ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೆಂಬ ತಾತ್ಸಾರದ ಮನೋಭಾವ ಬದಲಾಗಲಿ

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆಶಯ l ಸ್ವಾವಲಂಬಿ ರಾಷ್ಟ್ರ: ಮಹಿಳೆಯರ ಪಾತ್ರ ಪ್ರಮುಖ
Last Updated 9 ಮಾರ್ಚ್ 2017, 10:10 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ‘ಹೆಣ್ಣು ಮಗು ಬೇಡವೆನ್ನುವ ಮನೋ ಧೋರಣೆಯಿಂದಾಗಿ ದೇಶದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತ  ವ್ಯತ್ಯಾಸವಾಗುತ್ತಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು.
 
ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಮಹಿಳಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 
ಪ್ರಪಂಚದ ಯಾವ ದೇಶಗಳಲ್ಲೂ ಮಹಿಳೆಯರಿಗೆ ಇಲ್ಲದ ಗೌರವ ಸ್ಥಾನಮಾನವನ್ನು ನಮ್ಮ ದೇಶದಲ್ಲಿ ನೀಡಲಾಗಿದೆ. ದೇಶದಲ್ಲಿ ಚುನಾವಣೆ ಪ್ರಾರಂಭವಾದ ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಮತದಾನ ಹಕ್ಕು ನೀಡಲಾಯಿತು. ಈ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇರಲಿಲ್ಲ. ದೇಶವನ್ನು ತಾಯಿ ಎಂದು ಕರೆದ ಜನಾಂಗ ಇದ್ದರೆ ಅದು ಭಾರತದಲ್ಲಿ ಮಾತ್ರ ಎಂದರು.
 
ದೇಶದಲ್ಲಿಯೇ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ 30 ಮೀಸಲಾತಿ ನೀಡಿದ ಕೀರ್ತಿ ನಮ್ಮ ರಾಜ್ಯಕ್ಕೆ ಸಲ್ಲುತ್ತದೆ. ಮೀಸಲಾತಿ ನೀಡದಿದ್ದರೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ. ಮಹಿಳೆಯರಿಗೆ ನಮ್ಮ ದೇಶದಲ್ಲಿ ಅತ್ಯಂತ ಗೌರವ ಸ್ಥಾನ ನೀಡಿದ್ದೇವೆ. ತಾಯಿಯ ಸ್ಥಾನದಲ್ಲಿ ಮಹಿಳೆಯನ್ನು ಪೂಜನೀಯವಾಗಿ ಕಾಣುತ್ತೇವೆ ಎಂದು ತಿಳಿಸಿದರು.
 
ಮಹಿಳೆಯರ ಸಂಖ್ಯೆ ಪುರುಷರಿಗೆ ಸರಿ ಸಮಾನವಾಗಿಲ್ಲದಿರುವುದು ಬೇಸರದ ಸಂಗತಿ. ನಮ್ಮ ದೇಶದ ಲಿಂಗಾನುಪಾತವನ್ನು ನೋಡಿದಾಗ ಯಾವುದೇ ರಾಜ್ಯದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಇಲ್ಲ. ಇದಕ್ಕೆ ಕಾರಣದ ಬಗ್ಗೆ ನಾವು ಚರ್ಚೆ ಮತ್ತು ಅವಲೋಕನ ಮಾಡಬೇಕಾಗಿದೆ ಎಂದರು.
 
ಗಂಡು ಮಗು ಬೇಕು, ಹೆಣ್ಣು ಮಗು ಬೇಡ ಎನ್ನುವ ಧೋರಣೆ ಬಹುತೇಕ ಭಾರತೀಯರಲ್ಲಿದೆ. ಇದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗಿದೆ. ಇಂತಹ ಭಾವನೆಯಿಂದ ನಾವು ಹೊರಬರಬೇಕು. ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದರೆ ಮಾತ್ರ ಒಂದು ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
 
ಶಾಸಕ ಸಿ.ಟಿ.ರವಿ ಮಾತನಾಡಿ, ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರ ಲಿಂಗಾನುಪಾತದಲ್ಲಿ ಆಶಾದಾಯಕ ಬೆಳವಣಿಗೆ ಇದೆ. 100 ಪುರುಷರಿಗೆ 102 ಮಹಿಳೆಯರಿದ್ದಾರೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಯಶಸ್ವಿ ಮಹಿಳೆ ಇರುತ್ತಾಳೆ. ದೇಶ ಸುಶಿಕ್ಷಿತವಾಗಲು ಸ್ವಾವಲಂಬಿ ರಾಷ್ಟ್ರವಾಗಲು ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
 ಜನಪದ ಕಲಾವಿದೆ, ರಂಗನಟಿ ರಾಜ್ಯಪ್ರಶಸ್ತಿ ಪುರಸ್ಕೃತರಾದ ಪದ್ಮಾವತಮ್ಮ ಅವರನ್ನು ಸನ್ಮಾನಿಸಲಾಯಿತು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಮಾಲತೇಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ರಾಗಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ, ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಇದ್ದರು.

‘ಮಹಿಳೆಯೆಂಬ ಕೀಳರಿಮೆ ತೊಲಗಲಿ’
ಮೂಡಿಗೆರೆ:
ಸಮಾಜದಲ್ಲಿ ಮಹಿಳೆ ಪುರುಷನಿಗಿಂತ ಶಕ್ತಿಹೀನಳು ಎಂಬ ಕೀಳಿರಿಮೆ ತೊಲಗಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು.

ಪಟ್ಟಣದ ಡಿ.ಎಸ್‌. ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಜೇಸಿಐ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರಲ್ಲಿ ಅಪ್ರತಿಮ ಶಕ್ತಿ ಅಡಗಿದ್ದು, ಅದನ್ನು ಸಾಧನೆಗೆ ಮೆಟ್ಟಿಲನ್ನಾಗಿಸಿಕೊಂಡು ಉನ್ನತ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಬೇಕು. ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆಯಿದ್ದು, ಮುಂದಿನ 20 ವರ್ಷಗಳಲ್ಲಿ ಪುರುಷರು ಹಾಗೂ ಮಹಿಳೆಯರ ಸಂಖ್ಯೆ ಸಮಾನವಾಗುವ ಮೂಲಕ, ಎಲ್ಲಾ ರಂಗಗಳಲ್ಲೂ ಮಹಿಳೆ ಎಂಬ ತಾರತಮ್ಯವಿಲ್ಲದೇ ಸ್ಥಾನ ಮಾನಗಳನ್ನು ಕಲ್ಪಿಸಿಕೊಡು ವಂತಾಗಬೇಕು ಎಂದರು.

ಜೇಸಿರೇಟ್‌ ಅಧಕ್ಷೆ ಸ್ಪೂರ್ತಿ ನಯನ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಸಮಾಜದಲ್ಲಿ ಮಾತ್ರ ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ತೊಲಗಿಲ್ಲ. ಆಧುನಿಕತೆಯ ಕಾಲಘಟ್ಟದಲ್ಲೂ ಹೆಣ್ಣುಮಗುವೆಂಬ ಕಾರಣಕ್ಕೆ ಹತ್ಯೆ ಮಾಡುವ ಕೃತ್ಯಗಳು ಸಮಾಜದಲ್ಲಿ ನಡೆಯುತ್ತಿರುವುದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.

ಪಟ್ಟಣದ ಹಿರಿಯ ವೈದ್ಯೆ ಡಾ. ಶಾಲಿನಿಪದ್ಮನಾಭ ಮಹಿಳೆಯರ ಆರೋಗ್ಯದಲ್ಲಿನ ವಿವಿಧ ಸಮಸ್ಯೆಗಳನ್ನು ಕುರಿತು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ವಕೀಲೆ ವಿಶಾಲನಾಗರಾಜ್‌ ಮಹಿಳೆಯ ಕಲ್ಯಾಣಕ್ಕಾಗಿ ಇರುವ ಕಾನೂನು ಮಾಹಿತಿ ನೀಡಿದರು. ಜೇಸಿರೇಟ್‌ ಪದಾಧಿಕಾರಿಗಳಾದ ಶೃತಿಶಶಿಕಿರಣ್‌, ಸುಮಿತ್ರಅಶೋಕ್‌, ಸುಧಾಚಂದ್ರಶೇಖರ್‌, ಪವನವಿಜಯ್‌, ಶೃತಿ, ಕೃತಿ, ಆಶಾಮೋಹನ್‌, ಭಾರತೀ ರವೀಂದ್ರ, ರೇಖಾಸತೀಶ್‌, ಶಶಿ ಪ್ರಸನ್ನ, ಜೇಸಿಐ ಅಧ್ಯಕ್ಷ ನಯನಕಣಚೂರು, ಪ್ರಾಂಶುಪಾಲ ನಟೇಶ್‌ ಸೇರಿದಂತೆ ಹಲವರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT