ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಯಾಗುವ ರಸ್ತೆಗಳು, ಸಂಪ್‌ ತುಂಬಾ ಹುಳುಗಳು!

ಸರ್ಕಾರಿ ಕುಂಟೆ ಮುಚ್ಚಿ ಅರಸಹಳ್ಳಿಗೆ ಫಜೀತಿ ತಂದಿಟ್ಟ ಗ್ರಾಮ ಪಂಚಾಯಿತಿ
Last Updated 8 ಮಾರ್ಚ್ 2017, 10:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ‘ಸರ್ಕಾರಿ ಅಧಿಕಾರಿಗಳಿಗೆ ಕಣ್ಣಿಲ್ವಾ ಸೋಮಿ? ಪಂಚಾಯಿತಿಯವರು ಸತ್ತೋದರಾ? ಪಂಚಾಯಿತಿ ಮೆಂಬರಂತೂ ಊರ ಹೊರಗೆ ಹಾಯಾಗಿದ್ದಾನೆ. ನಾವು ಸಾಯೋಕು ಮುಂಚೆ ನೀವಾದ್ರೂ ಹೇಳಿ ಇದನ್ನು ಸರಿ ಮಾಡ್ಸಿ. ನಮಗಂತೂ ಹೇಳಿ ಹೇಳಿ ಸಾಕಾಗೋಯ್ತು’

ಸೋಮವಾರ ರಾತ್ರಿ ಸುರಿದ ಮಳೆಗೆ ಅಕ್ಷರಶಃ ಚರಂಡಿಯಾಗಿ ಮಾರ್ಪಟ್ಟಿದ್ದ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸನಹಳ್ಳಿ ಗ್ರಾಮದ ಮಹೇಶ್ವರಮ್ಮ ದೇವಸ್ಥಾನದ ರಸ್ತೆಯಲ್ಲಿ ನಿಂತು ಅಳಲು ತೋಡಿಕೊಂಡರು ವಯೋವೃದ್ಧೆ ಸಾವಿತ್ರಮ್ಮ.

‘ಸೋಮಿ, ದಿನಾಮ್ಲು ವಸ್ತಾರೂ ಫೊಟೊ ತಿಸ್ಕೋನೆ ಪೊತ್ತಾರು ಐತ ಇತಾವಾ ಎಮೀ ಐಯೆಲೆ’ (ದಿನಾಲೂ ಬಂದು ಫೋಟೊ ತೆಗೆದುಕೊಂಡು ಹೋಗ್ತಾರೆ. ಇಲ್ಲಿ ಮಾತ್ರ ಏನೂ ಆಗಿಲ್ಲ) ಎಂದು ನಿರಾಶೆಯ ಧ್ವನಿಯಲ್ಲಿ ಹೇಳುತ್ತಲೇ ಸಮೀಪಕ್ಕೆ ಬಂದ ಚಿಕ್ಕವೆಂಕಟಮ್ಮ, ‘ಮೊನ್ನೆ ಡೇರಿಗೆ ಹಾಲು ಹಾಕಲು ಹೋಗುತ್ತಿದ್ದೆ. ಚರಂಡಿ ನೀರು ರಸ್ತೆಯಲ್ಲಿ ನಿಂತು ಗಲೀಜಾಗಿತ್ತು. ಅದರಲ್ಲಿ ಕಾಲು ಜಾರಿ ಬೀಳುತ್ತಿದ್ದವಳು ಸ್ವಲ್ಪದರಲ್ಲಿಯೇ ಬಚಾವಾದೆ.

ವೋಟ್‌ ಹಾಕಿಸಿಕೊಂಡು ಹೋದವರು ಮತ್ತೆ ಎಲೆಕ್ಷನ್‌ಗೆ ಊರಿಗೆ ಬರ್ತಾರೆ. ಈ ಸಮಸ್ಯೆ ಯಾರು ನೋಡಬೇಕು ನೀವೇ ಹೇಳಿ’ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಹಿರಿಯರಿಬ್ಬರ ಮಾತನ್ನು ದೂರದಿಂದಲೇ ನಿಂತು ಆಲಿಸುತ್ತಿದ್ದ ಗೃಹಿಣಿ ಸುಧಾರಾಣಿ ಕೂಡ ಮುಂದೆ ಬಂದವರೆ, ‘ಮೂರು ದಿನಗಳ ಹಿಂದೆ ಕೊಟ್ಟಿಗೆಯಲ್ಲಿ ಹಸುವಿಗೆ ನೀರು ಇಡುತ್ತಿದ್ದೆ. ಅದೇ ಸಮಯಕ್ಕೆ ಮನೆ ಬಾಗಿಲಲ್ಲಿ ನಿಂತಿದ್ದ ನನ್ನ ಚಿಕ್ಕ ಮಗಳು ಕೊಚ್ಚೆ ತುಂಬಿದ ಚರಂಡಿಯಲ್ಲಿ ಬಿದ್ದು ಹೋದಳು.

ಯಾರೋ ಓಡಿ ಬಂದು ಮಗುವನ್ನು ಮೇಲೆತ್ತಿದರು. ಆ ನೋವನ್ನು ನಾವು ಒಂದು ವಾರ ಅನುಭವಿಸಿದೆವು. ಈ ಊರಿಗೆ ಬಂದ ಗತಿ ಯಾವ ಹಳ್ಳಿಗೂ ಬರಬಾರದು’ ಎಂದು ಮನದಾಳದಲ್ಲಿ ಹುದುಗಿದ್ದ ದುಃಖ ತೋಡಿಕೊಂಡರು.

ಏನಾಗಿದೆ ಇಲ್ಲಿ?: ಅರಸನಹಳ್ಳಿಯ ಚರಂಡಿ ನೀರು ಹರಿದು ಊರಾಚೆ ಹೋಗುವ ಸ್ಥಳದಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಏರ್ಪಟ್ಟ ವ್ಯಾಜ್ಯ, ಕಳೆದ 6 ತಿಂಗಳು ಹಿಂದಿನಿಂದಲೂ ಇಡೀ ಊರಿನ ಚರಂಡಿಯ ತ್ಯಾಜ್ಯ ನೀರು ಊರಾಚೆ ಹೋಗದಂತೆ ತಡೆದು ನಿಲ್ಲಿಸಿದೆ.

ಊರ ಹೊರಗಿದ್ದ ಸರ್ಕಾರಿ ಕುಂಟೆಯನ್ನು ಗ್ರಾಮ ಪಂಚಾಯಿತಿಯವರು ಮುಚ್ಚಿ ಹಾಕಿದ್ದು ಮತ್ತು ಸ್ಥಳೀಯ ರಾಜಕೀಯ ಗುದ್ದಾಟದಿಂದ ಇಷ್ಟೆಲ್ಲ ರಾದ್ಧಾಂತವಾಗಿ, ನಾವೆಲ್ಲ ದುರ್ನಾತದಲ್ಲಿ ಕಾಲ ಕಳೆಯುವ ಸ್ಥಿತಿ ಬಂದಿದೆ ಎನ್ನುವುದು ಗ್ರಾಮಸ್ಥರ ಆರೋಪ.

ಕುಂಟೆ ಮುಚ್ಚಿ ಸಮತಟ್ಟು ಮಾಡಿದ ಜಾಗದಲ್ಲಿ ಒಂದು ಬದಿ ಹಾಲಿನ ಡೇರಿ ಕಟ್ಟಡ ನಿರ್ಮಿಸಲಾಗಿದೆ. ಇನ್ನೊಂದು ಬದಿಯಲ್ಲಿ ಊರಿನಲ್ಲಿ ಸಮುದಾಯ ಭವನಕ್ಕೆ ಜಾಗ ನೀಡಿದ್ದ ಎ.ನಂಜಪ್ಪ ಎಂಬುವರಿಗೆ ಹೌಸ್‌ಲಿಸ್ಟ್‌ ನಂಬರ್ 97ರಲ್ಲಿ ನಿವೇಶನ ನೀಡಲಾಗಿದೆ. ಅದರಲ್ಲಿ ಅವರು ಮನೆ ಕಟ್ಟಿಸಿಕೊಂಡಿದ್ದಾರೆ.

ಆ ಮನೆಯನ್ನು ಬಳಸಿಕೊಂಡೇ ಊರಿನ ನೀರೆಲ್ಲಾ ಸರ್ಕಾರಿ ಕುಂಟೆ ಜಾಗಕ್ಕೆ ಹೊಂದಿಕೊಂಡಂತಿರುವ ವೆಂಕಟರಾಮ್ ಎಂಬುವರಿಗೆ ಸೇರಿದ ಸರ್ವೆ ನಂಬರ್ 71/4ರ ಮೂಲಕ ಊರಾಚೆ ಹರಿಯುತ್ತಿತ್ತು. ಅವರು ಇದೀಗ ತಮ್ಮ ಜಾಗದಲ್ಲಿ ನೀರು ಹರಿಯದಂತೆ ತಡೆದಿದ್ದಾರೆ ಎನ್ನುವುದು ಮತ್ತೊಂದು ಆರೋಪ.

ಸಮಸ್ಯೆಯ ಮೂಲವೇನು? : ‘ಹೌಸ್‌ಲಿಸ್ಟ್‌ ನಂಬರ್ 97ರಲ್ಲಿ ಎ.ನಂಜಪ್ಪ ಅವರಿಗೆ ಪಂಚಾಯಿತಿ ವತಿಯಿಂದ 30*35 ಅಳತೆಯ ನಿವೇಶನ ನೀಡಲಾಗಿತ್ತು. ಆದರೆ ಅವರು 40*50 ಚದರಡಿಯಷ್ಟು ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಆ ಪೈಕಿ ನಮ್ಮ ಸರ್ವೆ ನಂಬರ್ 71/4ಕ್ಕೆ ಸೇರಿದ ಜಾಗ ಕೂಡ ಒತ್ತುವರಿಯಾಗಿದೆ. ಅದನ್ನು ಬಿಡಿಸಿಕೊಳ್ಳಲು ಐದಾರು ವರ್ಷಗಳಿಂದ ಕಾನೂನು ಹೋರಾಟ ನಡೆಸಿರುವೆ’ ಎನ್ನುತ್ತಾರೆ ವೆಂಕಟರಾಮ್.

‘ಪ್ರಕರಣ ನ್ಯಾಯಾಲಯದಲ್ಲಿದೆ. ಈವರೆಗೆ ನಂಜಪ್ಪ ನಮ್ಮ ಜಾಗ ಬಿಡುತ್ತಿಲ್ಲ. ಪಂಚಾಯಿತಿಯವರು ಅವರು ನೀಡಿದ ಜಾಗವನ್ನು ಅಳೆದು ಹದ್ದುಬಸ್ತು ಮಾಡಿ, ನಮ್ಮ ಜಮೀನಿನ ಒತ್ತುವರಿ ತೆರವುಗೊಳಿಸಲಿ. ಆಗ ನಾನೇ ನಮ್ಮ ಜಮೀನಿನಲ್ಲಿ ಚರಂಡಿ ನೀರು ಹರಿಯಲು 300 ಅಡಿಯಷ್ಟು ಜಾಗ ಬಿಟ್ಟು ಕೊಡುತ್ತೇನೆ’ ಎಂದು ತಿಳಿಸಿದರು. 

ನಂಜಪ್ಪ ಹೇಳುವುದೇನು?
‘ಪಂಚಾಯಿತಿಯವರು ನನಗೆ 50*40 ಅಳತೆ ನಿವೇಶನ ನೀಡಿದ್ದಾರೆ. ನಾನು ವೆಂಕಟರಾಮ್ ಅವರ ಜಮೀನು ಒತ್ತುವರಿ ಮಾಡಿಕೊಂಡಿಲ್ಲ. ಒಂದೊಮ್ಮೆ ಒತ್ತುವರಿ ಮಾಡಿಕೊಂಡಿದ್ದರೆ ಸರ್ವೇ ಮಾಡಿಸಲಿ’ ಎನ್ನುತ್ತಾರೆ ಅತಿಕ್ರಮಣದ ಆರೋಪ ಎದುರಿಸುತ್ತಿರುವ ಎ.ನಂಜಪ್ಪ.

‘ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸರಿಯಿಲ್ಲ. ಅವರು ಊರಿನಿಂದಾಚೆ ಮನೆ ಕಟ್ಟಿಕೊಂಡು ಆರಾಮಾಗಿದ್ದಾರೆ. ಊರಿನಲ್ಲಿ ಇದ್ದಿದ್ದರೆ ಅವರಿಗೆ ಜನರು ಎಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ತಿಳಿಯುತ್ತಿತ್ತು. ಊರಾಚೆ ಕುಳಿತು ರಾಜಕೀಯ ಮಾಡುತ್ತಿರುವವರು ಈ ಸಮಸ್ಯೆ ಬಗೆಹರಿಸಲು ಬರುವ ಅಧಿಕಾರಿಗಳಿಗೆ ಅಡ್ಡಿಪಡಿಸುತ್ತಾರೆ’ ಎಂದು ಅರಸನಹಳ್ಳಿ ನಿವಾಸಿ ಲೋಕೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸದಸ್ಯನಿಗೆ ಮಣಿದ ಅಧಿಕಾರಿಗಳು!
ವೆಂಕಟರಾಮ್ ಅವರ ಜಮೀನು ಅತಿಕ್ರಮಣ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ), ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇಒ) ಅವರು ಕುಪ್ಪಹಳ್ಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹೌಸ್‌ಲಿಸ್ಟ್‌ ನಂಬರ್ 97ರ ಅಳತೆ ಮಾಡಿ, ಅತಿಕ್ರಮಣಕ್ಕೆ ಒಳಗಾಗಿರುವ ಜಾಗ ಬಿಡಿಸಿಕೊಡಿ ಎಂದು ಅನೇಕ ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ವಿವಾದಿತ ಜಾಗದ ಅಳತೆ ಕಾರ್ಯಕ್ಕೆ ತಡೆ ಒಡ್ಡುತ್ತಿದ್ದಾನೆ ಎಂದು ಆರೋಪಗಳು ಕೇಳಿಬರುತ್ತಿವೆ.

‘ನಮ್ಮ ಪಿಡಿಒ ಅರಸನಹಳ್ಳಿ ವಿವಾದಿತ ಜಾಗ ಅಳತೆ ಮಾಡಲು ಸಿದ್ಧವಾಗಿದ್ದರು. ಆದರೆ ಆ ಊರಿನ ಸದಸ್ಯ ಚನ್ನಕೇಶವಗೌಡ ನಮ್ಮ ಊರಿನಲ್ಲಿ ಏನೇ ಮಾಡಬೇಕಾದರೆ ನನ್ನನ್ನು ಕೇಳದೆ ಮಾಡುವಂತಿಲ್ಲ, ನನ್ನ ಮಾತು ಮೀರಿ ನೀವು ಜಾಗ ಅಳತೆ ಮಾಡಲು ಬರಬೇಡಿ ಎಂದರು. ಅವರಿಂದಾಗಿಯೇ ಸಮಸ್ಯೆ ಕಗ್ಗಂಟಾಗಿದೆ’ ಎಂದು ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಹೇಳಿದರು. ಈ ಆರೋಪವನ್ನು ಚನ್ನಕೇಶವಗೌಡ ಅಲ್ಲಗಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT