ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡವಾಡುತ್ತಿರುವ ಬರಗಾಲ: ಒಣಗಿದ ಗಿಡಮರ

ಬತ್ತಿರುವ ಕೆರೆ ಹೊಂಡಗಳು, ಬಿರುಕು ಬಿಟ್ಟಿರುವ ಜಲಮೂಲಗಳು: ಬೋಳಾಗಿ ಕಾಣುತ್ತಿವೆ ಬೆಟ್ಟಗುಡ್ಡಗಳು
Last Updated 9 ಮಾರ್ಚ್ 2017, 11:39 IST
ಅಕ್ಷರ ಗಾತ್ರ
ಮುಂಡಗೋಡ: ಒಣಗಿ ನಿಂತಿರುವ ಮರಗಿಡಗಳು, ಬಿರುಕು ಬಿಟ್ಟಿರುವ ಜಲಮೂಲಗಳು, ಬೋಳುಬೋಳಾಗಿ ಕಾಣುತ್ತಿರುವ ಗುಡ್ಡಬೆಟ್ಟಗಳು, ಆಹಾರ ಹಾಗೂ ನೀರು ಅರಸುತ್ತ ನಾಡಿನತ್ತ ಮುಖ ಮಾಡುತ್ತಿರುವ ಕಾಡುಪ್ರಾಣಿ ಗಳು. ಬಾಯಾರಿಕೆ ಇಂಗಿಸಿಕೊಳ್ಳಲು ಬಂದು, ಅಪಘಾತಗಳಿಗೆ ಬಲಿಯಾಗುತ್ತಿ ರುವ ಮೂಕ ಪ್ರಾಣಿಗಳು, ತಾಂಡ ವಾಡುತ್ತಿರುವ ಬರಗಾಲದಲ್ಲಿ ಕಾಡುಪ್ರಾಣಿ, ಪಕ್ಷಿಗಳಿಗೆ ಜಲಮೂಲ ಗಳನ್ನು ಪುನಶ್ಚೇತನ ಮಾಡುವ ಅಗತ್ಯತೆ ಎದ್ದು ಕಾಣುತ್ತಿದೆ.
 
ತಾಲ್ಲೂಕಿನ ಮುಂಡಗೋಡ ಹಾಗೂ ಕಾತೂರ ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ, ಕರಡಿ, ಕಾಡುಕೋಣ, ಒಮ್ಮೊಮ್ಮೆ ಕಂಡುಬರುವ ಚಿರತೆ, ನವಿಲು, ಕಾಡುಹಂದಿ, ವರ್ಷದಲ್ಲಿ ನಾಲ್ಕೈದು ತಿಂಗಳು ಸಂಚರಿಸುವ ಕಾಡಾನೆಗಳು ಸೇರಿದಂತೆ ಇನ್ನಿತರ ವರ್ಗದ ಪ್ರಾಣಿ ಪಕ್ಷಿಗಳು ಜೀವಿಸುತ್ತಿವೆ. ಅರಣ್ಯ ಪ್ರದೇಶದಲ್ಲಿರುವ ನೈಸರ್ಗಿಕ ಹೊಂಡಗಳು, ಕೆರೆ ಕಟ್ಟೆಗಳು ಪ್ರಾಣಿ, ಪಕ್ಷಿಗಳ ದಾಹವನ್ನು ಇಂಗಿಸುತ್ತಿದ್ದವು.
 
ಆದರೆ ಕಳೆದೆರಡು ವರ್ಷದಿಂದ ಮಳೆಯ ಪ್ರಮಾಣ ಕಡಿಮೆಯಾಗಿ, ಬರಗಾಲದ ಛಾಯೆ ಆವರಿಸಿರುವುದರಿಂದ, ಕಾಡಿನಲ್ಲಿ ಕೆರೆ.ಕಟ್ಟೆಗಳು ನೀರಿಲ್ಲದೆ ಬತ್ತಿ, ಬಿರುಕು ಬಿಟ್ಟಂತೆ ಕಂಡುಬರುತ್ತಿವೆ. ಒಂದೆಡೆ ನೀರಿನ ಕೊರತೆ, ಮತ್ತೊಂದೆಡೆ ಆಹಾರದ ಸಮಸ್ಯೆಯಿಂದ ತೊಂದರೆ ಯಾಗಿ, ಎರಡನ್ನೂ ಹುಡುಕುತ್ತ ನಾಡಿನತ್ತ ಪ್ರಾಣಿ, ಪಕ್ಷಿಗಳು ಸಂಚರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ.
 
‘ಪಟ್ಟಣದ ಹೊರವಲಯದ ಕೆಂಪಟ್ಟಿ ಏರಿ, ಸನವಳ್ಳಿ ಜಲಾಶಯ, ಮೈನಳ್ಳಿ, ಇಂದೂರ, ಹುಲಿಹೊಂಡ, ನಾಗನೂರು, ಬೆಡಸಗಾಂವ ಸೇರಿದಂತೆ ಇನ್ನಿತರ ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ, ನವಿಲು ಸೇರಿದಂತೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಮನೆಯ ಹಿತ್ತಲಿನವರೆಗೆ, ರಾಜ್ಯ ಹೆದ್ದಾರಿ ಸನಿಹ ಇಲ್ಲವೇ ಜನವಸತಿ ಪ್ರದೇಶದ ಅನತಿ ದೂರದವರೆಗೆ ಬಂದು ಹೋಗುವದು ಸಾಮಾನ್ಯವಾಗಿದೆ.

ಇಂತಹ ಸಂದರ್ಭಗಳಲ್ಲಿ ನಾಯಿಗಳು ಬೆನ್ನಟ್ಟಿ ಗಾಯಗೊಳಿಸುವದು, ರಸ್ತೆ ದಾಟುವಾಗ ಅಪಘಾತವಾಗುವದು, ಇಲ್ಲವೇ ಬೇಟೆಗಾರರಿಗೆ ಬಲಿಯಾಗುವ ಪ್ರಕರಣಗಳು ನಡೆದಿರುವ ನಿದರ್ಶನಗಳಿವೆ. ಕಾಡಿನಲ್ಲಿಯೇ ನೀರು, ಆಹಾರ ಸಿಕ್ಕರೆ ನಾಡಿನತ್ತ ಬಂದು ಜೀವ ಕಳೆದುಕೊಳ್ಳುವುದು ತಪ್ಪುತ್ತದೆ’ ಎಂದು ಸುಧೀಂದ್ರ ರಾವ್‌ ಹೇಳಿದರು.
 
‘ಗುಂಜಾವತಿ, ಇಂದೂರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಾಲ್ಕೈದು ಜಿಂಕೆಗಳು ನಾಯಿ ದಾಳಿ, ಬೇಟೆಗಾರರ ಗುರಿಗೆ ಇಲ್ಲವೇ ಅಪಘಾತಕ್ಕೆ ಈಡಾಗಿವೆ. ಅರಣ್ಯದಲ್ಲಿ ಅಲ್ಲಲ್ಲಿ ನೀರಿನ ಸಂಗ್ರಹವಿದೆ. ಕೆಲವೆಡೆ ಇಲ್ಲದಿರುವದರಿಂದ ನೀರು ಕುಡಿಯಲು ಬಂದು ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯಿದೆ’ ಎಂದು ಫಾರೆಸ್ಟರ್‌ ನಾಗರಾಜ ಕಲಾಲ ಹೆಳಿದರು.
 
‘ಅರಣ್ಯ ಪ್ರದೇಶದಲ್ಲಿರುವ ಕೆರೆ,ಕಟ್ಟೆಗಳನ್ನು ತುಂಬಿಸುವ, ಕೃತಕ ತೊಟ್ಟಿ ನಿರ್ಮಿಸುವ ಯೋಚನೆ ಇದೆ. ಸದ್ಯದಲ್ಲಿಯೇ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು. ನೀರಿಲ್ಲದೇ ಪ್ರಾಣಿ, ಪಕ್ಷಿಗಳು ಪರದಾಡುತ್ತಿರುವ ಪ್ರಕರಣಗಳು ಕಂಡುಬಂದರೆ,  ಆ ಪ್ರದೇಶದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಬೆಂಕಿ ನಿಯಂತ್ರಣ ಹಾಗೂ ನೀರು ಒದಗಿಸುವದು ಎರಡಕ್ಕೂ ಮೊದಲ ಆದ್ಯತೆ ನೀಡಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ರಮೇಶ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT