ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಸಬಲವಾದರೆ ಸಮಾಜದ ಪ್ರಗತಿ

ವಿವಿಧ ಸ್ವಸಹಾಯ ಸಂಘಗಳು, ಕೊಡವ ಸಮಾಜದಿಂದ ಮಹಿಳಾ ದಿನಾಚರಣೆ; ಶಾಸಕ ಕೆ.ಜಿ. ಬೋಪಯ್ಯ
Last Updated 9 ಮಾರ್ಚ್ 2017, 8:40 IST
ಅಕ್ಷರ ಗಾತ್ರ
ವಿರಾಜಪೇಟೆ:  ಮಹಿಳೆಯರು ಸಬಲರಾದರೆ ಮಾತ್ರ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
 
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ  ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪುರಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಕುಟುಂಬ ಉದ್ಧಾರವಾದರೆ ಸಮಾಜ ದೇಶ ಉದ್ಧಾರವಾಗುತ್ತದೆ. ಮಹಿಳೆಯರ ಉನ್ನತಿಗಾಗಿ  ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಮಧ್ಯವರ್ತಿಗಳ ಸಹಾಯವಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಶಿಶು, ಕಿಶೋರ್, ತರುಣ್ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಅವರು ಸಲಹೆ ನೀಡಿದರು.
 
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಖ್ತರ್‌  ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಬಲರಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಸಬಲರಾಗುವುದರೊಂದಿಗೆ ಮಾನಸಿಕವಾಗಿ ಸಿದ್ಧಗೊಂಡರೆ ಸಮಾಜದಲ್ಲಿ ಮುಂದುವರಿಯಲು ಸಾಧ್ಯ ಎಂದರು.
 
ವೇದಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಉಪಸ್ಥಿತರಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಗ್ರಾಮ ಯೋಜನೆಯ ಸ್ವಸಹಾಯ ಸಂಘಗಳಿಗೆ ರಂಗೋಲಿ ಹಾಗೂ ಪುಷ್ಪಗುಚ್ಛ ರಚನೆಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿರಾಜಪೇಟೆ ವಲಯದ ಯೋಜನಾಧಿಕಾರಿ ಸದಾನಂದಗೌಡ ಸ್ವಾಗತಿಸಿದರು. ಸಪ್ನಾ ಕಾರ್ಯಕ್ರಮ ನಿರೂಪಿಸಿದರು. ಚೇತನ್  ವಂದಿಸಿದರು.
 
ಮಹಿಳೆ ರಕ್ಷಣೆಗೆ ಬಲಿಷ್ಠ ಕಾನೂನು ಅಗತ್ಯ
ವಿರಾಜಪೇಟೆ:  ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರದಂತಹ ಪ್ರಕರಣಗಳು ಮಹಿಳೆಯರ ಧೈರ್ಯ ಕುಂದುವಂತೆ  ಮಾಡಿವೆ ಎಂದು ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅಭಿಪ್ರಾಯಪಟ್ಟರು.
 
ಅಖಿಲ ಕೊಡವ ಪೊಮ್ಮಕ್ಕಡ ಪರಿಷತ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಲ್ಲಿನ ಅಖಿಲ ಕೊಡವ ಸಮಾಜದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಗೌರವಕ್ಕೆ ಅರ್ಹಳಾಗಿರುವ ಮಹಿಳೆಯರ ರಕ್ಷಣೆಗೆ ನಮ್ಮ ದೇಶದಲ್ಲಿ ಕಾನೂನುಗಳು ಮತ್ತಷ್ಟು ಬಿಗಿಯಾಗಬೇಕು. ಸ್ತ್ರೀಯಲ್ಲಿ ಅಕ್ಕ, ತಂಗಿ, ತಾಯಿಯ ಸ್ವರೂಪ ಕಾಣುವುದರ ಮೂಲಕ ಮನುಷ್ಯರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಮಹಿಳೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
 
ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಇಟ್ಟೀರ ಬಿದ್ದಪ್ಪ ಮಾತನಾಡಿ, ಮಹಿಳೆಯರು  ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಹಿಂದೆ ಮಹಿಳೆಯರ ಶ್ರಮವಿದೆ. ಹಿಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶಾರೀರಿಕವಾಗಿ ಮಹಿಳೆಯರನ್ನು ಅಬಲೆ ಎನ್ನುವ ಸಾಧ್ಯತೆ ಇದ್ದಿರಬಹುದಾದರೂ ಕೊಡಗಿನಲ್ಲಿ ಅದರ ತೀವ್ರತೆ ಬಹಳ ಕಡಿಮೆ. ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ದೇಶ ಹಾಗೂ ನಾಡಿಗಾಗಿ ಸೇವೆಗೈದ ಅನೇಕ ಮಹಿಳಾ ಮಣಿಗಳ ಬಗ್ಗೆ ಸಾಕಷ್ಟು ಉಲ್ಲೇಖಗಳು ಲಭ್ಯವಾಗುತ್ತದೆ ಎಂದರು.
 
ಪೊಮ್ಮಕ್ಕಡ ಪರಿಷತ್‌ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ, ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ಅಳಮೇಂಗಡ ದೇವಮ್ಮಾಜಿ ತಮ್ಮಯ್ಯ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಉಳುವಂಗಡ ಕಾವೇರಿ ಉದಯ ಮಾತನಾಡಿದರು.
 
ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ಅಳಮೇಂಗಡ ದೇವಮ್ಮಾಜಿ ಅವರನ್ನು ಪರಿಷತ್‌ನಿಂದ ಸನ್ಮಾನಿಸಲಾಯಿತು. ಪೂವಿ ಮುತ್ತಪ್ಪ ಸ್ವಾಗತಿಸಿದರು. ಮಂಡೇಪಂಡ ಗೀತಾ ಮಂದಣ್ಣ ನಿರೂಪಿಸಿದರು. ಕೇಚೆಟ್ಟಿರ ಕಾಮುಣಿ ಪೂಣಚ್ಚ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಟಿ. ಶೆಟ್ಟಿಗೇರಿಯ ಸಂಗಮ ಮಹಿಳಾ ಸಮಾಜದ ಸದಸ್ಯರಿಂದ ಉಮ್ಮತ್ತಾಟ್ ಪ್ರದರ್ಶನ ನಡೆಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT