ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತೀರ್ಥ; ಕೀರ್ತಿ ಒಡವೆ

Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಂಸ್ಕೃತಶ್ಲೋಕವೊಂದು ಹೀಗಿದೆ:
ಕಿಂ ಭೂಷಣಂ ರುಚಿರಮತ್ರ ಯಶೋ ನ ರತ್ನಂ
ಕಿಂ ಕಾರ್ಯಮಾರ್ಯಚರಿತಂ ಸುಕೃತಂ ನ ದೋಷಃ /
ಕಿಂ ಚಕ್ಷುರಪ್ರತಿಹತಂ ಧಿಷಣಾ ನ ನೇತ್ರಂ
ಕಿಂ ತಾಪಹಾರಿ ಮಧುರಂ ವಚನಂ ನ ಪಾಥಃ //

ಇದರ ಭಾವಾರ್ಥ: ‘ಸುಂದರವಾದ ಒಡವೆ ಯಾವುದು? ಕೀರ್ತಿ; ರತ್ನವಲ್ಲ. ಆಚರಿಸಬೇಕಾದದ್ದು ಯಾವುದು? ಶಿಷ್ಟರು ನಡೆಸುವಂಥ ಒಳ್ಳೆಯ ಕೆಲಸ; ದೋಷದಿಂದ ಕೂಡಿದ ಕಾರ್ಯವಲ್ಲ. ಸದಾ ತೆರೆದಿರಬೇಕಾದ ಕಣ್ಣು ಯಾವುದು? ಬುದ್ಧಿ, ನೇತ್ರವಲ್ಲ. ಪಾಪವನ್ನು ಕಳೆಯುವಂಥದ್ದು ಯಾವುದು? ಒಳ್ಳೆಯ ಮಾತು, ನೀರಲ್ಲ.’

ಬದುಕಿನಲ್ಲಿ ನಮ್ಮ ತಪ್ಪು ತಿಳಿವಳಿಕೆಯ ಕಾರಣದಿಂದ ನಮ್ಮಲ್ಲಿ ಮೌಲ್ಯ–ಅಪಮೌಲ್ಯಗಳ ಗ್ರಹಿಕೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಆದ ಕಾರಣ, ನಾವು ಯಾವುದನ್ನು ಹೆಚ್ಚು ಬೆಲೆಯುಳ್ಳದ್ದು ಎಂದು ಭಾವಿಸಿಕೊಂಡು ಅದನ್ನು ಕಷ್ಟಪಟ್ಟು ಸಂಪಾದಿಸಿಕೊಳ್ಳುತ್ತೇವೆಯೋ ವಾಸ್ತವವಾಗಿ ಅದು ಅಷ್ಟು ಬೆಲೆಯುಳ್ಳದ್ದಾಗಿರುವುದಿಲ್ಲ. ಹೀಗಾಗಿ ನಮ್ಮ ಪರಿಶ್ರಮ ವ್ಯರ್ಥವಾಗುತ್ತದೆ.

‘ಬೆಟ್ಟವನ್ನು ಅಗೆದು ಇಲಿಯನ್ನು ಹಿಡಿದಂತೆ’ ಎಂಬ ಗಾದೆ ಇದನ್ನೇ ಹೇಳಿರುವುದು. ಮೇಲಿನ ಸುಭಾಷಿತವೂ ಇದನ್ನೇ ಹೇಳುತ್ತಿರುವುದು. ವ್ಯಕ್ತಿತ್ವ ಎನ್ನುವುದು ಮನುಷ್ಯನ ಅಂತರಂಗಕ್ಕೆ ಸೇರಿದ ವಿಷಯ; ಅದು ನಮ್ಮ ಹೊರಗಿನ ವಿವರಗಳಿಂದ ನಿರ್ಣಯವಾಗುವಂಥದ್ದಲ್ಲ. ಆದರೆ ನಾವು ಮಾತ್ರ ನಮ್ಮ ಬಾಹ್ಯ ಅಲಂಕಾರಕ್ಕೋ ಆಸ್ತಿ–ಅಂತಸ್ತುಗಳಿಗೋ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತೇವೆ.

ವಾಸ್ತವವಾಗಿ ಯಾವುದು ನಿಜವಾದ ವ್ಯಕ್ತಿತ್ವವೋ ಅದನ್ನು ಮನಗಾಣದೇ ಪೊಳ್ಳು ವ್ಯಕ್ತಿತ್ವವನ್ನೇ ಗಟ್ಟಿಯಾದ ವ್ಯಕ್ತಿತ್ವ ಎಂದು ಭಾವಿಸಿಕೊಳ್ಳುತ್ತೇವೆ. ಇದರ ಪರಿಣಾಮ ಎಂದರೆ ಪೊಳ್ಳು ವ್ಯಕ್ತಿತ್ವದ ಸಂಪಾದನೆ. ಅಂಥ ಪೊಳ್ಳುತನದ ಆವರಣದಿಂದ ಹೊರಬರುವಂತೆ ಈ ಸುಭಾಷಿತ ನಮಗೆ ಸೂಚಿಸುತ್ತಿದೆ. ಆ ಪೊಳ್ಳುತನದ ಕೆಲವೊಂದು ಮಾದರಿಗಳನ್ನು ಇಲ್ಲಿ ಒದಗಿಸಿರುವುದಷ್ಟೆ ಅಲ್ಲ, ದಿಟವಾದ ಮೌಲ್ಯವನ್ನೂ ಅದರೊಂದಿಗೆ ಹೇಳಿರುವುದು ಸ್ವಾರಸ್ಯಕರವಾಗಿದೆ.

ನಮ್ಮ ವ್ಯಕ್ತಿತ್ವಕ್ಕೆ ಕಳೆ ಬರುವುದೂ ನಮ್ಮನ್ನು ಗುರುತಿಸುವುದೂ ನಾವು ಧರಿಸುವ ರತ್ನ ಮುಂತಾದ ಒಡವೆಗಳಿಂದ ಎಂದುಕೊಳ್ಳುವುದು ಸಹಜ. ಆದರೆ ಇದಕ್ಕೂ ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಎನ್ನುತ್ತಿದೆ ಸುಭಾಷಿತ. ಕೀರ್ತಿಯೇ ನಿಜವಾದ ಆಭರಣ; ಇದು ಅದರ ತೀರ್ಮಾನ.

ಇಲ್ಲಿ ನಾವು ಗಮನಿಸಬೇಕಾದದ್ದು, ಕಣ್ಣಿಗೆ ಕಾಣುವಂಥದ್ದಲ್ಲ ಕೀರ್ತಿ; ಆದರೆ ರತ್ನ ಕಾಣುತ್ತದೆ. ರತ್ನದ ಹಾರ ನಮ್ಮ ಕೊರಳನ್ನು ಏರಿದರೆ, ಕೀರ್ತಿಯು ಜನರ ಕಂಠದಲ್ಲಿ ಉಲಿಯುತ್ತಿರುತ್ತದೆ.  ಹಣ ಇದ್ದರೆ ರತ್ನವನ್ನು ಕೊಂಡುಕೊಳ್ಳಬಹುದು. ಆದರೆ ಕೀರ್ತಿಯನ್ನು ಕೊಂಡುಕೊಳ್ಳಲಾಗದು; ಅದನ್ನು ಸಂಪಾದಿಸಬೇಕು.

ಅದಕ್ಕಾಗಿ ನಮ್ಮ ಒಟ್ಟು ವ್ಯಕ್ತಿತ್ವ ದುಡಿಯಬೇಕು. ಹೀಗೆಯೇ, ಚೆನ್ನಾಗಿ ಮಾಡಿದ ಕೆಲಸವೆಲ್ಲವೂ ಒಳ್ಳೆಯ ಕೆಲಸವೇ ಆಗಿರುತ್ತದೆ ಎಂದೇನಿಲ್ಲ. ಆದುದರಿಂದಲೇ ಶಿಷ್ಟರು, ಎಂದರೆ ಸಮಾಜದ ರೀತಿ–ನೀತಿಗಳಲ್ಲಿ ಎಚ್ಚರ ಇರುವವರು, ಯಾವ ಕೆಲಸವನ್ನು ಮಾಡುತ್ತಾರೆಯೋ
ಅದನ್ನೇ ನಾವೂ ಆಚರಿಸಬೇಕು.

ಜಗತ್ತನ್ನು ನೋಡಲು, ಅದರೊಂದಿಗೆ ವ್ಯವಹರಿಸಲು ಕಣ್ಣು ಬೇಕು. ಹೀಗಾಗಿ ಸದಾ ಕಣ್ಣುಗಳನ್ನು ತೆರೆದಿರಬೇಕು. ಆದರೆ ಕಣ್ಣಿನಿಂದ ನೋಡುವುದೇ ನೋಟವಲ್ಲ, ಬುದ್ಧಿಯಿಂದ ಕಾಣಬೇಕು. ಕೊನೆಯದಾಗಿ ಸುಭಾಷಿತ ಹೇಳುತ್ತಿರುವುದು ಪಾಪದ ಬಗ್ಗೆ. ತೀರ್ಥಸ್ನಾನ ಮಾಡಿದರೆ ಪಾಪ ಹೋಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಪಾಪವನ್ನೇ ಮಾಡದಿರುವ ದಾರಿಯೊಂದರ ಬಗ್ಗೆ ಸುಭಾಷಿತ ಸುಳಿವು ಕೊಟ್ಟಿದೆ. ಒಳ್ಳೆಯ ಮಾತೇ ಪುಣ್ಯ; ಕೆಟ್ಟ ಮಾತೇ ಪಾಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT