ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾ ಭಾವಗಳ ನರ್ತನ ಶಾಲೆಯಾದ ಮಾರ್ಚ್

Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಾರ್ಚ್ ಎಂದರೆ ನನ್ನ ಜೀವನದಲ್ಲಿ ಆತಂಕ, ಒತ್ತಡ, ಸಂಭ್ರಮ ಉಲ್ಲಾಸಗಳನ್ನು ಒಟ್ಟೊಟ್ಟಿಗೇ ನೆನಪಿಗೆ ತರುವ ತಿಂಗಳು. ನಾನು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ್ದು ಜುಲೈ ತಿಂಗಳಿನಲ್ಲಿ, ಸ್ಥಳೀಯ ಅಭ್ಯರ್ಥಿಯಾಗಿ. ಒಂಬತ್ತು ತಿಂಗಳ ಶೈಕ್ಷಣಿಕ ವರ್ಷ ಮುಕ್ತಾಯವಾಗುವ ಮಾರ್ಚ್15ಕ್ಕೆ ಅದರ ಆಯುಷ್ಯವೂ ಅಂತ್ಯಗೊಳ್ಳುತ್ತಿತ್ತು.

‘ಜೂಲಿಯಸ್ ಸೀಸರ್’ ನಾಟಕದಲ್ಲಿ ಭವಿಷ್ಯ ಹೇಳುವವನೊಬ್ಬ (Sooth Sayer) ಸೀಸರ್‌ಗೆ  ಮಾರ್ಚ್ 15 (Ides of March) ‘ನಿನಗೆ ಗಂಡಾಂತರದ ದಿನ’ ಎಂದು ಕಣಿ ನುಡಿದಿರುತ್ತಾನೆ. ಆದರೆ ಸೀಸರ್ ಅದನ್ನೇನೂ ನಂಬಿರಲಿಲ್ಲ.

ಮಾರ್ಚ್ 15 ಬಂದೇಬಿಟ್ಟಿತು. ಅಂದು ಸೀಸರ್ ಸೆನೇಟ್ ಮೀಟಿಂಗ್‌ಗೆ ಹೋಗುವಾಗ ಅಲ್ಲೇ ಮೆಟ್ಟಿಲ ಮೇಲೆ ಕುಳಿತಿದ್ದ ಆ ಭವಿಷ್ಯ ಹೇಳುವವನತ್ತ ಕಿರುನಗೆ ಬೀರಿ- Ides of March are come!! (ಎಲ್ಲಿ ಏನೂ ಆಗಲಿಲ್ಲವಲ್ಲ ಎನ್ನುವ ಅರ್ಥದಲ್ಲಿ) ಎಂದು ಲೇವಡಿ ಮಾಡುತ್ತಾನೆ. ಅವನಾದರೋ ತನ್ನ ಭವಿಷ್ಯದ ಬಗ್ಗೆ ಅಷ್ಟೇ ಆತ್ಮವಿಶ್ವಾಸದಿಂದ -‘Ay  Caesar, but not gone’ ಎಂದು ಉತ್ತರಿಸುತ್ತಾನೆ.

ಅಂದಿನ ಸೆನೇಟ್ ಮೀಟಿಂಗ್‌ನಲ್ಲೇ ಸೀಸರ್ ಕೊಲೆಯಾಗಿ ಕಣಿ ನುಡಿದವನ ಭವಿಷ್ಯ ನಿಜವಾಗುತ್ತದೆ! ನಾನು, ನನ್ನ ಹಾಗೆಯೇ ಸ್ಥಳೀಯ ಅಭ್ಯರ್ಥಿಗಳಾಗಿದ್ದ ನನ್ನ ಗೆಳೆಯ ಸಹೋದ್ಯೋಗಿಗಳಿಗೆ ಫೆಬ್ರುವರಿ ತಿಂಗಳಿನಿಂದಲೇ Ides of March ಬಗ್ಗೆ ಆಗಾಗ್ಗೆ ನೆನಪಿಸುತ್ತಲೇ ಇರುತ್ತಿದ್ದೆ.

ಸರಿ. ಮಾರ್ಚ್ 15 ಬಂದೇ ಬಿಟ್ಟಿತು. ಅದರೆ ಸ್ಥಳೀಯ ಅಭ್ಯರ್ಥಿಗಳೆಲ್ಲಾ ಸೇರಿ ಆ ವರ್ಷ ಸರ್ಕಾರದ ಮೇಲೆ ಒತ್ತಡ ತಂದು ಶಾಶ್ವತ ಕೆ.ಪಿ.ಎಸ್.ಸಿ. ಅಭ್ಯರ್ಥಿ ನಮ್ಮ ಜಾಗಕ್ಕೆ ಬಂದು ರಿಪೋರ್ಟ್ ಮಾಡಿಕೊಳ್ಳುವವರೆಗೂ ನಮ್ಮನ್ನು ಕೆಲಸದಿಂದ ಬಿಡುಗಡೆ ಮಾಡದೆ ಮುಂದುವರಿಸಬೇಕೆಂದು ಕೇಳಿಕೊಂಡಿದ್ದರ ಪರಿಣಾಮವಾಗಿ ಸರ್ಕಾರ ಅಂಥ ಆದೇಶ ಹೊರಡಿಸುವುದಾಗಿ ಆಶ್ವಾಸನೆಯನ್ನೇನೋ ನೀಡಿತ್ತು. ಆದರೆ ಮಾರ್ಚ್15 ಆದರೂ ಆದೇಶ ಮಾತ್ರ ಬಂದಿರಲಿಲ್ಲ.

ಪ್ರಿನ್ಸಿಪಾಲರಾದಿಯಾಗಿ ಕಚೇರಿ ಸಿಬ್ಬಂದಿಯೆಲ್ಲ ನಮ್ಮನ್ನು ಕೆಲಸದಿಂದ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಅವರುಗಳು ಮತ್ತು ಕೆಲವು ಹಿರಿಯ ಅಧ್ಯಾಪಕರುಗಳು ಅಂದು ಮಾರ್ಚ್ 15 ಬಂದೇಬಿಟ್ಟಿತಲ್ಲ. ಎಲ್ಲಿ ನಿಮ್ಮ ಮುಂದುವರಿಕೆ ಆದೇಶ ಬರಲೇ ಇಲ್ಲವಲ್ಲ? ಎಂದು ಶೇಕ್ಸ್‌ಪಿಯರ್ ನಾಟಕದ ಸೀಸರ್‌ನಂತೆ ಛೇಡಿಸಲಾರಂಭಿಸಿದ್ದರು.

ನಾವು ‘ಇಂದು ಸಂಜೆಯೊಳಗೆ ಯಾವಾಗ ಬೇಕಾದರೂ ಟೆಲಿಗ್ರಾಮ್ ಬರಬಹುದು. ಇನ್ನೂ 15 ಮುಗಿದಿಲ್ಲವಲ್ಲ’ ಎಂದು ಅದೇ ನಾಟಕದ ಭವಿಷ್ಯಕಾರನ ಧಾಟಿಯಲ್ಲೇ ಹೇಳುತ್ತಿದ್ದೆವು. ಆದರೆ ಸರಿಯಾಗಿ 12 ಗಂಟೆ ಆದ ಕೂಡಲೇ ಕಚೇರಿ ಸೂಪರಿಂಟೆಂಡೆಂಟ್ ಅವರು ಮುಂಚೆಯೇ ಸಿದ್ಧಪಡಿಸಿಟ್ಟುಕೊಂಡಿದ್ದ ಬಿಡುಗಡೆ ಆದೇಶದ ಪ್ರತಿಗಳನ್ನು ಎಲ್ಲರಿಗೂ ನೀಡಿ ರಿಲೀವ್ ಮಾಡಿಯೇಬಿಟ್ಟರು. ಅಂದು ನಾವು ಅನುಭವಿಸಿದ ತಳಮಳ ಆ ದೇವರಿಗೇ ಗೊತ್ತು.

ಅವರು ರಿಲೀವ್ ಮಾಡಿದ ಕಾಲು ಗಂಟೆಯ ನಂತರ ನಮ್ಮನ್ನೆಲ್ಲಾ ಮುಂದುವರಿಸಬೇಕೆಂಬ ಟೆಲಿಗ್ರಾಮ್ ನಿರ್ದೇಶಕರಿಂದ ಬಂದು ನಮ್ಮ ಬಿಡುಗಡೆ ಆದೇಶ ಹಿಂಪಡೆದು ಮತ್ತೆ ನಮ್ಮನ್ನು  ಮುಂದುವರೆಸಿದರೆನ್ನಿ. ಆದರೆ ಆ ಗಳಿಗೆಯವರೆಗಿನ ಆತಂಕದ ಒಂದೊಂದು ಕ್ಷಣವೂ ಕತ್ತಿಯ ಮೇಲೆ ನಿಂತಂತಿತ್ತು.

ಇನ್ನು ನಾನು ಅಧ್ಯಾಪಕನಾಗಿ ಕೆಲಸದಲ್ಲಿ ಮುಂದುವರಿದ ನಂತರದ ವರ್ಷಗಳಲ್ಲಿ ಮಾರ್ಚ್ ತಿಂಗಳೆಂದರೆ 31ರೊಳಗೆ ಎಲ್ಲ ತರಗತಿಗಳಿಗೆ ಪಾಠ ಪ್ರವಚನ ಮುಗಿಸಲು ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಒತ್ತಡ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಉಳಿತಾಯವೇನಾದರೂ ಮಾಡುವುದಿದ್ದರೆ ಅದರ ಚಿಂತೆ ಇರುತ್ತಿತ್ತು.

ಪ್ರಿನ್ಸಿಪಾಲ್ ಆದಮೇಲಂತೂ ಕೊನೇ ಗಳಿಗೆಯಲ್ಲಿ ಬಂದ ಅನುದಾನಕ್ಕೆ ಸಂಬಂಧಿಸಿದಂತೆ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿ, ಉಪಕರಣಗಳ ಖರೀದಿಗಳನ್ನು ಮುಗಿಸಿ ಕಚೇರಿ ಸಿಬ್ಬಂದಿಯವರ ತಲೆ ಮೇಲೆ ಕುಳಿತು ಬಿಲ್‌ಗಳನ್ನೆಲ್ಲಾ ಸಿದ್ಧಪಡಿಸಿ ಮಾರ್ಚ್ 31ರೊಳಗೆ ಖಜಾನೆಗೆ ಹೊತ್ತುಹಾಕುವ ಒತ್ತಡ,  ಮಾರ್ಚ್ 31 ಕಳೆದರೆ ಅಧ್ಯಾಪಕರು ಸಿಗುವುದು ಕಷ್ಟವಾದ ಕಾರಣ ಅವರಿಂದಲೇ ಮಾಡಿಸಬೇಕಾಗಿದ್ದ ಗ್ರಂಥಾಲಯ ಪುಸ್ತಕಗಳ, ಪೀಠೋಪಕರಣಗಳ, ಪ್ರಯೋಗಶಾಲೆಗಳ ದಾಸ್ತಾನು ತನಿಖೆ ಮಾಡಿಸುವ ಹೊಣೆಗಾರಿಕೆ, ಪರೀಕ್ಷೆಯ ಮೇಲ್ವಿಚಾರಣಾ ಕೆಲಸದ ಮೆಮೋಗಳನ್ನು ಹಂಚುವ ಜವಾಬ್ದಾರಿ, ಸಿ.ಆರ್ ರಿಪೋರ್ಟ್ ನಮೂನೆಗಳನ್ನು ಅವರ ಕಡೆಯಿಂದ ಭರ್ತಿಮಾಡಿಸಿ ಹಿಂಪಡೆಯುವುದು... ಹೀಗೆ ಒತ್ತಡಗಳ ಮೇಲೆ ಒತ್ತಡಗಳು. ಕೆಲವೊಮ್ಮೆ ಈ ವಿಷಯಗಳಲ್ಲಿ ಕಚೇರಿ ಸಿಬ್ಬಂದಿ, ಅಧ್ಯಾಪಕರು ಮತ್ತು ಮೇಲಧಿಕಾರಿಗಳೊಂದಿಗೆ ಎದುರಿಸಬೇಕಾಗಿ ಬಂದ ಸಂಘರ್ಷಗಳೂ ನೆನಪಾಗುತ್ತವೆ.

ಹಾಗೆಯೇ ಸಂಭ್ರಮದ ಸಂದರ್ಭಗಳೂ ಇದ್ದವು. ಅಂತಿಮ ವರ್ಷದ ಪ್ರತಿ ತರಗತಿಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಸಂತೋಷಕೂಟಗಳು ಮಾರ್ಚ್ ತಿಂಗಳ ಮಧ್ಯಭಾಗದಿಂದ ಆರಂಭವಾಗಿ ಮಾರ್ಚ್ ಕೊನೆಯವರೆಗೂ ಇರುತ್ತಿದ್ದುವು. ಅವುಗಳಲ್ಲಿ ಪಾಲ್ಗೊಂಡು ಸಿಹಿ ನೆನಪುಗಳನ್ನು ಹಂಚಿಕೊಳ್ಳುವುದೇ ಬೇರೊಂದು ಬಗೆಯ ಸಂಭ್ರಮ!

ಇನ್ನು ವೈಯಕ್ತಿಕ ಸಂತಸ, ಸಂಭ್ರಮದ ಸಂದರ್ಭವೆಂದರೆ ನನ್ನ ಎರಡನೇ ಮಗಳು ಹುಟಿದ್ದು ಇದೇ ಮಾರ್ಚ್ ತಿಂಗಳು. ನಾನಂತೂ ಮಾರ್ಚ್ ಅನ್ನು ಎಂದೂ ಮರೆಯುವಂತೆಯೇ ಇಲ್ಲ!  ಹೀಗೆ ಮಾರ್ಚ್ ತಿಂಗಳೆಂದರೆ ನನ್ನ ಪಾಲಿಗೆ ನಾನಾ ಭಾವಗಳ ನರ್ತನಶಾಲೆ!
–ಆರ್ ಲಕ್ಷ್ಮೀನಾರಾಯಣ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT