ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕರಣದ ‘ದೀಪ ಹಚ್ಚಿಟ್ಟು ಹೋದವರು’

60 ವರ್ಷ ತುಂಬಿದ ನೆನಪಿನಲ್ಲಿ ನಾಟಕ ಪ್ರದರ್ಶನ
Last Updated 9 ಮಾರ್ಚ್ 2017, 11:09 IST
ಅಕ್ಷರ ಗಾತ್ರ
ಹಾವೇರಿ: ‘ಕರ್ನಾಟಕ ಏಕೀಕರಣ ಹೋರಾಟ’ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆದ ಮಹತ್ವದ ಘಟನಾವಳಿಗಳನ್ನು ಆಧರಿಸಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಬರೆದು, ಕೆ.ಆರ್.ಹಿರೇಮಠ ನಿರ್ದೇಶಿಸಿದ ‘ದೀಪ ಹಚ್ಚಿಟ್ಟು ಹೋದವರು’ ನಾಟಕವು ನಗರದ ಮುನ್ಸಿಪಲ್‌ ಹೈಸ್ಕೂಲ್ ಮೈದಾನದ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ಪ್ರದರ್ಶನ ಕಂಡಿತು. 
 
ಏಕೀಕರಣಕ್ಕಿಂತ ಮೊದಲು ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳು, ಕರ್ನಾಟಕ ಮತ್ತು ಕನ್ನಡದ ಸ್ಥಿತಿಗತಿಯ ಬಗ್ಗೆ ನಾಟಕವು ಜನರಿಗೆ ಮನ ಮುಟ್ಟುವಂತೆ ಮಾಡಿತು. 
ಕರ್ನಾಟಕ ಏಕೀಕರಣಕ್ಕೆ 60 ವರ್ಷ ತುಂಬಿದ ಸಲುವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಾಟಕ ಪ್ರದರ್ಶನಗೊಂಡಿತ್ತು. 
 
ಐವತ್ತರ ದಶಕದ ಆರಂಭದಲ್ಲಿ ಹೊಸಮನಿ ಸಿದ್ದಪ್ಪನವರ ಮುಖಂಡತ್ವ ದಲ್ಲಿ ಆಯೋಜನೆಯಾದ ‘ಪಕ್ಷಾತೀತ ಏಕೀಕರಣ ಪರಿಷತ್ತಿ’ನ ಸಭೆಯ ದೃಶ್ಯದೊಂದಿಗೆ ನಾಟಕದ ಮೂಲ ಉದ್ದೇಶ ಬಿಚ್ಚಿಕೊಂಡಿತು. ಪಕ್ಷಾತೀತ ಏಕೀಕರಣ ಪರಿಷತ್ತಿನಲ್ಲಿ  ಭಾಗಿಯಾದ ಕೆ.ಚನ್ನಬಸಪ್ಪ, ಶಾಂತವೀರ ಗೋಪಾಲಗೌಡರು ಮತ್ತಿತರರು ಮಾತನಾಡುವ ದೃಶ್ಯಗಳು ನೋಡುಗ ರನ್ನು ಗತದಿನದ ನೆನಪುಗಳಿಗೆ ಕರೆದೊಯ್ದವು. 
 
‘ಇಲ್ಲಿನ ಶ್ರಮಿಕರ ಭಾಷೆ ಕನ್ನಡ. ಆದ್ದರಿಂದ, ‘ಕರ್ನಾಟಕ’ ಹುಟ್ಟಲೇ ಬೇಕು’ ಎನ್ನುವ ಗೋಪಾಲಗೌಡರ ಮಾತು ಮತ್ತು ‘ಮಾತು ಕೊಟ್ಟ ತಾಯಿ ಉರ್ದು.  ಆದರೆ, ಅನ್ನ ಕೊಟ್ಟ ತಾಯಿ ಕನ್ನಡ’ ಎಂದು ಹೇಳುವ ಅಂಜುಮನ್ ಇಸ್ಲಾಮ್ ಗೂಡೂವಾಲಾ ಮಾತುಗಳು ಪ್ರೇಕ್ಷಕರ ಚಪ್ಪಾಳೆಗಳನ್ನು ಗಿಟ್ಟಿಸಿತು.
 
ಎರಡನೆಯ ದೃಶ್ಯದಲ್ಲಿ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿ ಕರ್ನಾಟಕದ ಏಕೀಕರಣದ ಪರವಾಗಿ ಕಾಂಗ್ರೆಸ್‌ ಠರಾವು ಪಾಸು ಮಾಡಿದ ಪ್ರಸಂಗ ಮತ್ತು ಅಂದು ಹುಬ್ಬಳ್ಳಿ ಪುರಭವನದಲ್ಲಿ ಚಳವಳಿಗಾರರೊಂದಿಗೆ ನಡೆದ ಚಕಮಕಿಯ ದೃಶ್ಯ ನೋಡುಗರ ಮೈನವಿರೇಳಿಸಿತು. ‘ನಿಮಗೆ ಕನ್ನಡ ಬೇಕೋ ಕಾಂಗ್ರೆಸ್‌ ಬೇಕೋ’ ಎಂದು ಸವಾಲು ಹಾಕಿದ ಕೆಚ್ಚೆದೆಯ ಕನ್ನಡಿಗ ಮಹದೇವ ಬಣಕಾರ ಮಾತು ಇಡೀ ದೃಶ್ಯಕ್ಕೆ ಹೊಸ ರಂಗು ನೀಡಿತು. 
 
ದಕ್ಷಿಣ ಕರ್ನಾಟಕದಲ್ಲಿ ಏಕೀಕರಣ ಸಮಾವೇಶ ನಡೆಸುವಂತೆ ಒತ್ತಾಯಿಸಲು ಹೊಸಮನಿ ಸಿದ್ದಪ್ಪನವರು ಮಾಡಿದ ತಂತ್ರದಂತೆ ಉಪವಾಸ ಆರಂಭಿಸುವ ಬ್ಯಾಡಗಿ ತಾಲ್ಲೂಕಿನ ತುಮರಿಕೊಪ್ಪದ ಬಸಲಿಂಗಯ್ಯ ಹಿರೇಮಠ, ಹಾವೇರಿಯ ಪಂಚಾಕ್ಷರಪ್ಪ ಒಳಸಂಗದ ಅವರ ಸಾಹಸಗಳನ್ನು ನಾಟಕ ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು.
ನಗರದ 30 ಕಲಾವಿದರು ತುಂಬಾ ಕಣ್ಣು ಕಟ್ಟುವ ವೇಷಭೂಷಣದೊಂದಿಗೆ ನಾಟಕ ಪ್ರದರ್ಶಿಸಿದರು.
 
ಹೊಸಮನಿ ಸಿದ್ದಪ್ಪನವರ ಪಾತ್ರಧಾರಿಯಾಗಿ ಕೆ.ಎನ್.ಜಾನ್ವೇಕರ, ಗುದ್ಲೆಪ್ಪನವರ ಪಾತ್ರದಲ್ಲಿ ಕೆ.ಆರ್. ಹಿರೇಮಠ, ಗೂಡೂವಾಲಾ ಸಾಹೇಬ ರಾಗಿ ಪೃಥ್ವಿರಾಜ ಬೆಟಗೇರಿ, ಕೆ. ಚನ್ನಬಸಪ್ಪ ಪಾತಧಾರಿಯಾಗಿ ಜಮೀರ ರಿತ್ತಿ, ಶಾಂತವೀರ ಗೋಪಾಲಗೌಡರಾಗಿ ವಸಂತ ಕಡತಿ, ಕಾಸರಗೋಡಿನ ರಾಧಾಮಣಿಯಾಗಿ ಶಶಿಕಲಾ ಅಕ್ಕಿ, ಒಳಸಂಗದರಾಗಿ ಸುರೇಶ ಕಣೇಕಲ್ಲ್ ಹಾಗೂ ಬಸಲಿಂಗಯ್ಯ ಹಿರೇಮಠರಾಗಿ ಸಿ.ಎಚ್.ಬಾರ್ಕಿ  ಹಾಗೂ ಇತರ ಪಾತ್ರಗಳಲ್ಲಿ ಶಿವಯೋಗಿ ಚರಂತಿಮಠ, ಶಂಕರ ತುಮ್ಮಣ್ಣನವರ, ಸಿ.ಎ. ಕೂಡಲ ಮಠ, ಆರ್.ಎಫ್.ಕಾಳೆ, ಮುತ್ತುರಾಜ ಹಿರೇಮಠ, ಅಕ್ಕಮಹಾದೇವಿ ಹಾನಗಲ್, ರೇಣುಕಾ ಗುಡಿಮನಿ, ಸತೀಶ ಚೌವ್ಹಾಣ, ಎ.ಬಿ.ಗುಡ್ಡಳ್ಳಿ, ನಾಗರಾಜ ನಡುವಿನಮಠ, ವಿರೇಶ ಹ್ಯಾಡ್ಲ, ಅರ್ಜುನ್ ಸೇಲಂ, ಲತಾ ಪಾಟೀಲ ಅಭಿನಯಿಸಿದರು. 
 
* ನೂರಾರು ಭಾಷಣಗಳು ಕೊಡುವ ಸಂದೇಶವನ್ನು ಒಂದೇ ಒಂದು ನಾಟಕವು ಮನದಟ್ಟಾಗುವಂತೆ  ಕಟ್ಟಿ ಕೊಡುತ್ತದೆ
ಸತೀಶ ಕುಲಕರ್ಣಿ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT