ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥಾಶ್ರಮಕ್ಕೆ ಬಿಪಿಎಲ್‌ ದರದಲ್ಲಿ ಪಡಿತರ

ಶಿಫಾರಸು ಮಾಡಲು ವಿಧಾನಮಂಡಲ ಸಮಿತಿ ನಿರ್ಣಯ
Last Updated 9 ಮಾರ್ಚ್ 2017, 9:59 IST
ಅಕ್ಷರ ಗಾತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಲ್ಲಿರುವ 51 ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ನೀಡುವ ದರದಲ್ಲಿ ಅಗತ್ಯ ಪ್ರಮಾಣದ ಪಡಿತರ ವಸ್ತುಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ವಿಧಾನ ಮಂಡಲದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತೀರ್ಮಾನಿಸಿದೆ.
 
ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಮಿತಿಯ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್‌  ಪ್ರಸ್ತಾಪಿಸಿದರು. ಈ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಬಿಪಿಎಲ್‌ ಕುಟುಂಬಗಳಿಗೆ ಪೂರೈಸುವ ದರದಲ್ಲಿ ಪಡಿತರ ವಿತರಿಸುತ್ತಿರುವುದರಿಂದ ಹೊರೆಯಾಗುತ್ತಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಬಿಪಿಎಲ್‌ ಕುಟುಂಬಗಳಿಗೆ ನಿಗದಿ ಮಾಡಿರುವ ದರದಲ್ಲಿ ಪಡಿತರ ಪೂರೈಸಬೇಕು. ಆರು ತಿಂಗಳಿಗೊಮ್ಮೆ ಪಡಿತರ ಹಂಚಿಕೆ ವ್ಯವಸ್ಥೆಯ ಬದಲಿಗೆ ಪ್ರತಿ ತಿಂಗಳು ಪೂರೈಸಬೇಕು ಎಂದು ಮನವಿ ಮಾಡಿದರು.
 
ಈ ಬಗ್ಗೆ ಸಮಿತಿಗೆ ವಿವರ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಎ.ಟಿ.ಜಯಪ್ಪ, ಕೇಂದ್ರ ಸರ್ಕಾರ ಪೂರೈಸುವ ದರದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪಡಿತರ ಒದಗಿಸಲಾಗುತ್ತಿದೆ.

2016ರಲ್ಲಿ ಮೂರು ತಿಂಗಳಿಗೊಮ್ಮೆ ಮಾತ್ರ ವಿತರಿ ಸಿದ್ದು, ನಂತರ ಹಂಚಿಕೆಯೇ ಆಗಿಲ್ಲ ಎಂದರು. ರಾಜ್ಯ ಸರ್ಕಾರ ನಿಗದಿ ಮಾಡಿರುವ ದರದಲ್ಲೇ ಈ ಸಂಸ್ಥೆಗಳಿಗೆ ಪ್ರತಿ ತಿಂಗಳು ಪಡಿತರ ವಿತರಿಸುವಂತೆ ಶಿಫಾ ರಸು ಮಾಡುವುದಾಗಿ ಸಮಿತಿಯ ಅಧ್ಯಕ್ಷ ಜೆ.ಆರ್‌.ಲೋಬೊ ಪ್ರಕಟಿಸಿದರು.
 
ನೋಡಲ್‌ ಅಧಿಕಾರಿಗಳ ನೇಮಕ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ  ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಹಲವು ವಿದ್ಯಾರ್ಥಿಗಳು ಅನುತ್ತೀ ರ್ಣರಾಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಮಿತಿಯ ಸದ ಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲ ಯಗಳಿಗೆ ಜಿಲ್ಲಾ ಮಟ್ಟದಿಂದ ನೋಡಲ್‌ ಅಧಿಕಾರಿಗಳನ್ನು ನೇಮಿಸುವಂತೆ ಸಮಿ ತಿಯು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನಿರ್ದೇಶನ ನೀಡಿತು.
 
ಹಿಂದುಳಿದ ವರ್ಗಗಳ 43 ಬಾಲ ಕಿಯರ ವಸತಿ ನಿಲಯಗಳ ಪೈಕಿ ಮೂರಕ್ಕೆ ಮಾತ್ರ ಮಹಿಳಾ ಮೇಲ್ವಿಚಾರ ಕರಿರುವುದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪ ಡಿಸಿತು. ಬಾಲಕಿಯರ ಎಲ್ಲ ವಸತಿ ನಿಲಯಗಳ ಮೇಲ್ವಿಚಾರಕರ ಹುದ್ದೆಗೆ ಇತರೆ ಇಲಾಖೆಗಳ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಮತ್ತು ಪ್ರತಿ ವಸತಿ ನಿಲಯಕ್ಕೆ ಒಬ್ಬ ಶುಶ್ರೂಷಕಿಯನ್ನು ನಿಯೋಜನೆ ಮಾಡುವಂತೆ ನರೇಂದ್ರ ಸ್ವಾಮಿ ಸೂಚನೆ ನೀಡಿದರು.
 
ವಕ್ಫ್‌ ಆಸ್ತಿಗಳ ಸರ್ವೆ: ಜಿಲ್ಲೆಯಲ್ಲಿ 1,374 ವಕ್ಫ್‌ ಆಸ್ತಿಗಳಿವೆ. ಈ ಪೈಕಿ 685 ಆಸ್ತಿಗಳ ಭೂಮಾಪನ ಪ್ರಕ್ರಿಯೆ ಬಾಕಿ ಇತ್ತು. ಅದನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿದ್ದು, ವಕ್ಫ್‌ ಆಸ್ತಿಗಳ ಪಟ್ಟಿಯನ್ನು ವಕ್ಫ್‌ ಇಲಾಖೆ ಪ್ರಕಟಿಸಿದೆ. ಈ ಪೈಕಿ 2 ಎಕರೆ 42 ಸೆಂಟ್ಸ್‌ ವಿಸ್ತೀರ್ಣದ ಮೂರು ಆಸ್ತಿಗಳ ಒತ್ತುವರಿ ನಡೆದಿದೆ. ಅದನ್ನು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಕ್ಫ್‌ ಅಧಿಕಾರಿಗಳು ಸಭೆಗೆ ತಿಳಿಸಿದರು.
 
ದಕ್ಷಿಣ ಕನ್ನಡ ಜಿಲ್ಲೆಯ 422 ಗ್ರಾಮ ಗಳ ಪೈಕಿ 407 ಗ್ರಾಮಗಳಲ್ಲಿ ಸ್ಮಶಾನಗಳು ಲಭ್ಯ. ಮಂಗಳೂರು ನಗರದ ಹೊರವಲ ಯದಲ್ಲಿರುವ 15 ಗ್ರಾಮಗಳಲ್ಲಿ ಸ್ಮಶಾ ನಕ್ಕೆ ಜಮೀನಿನ ಕೊರತೆ ಇದೆ. ಎರಡು ವರ್ಷಗಳ ಅವಧಿಯಲ್ಲಿ 52 ಪ್ರಕರಣ ಗಳಲ್ಲಿ 58 ಎಕರೆ ಜಮೀನನ್ನು ಸ್ಮಶಾನ ಕ್ಕಾಗಿ ಮಂಜೂರು ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
 
ಸಮಿತಿಯ ಸದಸ್ಯರಾದ ಪಿ.ಎಂ. ನರೇಂದ್ರಸ್ವಾಮಿ, ಎಸ್‌.ಅಂಗಾರ, ಬಿ.ಜಿ. ಪಾಟೀಲ್‌, ಯು.ಬಿ.ಬಣಕಾರ, ಕೆ.ಎಂ. ತಿಮ್ಮರಾಯಪ್ಪ, ಶಾರದಾ ಪೂರ್‍ಯಾ ನಾಯ್ಕ, ಸತೀಶ್ ಸೈಲ್, ಎಂ.ಡಿ.ಲಕ್ಷ್ಮೀ ನಾರಾಯಣ, ಸೈಯದ್‌ ಮುದೀರ್ ಆಗಾ, ಅಬ್ದುಲ್ ಜಬ್ಬಾರ್, ಸುನೀಲ್‌ ಸುಬ್ರಮಣಿ, ಕಾರ್ಯದರ್ಶಿ ಮಲ್ಲಪ್ಪ ಕಾಳೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಉಪಾಧ್ಯಕ್ಷೆ  ಕಸ್ತೂರಿ ಪಂಜ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಪೊಲೀಸ್ ಕಮಿಷನರ್‌ ಎಂ.ಚಂದ್ರಶೇಖರ್, ಎಸ್‌ಪಿ ಭೂಷಣ್‌ ಜಿ.ಬೊರಸೆ, ಹೆಚ್ಚುವರಿ ಜಿಲ್ಲಾ ಧಿಕಾರಿ ಕುಮಾರ, ಡಿಸಿಪಿ ಕೆ.ಎಂ. ಶಾಂತರಾಜು ಸೇರಿದಂತೆ ವಿವಿಧ ಇಲಾ ಖೆಗಳ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

ಒಬ್ಬ ರೈತನ ಆತ್ಮಹತ್ಯೆ ಸಾಬೀತು
ಜಿಲ್ಲೆಯಲ್ಲಿ ಈ ವರ್ಷ ಸಾಲದ ಬಾಧೆ ತಾಳಲಾರದೇ ನಾಲ್ಕು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಜಿಲ್ಲಾ ಮಟ್ಟದ ಸಮಿತಿ ವಿಚಾರಣೆ ನಡೆಸಿದ್ದು, ಮೂರು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಒಂದು ಪ್ರಕರಣವನ್ನು ಪುರಸ್ಕರಿಸಿದ್ದು, ಮೃತನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT