ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಸ್‌ ಗುಂಡಿಗೆ ಶಂಕಿತ ಐಎಸ್ ಉಗ್ರ ಬಲಿ

ಸಹಚರರು ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿ
Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲಖನೌ: ನಗರದ ಹೊರವಲಯದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಐಎಸ್‌ ಪ್ರಭಾವಿತ ಶಂಕಿತ ಉಗ್ರನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರ ಪಡೆ (ಎಟಿಎಸ್‌) ಬುಧವಾರ ಮುಂಜಾನೆ ಗುಂಡಿಕ್ಕಿ ಕೊಂದಿದೆ.

ಮೃತಪಟ್ಟ ಶಂಕಿತನನ್ನು ಕಾನ್ಪುರ ನಿವಾಸಿ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಈತನೊಂದಿಗೆ ಮನೆಯಲ್ಲಿ ನೆಲೆಸಿದ್ದ ಮೂವರು ಸಹಚರರು ಭೋಪಾಲ್‌–ಉಜ್ಜಯಿನಿ ಪ್ರಯಾಣಿಕ ರೈಲಿನ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸೈಫುಲ್ಲಾ,  ಐಎಸ್‌ ಬೆಂಬಲಿಗ ಎಂದು ಸ್ವತಃ ಘೋಷಿಸಿಕೊಂಡಿದ್ದ. ಆತನಿಗೆ ಐಎಸ್‌ ಜೊತೆ ಸಂಪರ್ಕವಿರುವ ಬಗ್ಗೆ ಇದುವರೆಗೆ ಸಾಕ್ಷ್ಯ ಲಭ್ಯವಾಗಿಲ್ಲ’ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ದಲ್ಜೀತ್‌ ಚೌಧರಿ ಹೇಳಿದ್ದಾರೆ.

ಯತ್ನ ವಿಫಲ: ಮನೆಯಲ್ಲಿ ಸೇರಿಕೊಂಡಿದ್ದ ಶಂಕಿತನ ವಿರುದ್ಧ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಎಟಿಎಸ್‌ ಕಮಾಂಡೊಗಳು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಶಂಕಿತನನ್ನು ಜೀವಂತ ಸೆರೆ ಹಿಡಿಯುವ ಎಟಿಎಸ್‌ನ ಯತ್ನಕ್ಕೆ ಯಶಸ್ಸು ಸಿಗಲಿಲ್ಲ. 

ಸೈಫುಲ್ಲಾನನ್ನು ಮನೆಯಿಂದ ಹೊರಬರುವಂತೆ ಮಾಡಲು ಎಟಿಎಸ್‌ ಕಮಾಂಡೊಗಳು ಕಾರ್ಯಾಚರಣೆ ಸಂದರ್ಭದಲ್ಲಿ ಅಶ್ರುವಾಯು ಶೆಲ್‌ ಮತ್ತು ಮೆಣಸಿನ ಬಾಂಬ್‌ಗಳನ್ನು ಬಳಸಿದ್ದರು. ಆದರೆ, ಅವರ ಯತ್ನಗಳು ವಿಫಲವಾದವು.

ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಳ್ಳುವುದಕ್ಕೂ ಮುನ್ನ ಕಮಾಂಡೊಗಳತ್ತ ಆತ 50ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದ.

‘ಠಾಕೂರ್‌ಗಂಜ್‌ ಪ್ರದೇಶದಲ್ಲಿರುವ ಮನೆಯ ಬಾಗಿಲು ಮುರಿದು ಎಟಿಎಸ್‌ ಕಮಾಂಡೊಗಳು ಒಳ ಪ್ರವೇಶಿಸಿದಾಗ ಸೈಫುಲ್ಲಾನ ಶವ ಕಂಡು ಬಂತು’ ಎಂದು    ದಲ್ಜೀತ್‌ ಚೌಧರಿ ಹೇಳಿದ್ದಾರೆ.

‘ಶಸ್ತ್ರ ಸಜ್ಜಿತ ಶಂಕಿತ ಉಗ್ರನೊಬ್ಬ ಮನೆಯಲ್ಲಿರುವ ಮಾಹಿತಿ ಮಂಗಳವಾರ ಸಂಜೆ ಸಿಕ್ಕ ತಕ್ಷಣ ಎಟಿಎಸ್‌ ಕಮಾಂಡೊಗಳು ಮನೆಯನ್ನು ಸುತ್ತುವರಿದಿದ್ದರು. ಶರಣಾಗುವಂತೆ ಆತನಿಗೆ ಸೂಚಿಸಲಾಯಿತು. ಆದರೆ, ಆತ ನಿರಾಕರಿಸಿದ. ಶರಣಾಗುವ ಬದಲು ‘ಹುತಾತ್ಮ’ನಾಗಲು ಬಯಸುವುದಾಗಿ ಕೂಗಿದ’ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಟಿಎಸ್‌ ಐಜಿ ಅಸೀಮ್‌ ಅರುಣ್‌ ತಿಳಿಸಿದ್ದಾರೆ.

ಮನೆಯಲ್ಲಿ ಇಬ್ಬರು ಶಂಕಿತ ಉಗ್ರರಿದ್ದಾರೆ ಎಂದು ಇದಕ್ಕೂ ಮೊದಲು ವರದಿಯಾಗಿತ್ತು. ಆದರೆ, ಕಾರ್ಯಾಚರಣೆ ಪೂರ್ಣಗೊಂಡ ನಂತರ ಮನೆಯೊಳಗೆ ಒಬನೇ ಇದ್ದ ಎಂಬುದು ದೃಢಪಟ್ಟಿತು.

ಸೊಂಟದಲ್ಲಿ ತಂತಿ: ಫೈಫುಲ್ಲಾ ತನ್ನ ಸೊಂಟದಲ್ಲಿ ತಂತಿಯನ್ನು ಸುತ್ತಿಕೊಂಡಿದ್ದ. ಅದನ್ನು ಪರಿಶೀಲಿಸುವುದಕ್ಕಾಗಿ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಬೇಕಾಯಿತು ಎಂದು ಅರುಣ್‌  ವಿವರಿಸಿದ್ದಾರೆ.

ಸೈಫುಲ್ಲಾ ಹಾಗೂ ಇತರ ಮೂವರು ಕೆಲವು ತಿಂಗಳ ಹಿಂದೆ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು.

ಹೊರಗಿನಿಂದ ನೆರವು ಇಲ್ಲ: ‘ಐಎಸ್‌ ಬೆಂಬಲಿಗರು ಎಂದು ಇವರು ತಮ್ಮನ್ನು ಕರೆದುಕೊಂಡಿದ್ದರು. ಹೊರಗಿನಿಂದ ಅವರಿಗೆ ಯಾವುದೇ ಹಣಕಾಸು ನೆರವು ಸಿಗುತ್ತಿರಲಿಲ್ಲ. ತಮ್ಮ ಚಟುವಟಿಕೆಗಳ ವೆಚ್ಚಕ್ಕಾಗಿ ತಮ್ಮದೇ ಹಣ ಬಳಸುತ್ತಿದ್ದರು’ ಎಂದು ಚೌಧರಿ ಹೇಳಿದ್ದಾರೆ.

‘ಶಂಕಿತರು ಸಣ್ಣ ಪುಟ್ಟ ದಾಳಿ ನಡೆಸಲು ಹಲವು ಬಾರಿ ಯತ್ನಿಸಿದ್ದರು. ಆದರೆ, ಅವು ವಿಫಲವಾಗಿದ್ದವು’ ಎಂದು ಅವರು ತಿಳಿಸಿದ್ದಾರೆ.

‘ಐಎಸ್‌ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂಬುದು ಅದರಿಂದ ತಿಳಿದು ಬಂದಿದೆ’ ಎಂದು ಅವರು ವಿವರಿಸಿದ್ದಾರೆ.

ಮಾಹಿತಿ ಹಂಚಿಕೆ: ಐಎಸ್‌ ಸೇರುವುದಕ್ಕಾಗಿ ತಮ್ಮ ರಾಜ್ಯ ತೊರೆದಿರುವ ಯುವಕ/ಯುವತಿಯರ ಬಗೆಗಿನ ಮಾಹಿತಿಗಳನ್ನು ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಪೊಲೀಸ್‌ ಪಡೆಗಳು ನಿರಂತರವಾಗಿ ಹಂಚಿಕೊಂಡು ಪರಸ್ಪರ ಸಹಕರಿಸುತ್ತಿರುವ  ಸಂದರ್ಭದಲ್ಲೇ ಶಂಕಿತ ಉಗ್ರರ ಬಂಧನವಾಗಿದೆ.

ಸೈಫುಲ್ಲಾ ಮನೆಯಲ್ಲಿ ಸಿಕ್ಕಿದ್ದೇನು
ಎಂಟು ರಿವಾಲ್ವರ್‌, 600 ಸಜೀವ ಮದ್ದುಗುಂಡುಗಳು, ಐಎಸ್‌ ಧ್ವಜಗಳು, ಭಾರಿ ಪ್ರಮಾಣದ ಸ್ಫೋಟಕಗಳು,  ಬಾಂಬ್‌ಗಳು, ಬಾಂಬ್‌ ತಯಾರಿಕಾ ಸಾಧನ, ಟೈಮರ್‌ಗಳು, ರೈಲ್ವೆ ವೇಳಾಪಟ್ಟಿ, ಮೂರು ಪಾಸ್‌ಪೋರ್ಟ್‌ಗಳು ಮತ್ತು ಸಿಮ್‌ ಕಾರ್ಡ್‌ಗಳು, ಬ್ಯಾಟರಿಗಳು, 6 ಮೊಬೈಲ್‌ ಫೋನ್‌ಗಳು, 45 ಗ್ರಾಂ ಚಿನ್ನ, ವಿದೇಶಿ ಕರೆನ್ಸಿ, ಹಿಂದಿ ಮತ್ತು ಉರ್ದು ಪುಸ್ತಕಗಳು.

ಶವ ಪಡೆಯಲು ಕುಟುಂಬದ ನಿರಾಕರಣೆ
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಶಂಕಿತ ಭಯೋತ್ಪಾದಕ ಸೈಫುಲ್ಲಾನ ಶವ ಪಡೆಯಲು ಆತನ ಕುಟುಂಬ ನಿರಾಕರಿಸಿದೆ.
‘ಅವನೊಬ್ಬ ದೇಶದ್ರೋಹಿ... ಆತನ ಮೃತದೇಹವನ್ನು ನಾವು ಸ್ವೀಕರಿಸುವುದಿಲ್ಲ. ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಸೈಫುಲ್ಲಾ ತಂದೆ ಸರ್ತಾಜ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೈಫುಲ್ಲಾ, ಕುಟುಂಬಕ್ಕೆ ಕೆಟ್ಟ ಹೆಸರು ತಂದಿದ್ದಾನೆ. ಅವನು ಮಾಡಿರುವ ಕೆಲಸವನ್ನು ದೇವರು ಯಾವತ್ತಿಗೂ ಕ್ಷಮಿಸಲಾರ’ ಎಂದರು.

‘ಐಎಸ್‌ ಸಿದ್ಧಾಂತ ಪ್ರೇರಿತ ದಾಳಿ’
ಭೋಪಾಲ್‌ :
ಭೋಪಾಲ್‌–ಉಜ್ಜಯಿನಿ ರೈಲಿನಲ್ಲಿ ಸಂಭವಿಸಿದ್ದು ಐಎಸ್‌ ಸಿದ್ಧಾಂತ ಪ್ರಭಾವಿತ ಬಾಂಬ್‌ ಸ್ಫೋಟ. ಲಖನೌದಿಂದ ಬಂದವರು ರೈಲಿನಲ್ಲಿ ಬಾಂಬ್‌ ಇಟ್ಟಿದ್ದಾರೆ. ಇದೊಂದು ಪೂರ್ವ ಯೋಜಿತ ಸಂಚು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಇದೊಂದು ‘ತಾಲೀಮು ಸ್ಫೋಟ’ ಎಂದು ಮಧ್ಯಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್‌ ಬಣ್ಣಿಸಿದ್ದಾರೆ. ಇತರ ಕಡೆಗಳಲ್ಲಿ ಸ್ಫೋಟ ನಡೆಸಲು ಅವರು ಯೋಜನೆ ಹಾಕಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಭೋಪಾಲ್‌ಗೆ ಎನ್‌ಐಎ(ನವದೆಹಲಿ ವರದಿ): ರೈಲು ಸ್ಫೋಟದ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಬುಧವಾರ ಭೋಪಾಲ್‌ಗೆ ಬಂದಿದೆ.

ಸ್ಫೋಟ ನಡೆದಿರುವ ಜಾಬ್ರಿ ರೈಲ್ವೆ ನಿಲ್ದಾಣಕ್ಕೆ ತಂಡವು ಭೇಟಿ ನೀಡುವ ಸಾಧ್ಯತೆ ಇದೆ.

ಈ ದಾಳಿ ಭಯೋತ್ಪಾದಕ ದಾಳಿ ಹೌದೇ ಅಲ್ಲವೇ ಎಂಬುದನ್ನು ದೃಢಪಡಿಸಲು ತಂಡವು ಮಧ್ಯಪ್ರದೇಶ ಪೊಲೀಸ್‌ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.

ಬಂಧಿತರು ಲಖನೌಗೆ (ಕಾನ್ಪುರ ವರದಿ):  ಕಾನ್ಪುರ ಮತ್ತು ಉನ್ನಾವ್‌ನಲ್ಲಿ ಬಂಧಿಸಲಾಗಿದ್ದ ಇಬ್ಬರು ಶಂಕಿತ ಉಗ್ರರರನ್ನು ಉತ್ತರ ಪ್ರದೇಶದ  ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್‌) ಹೆಚ್ಚಿನ ವಿಚಾರಣೆಗಾಗಿ ಬುಧವಾರ ಲಖನೌಗೆ ಕರೆತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT