ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟುಸಿರು ಬಿಟ್ಟರು ಅರಸನಹಳ್ಳಿ ಪ್ರಜೆಗಳು

ಒಂದೂವರೆ ವರ್ಷದ ಸಮಸ್ಯೆಗೆ ಇತಿಶ್ರೀ ಹಾಡಿದ ಜಿಲ್ಲಾಡಳಿತ, ಫಲ ನೀಡಿತು ‘ಪ್ರಜಾವಾಣಿ’ ಪ್ರಯತ್ನ
Last Updated 9 ಮಾರ್ಚ್ 2017, 7:48 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಜಾಗ ಒತ್ತುವರಿ ವಿವಾದ ಮತ್ತು ಸ್ಥಳೀಯ ‘ರಾಜಕೀಯ’ ಪಿತೂರಿಯಿಂದ ಕಳೆದ ಒಂದೂವರೆ ವರ್ಷದಿಂದ ಮಡುಗಟ್ಟಿ ನಿಂತ ಚರಂಡಿಗಳಿಂದಾಗಿ ಗಬ್ಬೆದ್ದು ನಾರುತ್ತಿದ್ದ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸನಹಳ್ಳಿಯ ತ್ಯಾಜ್ಯ ನೀರಿನ ವ್ಯಾಜ್ಯಕ್ಕೆ ಜಿಲ್ಲಾಡಳಿತ ಬುಧವಾರ ಇತಿಶ್ರೀ ಹಾಡಿತು.
 
ಅರಸನಹಳ್ಳಿಗೆ ಒದಗಿದ್ದ ದುರ್ಗತಿ ಕುರಿತಂತೆ ‘ಪ್ರಜಾವಾಣಿ’ ಫೆಬ್ರುವರಿ 4, 5 ಮತ್ತು ಬುಧವಾರ (ಮಾ.8) ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಅರಸನಹಳ್ಳಿಗೆ ದೌಡಾಯಿಸಿದ್ದರು. 
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್‌ ಮೋಹನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಶಂಕರ್‌, ನಂದಿ ಗಿರಿಧಾಮ ಠಾಣೆ ಎಸ್‌ಐ ಸಂದೀಪ್‌, ನಂದಿ ಹೋಬಳಿಯ ಕಂದಾಯ ಅಧಿಕಾರಿಗಳಿಗೆ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್‌ ಹಾಗೂ ಗ್ರಾಮಸ್ಥರು ಸಾಥ್‌ ನೀಡಿದರು. 
 
ಒತ್ತುವರಿ ತೆರವು : ಗ್ರಾಮದ ಹೌಸ್‌ಲಿಸ್ಟ್‌ ನಂಬರ್ 97ರಲ್ಲಿ ಎ.ನಂಜಪ್ಪ ಎಂಬುವರಿಗೆ ಗ್ರಾಮ ಪಂಚಾಯಿತಿ ವತಿಯಿಂದ 30x35 ಜಾಗ ನೀಡಲಾಗಿತ್ತು. ಆ ಜಾಗದಲ್ಲಿ ಮನೆ ಕಟ್ಟಿಸಿಕೊಂಡಿರುವ ಅವರು ಪಕ್ಕದಲ್ಲಿಯೇ ಇರುವ ವೆಂಕಟರಾಮ್ ಎಂಬುವರಿಗೆ ಸೇರಿದ ಸರ್ವೆ ನಂಬರ್ 71/4ರಲ್ಲಿ ಸುಮಾರು ಐದಾರು ಅಡಿಗಳಷ್ಟು ಜಾಗ ಒತ್ತುವರಿ ಮಾಡಿಕೊಂಡಿದ್ದು ಈ ಸಮಸ್ಯೆ ಉದ್ಭವಿಸಲು ಕಾರಣವಾಗಿತ್ತು.

ಅಧಿಕಾರಿಗಳು ಬುಧವಾರ ನಿವೇಶನದ ಅಳತೆ ಮಾಡಲು ಮುಂದಾದಾಗ ಅದಕ್ಕೆ ಆಕ್ಷೇಪ ಮಾಡಿದ ನಂಜಪ್ಪ ನನಗೆ ಇಲ್ಲಿ 40x50 ಅಡಿ ನಿವೇಶನ ನೀಡಲಾಗಿದೆ ಎಂದು ವಾದಿಸಿದರು. ನಮಗೆ ಈ ನಿವೇಶನ ಕೊಡಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸ್ಥಳಕ್ಕೆ ಬರುವ ವರೆಗೆ ಇಲ್ಲಿ ಏನು ಮಾಡಕೂಡದು ಎಂದು ಹಟ ಹಿಡಿದರು. ಇದರಿಂದ ಕೆರಳಿದ ಮಂಜುನಾಥ್. 

‘ಊರಿನಲ್ಲಿ ಜನ ಸಾಯುತ್ತಿದ್ದರೂ ನೋಡುತ್ತ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ನಿಮ್ಮ ಬಳಿ ಜಾಗಕ್ಕೆ ಸಂಬಂಧಿತ ದಾಖಲೆಗಳಿದ್ದರೆ ತನ್ನಿ ಪರಿಶೀಲಿಸೋಣ. ನಿಮ್ಮಿಂದಾಗಿ ಇಡೀ ಊರಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇವತ್ತು ಈ ಸಮಸ್ಯೆ ಬಗೆಹರಿಸಲೇಬೇಕು. ಇದಕ್ಕೆ ಅಡ್ಡಿಪಡಿಸಿದರೆ ನಿಮ್ಮ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 
 
ಬಳಿಕ ಪಿಡಿಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಂಜಪ್ಪ ಅವರಿಗೆ ನೀಡಿದ ನಿವೇಶನದ ಅಳತೆ ಮಾಡಿ, ಕಲ್ಲು ನೆಟ್ಟರು. ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ನಂಜಪ್ಪ ಅವರು ಹಾಕಿದ್ದ ದನಕರು ಕಟ್ಟುವ ಶೆಡ್‌ನ್ನು ಗ್ರಾಮಸ್ಥರು ಕಿತ್ತು ಹಾಕಿದರು. ಜತೆಗೆ ಹುಲ್ಲಿನ ಬಣವೆಯನ್ನು ಸ್ಥಳಾಂತರಿಸಿದರು. ಇಷ್ಟಾಗುತ್ತಿದ್ದಂತೆ ಅಧಿಕಾರಿಗಳು ಎರಡು ಜೆಸಿಬಿಗಳನ್ನು ಬಳಸಿ ಒತ್ತುವರಿ ಜಾಗದಲ್ಲಿ ಹಾಕಿದ್ದ ಕಲ್ಲುಗಳನ್ನು ತೆರವುಗೊಳಿಸಿದರು. 
 
ಬಳಿಕ ಸರ್ವೆ ನಂಬರ್ 71/4ರಲ್ಲಿ ಗ್ರಾಮದ ತ್ಯಾಜ್ಯ ನೀರನ್ನು ಊರಾಚೆ ಸಾಗಿಸುವ ಚರಂಡಿ ಮಾರ್ಗ ತೋಡುವ ಕೆಲಸ ಆರಂಭಗೊಂಡಿತು. ಈ ವೇಳೆ ಜಾಗದ ಮಾಲೀಕ ವೆಂಕಟರಾಮ್‌ ಅವರು, ‘ಊರಿಗೆ ಈ ಸ್ಥಿತಿ ಬರಲು ನಾವೇ ಕಾರಣ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಸತ್ಯ ಏನು ಎನ್ನುವುದು ಇವತ್ತು ಜನರಿಗೆ ತಿಳಿದಿದೆ.

ಈಗಲೂ ಸಹ ನಾವು ಊರಿನ ಒಳಿತಿಗಾಗಿ ನಮ್ಮ ಸ್ವಂತ ಜಮೀನಿನಲ್ಲಿ ಚರಂಡಿ ನಿರ್ಮಿಸಲು ಜಾಗ ನೀಡುತ್ತಿದ್ದೇವೆ. ಆದರೆ ಅದು ಗ್ರಾಮಸ್ಥರಿಗೆಲ್ಲ ತಿಳಿಯಬೇಕು. ಅದಕ್ಕಾಗಿ ಗುರುವಾರ ಗ್ರಾಮಸ್ಥರು ಸಭೆ ಸೇರಲಿ. ಆ ಸಭೆಯಲ್ಲಿಯೇ ನಾವು ಜಾಗ ನೀಡುವ ವಿಚಾರವನ್ನು ಘೋಷಿಸಿ, ಬಾಂಡ್‌ ಬರೆದುಕೊಡುತ್ತೇವೆ’ ಎಂದು ಹೇಳಿ, ಚರಂಡಿ ಮಾರ್ಗ ತೋಡುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೋರಿದರು. ಅದಕ್ಕೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಮ್ಮತಿಸಿದರು. 

ತುಂಬಾ ಬಾಧೆ ಬಿದ್ವಿ
ಮಳೆ ಸುರಿದರೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ಮೈ ಜುಮ್ಮೆನಿಸುತ್ತಿತ್ತು. ಚರಂಡಿಗಳಲ್ಲಿ, ಸಂಪ್‌ಗಳಲ್ಲಿ ಹುಳುಗಳು ಹರಿದಾಡುತ್ತಿದ್ದವು. ವಾಸನೆಯಂತೂ ಮಿತಿ ಮೀರಿತ್ತು. ಹೀಗಾಗಿ ತುಂಬಾ ಬಾಧೆ ಬಿದ್ವಿ. ಅನೇಕ ಬಾರಿ ಅಧಿಕಾರಿಗಳು ಭೇಟಿ ನೀಡಿದರೂ ಏನೂ ಆಗಿರಲಿಲ್ಲ.
ಚಿಕ್ಕ ವೆಂಕಟಮ್ಮ, ಅರಸನಹಳ್ಳಿ ನಿವಾಸಿ

‘ಪ್ರಜಾವಾಣಿ’ಗೆ ಥ್ಯಾಕ್ಸ್
ವರ್ಷಾನುಗಟ್ಟಲೇ ಊರೆಲ್ಲ ವಾಸನೆ ಹೊಡೆ ಯುತ್ತಿತ್ತು. ಮಳೆ ಸುರಿದರೆ ಚರಂಡಿ ಒಳಗಿನ ಹೊಲ ಸೆಲ್ಲ ರಸ್ತೆ ಹರಿದು ಅಸಹ್ಯಕರ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇತ್ತೀಚೆಗೆ ನನ್ನ ಚಿಕ್ಕ ಮಗಳು ಚರಂಡಿಯಲ್ಲಿ ಬಿದ್ದು ಒಂದು ವಾರ ಸುಧಾರಿಸಿಕೊಂಡ ಬಳಿಕವಂತೂ ಶಾಪ ಹಾಕಿದ್ದು ಲೆಕ್ಕಕ್ಕಿಲ್ಲ. ಇವತ್ತು ಈ ಸಮಸ್ಯೆಗೆ ಮುಕ್ತಿ ದೊರೆತದ್ದು ಖುಷಿಯಾಗಿದೆ. ಅದಕ್ಕಾಗಿ ‘ಪ್ರಜಾವಾಣಿ’ಗೆ ಥ್ಯಾಕ್ಸ್‌ ಹೇಳುತ್ತೇನೆ.
ಸುಧಾರಾಣಿ, ಅರಸನಹಳ್ಳಿ ನಿವಾಸಿ

ತುಂಬಾ ಕಷ್ಟ ಬಿದ್ದೆ
ಈ ಊರಿನ ಸಮಸ್ಯೆ ಬಗೆಹರಿಸಲೇ ಬೇಕು ಎಂದು ಹಟಕ್ಕೆ ಬಿದ್ದವನಂತೆ ತಿರುಗಾಡಿದ್ದೇನೆ. ಅನೇಕ ಬಾರಿ ಬೆಳಿಗ್ಗೆ 6 ಗಂಟೆಯ ಹೊತ್ತಿನಲ್ಲಿ ಊರೆಲ್ಲ ಸುತ್ತಿ ಮನೆ ಮನೆಗೆ ಹೋಗಿ ಜನರ ಸಹಕಾರ ಕೋರಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಅನೇಕ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಯಾವುದೇ ಗದ್ದಲವಿಲ್ಲದೆ ಸಮಸ್ಯೆ ಬಗೆಹರಿದಿರುವುದು ನೆಮ್ಮದಿ ತಂದಿದೆ.
ನಟರಾಜ್‌, ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT