ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಅನುದಾನ ತಂದಿದ್ದರೂ ಸಗಣಿ ಬಾಚುತ್ತೇನೆ

ಶಾಸಕ ವರ್ತೂರು ಪ್ರಕಾಶ್‌ಗೆ ನಗರಸಭೆ ಸದಸ್ಯ ಮುಬಾರಕ್‌ ಸವಾಲು
Last Updated 8 ಮಾರ್ಚ್ 2017, 10:15 IST
ಅಕ್ಷರ ಗಾತ್ರ

ಕೋಲಾರ: ‘ವರ್ತೂರು ಪ್ರಕಾಶ್‌ ಕಳೆದ 9 ವರ್ಷಗಳಿಂದ ಕ್ಷೇತ್ರದ ಶಾಸಕರಾಗಿದ್ದು, ಈ ಅವಧಿಯಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಕೇವಲ ಒಂದೇ ಒಂದು ರೂಪಾಯಿ ವಿಶೇಷ ಅನುದಾನ ತಂದಿ ದ್ದರೆ ಅವರ ಡೇರಿಯಲ್ಲಿ ಜೀವನ ಪರ್ಯಂತ ಹಸುಗಳ ಸಗಣಿ ಬಾಚುತ್ತೇನೆ’ ಎಂದು ನಗರಸಭೆ ಸದಸ್ಯ ಬಿ.ಎಂ. ಮುಬಾರಕ್‌ ಸವಾಲು ಹಾಕಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ಯಾಂಕರ್‌ ನೀರು ಪೂರೈಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅಕ್ರಮದ ಆರೋಪ ಮಾಡಿರುವ ವರ್ತೂರು ಪ್ರಕಾಶ್‌ ಆರೋಪಕ್ಕೆ ಸಂಬಂಧಪಟ್ಟಂತೆ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ಟ್ಯಾಂಕರ್‌ ನೀರು ಪೂರೈಕೆಗೆ ಹಣ ಬಿಡುಗಡೆ ಮಾಡುವ ಬರ ಪರಿಹಾರ ನಿಧಿ ಕಾರ್ಯಪಡೆಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಈ ಕಾರ್ಯಪಡೆಯಲ್ಲಿ ನಗರಸಭೆ ಅಧ್ಯಕ್ಷರ ಪಾತ್ರವೇನು ಇಲ್ಲ. ಹೀಗಾಗಿ ಅವರೇ ಆರೋಪಿಸಿರುವಂತೆ ಟ್ಯಾಂಕರ್‌ ನೀರು ಪೂರೈಕೆಯಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಅದಕ್ಕೆ ಶಾಸಕರೇ ನೇರ ಹೊಣೆ.

ಶಾಸಕರೇ ನೀರಿನ ಬಿಲ್‌ಗಳ ಕಡತಕ್ಕೆ ಸಹಿ ಹಾಕಿ ಹಣ ಬಿಡುಗಡೆ ಮಾಡಿರುವುದರಿಂದ ಅಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕು ಎಂದು ವಾಗ್ದಾಳಿ ನಡೆಸಿದರು.

ವರ್ತೂರು ಪ್ರಕಾಶ್‌ ಬಲಗೈ ಬಂಟ ನಗರಸಭಾ ಸದಸ್ಯ ಸೋಮಶೇಖರ್‌, ನಿಯಮಬಾಹಿರವಾಗಿ ನಗರಸಭೆಯಲ್ಲಿ ಟ್ಯಾಂಕರ್‌ ನೀರು ಪೂರೈಕೆಯ ಟೆಂಡರ್‌ ಪಡೆದಿದ್ದಾರೆ. ಅವರು ಈಗಲೂ ಕುರುಬರಪೇಟೆಯಲ್ಲಿ ಕೊಳವೆಬಾವಿ ಯನ್ನು ಬಾಡಿಗೆಗೆ ಪಡೆದು ಬೇನಾಮಿ ಹೆಸರಿನಲ್ಲಿ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದಾರೆ. ಶಾಸಕರ ಕೆಲ ಬೆಂಬಲಿಗರು ಸಹ ಈ ದಂಧೆ ನಡೆಸುತ್ತಿದ್ದಾರೆ. ಈ ಅಕ್ರಮದಿಂದ ವರ್ತೂರು ಪ್ರಕಾಶ್‌ಗೆ ಪ್ರತಿ ತಿಂಗಳು ಕಪ್ಪ ಹೋಗುತ್ತಿದೆ ಎಂದು ಆರೋಪಿಸಿದರು.

ವರ್ತೂರು ಪ್ರಕಾಶ್‌ ತನ್ನ ವಿರುದ್ಧ ಮಾಡಿರುವ ಅವ್ಯವಹಾರ ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಶಾಸಕರೇ ಸ್ಥಳ ಮತ್ತು ಸಮಯ ನಿಗದಿಪ ಡಿಸಲಿ. ಅವರ ಡೇರಿಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಚರ್ಚೆಗೆ ಕರೆ ದ ರೂ ಹೋಗುತ್ತೇನೆ. ಈ ಸವಾಲು ಸ್ವೀಕ ರಿಸುವ ಧೈರ್ಯ ಅವರಿಗೆ ಇದೆಯಾ ಎಂದು ಪ್ರಶ್ನಿಸಿದರು.

ಹೆಗ್ಗಣ ಸತ್ತಿದೆ: ಶಾಸಕರ ತಟ್ಟೆಯಲ್ಲೇ ದೊಡ್ಡ ಹೆಗ್ಗಣ ಸತ್ತಿದೆ. ಆದರೆ, ಅವರು ಬೇರೆಯವರ ತಟ್ಟೆಯಲ್ಲಿ ಜಿರಲೆ ಹುಡುಕುತ್ತಿದ್ದಾರೆ. ಅವರು ತನ್ನ ವಿರುದ್ಧ ತೆವಲಿಗಾಗಿ ಅಥವಾ ಗಂಭೀರವಾಗಿ ಆರೋಪ ಮಾಡಿದ್ದಾರೊ ಗೊತ್ತಿಲ್ಲ. ಆದರೆ, ಅವರ ಆರೋಪವನ್ನು ಗಂಭೀರ ವಾಗಿ ಪರಿಗಣಿಸಿದ್ದೇನೆ. ತನಗಿಂತ ವಯಸ್ಸಿನಲ್ಲಿ ಹಿರಿಯರಾದ ಮತ್ತು ರಾಜಕೀಯವಾಗಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿರುವವ ವರ್ತೂರು ಪ್ರಕಾಶ್‌ ಪೂರ್ವಾಪರ ಆಲೋಚಿಸಿ ಮಾತನಾಡ ಬೇಕು ಎಂದು ಕಿಡಿಕಾರಿದರು.

ಮನಬಂದಂತೆ ಮಾತನಾಡಿರುವ ವರ್ತೂರು ಪ್ರಕಾಶ್‌ ಅವರಿಗೆ ಮಾನ ಮರ್ಯಾದೆ ಇದೆಯಾ. ತಾನು ಅಧ್ಯಕ್ಷ ನಾಗಿದ್ದ ಅವಧಿಯಲ್ಲಿ ಒಂದು ಬಾರಿಯೂ ಬರ ಪರಿಹಾರ ನಿಧಿ ಕಾರ್ಯಪಡೆಯ ಸಭೆ ನಡೆಸದ ಅವರಿಗೆ ಈಗ ಚುನಾವಣೆ ಸಂದರ್ಭದಲ್ಲಿ ಜನ ನೆನಪಿಗೆ ಬಂದಿದ್ದಾರೆ.

ಅಧಿಕಾರಿಗಳನ್ನು ತೋಟದ ಮನೆ, ರೆಸಾರ್ಟ್‌ಗೆ ಕರೆಸಿ ಕೊಂಡು ವ್ಯವ ಹಾರ ಕುದುರಿಸಿ ಕಡತ ಗಳಿಗೆ ಸಹಿ ಹಾಕುವ ವರ್ತೂರು ಪ್ರಕಾಶ್‌ ಸಂಸ್ಕೃತಿ ಏನೆಂದು ಜನರಿಗೆ ಗೊತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಕೃತಕ ಅಭಾವ: ಶಾಸಕರು ಪೊಲೀಸರು, ಆರ್‌ಟಿಒ ಹಾಗೂ ಬೆಸ್ಕಾಂ ಅಧಿಕಾರಿ ಗಳನ್ನು ದುರ್ಬಳಕೆ ಮಾಡಿಕೊಂಡು ಕ್ಷೇತ್ರದಲ್ಲಿ ಕಳೆದೊಂದು ತಿಂಗಳಿಂದ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಟ್ಟಿ ಪ್ರಚಾರ ಕ್ಕಾಗಿ ಚಡ್ಡಿ ಹಾಕಿಕೊಂಡು ಕೆರೆಗಿಳಿದು ಹೊಸ ಕೊಳವೆ ಬಾವಿಗಳಿಗೆ ಪೂಜೆ ಮಾಡುವ ವರ್ತೂರು ಪ್ರಕಾಶ್‌ಗೆ ಜೆಡಿ ಎಸ್‌ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಕುಟುಕಿದರು.

ತಾನು ಅಧ್ಯಕ್ಷನಾಗಿದ್ದಾಗ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಮನೆ ಬಾಗಿಲಿಗೆ ಅಲೆದು ಅಮೃತ್‌ ಸಿಟಿ ಯೋಜ ನೆಯಲ್ಲಿ ನಗರವನ್ನು ಸೇರ್ಪಡೆ ಯಾಗು ವಂತೆ ಮಾಡಿದೆ. ಆ ಯೋಜ ನೆಯ ಗಂಧ ಗಾಳಿಯೂ ಗೊತ್ತಿಲ್ಲದ ಶಾಸಕರು ಈಗ ಅಮೃತ್‌ ಸಿಟಿ ಯೋಜನೆ ಅನುಷ್ಠಾನದ ಶ್ರೇಯ ಪಡೆಯಲು ಹೊರಟಿದ್ದಾರೆ. ಅವರಿಗೆ ಅಮೃತ್‌ ಪದದ ವಿವರಣೆ ಸಹ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನೀರಿನ ಸೌಕರ್ಯಕ್ಕಾಗಿ ನಗರೋ ತ್ಥಾನ ಯೋಜನೆಯಲ್ಲಿ ಬಂದಿರುವ ₹ 35 ಕೋಟಿ ಮತ್ತು ಅಮೃತ್‌ ಸಿಟಿ ಯೋಜನೆಯಲ್ಲಿ ಬಿಡುಗಡೆಯಾಗಿರುವ ₹ 14.89 ಕೋಟಿ ಅನುದಾನವನ್ನು ತಾನೇ ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ಬಡಾಯಿ ಕೊಚ್ಚಿಕೊಂಡು ನಗರದ ಜನರಿಗೆ ನೀರು ಕೊಟ್ಟು ವಿಶ್ವಾಸ ಗಳಿಸುವ ತಂತ್ರ ಅನುಸರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಈ ಗಿಮಿಕ್‌ ರಾಜಕೀಯ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಟ್ಯಾಂಕರ್‌ ಮಾಲೀಕರು ಭಯಪಡುವಂತಹ ವಾತಾವರಣ ಸೃಷ್ಟಿಸಿ ದ್ದಾರೆ. ಕಳೆದ 9 ವರ್ಷಗಳಲ್ಲಿ ಶಾಸಕರಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂಬು ದನ್ನು ಬಹಿರಂಗಪಡಿಸಲಿ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾ ಧ್ಯಕ್ಷ ನಟರಾಜ್‌, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್‌, ನಗರಸಭಾ ಸದಸ್ಯ ರಾದ ನದೀಂ, ನವಾಜ್‌  ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

*
ನಯಾಪೈಸೆ ತಂದಿಲ್ಲ
ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್ 2015–16ನೇ ಹಣಕಾಸು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ₹ 15.50 ಕೋಟಿ ವಿಶೇಷ ಅನುದಾನ ತಂದಿದ್ದಾರೆ. ಅದೇ ರೀತಿ ಮುಳಬಾಗಿಲು ಶಾಸಕ ಮಂಜುನಾಥ್ ₹ 28 ಕೋಟಿ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ₹ 28 ಕೋಟಿ ಅನುದಾನ ತಂದಿದ್ದಾರೆ. ಆದರೆ, ಶಾಸಕ ವರ್ತೂರು ಪ್ರಕಾಶ್‌ ಕಳೆದ 9 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಯಾ ಪೈಸೆ ವಿಶೇಷ ಅನುದಾನ ತಂದಿಲ್ಲ.
–ಬಿ.ಎಂ.ಮುಬಾರಕ್‌, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT