ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು, ಗುಂಡ್ಲುಪೇಟೆ ಏಪ್ರಿಲ್‌ 9 ಕ್ಕೆ ಉಪಚುನಾವಣೆ

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್‌ 9ಕ್ಕೆ ನಡೆಯಲಿದೆ. ಈ ಚುನಾವಣೆ ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪಣವಾಗಿದ್ದರೆ, ಬಿಜೆಪಿಗೆ ತನ್ನ ಸಾಮರ್ಥ್ಯ ಒರೆಗೆ ಹಚ್ಚುವ ಕಣವಾಗಿದೆ.

ಕಾಂಗ್ರೆಸ್‌ ತೊರೆದ ವಿ.ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ನಂಜನಗೂಡು (ಪರಿಶಿಷ್ಟ ಮೀಸಲು), ಸಹಕಾರ ಸಚಿವರಾಗಿದ್ದ ಎಚ್‌.ಎಸ್‌. ಮಹದೇವ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ (ಸಾಮಾನ್ಯ) ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಸಂಪುಟದಿಂದ ಕೈಬಿಟ್ಟ   ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಬಂಡೆದ್ದ ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. ತವರು ಜಿಲ್ಲೆ ಮೈಸೂರು ವ್ಯಾಪ್ತಿಯ ನಂಜನಗೂಡು ಕ್ಷೇತ್ರವನ್ನು ಉಳಿಸಿಕೊಳ್ಳುವುದು ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ.

2013ರ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್‌ ಎದುರು ಜೆಡಿಎಸ್‌ನಿಂದ ಸ್ಪರ್ಧಿಸಿ 8921 ಮತಗಳ ಅಂತರದಿಂದ ಸೋತಿದ್ದ ಕಳಲೆ ಕೇಶವಮೂರ್ತಿಯನ್ನು ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಹದೇವ ಪ್ರಸಾದ್‌ ಪತ್ನಿ ಗೀತಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಅನುಕಂಪ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಗೀತಾ ಗೆಲುವು ಸುಲಭ ಎಂಬ ತರ್ಕ ಕಾಂಗ್ರೆಸ್‌ನದು.

ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. 2008 ಮತ್ತು 2013ರ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಿ.ಎಸ್‌. ನಿರಂಜನಕುಮಾರ್‌ ಅವರನ್ನು ಕಣಕ್ಕೆ ಇಳಿಸಲು ಯಡಿಯೂರಪ್ಪ ಆಲೋಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ತನ್ನದೆ ಪ್ರಭಾವ ಹೊಂದಿರುವ ವಿ. ಸೋಮಣ್ಣ ಅವರಿಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆ ಉಸ್ತುವಾರಿಯನ್ನು ಯಡಿಯೂರಪ್ಪ ವಹಿಸಿದ್ದಾರೆ.

ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್‌ ಅಭ್ಯರ್ಥಿ  ಹುಡುಕಾಟದಲ್ಲಿದೆ.

ದಿಕ್ಸೂಚಿಯಲ್ಲ: ಎರಡೂ ಕ್ಷೇತ್ರಗಳ ಮತದಾರರು ಯಡಿಯೂರಪ್ಪ ಅವರ ಜೇಬಿನಲ್ಲಿ ಇಲ್ಲ. ನೂರಕ್ಕೆ ನೂರರಷ್ಟು ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ. ಈ ಕ್ಷೇತ್ರಗಳ ಫಲಿತಾಂಶ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT