ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಚುಂಬನದ ದೃಶ್ಯಗಳಲ್ಲಿ ನಟನೆಗೆ ಧೈರ್ಯ ಬೇಕು...

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ತೆರೆಯ ಮೇಲೆ ಚುಂಬನದ ದೃಶ್ಯಗಳಲ್ಲಿ ಅಭಿನಯಿಸಲು ಧೈರ್ಯ–ಆತ್ಮವಿಶ್ವಾಸ ಎರಡೂ ಬೇಕು. ಅದು ನನ್ನಲ್ಲಿ ಇರಲಿಲ್ಲ. ಈಗಲೂ ಇಲ್ಲ. ಹಾಗಾಗಿ ಅದನ್ನು ಪ್ರಯತ್ನಿಸಲೂ ನಾನು ತಯಾರಿಲ್ಲ’. ಯುವನಟಿ ಅಪೂರ್ವ ಭಾರದ್ವಾಜ್‌ ಅವರ ಸ್ಪಷ್ಟ ನುಡಿಗಳಿವು.

ಹುಡುಕಿಕೊಂಡು ಬಂದ ಕೆಲವು ಅವಕಾಶಗಳನ್ನು ಒಲ್ಲೆ ಎಂದದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಪೂರ್ವ – ‘ತೀರಾ ಬೋಲ್ಡ್‌ ಆಗಿ ನಟಿಸಬಲ್ಲೆ ಎಂಬ ಧೈರ್ಯ ನನಗಿಲ್ಲ. ಮೊದಲು ಬಂದ ಸಿನಿಮಾ ಪಾತ್ರಗಳು ಬೋಲ್ಡ್ ಆಗಿದ್ದವು. ಅದಕ್ಕಾಗಿ ಹಿಂಜರಿದೆ’ ಎಂದರು. ಇಂಥ ಬೋಲ್ಡ್‌ ಅಲ್ಲದ, ಆದರೆ ಮಹತ್ವಾಕಾಂಕ್ಷಿಯಾದ ನಟಿಗೆ ವರದಾನದಂತೆ ಒಲಿದ ಪಾತ್ರ ‘ಉಪ್ಪಿನ ಕಾಗದ’ದ್ದು.

‘ಈ ಮಾತನ್ನು ನಾನು ಸ್ವಲ್ಪ ಜಂಬದಿಂದ ಹೇಳುತ್ತಿದ್ದೇನೆ ಎಂದುಕೊಂಡರೂ ಪರವಾಗಿಲ್ಲ. ನಾಗಾಭರಣ ಸರ್ ಮತ್ತು ಮಂಡ್ಯ ರಮೇಶ್ ಅವರಿಗೆ ಇಂಥದ್ದೊಂದು ಗಟ್ಟಿ ಪಾತ್ರ ಸಿಗಲು ಇಷ್ಟು ವರ್ಷ ಕಾಯಬೇಕಾಯಿತು. ಆದರೆ ನನಗೆ ಮೊದಲ ಸಿನಿಮಾದಲ್ಲೇ ಇಷ್ಟು ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದರು ಅಪೂರ್ವ.

‘ಭರಣ ಸರ್ ಜೊತೆ ತೆರೆ ಹಂಚಿಕೊಳ್ಳುತ್ತೇನೆ ಎಂದರೆ ಅವರಷ್ಟೇ ಸ್ಕ್ರೀನ್ ಸ್ಪೇಸ್ ನನಗೂ ಇರುತ್ತದೆ. ಈವರೆಗೆ ಧಾರಾವಾಹಿಗಳಲ್ಲಿ ಜೋರು ಕಂಠದ ಪಾತ್ರಗಳಲ್ಲೇ ನಟಿಸಿದ್ದೇನೆ. ಅಲ್ಲಿ ಪಾತ್ರದ ವೈಭವೀಕರಣ ಇರುತ್ತದೆ. ಆದರೆ ಈ ಚಿತ್ರದಲ್ಲಿ ಹಾಗಲ್ಲ.

ನನ್ನ ವಯಸ್ಸಿಗೆ ಎಷ್ಟು ಪ್ರಬುದ್ಧತೆ ಇರಬೇಕೋ ಅಷ್ಟು ಮೆಚ್ಯೂರ್, ಸಟಲ್ ಪಾತ್ರ. ಚೀರಾಟದ ಸಂಭಾಷಣೆಗಳ ಹೊರತಾಗ್ಯೂ ನಾನು ಸಂವಹಿಸಬಲ್ಲೆ ಎಂಬ ಧೈರ್ಯ ಕೊಟ್ಟ ಪಾತ್ರ ಇದು. ನನಗೆ ಇದೊಂದು ಧ್ಯಾನದ ರೀತಿಯಲ್ಲಿ ಪರಿಣಮಿಸಿದೆ’ ಎಂದು ತಾವಾಡಿದ ಮಾತನ್ನು ಅವರು ಸಮರ್ಥಿಸಿಕೊಂಡರು.

ಮಣಿಪಾಲ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪೂರೈಸುತ್ತಿದ್ದಂತೆ ಅಪೂರ್ವ ‘ಬಿಗ್‌ ಬಾಸ್’ ಎರಡನೇ ಆವೃತ್ತಿಯ ಟಾಸ್ಕ್ ಪ್ರೊಡ್ಯೂಸರ್ ಆಗಿ ವೃತ್ತಿಜೀವನ ಆರಂಭಿಸಿದರು. ಅಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಆಟಗಳನ್ನು ವಿನ್ಯಾಸ ಮಾಡುವುದು ಅವರ ಕೆಲಸ. ನಂತರ ‘ಸೂಪರ್ ಮಿನಿಟ್’ ಷೋನಲ್ಲಿ ಅನುಭವ ಪಡೆದರು. ‘ಬಿಗ್ ಬಾಸ್’ ಸಂದರ್ಭದಲ್ಲಿ ಅಪೂರ್ವ ಅವರ ಪ್ರತಿಭೆಯನ್ನು ಗುರ್ತಿಸಿ, ಧಾರಾವಾಹಿಗೆ ಆಡಿಷನ್ ಕೊಡುವಂತೆ ಹೇಳಲಾಯಿತು.

ಮೊದಲ ಆಡಿಷನ್‌ನಲ್ಲಿಯೇ ‘ಅನುರೂಪ’ ಧಾರಾವಾಹಿಗೆ ಆಯ್ಕೆಯೂ ಆದರು. ಅದುವರೆಗೆ ತೆರೆಯ ಹಿಂದೆ ತಂತ್ರಜ್ಞೆಯಾಗಿ ಷೋಗಳಿಗೆ ದುಡಿಯುತ್ತಿದ್ದ ಅಪೂರ್ವ ತೆರೆಯ ಮೇಲೆ ಕಾಣಿಸಿಕೊಳ್ಳಲು ಅಣಿಯಾದರು. ಅಂದಹಾಗೆ, ಅಪೂರ್ವ ಬೆಂಗಳೂರಿನವರು, ಅಪ್ಪಟ ಕನ್ನಡತಿ.

ಅಪೂರ್ವ ಅವರ ನಟನೆಯ ಬಯಕೆ ಅವರ ತಂದೆಗೇನೂ ಖುಷಿ ಕೊಟ್ಟ ಸಂಗತಿಯಾಗಿರಲಿಲ್ಲ. ಆದರೆ ‘ಅನುರೂಪ’ ತಂಡ ನೋಡಿದ ನಂತರ ಅವರೇ ಸ್ವತಃ ನಟನೆಗೆ ಪ್ರೋತ್ಸಾಹ ನೀಡಿದ್ದಾರೆ. ಧಾರಾವಾಹಿಗಳಿಂದ ಸಿನಿಮಾಗಳತ್ತ ಮಗಳ ಗಮನ ಹರಿಯಲಿ ಎಂಬುದು ತಂದೆಯ ಆಶಯ.

ಧಾರಾವಾಹಿಗಳಲ್ಲಿ ನಟಿಸುತ್ತಲೇ ಸಿನಿಮಾ ಅವಕಾಶಗಳಿಗಾಗಿಯೂ ಹುಡುಕಾಡುತ್ತಿದ್ದ ಅಪೂರ್ವ, ಕಥೆಯ ಕಾರಣಕ್ಕೆ ಆರಂಭದಲ್ಲೇ ಎರಡು ಅವಕಾಶಗಳನ್ನು ಒಲ್ಲೆ ಎಂದ ಗಟ್ಟಿಗಿತ್ತಿ. ತಾನಾಗಿಯೇ ಮತ್ತೆ ಸಿನಿಮಾದತ್ತ ಹೊರಳಬಾರದು ಎಂದೂ ನಿರ್ಧರಿಸಿದ್ದರು. ಅಷ್ಟರಲ್ಲಾಗಲೇ ಸ್ನೇಹಿತರು ತಯಾರಿಸಿದ ‘ತುಂತುರು’ ಎಂಬ ವಿಡಿಯೊ ಹಾಡೊಂದರಲ್ಲಿ ನಟಿಸಿದ್ದರು. ಅದನ್ನು ನೋಡಿದ ಬಿ. ಸುರೇಶ್ ತಮ್ಮ ‘ಉಪ್ಪಿನ ಕಾಗದ’ದ ಆಡಿಷನ್‌ಗೆ ಆಹ್ವಾನಿಸಿದರು.

ಆ ಚಿತ್ರದಲ್ಲಿ, ಚಿಕ್ಕ ವಯಸ್ಸಿನಲ್ಲೇ ತನ್ನನ್ನು ತಾಯಿಯ ಜೊತೆ ಬಿಟ್ಟು ಹೋದ ಅಪ್ಪನನ್ನು ಹುಡುಕಿ ಹೊರಡುವ ಮಗಳು ಅಪೂರ್ವ. ತಂದೆಯನ್ನು ಭೇಟಿಯಾದಾಗ ಅವರ ವ್ಯಕ್ತಿತ್ವ, ಮನಸ್ಥಿತಿಯ ಇನ್ನೊಂದು ಮಗ್ಗುಲನ್ನು ಅರ್ಥೈಸಿಕೊಳ್ಳುವ ಸಮಾಧಾನಿ ಪಾತ್ರ.

‘ನಾನು ಯಾವ ರೀತಿ ಸಂಭಾಷಣೆ ಹೇಳಿದರೂ ಸುರೇಶ್ ಸರ್‌ಗೆ ಸಮಾಧಾನ ಆಗುತ್ತಿರಲಿಲ್ಲ. ನಾನು ಬರೀ ಡೈಲಾಗ್ ಹೇಳುತ್ತಿದ್ದೆ. ಆಗ ಅವರು, ನೀನು ಸಂಭಾಷಣೆ ತಪ್ಪಿದರೂ ಪರವಾಗಿಲ್ಲ. ಮುಖದಲ್ಲಿ ಭಾವನೆ ಕಾಣಿಸಬೇಕು ಎನ್ನುತ್ತಿದ್ದರು’ ಎಂದು ಚಿತ್ರೀಕರಣದ ಅನುಭವ ನೆನಪಿಸಿಕೊಳ್ಳುತ್ತಾರೆ.

ತನಗೆ ಅಷ್ಟಾಗಿ ನಟನೆ ಬರುವುದಿಲ್ಲ ಎಂದವರು ಮನೆಗೆ ಬಂದು ಅತ್ತಿದ್ದೂ ಇದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಸಂಭಾಷಣೆಗಳೇ ಇಲ್ಲದ ಭಾವುಕ ದೃಶ್ಯಗಳನ್ನು ನೋಡಿ ಪಾತ್ರಕ್ಕೆ ಸಿದ್ಧತೆ ನಡೆಸಿದ್ದರು.

‘ಧಾರಾವಾಹಿಯಲ್ಲಿ ಒಂದು ದಿನ ಚೆನ್ನಾಗಿ ನಟಿಸದೇ ಇದ್ದರೂ ಜನ ನಮ್ಮನ್ನು ನೋಡುವುದನ್ನು ನಿಲ್ಲಿಸುವುದಿಲ್ಲ. ಮಾರನೇ ದಿನ ಮತ್ತೆ ನಮ್ಮನ್ನು ನಿರೂಪಿಸಿಕೊಳ್ಳಲು ಅವಕಾಶ ಇರುತ್ತದೆ. ಸಿನಿಮಾದಲ್ಲಿ ಹಾಗಲ್ಲ. ಎರಡೂವರೆ ಗಂಟೆಗಳಲ್ಲಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬೇಕು. ಒಂದೊಂದು ಕ್ಷಣವೂ ಮುಖ್ಯವಾಗುತ್ತದೆ. ಹಾಗಾಗಿ ಸಿನಿಮಾಕ್ಕೆ ಹೆಚ್ಚಿನ ಶ್ರಮ ಬೇಕು’ ಎಂದು ಧಾರಾವಾಹಿಗಿಂತ ಸಿನಿಮಾ ಹೇಗೆ ಭಿನ್ನ ಎಂಬ ತಮ್ಮ ವಿವರಣೆ ನೀಡುತ್ತಾರೆ.

‘ಕಲಾತ್ಮಕ ಸಿನಿಮಾಗಳಲ್ಲಿ ಅಭಿನಯಿಸುವುದೇ ಹೆಚ್ಚು ಖುಷಿ. ಅದರಲ್ಲಿ ವಿಪರೀತ ಲಾಜಿಕ್ ಇರುತ್ತದೆ. ನಮ್ಮ ನಿತ್ಯದ ಬದುಕು ಕೂಡ ಒಂದು ಲಾಜಿಕ್ ಮೇಲೆಯೇ ನಡೆಯುತ್ತಿರುತ್ತದೆ’ ಎನ್ನುತ್ತಾರೆ ಅಪೂರ್ವ. ‘ಕಮರ್ಷಿಯಲ್ ಸಿನಿಮಾ ಸಿಕ್ಕರೂ ಒಪ್ಪಿಕೊಳ್ಳುತ್ತೇನೆ’ ಎನ್ನುವ ಅವರ ನಿರ್ಧಾರದ ಹಿಂದೆ, ಅದು ಜನರ ನಡುವೆ ಹೆಚ್ಚು ಗುರ್ತಿಸಿಕೊಳ್ಳುವ ಮಾರ್ಗ ಎಂಬ ಲಾಜಿಕ್ ಇದೆ.

ಸುದೀಪ್, ಪುನೀತ್, ಯಶ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ನಾಯಕಿ ಪಾತ್ರದ ನಿರೀಕ್ಷೆ ಇದ್ದರೂ, ‘ಪಾತ್ರಕ್ಕೆ ಪ್ರಾಮುಖ್ಯವಿದ್ದು, ಕಡಿಮೆ ಅವಧಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಪಾತ್ರಕ್ಕೇ ಹೆಚ್ಚು ಮಹತ್ವ ಇದ್ದರೆ ಅದನ್ನೂ ಮಾಡುತ್ತೇನೆ’ ಎನ್ನುತ್ತಾರೆ.

‘ಉಪ್ಪಿನ ಕಾಗದ’ದ ನಂತರ ಬಂದ ಎರಡು ಅವಕಾಶಗಳನ್ನು ಒಪ್ಪಿಕೊಳ್ಳುವ ಮನಸು ಮಾಡಿಲ್ಲ ಅಪೂರ್ವ. ಕಾರಣ, ‘ಈ ಹಂತದಲ್ಲಿ ಜಾಣ ನಡೆ ಇರಬೇಕು. ಬಂದಿದ್ದೆಲ್ಲವನ್ನೂ ಒಪ್ಪಿಕೊಳ್ಳುವ ಹಪಹಪಿ ಬೇಡ’ ಎಂಬ ನಿರ್ಧಾರ. ‘ನಟನೆಯಲ್ಲಿ ನಾನು ಎಷ್ಟು ಕಾಲ ಇರಬೇಕು ಎಂಬುದು ಜನರಿಗೆ ಬಿಟ್ಟಿದ್ದು. ಅವರು ಮೆಚ್ಚುವಷ್ಟು ಸಮಯ ನಟಿಸುತ್ತಲೇ ಇರುತ್ತೇನೆ’ ಎನ್ನುವ ಅವರಿಗೆ ಸ್ವಂತದ್ದೊಂದು ಪ್ರೊಡಕ್ಷನ್ ಹೌಸ್ ಆರಂಭಿಸಿ ಅದರ ಮೂಲಕ ರಿಯಾಲಿಟಿ ಷೋಗಳನ್ನು ಮಾಡುವ ಹುಮ್ಮಸ್ಸಿದೆ.

‘ಅನುರೂಪ’, ‘ಚಕ್ರವ್ಯೂಹ’, ‘ಗಿರಿಜಾ ಕಲ್ಯಾಣ’ – ಹೀಗೆ ಧಾರಾವಾಹಿಗಳ ಮೂಲಕ ತಮ್ಮ ವೃತ್ತಿಬದುಕಗೆ ‘ಉಪ್ಪಿನ ಕಾಗದ’ದ ಸ್ಪರ್ಶ ಕೊಟ್ಟುಕೊಳ್ಳುತ್ತ ಬಂದ ಅಪೂರ್ವ ಈಗ ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತನ್ನ ನಟನೆ ಕುರಿತು ಸುದೀಪ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT