ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಬಂದೂಕು; ಎರಡು ಕಡೆ ಬೇಟೆ!

ಜೋಡಿ ಕಡವೆ, ಜೋಡಿ ಕೃಷ್ಣಮೃಗ ಬೇಟೆ ಪ್ರಕರಣ
Last Updated 7 ಮಾರ್ಚ್ 2017, 10:05 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆಯ ನೆತ್ತಿಚೌಕದ ಜೋಡಿ ಕಡವೆ ಬೇಟೆ ಮತ್ತು ಕೆಜಿಎಫ್‌ ಹೊರ ವಲಯದ ಬಡಮಾಕನಹಳ್ಳಿ ಮೀಸಲು ಅರಣ್ಯದ ಜೋಡಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಗಳು ಒಂದೇ ಬಂದೂಕು ಬಳಸಿರುವ ಸಂಗತಿ ತನಿಖೆಯಿಂದ ಹೊರಬಿದ್ದಿದೆ.
 
ಕೆಮ್ಮಣ್ಣುಗುಂಡಿ ಪ್ರವಾಸಿಧಾಮ ಸಮೀಪದ ಭದ್ರಾ ಹುಲಿ ಮೀಸಲು ಅರಣ್ಯದ ನೆತ್ತಿಚೌಕದಲ್ಲಿ ಹೊಸ ವರ್ಷದ ಸಂಭ್ರಮದ ದಿನ ಜೋಡಿ ಕಡವೆ ಬೇಟೆ ಯಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಅಖ್ತರ್‌ ಅಹಮದ್‌ ಬಳಸಿದ್ದ ಬಂದೂಕನ್ನೇ ಕೋಲಾರ ಸಮೀಪದ ಬಡಮಾಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಜೋಡಿ ಕೃಷ್ಣಮೃಗ ಬೇಟೆಯಾಡಿದ ಬೇಟೆಗಾರರು ಬಳಸಿರುವುದು ಪೊಲೀಸ್‌ ತನಿಖೆಯಿಂದ ದೃಢಪಟ್ಟಿದೆ.
 
20 ದಿನಗಳ ಅಂತರದಲ್ಲಿ ನಡೆದ 2 ಬೇಟೆ ಪ್ರಕರಣಗಳಲ್ಲಿ ಬೇಟೆಗಾರರ ನಡುವೆ ನಿಕಟ ಸಂಪರ್ಕ ಇರುವುದು ಗೊತ್ತಾಗಿದೆ. ನೆತ್ತಿಚೌಕದಲ್ಲಿ ಜೋಡಿ ಕಡವೆ ಬೇಟೆಯಾಡಿದ ನಂತರ ತಲೆ ಮರೆಸಿಕೊಂಡಿರುವ ಆರೋಪಿ ರಫೀಕ್‌ ಅಹಮದ್‌ ತನ್ನ ಸ್ವಂತ ಬಂದೂಕು ಮತ್ತು ಸಹಚರ ಅಖ್ತರ್‌ ಅಹಮದ್‌ಗೆ ಸೇರಿದ ಬಂದೂಕಿನೊಂದಿಗೆ ಪರಾರಿಯಾಗಿದ್ದ.
 
ಅಖ್ತರ್‌ ಅಹಮದ್‌ ಮಾಲೀಕತ್ವದ ಇಂಗ್ಲೆಂಡ್‌ ನಿರ್ಮಿತ ಬಂದೂಕನ್ನು (ಸ್ಪೋರ್ಟ್ಸ್‌ಮನ್‌ ಫೈವ್‌ .22) ಬಚ್ಚಿಡುವಂತೆ ಬೆಂಗಳೂರಿನ ವಾಸಿ ಮಹಮದ್‌ ಜಬ್ರಾನ್‌ಗೆ ನೀಡಿದ್ದ. ಅದೇ ಬಂದೂಕಿನಿಂದ ಜಬ್ರಾನ್‌ ಕೆಜಿಎಫ್‌ ಸಮೀಪದ ಬಡಮಾಕನಹಳ್ಳಿಯಲ್ಲಿ ಜ.22ರಂದು ಬೆಳಿಗ್ಗೆ 5.30ರ ಸುಮಾರಿಗೆ ಮೀಸಲು ಅರಣ್ಯದಲ್ಲಿ ಸುಮಾರು 4ರಿಂದ 5 ವರ್ಷ ಪ್ರಾಯದ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಕೃಷ್ಣಮೃಗ ಬೇಟೆಯಾಡಿದ್ದ. ಕೊಂದ ಕೃಷ್ಣಮೃಗಗಳನ್ನು ಬೆಂಗಳೂರಿಗೆ ಸಾಗಿಸುವಾಗ ತನ್ನ ಸಹ ಚರರಾದ ಸೆಲ್ವಾ, ಮಂಜುನಾಥ್‌ ಜತೆಗೆ ಬಂದೂಕು ಸಮೇತ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. 
 
ಬಂದೂಕಿನ ಮೂಲ ಪತ್ತೆ ಹಚ್ಚಲು ಶಶಸ್ತ್ರ ಕಾಯ್ದೆಯಡಿ ಹೆಚ್ಚಿನ ವಿಚಾರ ಣೆಗಾಗಿ ಮೂವರು ಆರೋಪಿಗಳನ್ನು ಬೇತಮಂಗಲ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ನೆತ್ತಿ ಚೌಕದಲ್ಲಿ ಜೋಡಿ ಕಡವೆ ಬೇಟೆ ಯಾಡಿದ್ದ ತಂಡದಲ್ಲಿದ್ದ ಪ್ರಮುಖ ಆರೋಪಿ ಸಕಲೇಶಪುರದ ಉದೇವಾರ ಮೂಲದ ಅಖ್ತರ್‌ ಅಹಮದ್‌ಗೆ ಸೇರಿದ ಬಂದೂಕು ಎನ್ನುವ ಸಂಗತಿ ಬಾಯಿ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
 
ಬಂದೂಕಿನೊಂದಿಗೆ ಪರಾರಿ ಯಾಗಿರುವ ಜೋಡಿ ಕಡವೆ ಬೇಟೆ ಪ್ರಕರಣ ಪ್ರಮುಖ ಆರೋಪಿ ರಫೀಕ್‌ ಅಹಮದ್‌ಗೆ ಜಿಲ್ಲಾ ಪೊಲೀಸ್‌ ವಿಶೇಷ ತಂಡ ಮತ್ತು ಅರಣ್ಯಾಧಿಕಾರಿಗಳ ತಂಡ ಜಂಟಿ ಶೋಧ ನಡೆಸುತ್ತಿವೆ.
 
ತರೀಕೆರೆ ಉಪಕಾರಾಗೃಹದಲ್ಲಿರುವ ಆರೋಪಿ ಮಹಮದ್‌ ಅಖ್ತರ್‌ನನ್ನು ಬೇತಮಂಗಲ ಠಾಣೆ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆಯಲಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT