ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಕಥನಗಳ ಕನ್ನಡ ಭಂಡಾರ ‘ಋತುಮಾನ’

Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೌದ್ಧಿಕ ಪರಂಪರೆಗೆ ಅನೇಕ ಹೊಸ ಹೊಳಹುಗಳನ್ನು ಕೊಟ್ಟ ಡಿ.ಆರ್. ನಾಗರಾಜ್ ಅವರ ಮದುವೆ ಫೋಟೊಗಳವು. ಜಿ.ಎಸ್. ಶಿವರುದ್ರಪ್ಪ, ಶೂದ್ರ ಶ್ರೀನಿವಾಸ್ ಮುಂತಾದವರು ಸಾಕ್ಷಿಯಾಗಿದ್ದ ಆ ಮದುವೆ ಫೋಟೊಗಳ ಜೊತೆಗೆ ಭಿನ್ನ ಕಾಲಘಟ್ಟದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮಗಳ ಇನ್ನೊಂದಿಷ್ಟು ಛಾಯಾಚಿತ್ರಗಳು... ಅವುಗಳಲ್ಲಿ ಕನ್ನಡ ಭಾಷೆಗೆ ಮತ್ತದರ ಬದುಕಿಗೆ ಶಕ್ತಿ ತುಂಬಿದ ಅನೇಕರು ನಮಗೆ ಕಾಣಿಸುತ್ತಾರೆ.

ಇದರ ಜೊತೆಗೆ ಸಾಹಿತಿ, ಸಾಹಿತ್ಯ, ಸಾಂಸ್ಕೃತಿಕ ರಾಜಕಾರಣ ಕುರಿತು ನಮ್ಮ ನಡುವಿನ ಪ್ರಖರ ಚಿಂತಕರು ಮಾತನಾಡಿದ ದೃಶ್ಯಾವಳಿಗಳು. ಹೌದು, ಕೊಲಾಜ್ ಗುಣ ಹೊಂದಿರುವ ಈ ಜಾಲತಾಣದಲ್ಲಿ ಕೇವಲ ಕನ್ನಡ ಸಾಹಿತ್ಯದ ಬರಹಗಳಿಲ್ಲ.

ಬದಲಿಗೆ ಹೊಸ ರೂಪುರೇಷೆಗಳಲ್ಲಿ ದೃಶ್ಯ, ಶ್ರವ್ಯ, ಬರಹ ಮತ್ತು ಚಿತ್ರಗಳೆಂಬ ವಿಂಗಡಣೆಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಅನಾವರಣವಿದೆ. ಕನ್ನಡದ ಮಟ್ಟಿಗೆ ಇಂಥ ನವೀನ ಮಾದರಿಯ ಮೂಲಕ ಅಂತರ್ಜಾಲದಲ್ಲಿ ಸಾಹಿತ್ಯದ ಕಂಪನ್ನು ಪಸರಿಸುತ್ತಿರುವುದು ‘ಋತುಮಾನ’ಎಂಬ ವೆಬ್ ತಾಣ.  

ಈಗಾಗಲೇ ಕನ್ನಡ ಸಾಹಿತ್ಯ ಡಾಟ್ ಕಾಮ್, ಕೆಂಡಸಂಪಿಗೆ, ಅವಧಿ, ವರ್ತಮಾನ ಡಾಟ್ ಕಾಮ್, ಕಣಜ, ಸಂಚಿ ಫೌಂಡೇಷನ್‌, ಚುಕ್ಕುಬುಕ್ಕು ಮತ್ತಿನ್ನಿತರ ವೆಬ್ ತಾಣಗಳು ಹಲವು ವಿಧಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಅಂತರ್ಜಾಲದಲ್ಲಿ ಸಿಗುವಂತೆ ಮಾಡಿವೆ. ಈ ಪಟ್ಟಿಗೆ ಕೊಂಚ ಹೊಸತನದಿಂದ ಕೂಡಿರುವ ‘ಋತುಮಾನ’ ಹೊಸ ಸೇರ್ಪಡೆ.

ಒಮ್ಮೆ ಋತುಮಾನ ವೆಬ್ ತಾಣವನ್ನು ಒಳಹೊಕ್ಕ ಯಾರಿಗಾದರೂ ಇಷ್ಟು ತಾಳ್ಮೆ ಮತ್ತು ಶಿಸ್ತಿನಿಂದ ಭಿನ್ನ ಮಾಧ್ಯಮಗಳ ಮೂಲಕ ಸಾಹಿತ್ಯಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಓದುಗರಿಗೆ ತಲುಪಿಸುತ್ತಿರುವುವರು ಯಾರು ಎಂಬ ಪ್ರಶ್ನೆ ಮೂಡದೆ ಇರದು. ಬಹಳಷ್ಟು ಮಂದಿ ಸಾಹಿತ್ಯದ ಅಕಾಡೆಮಿಕ್ ವಲಯದಲ್ಲಿರುವವರೇ ಇದರ ಹಿಂದಿರಬಹುದು ಎಂದುಕೊಳ್ಳುತ್ತಾರೆ. ಆದರೆ, ‘ಋತುಮಾನ’ ಶುರುಮಾಡಿ ಅದನ್ನು ಮುಂದುವರಿಸುತ್ತಿರುವುದು ಕೆಲವು ಯುವ ಮನಸ್ಸುಗಳು.

ಸ್ವಂತ ವ್ಯವಹಾರ ಮಾಡುತ್ತಿರುವ ಕಿರಣ್ ಮಂಜುನಾಥ್, ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ಕುಂಟಾಡಿ ನಿತೇಶ್ ಹಾಗೂ ಸುಪ್ರೀತ್ ಕೆ.ಎಸ್, ಕೇಂದ್ರ ಸರ್ಕಾರದ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಅವಿನಾಶ್ ಜಿ. ಹಾಗೂ ವಿನ್ಯಾಸಕಾರರಾಗಿರುವ ಪ್ರಮೋದ್ ಪಟಗಾರ್ ಅವರುಗಳ ಕ್ರಿಯಾಶೀಲಗುಣ ಈ ವೆಬ್ ತಾಣದ ಹಿಂದೆ ಕೆಲಸ ಮಾಡಿದೆ.

ಸಾವಧಾನದ ಧ್ಯಾನ
ಭಾಷೆ, ಪರಂಪರೆ, ಸಿನಿಮಾ ಮುಂತಾದ ವಿಷಯಗಳಲ್ಲಿ ಸಂವಾದದಲ್ಲಿ ತೊಡಗಿರುವ ಇವರೆಲ್ಲರೂ ಅಂತರ್ಜಾಲದಲ್ಲಿ ಸಕ್ರಿಯರಾಗಿರುವ ಸಾಹಿತ್ಯ ಪ್ರೇಮಿಗಳ ವಲಯದಲ್ಲಿ ಸಾಕಷ್ಟು ಪರಿಚಿತರು. ಕನ್ನಡದಲ್ಲಿ ಇಷ್ಟೆಲ್ಲ ಸಾಹಿತ್ಯಿಕ ವೆಬ್ ತಾಣಗಳಿದ್ದರೂ ‘ಋತುಮಾನ’ ಕಟ್ಟುವ ಕಲ್ಪನೆ ಹೇಗೆ ಬಂತು ಎಂದು ತಿಳಿದುಕೊಳ್ಳಲು ಮಾತನಾಡಿಸಿದಾಗ ಕಿರಣ್ ತಮ್ಮ ತಂಡದ ಉದ್ದೇಶ, ಕನಸು ಮತ್ತು ಕನವರಿಕೆಗಳ ಕುರಿತು ಹೇಳುತ್ತಾ ಹೋದರು.

‘ಎಲ್ಲದಕ್ಕೂ ಹಪಹಪಿಸುವ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಹಿತ್ಯವೂ ಅದರಿಂದ ಹೊರತಾಗಿಲ್ಲ. ಹಿಂದೆಲ್ಲ ಒಂದು ವಿಚಾರ ಮತ್ತು ಕೃತಿ ನಮ್ಮೊಳಗೆ ಇಳಿಯಲು ದೀರ್ಘ ಕಾಲ ತೆಗೆದುಕೊಳ್ಳುತ್ತಿತ್ತು. ಸಮಯ ಮತ್ತು ಗಂಭೀರತೆ ಇದ್ದರೆ ಅದು ಈ ದಿನಗಳಲ್ಲೂ ಸಾಧ್ಯ. ಆದರೆ ಕನಿಷ್ಠ ಓದಿಗೂ ಸಮಯ ಮಾಡಿಕೊಳ್ಳದ ಮನಸ್ಥಿತಿಗೆ ತಲುಪಿರುವ ನಾವುಗಳು ಚಿಂತನೆ ಮತ್ತು ಯೋಚನೆಗೆ ಅಷ್ಟು ಸಮಯ ಮೀಸಲಿಡುವುದು ಈಗ ಕಷ್ಟ ಸಾಧ್ಯ.

ಎಲ್ಲ ವ್ಯವಹಾರಗಳೂ ಹೆಚ್ಚು ಕಡಿಮೆ ಅಂತರ್ಜಾಲ ಮಾಧ್ಯಮದಲ್ಲಿ ನಡೆಯುವುದರಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಓದನ್ನು ರೂಪಿಸಿಕೊಳ್ಳಲು ಅಂತರ್ಜಾಲವನ್ನೇ ಇನ್ನಷ್ಟು ಶಕ್ತ ಉಪಕರಣವಾಗಿ ಬಳಸಿಕೊಳ್ಳುವುದು ಋತುಮಾನ ಸ್ಥಾಪನೆಯ ಹಿಂದಿನ ಉದ್ದೇಶ’ ಎನ್ನುತ್ತಾರೆ.

‘ಹಾಗೆಯೇ ನಮ್ಮ ಕಾಲದೊಂದಿಗೆ ಅನುಸಂಧಾನ ಮಾಡಿಕೊಳ್ಳಲು ಹೊಸ ಪರಿಭಾಷೆ ಮತ್ತು ನುಡಿಗಟ್ಟುಗಳನ್ನು ಹುಡುಕಿಕೊಳ್ಳುವುದು ಅವಶ್ಯ ಎಂಬುದು ನಮ್ಮ ಅಭಿಪ್ರಾಯ. ಆ ಕಾರಣದಿಂದ ವಿವಿಧ ಮಾಧ್ಯಮಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ ರಾಜಕಾರಣದ ಕುರಿತಂತೆ ದೃಶ್ಯಾವಳಿಗಳು, ಆಡಿಯೊ ಮತ್ತು ಫೋಟೊಗಳನ್ನು ಓದುಗರಿಗೆ ತಲುಪಿಸುವುದು ಮುಖ್ಯ ಎನಿಸಿತು. ಇದನ್ನು ಮಾಡುವುದರಿಂದ ಎಲ್ಲ ಸಂವಹನದ ಕೊಂಡಿಗಳನ್ನು ಸಾಹಿತ್ಯದ ದ್ರವ್ಯಗಳಿಂದ ಜೋಡಿಸಿದಂತಾಗುತ್ತದೆ’ ಎಂದು ಕಿರಣ್ ಅಭಿಪ್ರಾಯಪಡುತ್ತಾರೆ.

ವೆಬ್ ತಾಣದ ಹೆಸರಿನ ಹಿಂದೆ-ಮುಂದೆ
ಕಾಲ ಬದಲಾದಂತೆ ಸಾಹಿತ್ಯ ಸೃಷ್ಟಿ ಮತ್ತದರ ಗ್ರಹಿಕೆಗಳು ಹೊಸ ರೂಪ ಪಡೆದುಕೊಳ್ಳುತ್ತವೆ. ನಿರಂತರ ಚಲನಶೀಲತೆ ಎಲ್ಲ ಚಿಂತನೆಯ ಜೀವಾಳ. ಪ್ರಾಕೃತಿಕ ಬದಲಾವಣೆಗಳನ್ನು ಸೂಚಿಸಲು ಋತುಗಳನ್ನು ಹೆಸರಿಸುವ ಹಾಗೆ ಸಾಹಿತ್ಯದ ಧ್ವನಿಗಳಲ್ಲಾಗುವ ಪಲ್ಲಟಗಳನ್ನು ಹಿಡಿದಿಡುವ ವೇದಿಕೆಯಾಗಲಿ ಎಂಬ ಆಶಯದಿಂದ ಕಿರಣ್ ಮತ್ತು ಗೆಳೆಯರು ವೆಬ್ ತಾಣಕ್ಕೆ ‘ಋತುಮಾನ’ ಎಂಬ ನಾಮಕರಣ ಮಾಡಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಕಾಲದ ಒಕ್ಕಣಿಕೆಯಲ್ಲಿ ಹೊಸತನಕ್ಕೆ ಅವಕಾಶ ಕೊಡುವುದು ತುಂಬ ಮುಖ್ಯ. ಇಲ್ಲದಿದ್ದರೆ ನಮ್ಮ ಸಂವೇದನೆಗಳು ಜಡ್ಡುಗಟ್ಟುತ್ತವೆ. ಹೊಸ ಲೇಖಕರ ಹೊಸ ಬರವಣಿಗೆಗಳಿಗೆ ವೇದಿಕೆ ಕಲ್ಪಿಸಿ ನಮ್ಮ ಸುತ್ತಲಿನ ಸಮಾಜವನ್ನು ಅರ್ಥೈಸಿಕೊಳ್ಳುವ ಆಶಯವೂ ಈ ಹೆಸರಿನ ಆಯ್ಕೆಯ ಹಿಂದಿದೆ ಎಂದು ಕಿರಣ್ ವಿವರಿಸುತ್ತಾರೆ.

ಸಾಹಿತ್ಯದ ಹಲವು ಪ್ರಕಾರಗಳ ಕೊಲಾಜ್
ಸೃಜನಶೀಲತೆ ಕಲೆಯ ವಿಶೇಷ ಗುಣ. ಹೇಳುವ, ಗ್ರಹಿಸುವ ಮತ್ತು ಒಡೆದು ರೂಪಿಸುವ ಸಾಹಿತ್ಯದ ದ್ರವ್ಯಗಳನ್ನು ಓದುಗರಿಗೆ ತಲುಪಿಸಿ ಸಂವಾದದ ಮಡಕೆಯನ್ನು ಸೂಕ್ಷ್ಮವಾಗಿ  ಕಟ್ಟಲು ಕಾವ್ಯ, ಕತೆ, ಪ್ರಬಂಧ, ವಿಮರ್ಶೆ ಎಲ್ಲ ಅವಶ್ಯಕ. ಕನ್ನಡ ಸಾಹಿತ್ಯದಲ್ಲಿ ಎಲ್ಲ ಪ್ರಕಾರಗಳಲ್ಲೂ ಕೆಲಸ ಮಾಡಿದ ಅನೇಕ ಸಾಹಿತಿಗಳ ಸಾಹಿತ್ಯ ಮತ್ತು ಚಿಂತನಾ ಕೃಷಿ ಋತುಮಾನದಲ್ಲಿ ಲಭ್ಯವಿದೆ.

ಆದಷ್ಟೂ ಲಭ್ಯವಿಲ್ಲದ ಹಿಂದಿನ ಕಾಲದ ಶ್ರೀಮಂತ ಕನ್ನಡ ಸಾಹಿತ್ಯವನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಕಾರಣದಿಂದ ಕನ್ನಡದ ಅತ್ಯುತ್ತಮ ಸಾಹಿತಿಗಳು ವಿಚಾರ ಕಮ್ಮಟಗಳಲ್ಲಿ ಹಾಗೂ ಕವಿ ಗೋಷ್ಠಿಗಳಲ್ಲಿ ವಾಚಿಸಿದ ಸಾಹಿತ್ಯ ಕೂಡ ಋತುಮಾನ ತಾಣದಲ್ಲಿರುವುದು ಸಾಹಿತ್ಯದ ಅಕಾಡೆಮಿಕ್ ವಿದ್ಯಾರ್ಥಿಗಳಿಗೂ ಅನುಕೂಲಕರ. ಆದರೆ, ಅದರ ಉಪಯೋಗ ಪಡೆದು ಸಂವಾದ ಪರಂಪರೆಯಲ್ಲಿ ಪಾಲ್ಗೊಳ್ಳುವುದು ಅವರವರಿಗೆ ಬಿಟ್ಟ ವಿಷಯ ಎಂಬುದು ಋತುಮಾನ ತಂಡದ ಸ್ಪಷ್ಟ ಅಭಿಪ್ರಾಯ.

‘ಬಿಕ್ಕಟ್ಟು ಮತ್ತು ಸಂಕಟಗಳಿಂದ ಯಾವ ಕಾಲವೂ ಹೊರತಾಗಿಲ್ಲ. ಕಾಲ ಮತ್ತು ಸಾಮಾಜಿಕ ಬದಲಾವಣೆಗೆ ತಕ್ಕಂತೆ ಸಮಸ್ಯೆಗಳ ಸ್ವರೂಪದ ಜೊತೆಗೆ ಅದರ ಪರಿಧಿಯೂ ವಿಸ್ತರಣೆಯಾಗಿದೆ. ಹಾಗಾಗಿ, ಕಾಲದ ಕೊಡುಗೆಯಾದ ಡಿಜಿಟಲ್ ಲೋಕದಲ್ಲಿ ಹುಟ್ಟಿರುವ ತಂತ್ರಜ್ಞಾನ ಪರಿಣತ ಸಮುದಾಯಕ್ಕೆ ಅಂತರ್ಜಾಲ ಎಂಬ ಸಾಧನದ ಮೂಲಕವೇ ಬಿಕ್ಕಟ್ಟುಗಳ ಪರಿಚಯ ಮಾಡಿಕೊಡುವುದು ಋತುಮಾನದಿಂದ ಸಾಧ್ಯವಾಗಬೇಕಿದೆ’ ಎಂಬುದು ಕಿರಣ್ ಮತ್ತವರ ತಂಡದ ಇಂಗಿತ.

‘ಭವಿಷ್ಯದ ಬಗ್ಗೆ ನಾವು ಹೆಚ್ಚು ಯೋಚಿಸಿಲ್ಲ. ಸದ್ಯಕ್ಕಂತೂ ನಮ್ಮ ಪ್ರಯತ್ನಕ್ಕೆ ಓದುಗರಿಂದ ಮತ್ತು ಸಾಹಿತಿಗಳ ವಲಯದಿಂದ ಒಳ್ಳೆಯ ಅಭಿಪ್ರಾಯಗಳು ಬಂದಿವೆ. ನಮ್ಮ ತಂಡ ವೆಬ್ ತಾಣದ ನಿರ್ವಹಣೆಗೆ ಸ್ವಂತ ಹಣ ಖರ್ಚು ಮಾಡಿದೆ. ನಮಗೆ ಸಹಾಯ ಮಾಡಲು ಒಂದಿಷ್ಟು ಜನರು ಮುಂದೆ ಬಂದಿದ್ದಾರೆ.ಹಾಗಾಗಿ ಋತುಮಾನದ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಲು ಸಿದ್ದತೆ ಶುರುವಾಗಿದೆ’ ಎಂದು ತಮ್ಮ ಮುಂದಿನ ಯೋಜನೆಯ ಬಗ್ಗೆ ವಿವರಿಸುತ್ತಾರೆ ಕಿರಣ್. 

ಲೋಕಕಥನಗಳ ಭಂಡಾರವನ್ನು ಕನ್ನಡದ ಮೂಲಕ ತೆರೆದಿಡುವ ಹಂಬಲ ಹೊಂದಿರುವ ‘ಋತುಮಾನ’, ಸಾಹಿತ್ಯದಲ್ಲಿ ಹೊಸ ಪರಿಕರಗಳ ಸೃಷ್ಟಿಗೆ ವೇದಿಕೆ ಕಟ್ಟಿಕೊಡುವುದು ಸಾಂಸ್ಕೃತಿಕ ಚಿಂತನೆಯ ದೃಷ್ಟಿಯಿಂದ ಮುಖ್ಯ. ಅಂತಹ ಪರಿಕರಗಳ ಮುಖಾಂತರ ಬಿಕ್ಕಟ್ಟುಗಳ ಪ್ರವಾಹದ ಎದುರು ಈಜುತ್ತ ಬದುಕಿನ ಒಳವಿವರಗಳನ್ನು ಸೆರೆಹಿಡಿಯುವ ಛಲ ಮತ್ತು ಬಲ ಎರಡೂ ಋತುಮಾನದ ಅಂಗಳದಲ್ಲಿ ನಿಚ್ಚಳವಾಗಿ ಕಾಣುತ್ತವೆ.
ಜಾಲತಾಣದ ಕೊಂಡಿ: ruthumana.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT