ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರ ಬದಲಿಸಿದರು ಜಾಗ ಇದು ಅವರ ಹೊಸ ‘ರಾಗ’

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಸಿನಿಮಾವೊಂದರಲ್ಲಿ ಎಂದಿನಂತೆ ಹಾಸ್ಯ ಪಾತ್ರ. ಅದರ ಸಂಭಾಷಣೆಯಲ್ಲಿ ದ್ವಂದ್ವಾರ್ಥಗಳೇ ತುಂಬಿದ್ದವು. ದ್ವಂದ್ವಾರ್ಥದ ಸಂಭಾಷಣೆಗಳನ್ನು ಹೇಳುವುದಿಲ್ಲ ಎಂದಲ್ಲ. ಅದಕ್ಕೆ ಒಂದು ಎಲ್ಲೆ ಎಂಬುದು ಇರುತ್ತದೆಯಲ್ಲ. ಅಶ್ಲೀಲತೆಗೆ ದಾಟಿಬಿಟ್ಟರೆ ಹೇಗೆ? ಹಣಕ್ಕಾಗಿ ಇಂತಹ ಪಾತ್ರಗಳನ್ನು ಮಾಡುವುದಿಲ್ಲ. ನಿಮ್ಮ ದಿನ ಹಾಳುಮಾಡಿದ್ದಕ್ಕೆ ಕ್ಷಮೆ ಇರಲಿ ಎಂದು ಅವರು ನೀಡಿದ್ದ ಸಂಭಾವನೆಯನ್ನು ವಾಪಸ್‌ ಮಾಡಿ ತುಂಬಿದ ಕಣ್ಣಿನಿಂದ ಮನೆಗೆ ಬಂದೆ. ಎರಡು ತಿಂಗಳು ಯಾವ ಸಿನಿಮಾಕ್ಕೂ ಹೋಗಲಿಲ್ಲ.

ತೆಲುಗು, ತಮಿಳಿನಲ್ಲಿ ಬಿಜಿ ಇದ್ದೇನೆ ಎಂದು ಹೇಳುತ್ತಿದ್ದೆ. ಆ ಘಟನೆ ತೀವ್ರ ನೋವು ಉಂಟುಮಾಡಿತ್ತು. ಸಿನಿಮಾ ಸಹವಾಸವೇ ಸಾಕು ಎನಿಸಿತ್ತು...’– ತಮ್ಮ ಅನುಭವವನ್ನು ಬೇಸರದಿಂದ ಹಂಚಿಕೊಂಡರು ಮಿತ್ರ.

ಮಿತ್ರ ಹೆಸರು ಕೇಳಿದಾಗ ಮೊದಲು ನೆನಪಿಗೆ ಬರುವುದು ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಜಾಣೇಶ. ಅದನ್ನೇ ಹೋಲುವ ಪಾತ್ರಗಳಿಗೆ ಅವರು ಅನೇಕ ಸಲ ಬಣ್ಣಹಚ್ಚಿದ್ದಾರೆ. ಆದರೆ ಈ ಏಕತಾನತೆಗಳ ನಡುವೆ ತಮ್ಮೊಳಗಿನ ನೈಜ ನಟ ಅಲ್ಪತೃಪ್ತ. ಆತನಿಗೆ ಬೇರೆ ಸವಾಲು ಬೇಕು ಎಂಬುದು ಅವರನ್ನು ದೀರ್ಘ ಕಾಲದಿಂದ ಕಾಡುತ್ತಿದ್ದ ಯೋಚನೆ. ಅದಕ್ಕೆ ವರವಾಗಿ ಬಂದಿರುವುದು ‘ರಾಗ’.

‘ಈ ಚಿತ್ರದಲ್ಲಿ ನಟಿಸಿ’ ಎಂದು ನಿರ್ದೇಶಕ ಪಿ.ಸಿ. ಶೇಖರ್ ಕಥೆ ಹಿಡಿದು ಬಂದಾಗ, ನಟನೆಯಷ್ಟೇ ಅಲ್ಲ, ನಿರ್ಮಾಣವನ್ನೂ ನಾನೇ ಮಾಡುತ್ತೇನೆ’ ಎಂದು ಅವರಿಂದ ಸಿನಿಮಾವನ್ನು ‘ಕಸಿದು’ಕೊಂಡದ್ದಾಗಿ ಹೇಳುತ್ತಾರೆ ಮಿತ್ರ.
ತಂತ್ರಜ್ಞರ ಕನಸು, ಹಸಿವು

ಒಂದು ಒಳ್ಳೆ ಪಾತ್ರ ಮಾಡುವ ಹಸಿವು ಮತ್ತು ಜನರಿಗೆ ಒಳ್ಳೆ ಸಿನಿಮಾ ನೀಡಬೇಕೆಂಬ ತುಡಿತ, ತಮ್ಮಲ್ಲಿನ ಗಂಭೀರ ಹಾಗೂ ಪ್ರಬುದ್ಧ ನಟ ಮತ್ತು ನಿರ್ಮಾಪಕನ ಜವಾಬ್ದಾರಿಗಳನ್ನು ನಿಭಾಯಿಸಿದೆ ಎನ್ನುತ್ತಾರೆ ಮಿತ್ರ.

‘ದ್ವಂದ್ವಾರ್ಥಗಳಿಲ್ಲದ, ಕ್ಲೀಷೆ ಇಲ್ಲದ, ಮುಜುಗರ ಉಂಟಾಗುವ ಅಂಶಗಳಿಲ್ಲದ, ಸದಭಿರುಚಿಯ ಅದ್ಭುತ ಕಾಲ್ಪನಿಕ ಪ್ರಪಂಚ ಕಟ್ಟುವ ಪ್ರಯತ್ನ ಮಾಡಿದ್ದೇವೆ. 70–80ರ ದಶಕದ ಕಾಲಮಾನದ ಕಥನವಿದು. ಆಗಿನ ಕಾಲಘಟ್ಟವನ್ನು ಕಟ್ಟಿಕೊಡುವುದರಲ್ಲಿ ಸೂಕ್ಷ್ಮ ಕೆಲಸಗಳನ್ನು ಮಾಡಿದ್ದೇವೆ. ಶೇ 90ರಷ್ಟು ಸಿನಿಮಾ ಸೆಟ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಇದು ಇಂಥದ್ದೇ ಊರು, ಇಂಥದ್ದೇ ಜಾಗ ಎಂದು ನಡೆಯುವ ಕಥೆಯಲ್ಲ. ಹೀಗಾಗಿ ‘ರಾಗ’ಕ್ಕಾಗಿಯೇ ಒಂದು ಕಾಲ್ಪನಿಕ ಜಗತ್ತು ನಿರ್ಮಿಸಿದ್ದೇವೆ’ ಎಂದು ವಿವರಿಸುತ್ತಾರೆ.

‘ರಾಗ’ ಹಲವು ತಂತ್ರಜ್ಞರ ಹಸಿವಿನ ಫಲ ಎನ್ನುವುದು ಅವರ ವಿವರಣೆ. ಸ್ಟಾರ್‌ ನಟರು, ನಿರ್ಮಾಪಕರ ಐದಾರು ಸಿನಿಮಾಗಳಿಗೆ ಅದ್ಭುತ ಛಾಯಾಗ್ರಹಣ ಮಾಡಿರುವ ವೈದಿ ಅವರಿಗೆ, ಹೀರೊಯಿಸಂ ಸಿನಿಮಾಗಳನ್ನು ಮೀರುವ ಪ್ರಯೋಗದ ತುಡಿತವಿತ್ತು. ಹೀರೊಗಾಗಿಯೇ ಅಬ್ಬರದ ಸಂಗೀತ ನೀಡುವ ಅರ್ಜುನ್‌ ಜನ್ಯ ಅವರಿಗೆ ವಿಭಿನ್ನ ಪ್ರಯತ್ನದ ಗುರಿಯಿತ್ತು.

ನಿರ್ದೇಶಿಸಿರುವ ಏಳೆಂಟು ಸಿನಿಮಾಗಳಿಗಿಂತ ವಿಭಿನ್ನವಾದ ಮಾಸ್‌, ಸ್ಟಾರ್‌ಗಿರಿ ಇಲ್ಲದ, ಬಿಲ್ಡಪ್‌ಗಳಿಲ್ಲದ ನೈಜತೆಯ ಕಥೆಯೊಂದನ್ನು ಕಟ್ಟಿಕೊಡುವ ಆಸಕ್ತಿ ಪಿ.ಸಿ. ಶೇಖರ್‌ ಅವರಿಗಿತ್ತು. ಅವೆಲ್ಲದರ ಜತೆಗೆ ಮಿತ್ರ ಅವರ ಅಭಿರುಚಿ ಕುರಿತ ಹಟ. ಇಷ್ಟೂ ಜನರ ಪ್ರಯತ್ನ ಸೇರಿ ಒಂದು ಒಳ್ಳೆಯ ಕನ್ನಡ ಸಿನಿಮಾ ಸಿದ್ಧವಾಗಿದೆ ಎಂಬ ಹೆಮ್ಮೆ ತಂಡದವರದ್ದು. ಚಿತ್ರದಲ್ಲಿ ಕಮರ್ಷಿಯಲ್‌ ಸ್ವರೂಪದ ಒಳನೋಟ ಮತ್ತು ಕಲಾತ್ಮಕ ಚಿತ್ರಣ ಎರಡೂ ಇದೆ ಎನ್ನುತ್ತಾರೆ ಮಿತ್ರ

ಏಕತಾನತೆ ದಾಟುವ ಛಲ
‘ರಂಗಭೂಮಿಯಲ್ಲಿ ನಾನೊಬ್ಬ ಗಂಭೀರ ಮತ್ತು ಪ್ರಬುದ್ಧ ನಟ ಎಂಬುದನ್ನು ಗುರುತಿಸಿದ್ದಾರೆ. ನಟನೆಯಾಚೆಗೂ ನಾನು ಗಂಭೀರ. ಆದರೆ ಕ್ಯಾಮೆರಾ ಎದುರು ಬಂದಾಗ ನನ್ನ ದೇಹ, ಎತ್ತರ, ಬಣ್ಣ ಹೀಗೆ ನನ್ನಲ್ಲಿನ ಮೈನಸ್‌ ಅಂಶಗಳನ್ನು ಪ್ಲಸ್‌ ಆಗಿ ಬಳಸಿಕೊಂಡರು. ನಾನು ಏನು ಮಾಡಿದರೂ ಅದು ಹಾಸ್ಯವಾಗಿ ಕಾಣಿಸುತ್ತಿತ್ತು. ನಗಿಸುವುದು ದೊಡ್ಡ ಕೆಲಸ. ನನಗೆ ಚಾರ್ಲಿ ಚಾಪ್ಲಿನ್ ಮಾದರಿ’ ಎಂದರು ಮಿತ್ರ.

‘ಏಕತಾನವಾದ ಪಾತ್ರಗಳು ನನ್ನನ್ನು ಆವರಿಸಿದ್ದವು. ಅದರಲ್ಲಿ ದ್ವಂದ್ವಾರ್ಥಗಳೂ ಇದ್ದವು. ಯುವಕನಾಗಿದ್ದಾಗ ಜೋಶ್‌ನಲ್ಲಿ ಹೇಳಿಬಿಡುತ್ತಿದ್ದೆ. ಶಾಲೆ ಕಾಲೇಜು, ಉದ್ಯಮಗಳಲ್ಲಿ ಮೋಟಿವೇಟ್‌ ಮಾಡಿ ಎಂದು ನನ್ನನ್ನು ಕರೆಸುತ್ತಾರೆ. ಹೀಗಾಗಿ ನನ್ನನ್ನು ನೋಡುವ ವರ್ಗವಿದೆ. ಈಗ ನನ್ನ ಮಕ್ಕಳೂ ಬೆಳೆದಿದ್ದಾರೆ. ದ್ವಂದ್ವಾರ್ಥಗಳನ್ನು ತುಂಬಾ ಹೇಳಿದಾಗ ಸಂಪಾದಿಸಿರುವ ಗೌರವ ಕಡಿಮೆಯಾಗುತ್ತದೆ. ವೈಯಕ್ತಿಕವಾಗಿ ಒಳಗಿರುವ ನಟನಿಗೆ ಇಷ್ಟವಾಗುತ್ತಿಲ್ಲ. ಇವೆಲ್ಲವೂ ದೀರ್ಘ ಸಮಯದಿಂದ ಕಾಡುತ್ತಲೇ ಇದ್ದವು.

‘ಈ ಚಿತ್ರದಲ್ಲಿಯೂ ನನ್ನ ನಡೆ, ಮಾತು, ಶೈಲಿ ಜನರಲ್ಲಿ ನಗು ತರಿಸಿದರೆ ಅದು ನನ್ನ ತಪ್ಪಲ್ಲ. ಆದರೆ ನನ್ನದು ಗಂಭೀರ ಪಾತ್ರ, ವಾಸ್ತವಕ್ಕೆ ಹತ್ತಿರವಾದ ಪಾತ್ರ. ಅಳೆದೂ ತೂಗಿ ಮಾಡಿಸಿದ್ದಾರೆ.  ತುಂಬಾ ಜಾಗ್ರತೆಯಿಂದ ಶೇಖರ್‌ ಕೆಲಸ ತೆಗೆದಿದ್ದಾರೆ. ಅಂಧನ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ಶ್ರಮ ಹಾಕಿದ್ದೇನೆ’ ಎನ್ನುತ್ತಾರೆ.

ಹೊಸ ಪ್ರಯತ್ನಕ್ಕೆ ತಮ್ಮನ್ನು ಒಡ್ಡಿಕೊಳ್ಳುವಂತೆ ಪ್ರೇರೇಪಿಸಿದ್ದು ‘ಶೆಟರ್‌ ದುಲಾಯ್‌’ ತುಳು ಚಿತ್ರದ ನಿರ್ದೇಶಕ ಶಶಿಕಾಂತ್‌ ಕಟ್ಟೆ ಎನ್ನುತ್ತಾರೆ ಮಿತ್ರ.  ಆ ಚಿತ್ರದಲ್ಲಿ ಮಿತ್ರ ಅವರಿಗೆ ಗಂಭೀರ ಪಾತ್ರ ನೀಡಿದ್ದ ಶಶಿಕಾಂತ್‌, ನಿಮ್ಮಲ್ಲಿ ನವರಸಗಳನ್ನು ಹೊಮ್ಮಿಸುವ ಶಕ್ತಿಯಿದೆ, ಬಳಸಿಕೊಳ್ಳಿ ಎಂದರು. ಅವರು ಅಲ್ಲಿ ನನ್ನನ್ನು ಹೀಗೆ ಗುರುತಿಸದಿದ್ದರೆ ‘ರಾಗ’ಕ್ಕೆ ನಾಂದಿಯಾಗುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ.

ಈಗ ನಿರ್ಮಾಪಕ
ಹೊಟ್ಟೆ ಪಾಡಿಗಾಗಿ 500–600 ರೂಪಾಯಿಗೆ ಹೋಟೆಲ್‌ನಲ್ಲಿ ಕ್ಲೀನರ್‌, ಸಪ್ಲೈಯರ್‌, ಶೆಫ್‌, ಮ್ಯಾನೇಜರ್‌ ಎಲ್ಲ ಕೆಲಸಗಳನ್ನೂ ಮಾಡಿದ್ದೇನೆ. ಬಳಿಕ ನಟನಾಗಿ ಕೆಲಸ ಮಾಡಿದ್ದೇನೆ. ನಿರ್ಮಾಪಕನ ಕೆಲಸ ಈಗ. ಆದರೆ ನಾನು ಹಾಗೆಯೇ ಇದ್ದೇನೆ.  ಜವಾಬ್ದಾರಿ ಹೆಚ್ಚಿದೆಯಷ್ಟೇ. ನಿರ್ಮಾಣ ಎನ್ನುವುದು ಇತಿಹಾಸ ಸೇರಿಕೊಳ್ಳುವ ವಿಷಯ. ಗೆದ್ದರೂ, ಸೋತರೂ ಒಳ್ಳೆಯ ಸಿನಿಮಾ ನೀಡಿದ್ದೇನೆ ಎಂಬ ತೃಪ್ತಿ ನನ್ನಲ್ಲಿ ಇರುತ್ತದೆ. ಗೆಲ್ಲುತ್ತದೆ ಎಂಬ ವಿಶ್ವಾಸ ಖಂಡಿತಾ ಇದೆ ಎನ್ನುತ್ತಾರೆ.

ಖಂಡಿತ ಸ್ವಮೇಕ್‌!
‘ರಾಗ’ ಚಿತ್ರದ ಟ್ರೇಲರ್‌ ನೋಡಿದ ಅನೇಕರು, ಅದನ್ನು ತಾವು ನೋಡಿರುವ ಪರಭಾಷೆಯ ಸಿನಿಮಾದ ರೀಮೇಕ್‌ ಎಂದು ಹೇಳುತ್ತಿದ್ದಾರೆ. ಆದರೆ, ಇದು ಶೇ 100ರಷ್ಟು ಅಪ್ಪಟ ಕನ್ನಡತನದ, ಕನ್ನಡಿಗರದೇ ಕಥೆಯ ಸಿನಿಮಾ ಎನ್ನುವುದು ಮಿತ್ರ ಅವರ ಸ್ಪಷ್ಟನೆ.

ಮಲಯಾಳಂನಲ್ಲಿ ‘ಆಸಂ’, ತಮಿಳಿನಲ್ಲಿ ‘ಕು ಕೂ’. ಹಿಂದಿಯಲ್ಲಿ ‘ಕಾಬಿಲ್‌’ ಸಿನಿಮಾಗಳು ಬಂದಿವೆ. ಅವೆಲ್ಲಾ ಬೇರೆ ಬೇರೆ ಸ್ವರೂಪದ ಸಿನಿಮಾಳು. ಕಾಲೇಜ್‌ ಸ್ಟೋರಿ ಬದರೆ ಎಲ್ಲವೂ ಅದರ ನಕಲಾಗಿರುತ್ತದೆಯೇ? ಟ್ರೇಲರ್‌ ನೋಡಿದ ತಕ್ಷಣ ‘ಕು ಕೂ’ ಅಥವಾ ‘ಬ್ಲ್ಯಾಕ್‌’ಗೆ ಹೋಲಿಸುವುದು ಸರಿಯಲ್ಲ.

ಸಿನಿಮಾ ನೋಡಿದರೆ ಉತ್ತರ ಸಿಗುತ್ತದೆ ಎನ್ನುತ್ತಾರೆ. ಇದು ಅದ್ಭುತ ದೃಶ್ಯಕಾವ್ಯ. ಯುವಜನರನ್ನು ಮೋಟಿವೇಟ್‌ ಮಾಡುತ್ತದೆ ಎಂಬ ಭರವಸೆ ಅವರದು.
14 ವರ್ಷ ಪಿ.ಸಿ. ಶೇಖರ್‌ ಅವರ ಒಡಲಿನಲ್ಲಿ ಇದ್ದ ಕಥೆ ಇದು. ಕಪ್ಪಗೆ, ಕುಳ್ಳಗೆ ಇರುವ, ಡಿಗ್ಲಾಮರೈಸಡ್‌ ವ್ಯಕ್ತಿ ಆ ಪಾತ್ರಕ್ಕೆ ಬೇಕಿತ್ತು. ನಾನೇ ಸೂಕ್ತ ಎಂದು ನನ್ನ ಬಳಿ ಬಂದರು. ಅವರೇ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರು. ಇಂತಹ ಕಲಾವಿದನೇ ಪಾತ್ರಕ್ಕೆ ಸರಿ ಎಂದು ನಿರ್ಧಾರವಾದರೆ ಸಿನಿಮಾ ಅರ್ಧ ಗೆದ್ದಂತೆಯೇ.

ನಾನು ಕಾಲಿಟ್ಟೊಡನೆ ದೂಳೆದ್ದು ಹತ್ತು ಟಾಟಾ ಸುಮೊ ಹಾರಿಹೋದರೆ ಜನ ಬಿದ್ದುಬಿದ್ದು ನಗುತ್ತಾರೆ. ನಾನು ಕಾಮಿಡಿ ಮಾಡಲೇಬೇಕೆಂದಿಲ್ಲ. ಅಂತಹ ಪಾತ್ರಗಳು ನನಗಲ್ಲ. ನನ್ನ ಮಿತಿಗೆ ಪೂರಕವಾದ ಪಾತ್ರಗಳಿಗೆ ಒಡ್ಡಿಕೊಳ್ಳುತ್ತೇನೆ. ಇದುವರೆಗೂ ನನ್ನ ಮೈನಸ್‌ ಅನ್ನು ನಾನು ಪ್ಲಸ್ ಮಾಡಿಕೊಂಡು ಹೋಗುತ್ತಿದ್ದೆ. ಈಗ ಅವರು ನನ್ನಲ್ಲಿನ ಪ್ಲಸ್‌ ಅನ್ನು ಬಳಸಿಕೊಂಡಿದ್ದಾರೆ.

ನಾನು ನೂರಾರು ಸಿನಿಮಾಗಳನ್ನು ಮಾಡಿದ್ದೇನೆ, ರಂಗಭೂಮಿಯಲ್ಲಿ ನಟಿಸಿದ್ದೇನೆ ಎಂಬ ಅಹಮಿಕೆಗಳನ್ನು ತೊರೆದು ಜೇಡಿಮಣ್ಣಿನಂತೆ ಅವರ ಎದುರು ನಿಂತೆ. ಶೇಖರ್ ನನಗೊಂದು ರೂಪ ನೀಡಿದರು ಎಂದು ನಿರ್ದೇಶಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅಶ್ಲೀಲತೆಯ ಗಾಳಿ
ನಮ್ಮಲ್ಲಿ ಅದ್ಭುತ ಹಾಸ್ಯ ನಟರಿದ್ದಾರೆ. ಆದರೆ ಅವರನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ತ್ರಿಪಲ್‌ ಎಕ್ಸ್‌ ಚಿತ್ರಗಳಿಗಿಂತಲೂ ಅಸಹ್ಯ ಹುಟ್ಟಿಸುವ ಸಂಭಾಷಣೆಗಳನ್ನು ಹೇಳಿಸುತ್ತಾರೆ. ಇವುಗಳನ್ನು ಕುಟುಂಬದೊಟ್ಟಿಗೆ ನೋಡಲು ಸಾಧ್ಯವೇ? ಮನರಂಜನೆಗಾಗಿ ಇಷ್ಟು ಕೀಳು ಅಭಿರುಚಿ ಚಿತ್ರಗಳು ಬೇಕಾ ಎನ್ನುವುದು ನನ್ನ ಪ್ರಶ್ನೆ. ನಾನು ಬಹಳ ಸಾಚಾ, ದ್ವಂದ್ವಾರ್ಥದ ಸಂಭಾಷಣೆ ಹೇಳಿಲ್ಲ ಎಂದಲ್ಲ. ಆದರೆ ಅದು ಸೀಮೆಯೊಳಗೆ ಇರಬೇಕು. ಒಂದು ರೀತಿ ಸಕ್ಕರೆ ಲೇಪನದಂತೆ.

ವಿಭಿನ್ನ ಪ್ರಯತ್ನ
ನಿರ್ಮಾಪಕನಾಗಿ ಈ ಸಿನಿಮಾ ಹುಮ್ಮಸ್ಸು ನೀಡಿದೆ. ಮುಂದೆಯೂ ಮಿತ್ರ ಎಂಟರ್‌ಟೈನ್‌ಮೆಂಟ್‌ ಸಿನಿ ಕ್ರಿಯೇಷನ್ಸ್‌ನಿಂದ ಇಂತಹ ಗಂಭೀರ ಪ್ರಯೋಗಾತ್ಮಕ ಸಿನಿಮಾಗಳೇ ಬರಲಿವೆ ಎನ್ನುತ್ತಾರೆ. ‘ರಾಗ’ ಚಿತ್ರೀಕರಣ, ಡಬ್ಬಿಂಗ್ ಮುಗಿಸಿ ಡಿಐ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳ ಮೂರು ಅಥವಾ ನಾಲ್ಕನೇ ವಾರ ಸಿನಿಮಾ ಬಿಡುಗಡೆ ಮಾಡುವುದು ಅವರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT