ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರ ಅದಲು, ಬದಲು

ದ್ವಿತೀಯ ಪಿಯುಸಿ: ಮಾರ್ಚ್‌ 9ರಿಂದ 27ರವರೆಗೆ ಪರೀಕ್ಷೆ
Last Updated 8 ಮಾರ್ಚ್ 2017, 10:09 IST
ಅಕ್ಷರ ಗಾತ್ರ

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಕಲು, ಪ್ರಶ್ನೆ ಪತ್ರಿಕೆ ಬಹಿರಂಗದಂಥ ಪ್ರಕರಣಗಳು ನಡೆಯದಂತೆ ತಡೆಯಲು ಹಲವು ಸುಧಾರಣೆಗಳನ್ನು ಜಾರಿಗೆ ತಂದಿರುವ ಇಲಾಖೆ, ಇದೇ ಮೊದಲ ಸಲ ಪರೀಕ್ಷಾ ಕೇಂದ್ರಗಳನ್ನು ಅದಲು ಬದಲು ಮಾಡಿದೆ.

ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರಗಳು ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಬದಲಿಗೆ ಬೇರೆ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗಿದೆ. ಇದರಿಂದ  ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೋಷಕರಲ್ಲಿ ಆತಂಕವೂ ಕಂಡುಬಂದಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ  39 ಪರೀಕ್ಷಾ ಕೇಂದ್ರಗಳಿದ್ದವು. ಆದರೆ ಈ ವರ್ಷ ಈ ಸಂಖ್ಯೆ 34 ಕ್ಕೆ ಇಳಿದಿದೆ. ಒಂದು ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 500 ಹಾಗೂ ಗರಿಷ್ಠ 1200 ವಿದ್ಯಾರ್ಥಿಗಳಿರಬೇಕು ಎಂಬ ನಿಯಮ ಹಾಕಿಕೊಳ್ಳಲಾಗಿದೆ. ಹೀಗಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಹಾಗೂ ಕುಣಿಗಲ್‌ ತಾಲ್ಲೂಕಿನ ಎಡೆಯೂರು ಪರೀಕ್ಷಾ  ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮಾನದಂಡ ಇಲ್ಲದಿದ್ದರೂ ಅಕ್ಕ–ಪಕ್ಕದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ 25 ಕಿ.ಮೀ ದೂರ ಆಗಲಿದೆ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಈ ಪರೀಕ್ಷಾ ಕೇಂದ್ರಗಳನ್ನು ಉಳಿಸಿಕೊಳ್ಳಲಾಗಿದೆ.

ಪ್ರಶ್ನೆ ಪತ್ರಿಕೆಗಳ ರವಾನೆ: ತುಮಕೂರು ಜಿಲ್ಲಾ ಖಜಾನೆಯಿಂದ ತುಮಕೂರು, ಕುಣಿಗಲ್‌, ತುರುವೇಕೆರೆ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುತ್ತದೆ. ಮಧುಗಿರಿ, ಶಿರಾ, ಪಾವಗಡ ಹಾಗೂ ಮಧುಗಿರಿ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಮಧುಗಿರಿ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ರವಾನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರಶ್ನೆ ಪತ್ರಿಕೆಗಳ ಬಹಿರಂಗ ತಡೆಯುವ ಸಲುವಾಗಿ ಇದೇ ಮೊದಲ ಸಲ ಇ– ಪ್ರೊಕ್ಯೂರ್‌ಮೆಂಟ್ ವ್ಯವಸ್ಥೆ ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ತಂಡದ ಸದಸ್ಯರು ಬಯೋ ಮೆಟ್ರಿಕ್‌ ಮೂಲಕ ಸಹಿ ಮಾಡಿ ಖಜಾನೆಗಳಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕಾಗಿದೆ. ಖಜಾನೆ ಸುತ್ತಮುತ್ತ ಹಾಗೂ ಒಳಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಶ್ನೆ ಪತ್ರಿಕೆಗಳ ವಿತರಣೆಗಾಗಿ 12 ತಂಡಗಳು ರಚಿಸಲಾಗಿದೆ. ಈ ತಂಡಗಳಲ್ಲಿ ತಹಶೀಲ್ದಾರ್‌, ಉಪ ಪ್ರಾಂಶುಪಾಲರು ಹಾಗೂ ಬಿಇಒಗಳು ನೇತೃತ್ವ ವಹಿಸಲಿದ್ದಾರೆ.

ಪರೀಕ್ಷಾ ಸಮಯ ಬದಲು:  ಪರೀಕ್ಷಾ ಕೇಂದ್ರಗಳು ದೂರ ಇರುವುದರಿಂದ ಮಕ್ಕಳಿಗೆ ಅನುಕೂಲವಾಗಲೆಂದು ಈ ಸಲ ಪರೀಕ್ಷಾ ಸಮಯದ ಅವಧಿ ಬದಲಾಯಿಸಲಾಗಿದೆ.  ಈವರೆಗೂ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ವರೆಗೆ ಪರೀಕ್ಷೆ ಇರುತ್ತಿತ್ತು. ಈ ವರ್ಷ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಇರಲಿದೆ.

ಜಿಲ್ಲಾ ಖಜಾನೆಗಳಿಂದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಸಮಯ ಬೇಕಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹೆಚ್ಚು ಸಮಯ ಬೇಕಾಗಿದ್ದರಿಂದ  ಪರೀಕ್ಷಾ ಸಮಯವನ್ನೇ ಬದಲಾಯಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳು ದೂರ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಇದು ಪರೀಕ್ಷಾ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂದು ಪೋಷಕರು, ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಕೇಂದ್ರ: ತುಮಕೂರು ನಗರದಲ್ಲಿ 10 ಪರೀಕ್ಷಾ ಕೇಂದ್ರಗಳಿವೆ. ತಿಪಟೂರು, ಶಿರಾ ತಾಲ್ಲೂಕಿನಲ್ಲಿ 4, ಚಿಕ್ಕನಾಯಕಹಳ್ಳಿ, ತುರುವೇಕೆರೆ, ಗುಬ್ಬಿ, ಮಧುಗಿರಿ ಹಾಗೂ ತುಮಕೂರು ಗ್ರಾಮಾಂತರದಲ್ಲಿ ತಲಾ 2 , ಪಾವಗಡ, ಕುಣಿಗಲ್‌ನಲ್ಲಿ ತಲಾ 3, ಕೊರಟಗೆರೆಯಲ್ಲಿ 1 ಪರೀಕ್ಷಾ ಕೇಂದ್ರಗಳಿವೆ.

ತುಮಕೂರು ನಗರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಸಲಿದ್ದು, 9500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ಪರೀಕ್ಷಾರ್ಥಿಗಳಲ್ಲಿ 13702 ಹುಡುಗರು ಹಾಗೂ 15732 ಹುಡುಗಿಯರು ಇದ್ದಾರೆ.

ಬೇರೆ ಜಿಲ್ಲೆಗಳ ಜಾಗೃತ ದಳ
ಇಷ್ಟು ವರ್ಷಗಳ ಕಾಲ ಜಾಗೃತ ದಳಕ್ಕೆ ಇದೇ ಜಿಲ್ಲೆಯ ಉಪನ್ಯಾಸಕರು, ಪ್ರಾಂಶುಪಾಲರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಮಂಡ್ಯ, ಹಾಸನ, ಚಿತ್ರದುರ್ಗ, ರಾಮನಗರ ಜಿಲ್ಲೆಯ ಉಪನ್ಯಾಸಕರನ್ನು ಜಾಗೃತ ದಳಕ್ಕೆ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಸೇರಿ ಪರೀಕ್ಷಾ ಮಾಹಿತಿಗಳನ್ನು ಚರ್ಚಿಸಲಾಗಿದೆ.

6 ಕೇಂದ್ರಗಳಿಗೆ ರಿಯಾಯಿತಿ
ದೂರದ ಕಾರಣದಿಂದ ಜಿಲ್ಲೆಯಲ್ಲಿ ಆರು ಪರೀಕ್ಷಾ ಕೇಂದ್ರಗಳಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ. ಎಡೆಯೂರು, ಗುಬ್ಬಿ, ಪಟ್ಟನಾಯಕನಹಳ್ಳಿ, ಕೊರಟಗೆರೆ, ನಾಗವಲ್ಲಿ, ಬೆಳ್ಳಾವಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಿಂದಿನ ವರ್ಷದಂತೆ  ಆಯಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ಸಹಾಯಕರ ನೇಮಕ
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಸಹಾಯಕರನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ, ಭಯ ಬಿದ್ದರೆ ತಕ್ಷಣವೇ ಆರೋಗ್ಯ ಸಹಾಯಕಿಯರು ಪ್ರಾಥಮಿಕ ಚಿಕಿತ್ಸೆ ನೀಡುವರು.

ಎಲ್ಲ ಕೊಠಡಿಗೆ ಇಲ್ಲ ಕ್ಯಾಮೆರಾ
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಎಲ್ಲ ಕೊಠಡಿಗಳಿಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕೆಂಬ ನಿಯಮದಿಂದ  ರಿಯಾಯಿತಿ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸುವ, ವಿತರಿಸುವ ಹಾಗೂ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ, ವಿತರಿಸುವ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಇರಬೇಕು. ಅಲ್ಲದೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಒಳ ಬರುವ ಮತ್ತು ಹೊರ ಹೋಗುವ ಸ್ಥಳಗಳಲ್ಲಿ ಕಣ್ಗಾವಲು ಟಿವಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿವೆ.

ಪೋಷಕರ ಸಹಕಾರ ಮುಖ್ಯ
‘ಪರೀಕ್ಷಾ ಸುಧಾರಣೆ ಸ್ವಾಗತಾರ್ಹ. ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯಾ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಹೊರಗಿನ ಕೇಂದ್ರಗಳಿಗೆ ಹಾಕಿರುವುದು, ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ಜಿಲ್ಲಾ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.

‘ಈ ಸುಧಾರಣಾ ಕ್ರಮಗಳಿಗೆ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶ್ವಾಸಾರ್ಹತೆ ಹೆಚ್ಚಲಿದೆ. ಪೋಷಕರು ಇದಕ್ಕೆ ಸಹಕಾರ ಕೊಡಬೇಕು. ಮಕ್ಕಳಿಗೆ ಧೈರ್ಯ ತುಂಬಬೇಕು. ಪ್ರಾಮಾಣಿಕ, ಬುದ್ಧಿವಂತ ವಿದ್ಯಾರ್ಥಿಗಳು ಹೆದರಬೇಕಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT