ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗೆ ಭಾಷೆಯ ಹಂಗಿಲ್ಲ, ಭಾವವೇ ಮುಖ್ಯ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 9 ಮಾರ್ಚ್ 2017, 5:36 IST
ಅಕ್ಷರ ಗಾತ್ರ
ಹೊಸದುರ್ಗ: ಕಲೆಗೆ ಭಾಷೆಯ ಹಂಗಿಲ್ಲ, ಭಾವವೇ ಮುಖ್ಯ. ಕಲೆಯನ್ನು ಶ್ರೀಮಂತಗೊಳಿಸುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
 
ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾಮಠದ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಶಿವಕುಮಾರ ಕಲಾಸಂಘ ಮತ್ತು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಸಂಜೆ ನಡೆದ ರಾಷ್ಟ್ರೀಯ ಗೊಂಬೆಯಾಟ ಉತ್ಸವ–2017ರ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
 
ತೊಗಲುಗೊಂಬೆಯಾಟ ಕಲಾವಿದರ ಬದುಕಿನ ಬಟ್ಟೆ(ದಾರಿ) ಚೆನ್ನಾಗಿದೆ. ಕಲೆಯನ್ನು ದೇವರ ಆರಾಧನೆಯೆಂದೇ ಭಾವಿಸಿದ್ದಾರೆ. ಅಭಿನಯದ ಜತೆ ಹಾಡುಗಾರಿಕೆ, ಚಿತ್ರಕಲೆಯಲ್ಲಿಯೂ ಈ ಕಲಾವಿದರು ಪಳಗಿದ್ದಾರೆ. ಇದರಲ್ಲಿ ಯಕ್ಷಗಾನ, ದೊಡ್ಡಾಟ, ಸಣ್ಣಾಟ, ನಾಟಕ, ಸಿನಿಮಾಗಳ ತಂತ್ರಗಳನ್ನೆಲ್ಲ ಒಳಗೊಂಡಿರುವುದು ಗೊಂಬೆಯಾಟ ಕಲೆಯ ವಿಶೇಷ. ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುವ ಇಂಥ ಕುಟುಂಬಗಳನ್ನು ಗುರುತಿಸಿ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದರು. 
 
ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ ಮಾತನಾಡಿ, ‘ನಾನು ಕಂಡ ಅಪರೂಪದ ಗೊಂಬೆಯಾಟ ಪ್ರದರ್ಶನ ಇದು. ಒಬ್ಬ ವ್ಯಕ್ತಿಯೇ ಎಲ್ಲ ಪಾತ್ರಗಳನ್ನು ಗಂಟೆಗಳ ಕಾಲ ನಿರ್ವಹಿಸುವುದು ನಿಜಕ್ಕೂ ಸವಾಲು. ಹೆಸರಿಗೆ ತಕ್ಕಂತೆ ಮುತ್ತುರಾಜ್ ಬೆಲೆಬಾಳುವ ‘ಮುತ್ತಿ’ನಂತೆ. ಇವರಿಗೆ ಪ್ರಶಸ್ತಿ ಪುರಸ್ಕಾರಗಳು ಸಲ್ಲಬೇಕು ಎಂದರು.
 
ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಮಾತನಾಡಿ, ಪ್ರತಿ ಕಲಾವಿದರಿಗೂ ತಮ್ಮದೇ ಆದ ಕಲಾಗ್ರಾಮವೊಂದರ ಕನಸಿರುತ್ತೆ. ಆ ಕನಸು ಸಾಣೇಹಳ್ಳಿಯಲ್ಲಿ ನನಸಾಗಿದೆ. ಗೊಂಬೆಯಾಟ ಜೀವಂತ ಕಲೆ. ಟಿವಿ, ಕಂಪ್ಯೂಟರ್, ಮೊಬೈಲ್‌ಗಳಂಥ ವೈವಿಧ್ಯಮಯ ಮಾಧ್ಯಮಗಳ ಅಬ್ಬರದ ನಡುವೆಯೂ ಈ ಕಲಾ ಪರಂಪರೆಗೆ ಯಾವ ಧಕ್ಕೆಯೂ ಆಗಿಲ್ಲ ಎಂದರು.  
 
ಅಧ್ಯಾಪಕ ಎಚ್.ಎಸ್.ದ್ಯಾಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಗಳೂರಿನ ಪಂಚವಟಿ ರೇಣುಕಾಮಾತೆ ತೊಗಲುಗೊಂಬೆ ಮೇಳದವರು ಪಂಚವಟಿ ರಾಮಾಯಣ, ತಮಿಳುನಾಡಿನ ತಿರುಮಲೈಪುರಂನ ತಂಡದವರು ರಾಮಾಯಣ ಸುಂದರ ಕಾಂಡ ಗೊಂಬೆಯಾಟ ಪ್ರದರ್ಶಿಸಿದರು.
 
ಚಿಕ್ಕಮಗಳೂರು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಹರ್ಷಿತ್ ಮತ್ತು ಉಮೇಶ್ ವೇದಿಕೆಯಲ್ಲಿ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ, ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಚಿತ್ರ ಬಿಡಿಸಿ ವೇದಿಕೆ ಮೇಲಿದ್ದ ಪಂಡಿತಾರಾಧ್ಯಶ್ರೀಗೆ ಅರ್ಪಿಸಿದರು.  
 
ಗೊಂಬೆಯಾಟದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಾಗಿತ್ತು. ಆರಂಭದಲ್ಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ನಯನ ಮತ್ತು ರ್ವತಾ ವಚನಗೀತೆಗಳನ್ನು ಹಾಡಿದರು. ಶಿಕ್ಷಕರಾದ ಜಯಣ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT