ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಸಾಮರಸ್ಯ ಕುಸಿದರೆ ಉಳಿಗಾಲವಿಲ್ಲ

ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅಭಿಮತ
Last Updated 9 ಮಾರ್ಚ್ 2017, 6:52 IST
ಅಕ್ಷರ ಗಾತ್ರ
ಶಾಂತವೀರಸ್ವಾಮೀಜಿ ಪ್ರಧಾನ ವೇದಿಕೆ( ಗುರುಮಠಕಲ್): ‘ಸಮುದಾಯಗಳಲ್ಲಿನ ಸಾಮರಸ್ಯ ಮೂಡದ ಹೊರತು ಇಡೀ ಮಾನವಕುಲಕ್ಕೆ ಉಳಿಗಾಲವಿಲ್ಲ’ ಎಂದು ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.
 
ಸಮೀಪದ ಗುರುಮಠಕಲ್‌ನ ಖಾಸಾಮಠದ ಆವರಣದ ಶಾಂತವೀರ ಸ್ವಾಮೀಜಿ ಪ್ರಧಾನ ವೇದಿಕೆಯಲ್ಲಿ ಬುಧವಾರ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಮಾಜ ಮತ್ತು ಸಮುದಾಯಗಳಲ್ಲಿ ಸಾಮರಸ್ಯ ಮೂಡಿಸುವುದು ಸುಲಭವಲ್ಲ. ಮಹಾನ್‌ ದಾರ್ಶನಿಕರು ಇಂಥ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಕಾಯಕ ಮತ್ತು ಮನುಜಮತ ಪ್ರತಿಪಾದಿಸಿದ ಬಸವಣ್ಣ ಕೂಡ ಹರಿವ ಹಾವಿಗೆ ಅಂಜೆ, ಉರಿವ ನಾಲಿಗೆಗೆ ಅಂಜೆ, ಸುಲಿವ ಕತ್ತಿಗೆ ಅಂಜೆ...
 
ಆದರೆ, ಸಾಮರಸ್ಯ ಇಲ್ಲದ ಸಮುದಾಯಕ್ಕೆ ಅಂಜಬೇಕಯ್ಯ ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ ಬೇರನ್ನು ತೊಡೆದು ಹಾಕಲು ವಚನಕಾರರು, ಶರಣರು, ಆರೂಢ, ಅವಧೂತ ಪರಂಪರೆಗಳಲ್ಲೂ ಪ್ರಯತ್ನಗಳು ನಡೆದಿವೆ. ಆದರೂ ಜಾತಿ, ಮತ, ಪಂಥ, ಧರ್ಮದ ನೆಲೆಗಟ್ಟಿನಲ್ಲಿ ಒಡೆದು ಛಿದ್ರವಾಗುತ್ತಿರುವ ಮನಸ್ಸುಗಳು ಒಗ್ಗೂಡಿ ಅರಿವು ಪಡೆಯದ ಹೊರತು ಸಮಾಜಕ್ಕೆ ಕೇಡು ತಪ್ಪಿದ್ದಲ್ಲ’ ಎಂದು ಎಚ್ಚರಿಸಿದರು.
 
‘ನಾನು ಮಕ್ಕಳಿಗೆ ಹೇಳಬೇಕು ಎಂದು ಬಂದವನು. ಆದರೆ, ಹಸಿದುಕೊಂಡ ಮಕ್ಕಳು ಜಾಗ ಖಾಲಿ ಮಾಡಿದ್ದಾರೆ. ಸಂಘಟಕರು ಸಮಯ ಪಾಲನೆ ಮಾಡಿದ್ದರೆ ಮಕ್ಕಳು ಹೋಗುತ್ತಿರಲಿಲ್ಲ. ಅದರಲ್ಲೂ ಉರ್ದು ಶಾಲೆ ಮಕ್ಕಳು ಇಲ್ಲಿ ಬಂದದ್ದು ಕಂಡು ಸಂತಸವಾಗಿತ್ತು. ಆದರೆ, ಈಗ ಆ ಮಕ್ಕಳೂ ಸಹ ಇಲ್ಲವಾಗಿದ್ದಾರೆ ಎಂದ ಅವರು, ‘ಮನಸ್ಸು ಕಟ್ಟುವ ಕೆಲಸ ಮಕ್ಕಳಿಂದ ಆರಂಭವಾಗಬೇಕು. ಮಕ್ಕಳಲ್ಲಿ ಜಾತಿ, ಪಂಥ, ಧರ್ಮದ ಬಗ್ಗೆ ಕಲ್ಪನೆ ಇರುವುದಿಲ್ಲ.
 
ಮಕ್ಕಳ ನಿರ್ಮಲ ಮನಸ್ಸಿನ ಮೇಲೆ ನಾವುಗಳು ಪಂಗಡ, ಜಾತಿ, ಪಂಥದ ವಿಷಬೀಜಗಳನ್ನು ಬಿತ್ತಿ ಮಕ್ಕಳನ್ನು ವರ್ಗವರ್ಣಗಳನ್ನಾಗಿಸುತ್ತಿದ್ದೇವೆ. ಇಂಥ ಅನಾಹುತಕಾರಿಗಳ ಬಗ್ಗೆ ಮಕ್ಕಳು ಅರಿವು ಪಡೆಯಬೇಕು’ ಎಂದರು.
 
‘ಮನುಷ್ಯ–ಮನುಷ್ಯರಲ್ಲಿ ಪ್ರೀತಿ ಮೊಳೆಯಬೇಕು. ಕುಸಿಯುತ್ತಿರುವ ನೈತಿಕಮಟ್ಟವನ್ನು ಸುಧಾರಿಸುವಂತೆ ಮಾಡಬೇಕು. ಸಾಂಸ್ಕೃತಿಕ ನೆಲೆಗಟ್ಟು ಕಟ್ಟುವಂತಹ ಕೈಂಕರ್ಯವನ್ನು ಖಾಸಾಮಠ ಮಾಡುತ್ತಿದ್ದು, ಇತರ ಮಠಗಳು ಈ ಮಾದರಿಯನ್ನು ಅನುಸರಿಸಬೇಕು.

ದೇಶದ ಭವಿಷ್ಯ ಮಕ್ಕಳ ಹಾಗೂ ಯುವಕರ ಮೇಲೆ ನಿಂತಿದೆ. ಅವರಲ್ಲಿ ದೇಶ, ಭಾಷೆ, ಸಂಸ್ಕೃತಿ ಬಗ್ಗೆ ಬದ್ಧತೆ ಬೆಳೆಸಬೇಕು. ಮಕ್ಕಳ ಮನಸ್ಸಿಗೆ ಸಾಂಸ್ಕೃತಿಕ ಬದ್ಧತೆ ತುಂಬಿದಾಗ ಮಾತ್ರ ಸಮಾಜ, ಸಮುದಾಯಗಳಲ್ಲಿ ಉಂಟಾಗುತ್ತಿರುವ ಕಂದಕ, ಒಡಕು ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು’ ಎಂದು ಮಾರ್ಮಿಕವಾಗಿ ಹೇಳಿದರು.

ಸನ್ಮಾನಕ್ಕಾಗಿ ಕಾದು ಸುಸ್ತಾದ  ಕಲಾವಿದೆ...
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪಾರ್ವತಮ್ಮ ಇಡೀ ಸಮ್ಮೇಳನದುದ್ದಕ್ಕೂ ಕಾದರೂ ಒಬ್ಬರೂ ಮಾತನಾಡಿಸಲಿಲ್ಲ. ಹಿರಿಯ ಸಾಹಿತಿ ಗೋರುಚ ಸಮ್ಮೇಳನ ಉದ್ಘಾಟನೆ ಮಾಡಿದ ಮೇಲೆ ಉದ್ಘಾಟನೆಯ ಭಾಷಣಕ್ಕೂ ಅವಕಾಶ ಕೊಡದೇ ಗಂಟಗಟ್ಟಲೇ ಸನ್ಮಾನ ಸಮಾರಂಭ ನಡೆಯಿತು.
 
ಸನ್ಮಾನ ಮಾಡುವುದಾಗಿ ಕರೆತಂದಿದ್ದ ಕೌದಿ ಕಲಾವಿದೆಯನ್ನು ಯಾರೂ ಕರೆಯಲೇ ಇಲ್ಲ. ಪಾರ್ವತಮ್ಮ ಆಗಾಗ ವೇದಿಕೆ ಮುಂದೆ ಹೋಗಿ–ಬಂದು ಕೆಲಸ ಮಾಡಿದರೂ ಯಾರೂ ಗಮನಿಸಲಿಲ್ಲ. ಮಾಧ್ಯಮದವರು ಹೇಳುವವರೆಗೂ ಉದ್ಘಾಟಕರಿಗೆ ಮಾತನಾಡಲು ಅವಕಾಶ ಕೊಡದೇ ವೇದಿಕೆ ಸನ್ಮಾನಕ್ಕೆ ಬಳಕೆಯಾಯಿತು. ವಿಪರ್ಯಾಸ ಅಂದರೆ ಹಿರಿಯ ಕಲಾವಿದೆ ಸನ್ಮಾನಕ್ಕಾಗಿ ಸಂಜೆವರೆಗೂ ಚಾತಕ ಪಕ್ಷಿಯಂತೆ ಕಾದು ಕುಳಿತಿರಬೇಕಾಯಿತು!

ರೈತನಿಕ್ಕದಿರೆ ಬಿಕ್ಕುವುದು ಜಗವೆಲ್ಲಾ...
ಶಾಂತವೀರಸ್ವಾಮೀಜಿ ಪ್ರಧಾನ ವೇದಿಕೆ( ಗುರುಮಠಕಲ್): ‘ಜಿಲ್ಲೆಯಲ್ಲಿ ಭೀಮಾ ನದಿ ಹರಿಯುತ್ತಿದ್ದರೂ ಇಲ್ಲಿನ ಕೃಷಿಕರಿಗೆ ಸಮಗ್ರ ನೀರಾವರಿ ಕನಸಾಗಿದೆ. ಕೂಡಲೇ ಸರ್ಕಾರ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಿ ಕೃಷಿಕರ ಬದುಕನ್ನು ಸುಸ್ಥಿರ ಮತ್ತು ಸದೃಢಗೊಳಿಸ ಬೇಕು’ ಎಂದು ಯಾದಗಿರಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜ್ಞಾನೇಶ್ವರ ಸಂದೇನಕರ ಒತ್ತಾಯಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರ ಆಶಯ ನುಡಿ ಆಡಿದ ಅವರು,‘ಯಾದಗಿರಿ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ಹರಿಸಿ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಬೇಕು’ ಎಂದರು.

‘ರೈತರ ಕಡೆಗಣನೆಯಿಂದಾಗಿ ರೈತ ಆತ್ಮಹತ್ಯೆಗಳು ಹೆಚ್ಚುತ್ತಿವೆ. ರೈತನಿಕ್ಕಿದಕೆ ಉಕ್ಕುವುದು ಜಗವೆಲ್ಲಾ; ರೈತನಿಕ್ಕದಿರೆ ಬಿಕ್ಕುವುದು ಜಗವೆಲ್ಲಾ... ಎಂಬ ಸರ್ವಜ್ಞನ ನುಡಿಯಂತೆ ರೈತರ ಹಿತಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಬಿಕ್ಕದೇ ಬದುಕಿಲ್ಲ’ ಎಂದು ವಿಷಾದಿಸಿದರು.

‘ಯಾದಗಿರಿ ತಾಲ್ಲೂಕಿನಲ್ಲಿ 140ಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಮಳೆಯ ಸರಾಸರಿ ಪ್ರಮಾಣ ಕಡಿಮೆ ಇರುವುದ ರಿಂದ ಕೆರೆ ಅವಲಂಬಿತ ನೀರಾವರಿ ಕುಂಠಿತಗೊಂಡಿದೆ. ಸಣ್ಣ ಹಿಡುವಳಿದಾ ರರು ಪರದಾಡುವಂತಾ ಗಿದೆ. ಕೆಲವು ಜಲಾಶಯ, ಬ್ಯಾರೇಜುಗಳು ನಿರ್ಮಾಣ ಗೊಂಡಿವೆಯಾದರೂ ಕೆಲಭಾಗಕ್ಕೆ ಮಾತ್ರ ಉಪಯೋಗ ವಾಗುತ್ತಿವೆ. ಇದರಿಂದ ರೈತರಿಗೆ ತೃಪ್ತಿ ಇಲ್ಲ’ ಎಂದರು.

‘ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ರೈತರ ಮಹತ್ವವನ್ನು ಎತ್ತಿಹಿಡಿಯಬೇಕು. ಈ ಭಾಗದಲ್ಲಿ ಜವಳಿ ಪಾರ್ಕ್, ರೈಲುಬೋಗಿ ನಿರ್ಮಾಣ ಕಾರ್ಖಾನೆ, ಬಸ್‌ ತಯಾರಿಕಾ ಘಟಕ ಸ್ಥಾಪನೆಯಾಗಿವೆಯಾದರೂ ಸ್ಥಳೀಯ ಯುವ ಪೀಳಿಗೆಗೆ ಹೆಚ್ಚಿನ ಉದ್ಯೋಗ ನೀಡುವ ಬೃಹತ್‌ ಮಧ್ಯಮ ಕೈಗಾರಿಕೆಗಳನ್ನು ಈ ಭಾಗದಲ್ಲಿ ಸರ್ಕಾರ  ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮಠಗಳು ಜನಸೇವೆ ನೀಡುವ ಗದ್ದುಗೆಗಳಾಗಲಿ: ಗೊರುಚ
ಯಾದಗಿರಿ: ರಾಜ್ಯದಲ್ಲಿರುವ ಮಠಗಳು ಪೂಜೆ, ಪುನಸ್ಕಾರಗಳ ಗದ್ದುಗೆಗಳಾಗದೇ ಜನಸೇವೆ ಮಾಡುವ ಗದ್ದುಗೆಯಾಗಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು.

ಸಮೀಪದ ಗುರುಮಠಕಲ್‌ನ ಖಾಸಾಮಠದಲ್ಲಿ ಬುಧವಾರ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಜಾತಿ, ಪಂಥ, ಧರ್ಮಗಳ ಕರಿನೆರಳಿನಲ್ಲಿ ಜಾತ್ಯತೀತ ಮನೋಧರ್ಮ ಛಿದ್ರಗೊಂಡಿದೆ. ಇದರಿಂದಾಗಿ ಅಖಂಡ ಭಾರತದ ಕನಸು ಹಗಲುಗನಸಿನಂತಾಗಿದೆ. ಜಾತ್ಯತೀತ ಕೈಂಕರ್ಯ ಕಣ್ಮರೆಯಾಗಿದೆ. ಮುಗ್ಧ ಮಕ್ಕಳ ಮನೋಭೂಮಿಕೆ ಮೇಲೆ ಜಾತಿಬೀಜಗಳನ್ನು ಬಿತ್ತಲಾಗುತ್ತಿದೆ.

ಇದರಿಂದ ಮುಗ್ಧ ಮಕ್ಕಳಲ್ಲೂ ಜಾತಿ ವೈಷಮ್ಯ ಬೆಳೆಯುತ್ತಿದೆ. ಜಾತಿವರ್ಗಗಳನ್ನು ಮೀರಿ ರಾಜ್ಯದಲ್ಲಿನ ಮಠಗಳು ಜನಾನುರಾಗಿಯಾಗಿ ಸಮುದಾಯ ಸಾಮರಸ್ಯ ಬೆಳೆಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಅಧಿಕಾರ ಎಂಬುದು ಒಂದು ಅವಕಾಶ. ಅಧಿಕಾರ ಸಿಕ್ಕಾಗ ಅದನ್ನು ಸಮಾಜದ ಒಳಿತಿಗೆ ಬಳಸಿದರೆ ಜನ ಎಂದೂ ನಿಮ್ಮನ್ನು ಮರೆಯುವುದಿಲ್ಲ. ಜನ ಮರೆತರೂ ಸೇವಾಕೈಂಕರ್ಯ ಮಾಡಿದ ಆತ್ಮತೃಪ್ತಿ ಸದಾ ಇರುತ್ತದೆ ಎಂದು ಅವರು ಪರೋಕ್ಷವಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಬಾಬುರಾವ್ ಚಿಂಚಿನಸೂರ್ ಅವರಿಗೆ ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷರ ಬೇಡಿಕೆಗಳು
- ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ನಡೆಯಬೇಕು
- ಗಡಿ ಭಾಗದ ಕನ್ನಡ ಶಾಲೆಗಳಿಗೆ ಪೂರ್ಣ ಶಿಕ್ಷಕ ವರ್ಗ, ಪಾಠೋಪಕರಣ, ಪೀಠೋಪಕರಣ, ಸುಸಜ್ಜಿತ ಕಟ್ಟಡಕ್ಕೆ ಅನುದಾನ ನೀಡಬೇಕು.
- ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ ನಿರ್ಮಿಸಬೇಕು.
- ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು.
- ಸ್ಥಳೀಯ ಗ್ರಂಥಾಲಯಗಳಿಗೆ ಸ್ಥಳೀಯ ಸಾಹಿತಿಗಳ ಹೆಚ್ಚೆಚ್ಚು ಪುಸ್ತಕಗಳನ್ನು ಖರೀದಿಸಬೇಕು.
- ಗಡಿಭಾಗದಲ್ಲಿ ಕನ್ನಡ ಭಾಷಾ ಬಾಂಧವ್ಯ ಮೂಡಿಸುವ ಕನ್ನಡಪರ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಬೇಕು.
- ಎಲ್ಲಾ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಯಿಸಲು ಜಾಗೃತಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT