೆ.ಓಂಕಾರಪ್ಪ ನುಡಿಜಾತ್ರೆಯ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹುಟ್ಟಿದ್ದು ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿಯಲ್ಲಿ. ತಂದೆ ಕಲ್ಲಪ್ಪ. ತಾಯಿ ನೀಲಮ್ಮ. ಪ್ರಾಥ ಮಿಕ ಶಿಕ್ಷಣ ಪಡೆದಿದ್ದು ಪಿಳ್ಳೇನ ಹಳ್ಳಿಯಲ್ಲಿ. ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಸಖರಾಯಪಟ್ಟಣದಲ್ಲಿ. ಚಿಕ್ಕಮಗಳೂರಿನಲ್ಲಿ ಬಿ.ಎ.ಪದವಿ ಪಡೆದು, ದಾವಣಗೆರೆಯಲ್ಲಿ ಬಿ.ಇಡಿ ಪದವಿ ಪಡೆದರು. ನಂತರ ಮೈಸೂರು ವಿ.ವಿ. ಯಲ್ಲಿ ಎಂ.ಎ.ಪದವಿ ಪಡೆದರು.
 
ಚಿಕ್ಕಮಗಳೂರು ಮತ್ತು ಹಿರೇ ಮಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ನಂತರ ಹೊಳಲ್ಕೆರೆ ಪದವಿ ಕಾಲೇಜುಗಳಲ್ಲಿ 16 ಉಪನ್ಯಾಸಕರಾಗಿ, 14 ವರ್ಷ ಪ್ರಾಧ್ಯಾಪಕರಾಗಿ ತದನಂತರ  8 ವರ್ಷ ಶಿವಮೊಗ್ಗ ಡಿವಿಎಸ್ ಕಾಲೇಜಿನಲ್ಲಿ  ಕನ್ನಡ ಉಪ ನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.  ಒಂದು ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಣೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು. ವಿಶ್ರಾಂತ ಜೀವನ ಶಿವಮೊಗ್ಗದಲ್ಲಿ.
 
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಸಕ್ತಿ. ಲಲಿತ ಪ್ರಬಂಧ, ನಾಟಕ, ಕಾವ್ಯ, ವ್ಯಕ್ತಿಚಿತ್ರ, ಪ್ರಬಂಧ, ಭಾಷೆ ಪ್ರಾಕಾರ ಗಳಲ್ಲಿ ರಚನಾಶಕ್ತಿ. ಪ್ರಕಟವಾಗಿದ್ದು 17 ಕೃತಿಗಳು. ಚಿಂತನರಶ್ಮಿ, ವಚನರಶ್ಮಿ, ಸಂವೇದನಾರಶ್ಮಿ, ವಚನಭಾಗಿನ, ಅಜಾತಶತ್ರು ಅವುಗಳಲ್ಲಿ ಪ್ರಮುಖ. ಇವಲ್ಲದೆ ಹಲವಾರು ವೈಚಾರಿಕ ಪ್ರಬಂಧಗಳು, ವ್ಯಕ್ತಿ ಚಿತ್ರಗಳು, ಕಿರುಪ್ರಬಂಧಗಳು ಪ್ರಕಟವಾಗಿವೆ. 
 
ನಾಡಿನ ಪ್ರಧಾನ ಪತ್ರಿಕೆಗಳಲ್ಲಿ ಪ್ರಚಾರವಾಗಿವೆ. ನಾಡಿನ ಪ್ರಮುಖ ಸಾಹಿತಿಯನ್ನಾಗಿ ಹೊರಹೊಮ್ಮಿಸಿವೆ. ಇವಲ್ಲದೆ ಅನೇಕ ಸಂಪಾದಕರಾಗಿ ವಿವಿಧ ಅಭಿನಂದನಾ ಗ್ರಂಥಗಳಲ್ಲಿ ಓಂಕಾರಪ್ಪ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗ ವಹಿಸಿ ಕವಿತಾ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ರಶ್ಮಿ ಮತ್ತು ಚಿಂತನ ಕಾರ್ಯಕ್ರಮಗಳಲ್ಲಿ ಓಂಕಾರಪ್ಪನವರ ಚಿಂತನೆಗಳು ಪ್ರಸಾರವಾಗಿವೆ.
 
ಇಂತಹ ಸಾಧಕರಿಗೆ ದೊರಕಿದ ಸನ್ಮಾನಗಳು ಹಲವಾರು. ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸಖರಾಯಪಟ್ಟಣದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಾಹುಬಲಿ ಕುರಿತ ಕವಿತೆಗೆ ಎರಡನೇ ಬಹುಮಾನ, ತರಳಬಾಳು ಸಂಸ್ಥೆಯ ಸೇವಾ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳ ನದ ಸಾಹಿತ್ಯ ಸಿರಿ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಸನ್ಮಾನ, ಗದಗದ ರಾಜ್ಯಮಟ್ಟದ ಕುಮಾರವ್ಯಾಸ ಪ್ರಶಸ್ತಿ, ಶರಣಸಾಹಿತ್ಯ ಪರಿಷತ್ತಿನಿಂದ ಸುವರ್ಣಸಿರಿ ಪ್ರಶಸ್ತಿಗಳು ದೊರಕಿವೆ.
 
ಇಂತಹ ಅಪ್ರತಿಮ ಸಾಧಕನಿಗೆ ಕಡೂರು ತಾಲ್ಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ  ಸರ್ವಾಧ್ಯಕ್ಷ ಗೌರವ ಸಂದಿರುವುದು ತಾಲ್ಲೂಕಿನ ಸಮಸ್ತ ಸಾಹಿತ್ಯ ವಲಯಕ್ಕೆ ದಕ್ಕಿದ ಗೌರವ. ಬರದ ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಲಿ ಎಂಬುದು ಅವರ ಅಭಿಮಾನಿಗಳ ಅಶಯ.
ಬಾಲುಮಚ್ಚೇರಿ, ಕಡೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT