ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಅಭಿವೃದ್ಧಿಗೆ ಮಹಿಳೆಯ ಕೊಡುಗೆ ಅಪಾರ’

ಲಘು ಉದ್ಯೋಗ ಭಾರತಿ ಸಂಸ್ಥೆ ಸಹಯೋಗದಲ್ಲಿ ಉದ್ಯಮಶೀಲತಾ ಕಾರ್ಯಾಗಾರ; ಉತ್ಪನ್ನಗಳ ಮಾರಾಟ ಮೇಳ
Last Updated 9 ಮಾರ್ಚ್ 2017, 10:42 IST
ಅಕ್ಷರ ಗಾತ್ರ
ಧಾರವಾಡ: ‘ದೇಶ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಲ್‌.ನಾರಾ­ಯಣ­ಸ್ವಾಮಿ ಅಭಿಪ್ರಾಯಪಟ್ಟರು.
 
ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನ­ದಲ್ಲಿ ಹೈಕೋರ್ಟ್‌ ಸೇವಾ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಲಘು ಉದ್ಯೋಗ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಬುಧ­ವಾರ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಬಲೀಕರಣಕ್ಕಾಗಿ ಉದ್ಯಮ­ಶೀಲತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಂವಿಧಾನವು ಗಂಡು, ಹೆಣ್ಣು, ಜಾತಿ, ವರ್ಣ, ವರ್ಗಗಳನ್ನಾಧರಿಸಿ ತಾರ­ತಮ್ಯ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಸಮಾನ ಅವಕಾಶಗಳು ದೊರೆಯ­ಬೇಕೆಂಬ ಆಶಯದೊಂದಿಗೆ ಶೇ.33 ರಷ್ಟು ಮೀಸಲಾತಿಯನ್ನೂ ಸಹ ನೀಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದಲ್ಲಿನ ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತಿ 2 ನಿಮಿಷಗಳಿಗೆ ಒಂದು ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದೆ. ಪ್ರತಿ 20 ನಿಮಿಷಕ್ಕೆ ಒಂದು ವರದಕ್ಷಿಣೆ ಸಾವು ವರದಿಯಾಗುತ್ತಿದೆ. ಇವುಗಳಲ್ಲಿ ಶೇ.9ರಿಂದ 10ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ’ ಎಂದರು.
 
‘ಶಿಕ್ಷೆಗಳ ಪ್ರಮಾಣ ಹೆಚ್ಚಾಗಬೇಕು. ಜನರು ನ್ಯಾಯಾಲಯದ ಕಟಕಟೆ­ಯೊಳಗೆ ಬಂದು ಸರಿಯಾದ ಸಾಕ್ಷ್ಯ ಒದಗಿಸದೇ, ರಾಜಿಯಾಗುವ ಪ್ರವೃತ್ತಿ ಕೈಬಿಡಬೇಕು. ಹೆತ್ತ ಮಗಳೇ ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದರೂ ತಂದೆ-ತಾಯಿ ಯಾವುದೋ ಒತ್ತಡಗಳಿಗೆ ಮಣಿದು ರಾಜಿಯಾಗುತ್ತಿರುವ ಹಲ­ವಾರು ಉದಾಹರಣೆಗಳಿವೆ. ಈ ಮನೋ­ಭಾವ ಬದಲಾಗಬೇಕು. ಪಕ್ಕದ ಮನೆಯಲ್ಲಿಯೇ ದೌರ್ಜನ್ಯ ನಡೆದು ಸಾವು ಸಂಭವಿಸುತ್ತಿದ್ದರೂ ಧ್ವನಿ ಎತ್ತದೇ ಇರುವ ಸಾಮಾಜಿಕ ಸಂಕೀರ್ಣತೆಗೆ ನಾವು ಈಡಾಗಿದ್ದೇವೆ’ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾ­ಧೀಶ ವಿ.ಶ್ರೀಶಾನಂದ ಮಾತನಾಡಿ, ‘ಭಾರತ ದೇಶವು ಮಹಿಳೆಯರನ್ನು ಅನಾದಿಕಾಲದಿಂದಲೂ ಗೌರವಿಸಿ­ಕೊಂಡು ಬಂದಿದೆ. ಮಹಿಳೆಯರ ತಾರ­ತಮ್ಯ ನಿವಾರಿಸಿ, ಸಮಾನ ಹಕ್ಕುಗಳನ್ನು ನೀಡಬೇಕು. ಅದಕ್ಕಾಗಿ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ, ಮಹಿಳೆಯರು ಅವುಗಳ ಪ್ರಯೋಜನ ಪಡೆಯಬೇಕು’ ಎಂದರು.
 
ಜಿಲ್ಲಾಧಿಕಾರಿ ಡಾ.ಎಸ್.ಬಿ.­ಬೊಮ್ಮನ­­ಹಳ್ಳಿ, ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಆರ್‌.ಸ್ನೇಹಲ್, ಎಸ್‌.ಪಿ ಧರ್ಮೇಂದ್ರ­ಕುಮಾರ ಮೀನಾ, ಉಪ ಪೊಲೀಸ್ ಆಯುಕ್ತ ಜಿನೇಂದ್ರ ಖನ­ಗಾವಿ, ಮಹಾ­ನಗರಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ವಿ.ಡಿ.­ಕಾಮರಟ್ಟಿ, ಕಾನೂನು ಸೇವೆಗಳ ಪ್ರಾಧಿ­ಕಾರದ ಸದಸ್ಯರಾದ ಬಿ.ಎಸ್.­ಸಂಗಟಿ, ಪ್ರಫುಲ್ಲಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT