ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಯರಿಗೂ ಗರ್ಭಗುಡಿ ಪ್ರವೇಶಕ್ಕೆ ಅವಕಾಶವಿತ್ತು

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪುರಾಣಪ್ರಸಿದ್ಧ ಜೀರ್ಣಲಿಂಗಂ ಸ್ತ್ರೀಶೂದ್ರೈರಪಿ ಪೂಜ್ಯಂ | (ಧರ್ಮಸಿಂಧು ತೃತೀಯ ಪರಿಚ್ಛೇದ)
‘ಪುರಾತನಪ್ರಸಿದ್ಧವಾದ ಪ್ರಾಚೀನವಾದ ಶಿವಲಿಂಗವನ್ನು ಸ್ತ್ರೀ, ಶೂದ್ರರು ಸ್ಪರ್ಶಿಸಿ ಪೂಜಿಸಬಹುದು.’

ಎಲ್ಲ ವಯಸ್ಸಿನ ಸ್ತ್ರೀಪುರುಷರನ್ನೊಳಗೊಂಡ ಸಮಸ್ತ ಹಿಂದೂಗಳಿಗೆ ಪ್ರಾಚೀನ ಕಾಲದಲ್ಲಿ ಶಿವಾಲಯದ ಗರ್ಭಾಗಾರದಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸಲು ಅವಕಾಶವಿದ್ದಿತ್ತೆಂಬುದು ಮೇಲಿನ ಆಧಾರ ವಚನದಿಂದ ಸ್ಪಷ್ಟವಾಗುತ್ತದೆ.

ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸಲು ಅವಕಾಶವಿದ್ದಿತ್ತೆಂದ ಮೇಲೆ ಎಲ್ಲಾ ವಯಸ್ಸಿನ ಸ್ತ್ರೀ, ಪುರಷರಿಗೂ ಗರ್ಭಗುಡಿಯ ಪ್ರವೇಶಕ್ಕೂ ಅವಕಾಶವಿದ್ದಿತ್ತೆಂಬುದು ವೇದ್ಯವಾಗುತ್ತದೆಯಷ್ಟೇ? ಪ್ರಾಚೀನ ಕಾಲದ ಭಾರತದಲ್ಲಿ ಸ್ತ್ರೀಯರನ್ನೊಳಗೊಂಡ ನಾಲ್ಕು ವರ್ಣದವರು ವಯಸ್ಸು, ವರ್ಣ, ಸ್ತ್ರೀ, ಎಂಬಿತ್ಯಾದಿ ಭೇದವಿಲ್ಲದೆ ಮುಕ್ತವಾಗಿ ಶಿವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ, ಶಿವಲಿಂಗವನ್ನು ಸ್ಪರ್ಶಿಸಿ ಅನನ್ಯ ಭಾವದಿಂದ ಶಿವನನ್ನು ಉಪಾಸಿಸುತ್ತಿದ್ದರು. ಧನ್ಯತೆಯನ್ನು ಹೊಂದುತ್ತಿದ್ದರು. 

ಋಗ್ವೇದಾದಿ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ದೇವತಾ ಉದ್ದೇಶವಾದ ವ್ರತಾಚರಣೆಗಳ ಪ್ರಸ್ತಾಪವಿದೆ. ಅಂತಹ ದೇವತೋದ್ದಿಷ್ಯವಾದ ವ್ರತವನ್ನು ಎಲ್ಲ ವಯಸ್ಸಿನ ಸ್ತ್ರೀಯರು ಮಾಡುತ್ತಿದ್ದರು.  ಅಷ್ಟಲ್ಲದೇ ‘ಭಾರ್ಯಾ ಪತ್ಯುರ್ವ್ರ ಕುರ್ಯಾತ್ ಭಾರ್ಯಾಯಾಶ್ಚ ಪತಿವ್ರತಂ’ ( ನಿರ್ಣಯಸಿಂಧು ಪ್ರಥಮ ಪರಿಚ್ಛೇದ) –ಗಂಡನು  ಮಾಡುತ್ತಿರುವ ವ್ರತಾಚರಣೆಯಲ್ಲಿ ಪ್ರತಿಬಂಧಕ ಉಂಟಾದಾಗ ಹೆಂಡತಿಯು ವ್ರತವನ್ನು ಮುಂದುವರಿಸಲು ಅರ್ಹಳು. ಅಂದರೆ ಸ್ತ್ರೀಗೆ ಪ್ರತಿನಿಧಿಕರ್ತೃವಾಗಿ ವ್ರತವನ್ನು ಸಮಾಪ್ತಿಗೊಳಿಸುವ ಅವಕಾಶವನ್ನೂ ಧರ್ಮಶಾಸ್ತ್ರ ಒದಗಿಸಿದೆ. 

ನಾಲ್ಕು ವರ್ಣದ ಹಿಂದೂ ದಂಪತಿಗಳು ಔಪಾಸನಾದಿ ಹೋಮದ ಮೂಲಕ ಅಗ್ನಿಯ ಉಪಾಸನೆಯನ್ನು ಮಾಡುತ್ತಿದ್ದರು. ಇನ್ನು ಕೆಲವು ಕಡೆ ಗಂಡನ ಅನುಪಸ್ಥಿತಿಯಲ್ಲಿ ಅಥವಾ ಅಶಕ್ತತತೆಯಲ್ಲಿ ‘ಅಶಕ್ತೋ ಪತ್ನೀಪುತ್ರಃ ಕುಮಾರೀ’ (ಧರ್ಮಸಿಂಧು ತೃತೀಯ ಪರಿಚ್ಛೇದ)  ಹೆಂಡತಿ, ಮಗ ಅಥವಾ ಪುತ್ರಿ ಮೊದಲಾದವರು ಔಪಾಸನಾದಿ ಹೋಮಗಳನ್ನು ಮಾಡುತ್ತಿದ್ದರು. 

ಗಂಡುಸಂತಾನವಿಲ್ಲದ ವೇಳೆಯಲ್ಲಿ ‘ಅಪುತ್ರಸ್ಯ ತು ಯಾ ಪುತ್ರೀ ಸಾ ಪಿಂಡಪ್ರದಾ ಭವೇತ’ ( ವೀರಮಿತ್ರೋದಯ ಶ್ರಾದ್ಧ ಪ್ರಕರಣ) –ತಂದೆತಾಯಿಗಳ ಉತ್ತರಕ್ರಿಯೆಯನ್ನು ಮದುವೆಯಾದ ಅಥವಾ ಮದುವೆಯಾಗದ ಮಗಳು ಮಾಡುವಲ್ಲಿ ಅರ್ಹ ಅಧಿಕಾರಿಣಿ. ಆದುದರಿಂದಲೇ  ‘ಅಥ ಯ ಇಚ್ಛೇದ್ದುಹಿತಾ ಮೇ ಪಂಡಿತಾ ಜಾಯೇತ  ಸರ್ವಮಾಯುರಿಯಾದಿತಿ ತಿಲೌದನಂ ಪಾಚಯಿತ್ವಾ ಸರ್ಪಿಷ್ಮನ್ನಮಶ್ನೀಯಾತಾಮೀಶ್ವರೌ ಜನಯಿತವೈ’ (ಬೃಹದಾರಣ್ಯಕ ಉಪನಿಷತ್) – ಯಾರು ತಮಗೆ ಪಂಡಿತಳಾದ ಸರ್ವಾಯುಷ್ಯವನ್ನು ಹೊಂದಿದ ಮಗಳು ಬೇಕು ಎಂದು ಅಪೇಕ್ಷೆಪಡುತ್ತಾರೊ ಅವರು ಎಳ್ಳನ್ನು ಬೇಯಿಸಿ ತುಪ್ಪದೊಡನೆ ತಿನ್ನಬೇಕು. ಹೆಣ್ಣುಸಂತಾನ ತಮಗಿರಲಿ ಎಂದು ಅಪೇಕ್ಷೆ ಪಟ್ಟು ಪ್ರಾಚೀನರು ಹೆಣ್ಣುಸಂತತಿಯನ್ನು ಪಡೆಯುತ್ತಿದ್ದರು ಎಂಬುದಕ್ಕೆ ಮೇಲಿನ ಉಪನಿಷತ್ ವಾಕ್ಯ ದಿಗ್ದರ್ಶನವನ್ನು ನೀಡುತ್ತದೆ. 

ಪ್ರಾಚೀನ ಕಾಲದಲ್ಲಿ ಸ್ತ್ರೀಯರಿಗೆ ದೇವಾಲಯದ ಗರ್ಭಗುಡಿಯ ಪ್ರವೇಶಕ್ಕೆ ಮುಕ್ತ ಅವಕಾಶವಿದ್ದಿತ್ತು.  ಶಿವಲಿಂಗವನ್ನು ಸ್ಪರ್ಶಿಸಿ ಶಿವಾರ್ಚನೆಯನ್ನು ಮಾಡುತ್ತಿದ್ದರು. ಅಗ್ನಿಯ ಉಪಾಸನೆಯನ್ನು ಮಾಡುತ್ತಿದ್ದರು. ವ್ರತಾಚರಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಗಂಡುಸಂತತಿ ಇಲ್ಲದಾಗ ಗಂಡನ, ತಂದೆತಾಯಿಗಳ ಉತ್ತರಕ್ರಿಯೆಯನ್ನು ಸ್ವತಃ ಮಾಡುತ್ತಿದ್ದರು. ತಮಗಾಗಿ ವಿಧಿಸಿದ ಧಾರ್ಮಿಕ ಕ್ರಿಯಾಕಲಾಪಗಳಿಗೆ ಎಷ್ಟು ವೇದಮಂತ್ರಗಳ ಅವಶ್ಯಕತೆ ಬಿಳುತ್ತದೆಯೋ ಅಷ್ಟನ್ನು ಅಧ್ಯಯನ ಮಾಡುತ್ತಿದ್ದರು.  ಇದಕ್ಕೆ ಶಾಸ್ತ್ರದ ಸಮ್ಮತಿಯೂ ಇತ್ತು. ತಾವನ್ಮಾತ್ರಂ ಅಧ್ಯೇತವ್ಯಮ್ (ಆಶ್ವಲಾಯನ ಗೃಹ್ಯ ) – ಅಷ್ಟುನ್ನು ಅಧ್ಯಯನ ಮಾಡಬೇಕು. 

ಸ್ತ್ರೀಯರಿಗೆ ಅವರ ಪ್ರಕೃತಿಗೆ ಅನುಗುಣವಾಗಿ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು.  ಕಾಯಕ್ಲೇಷವನ್ನು ಉಂಟುಮಾಡುವ ಕಠಿಣತಪಸ್ಸಿನ ಆಚರಣೆಗೆ, ತುಂಬ ಪರಿಶ್ರಮದಿಂದ ಸಾಧ್ಯವಾಗುವ ಸಮಗ್ರ ವೇದಾದ್ಯಯನಕ್ಕೆ, ಬಹುವಿಧ ಕಠಿಣನಿಯಮವನ್ನು ಪಾಲಿಸಬೇಕಾದ ದೀರ್ಘಕಾಲವ್ಯಾಪಿಯಾದ ವ್ರತಾಚರಣೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸ್ತ್ರೀಯರಿಗೆ ಅವಕಾಶವಿರಲಿಲ್ಲ.  ಸ್ತ್ರೀಯರು ತಮ್ಮ ಹೊಣೆಗಾರಿಕೆಯನ್ನು ಬೇರೆ ಕ್ಷೇತ್ರದಲ್ಲಿ ನಿರ್ವಹಿಸುವ ಅನಿವಾರ್ಯತೆ ಇದ್ದಿತ್ತು.

ಹಿಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳನ್ನೆಲ್ಲ ಬದುಕಿಸಿಕೊಳ್ಳುವ ಸೌಲಭ್ಯವಿರಲಿಲ್ಲ. ವಂಶದ ಉಳಿವಿಗಾಗಿ ಬಹಳಷ್ಟು ಮಕ್ಕಳನ್ನು ಹಡೆದು ಕೆಲವಷ್ಟನ್ನಾದರೂ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು.  ಅದಕ್ಕಾಗಿ ಸ್ತ್ರೀಯರ ಪ್ರಜನನದ ಅವಕಾಶವನ್ನು ಸಂಪೂರ್ಣವಾಗಿ ವಿನಿಯೋಗವಾಗಲೆಂಬ ಹಾರೈಕೆ ಇದ್ದಿತ್ತು.  ಆ ಸದಾಶಯವೇ ಬಾಲ್ಯವಿವಾಹ ಪದ್ಧತಿಗೆ ನಾಂದಿಯಾಯಿತು.  ಬಹುಸಂತಾನ ಅಪೇಕ್ಷಣೀಯವಾಗಿತ್ತು. 

ಸ್ತ್ರೀಯರ ದಿನದ ಪ್ರಾರ್ಥನೆಯೇ ‘ದಶಾಸ್ಯಾಂ ಪುತ್ರಾನಾ ದೇಹಿ’ – ತನಗೆ ಹತ್ತು ಮಕ್ಕಳನ್ನು ಕೊಡು ಎಂಬುದಾಗಿತ್ತು. ಪಡೆದ ಮಕ್ಕಳ ಲಾಲನೆ, ಪಾಲನೆ, ಪೋಷಣೆಯ ಹೊಣೆಗಾರಿಕೆ ಹೆಚ್ಚಾಗಿ ಸ್ತ್ರಿಯರದ್ದಾಗಿತ್ತು.  ಇದು ಬಹು ಸೂಕ್ಷವಾದ, ನವಿರಾದ ಸಹಜವಾಗಿಯೇ ಸ್ತ್ರೀಯರಿಂದ ಮಾತ್ರ ನಿರ್ವಹಿಸಲು ಸಾಧ್ಯವುಳ್ಳ ಧರ್ಮಸಂಬದ್ಧವಾದ ಯಜ್ಞಕ್ಕೆ ಸಮನಾದ ಕಾರ್ಯವಾಗಿತ್ತು. 

ಇವುಗಳನ್ನು ನಿರ್ವಹಿಸುವಲ್ಲಿ ಸ್ತ್ರೀಯರು ತಮ್ಮ ಅಮೂಲ್ಯವಾದ ದೀರ್ಘಕಾಲದ ಆಯುಷ್ಯವನ್ನು ಮುಡುಪಾಗಿಡುತ್ತಿದ್ದರು. ಅದಕ್ಕಾಗಿ ಪುರುಷರಂತೆ ಎಲ್ಲಾ ಧಾರ್ಮಿಕ ಕ್ರಿಯೆಯಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳಲು ಅವಕಾಶವಿರುತ್ತಿರಲಿಲ್ಲ. ಅದನ್ನು ಮನಗಂಡೇ ಮಹರ್ಷಿಗಳು ಸ್ತ್ರೀಯರಿಗೆ ಧಾರ್ಮಿಕ ಕ್ಷೇತ್ರದಲ್ಲಿ ಮಿತವಾದ ಹೊಣೆಗಾರಿಕೆಯನ್ನು ವಿಧಿಸಿದ್ದರು. ‘ವಿಧಿ’ ಎಂದರೆ ಇಷ್ಟಪ್ರಾಪ್ತಿಗೆ ಪೂರಕವಾಗಿರಬೇಕಾದ್ದಷ್ಟೇ?

ಸ್ತ್ರೀಯರ ಪ್ರಕೃತಿಗೆ ಅನುಗುಣವಾಗಿ ಅನೇಕ ಧಾರ್ಮಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಅವಕಾಶವಿದ್ದರೂ ಕಾಲಗತಿಸಿದಂತೆ ಅವುಗಳಲ್ಲಿ ಅನೇಕ ಅವಕಾಶಗಳು ಅನೂರ್ಜಿತಗೊಂಡವು.  ಕೇವಲ ಶಾಸ್ತ್ರ ಗ್ರಂಥದಲ್ಲಿ ಮಾತ್ರ ಇದ್ದವಾದವೇ ಹೊರತು ಆಚರಣೆಯಲ್ಲಿ ಮುಂದುವರಿಯಲಿಲ್ಲ. ಅಷ್ಟಲ್ಲದೇ ಸ್ತ್ರೀಯರನ್ನು ಉದ್ದೇಶಿಸಿ ಅನೇಕ ವಿಧಿನಿಷೇಧಗಳು ಅರ್ವಾಚೀನ ಕಾಲದ ಧರ್ಮಶಾಸ್ತ್ರಕಾರರಿಂದ ವಿಧಿಸಲ್ಪಟ್ಟಿತು. 

ಅದಕ್ಕೆ ಎರಡು ಸಂಗತಿಗಳು ಪ್ರಧಾನವಾಗಿ ಕಾರಣಗಳಾದವು. ಪುರುಷಪ್ರಧಾನ ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆ ಒಂದನೆಯದ್ದಾಗಿದ್ದರೆ, ಅನ್ಯ ಧರ್ಮೀಯರ ಆಕ್ರಮಣ, ಆಡಳಿತ ಎರಡನೆಯದ್ದಾಗಿದೆ. 

ನೂತನ ಸ್ಥಾಪಿತ ಲಿಂಗ ‘ಸ್ತ್ರೀ ಶೂದ್ರೋsವ್ಯಾಪಿ ನ ಸ್ಪೃಶೇತ್’ (ಧರ್ಮಸಿಂಧು) ಹೊಸದಾಗಿ ಸ್ಥಾಪಿಸಲ್ಪಟ್ಟ ಶಿವಲಿಂಗವನ್ನು ಸ್ತ್ರೀ, ಶೂದ್ರರು ಮುಟ್ಟುವಂತಿಲ್ಲ. ಸ್ತ್ರೀಯರಿಗೆ ಅನರ್ಹತೆಯಿಂದ ಶಿವಲಿಂಗದ ಸ್ಪರ್ಶವನ್ನು ನಿಷೇಧಿಸಿದ್ದಲ್ಲ. ಅನ್ಯಧರ್ಮೀಯರಿಂದ ಮನೆಯಿಂದ ಹೊರಗೆ ಬಂದ ಸ್ತ್ರೀಯರ ಮೇಲೆ ಆಗುತ್ತಿರುವ ಉಪಟಳವನ್ನು ತಪ್ಪಿಸಲು ಮಾಡಿದ ಉಪಾಯ. ‘ನಿಷೇಧ’ ಎಂದರೆ ಅನಿಷ್ಟ ನಿವೃತ್ತಿ.

ಸ್ತ್ರೀಯರಿಗೆ ಹೇಳಿದ ಅನ್ವಾರೋಹ (ಸಹಗಮನ) ಪ್ರಾಚೀನ ಧರ್ಮಶಾಸ್ತ್ರದಲ್ಲಿಯೇ ಉಲ್ಲಿಖಿತವಾಗಿದೆ. ಆದರೆ ಅಲ್ಲಿ ಸಹಗಮನವನ್ನು ಪ್ರಚೋದಿಸುವ ಇದೊಂದು ಶ್ರೇಷ್ಠ ಆಚರಣೆ ಎಂದು ಬಿಂಬಿಸುವ ವಾಕ್ಯಗಳಿಲ್ಲ. ‘ಸಾ ಯದ್ಯುತ್ಥಾತುಮಿಚ್ಛೇತ್’ (ಬೊಧಾಯನಗೃಹ್ಯ; ಕಾಲ ಒಂದನೇ ಶತಮಾನ) ಪತಿಯೊಟ್ಟಿಗೆ ಚಿತೆಯನ್ನೇರಿದ ಪತ್ನಿ ಬದುಕಲು ಇಚ್ಛಿಸಿದರೆ ಅವಳಿಗೆ ಅವಕಾಶವನ್ನು ನೀಡುತ್ತಿದ್ದರು.

ಇತ್ತೀಚಿನ ಶತಮಾನದ ಗ್ರಂಥಗಳಲ್ಲಿ ಅನುಗಮನದ ಫಲ ವಿಶೇಷದ ವರ್ಣನೆಗಳನ್ನು ಕಾಣಬಹುದು.  ‘ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ’ (ನಿರ್ಣಯಸಿಂಧು) – ಸಹಗಮನವನ್ನು ಮಾಡಿದ ಸ್ತ್ರೀಯ ಕುಟುಂಬದವರು ಅಶ್ವಮೇಧಯಾಗವನ್ನು ಮಾಡಿದ ಫಲವನ್ನು ಹೊಂದುತ್ತಾರೆ – ಎಂಬುದಾಗಿ ಗುಣಗಾನವಿದೆ. ವಿಧವೆಯರಿಗೆ ಪ್ರಾಚೀನ ಧರ್ಮಶಾಸ್ತ್ರದಲ್ಲಿ ಮುಂಡನವನ್ನು ಹೇಳಲಿಲ್ಲ.

ಸ್ತ್ರೀಯರಿಗೆ ಸಮೂಲಕೇಶವಪನ ನಿಷಿದ್ಧಾಚರಣೆಯಾಗಿತ್ತು. ಆದರೆ ಅರ್ವಾಚೀನ ಕಾಲದಲ್ಲಿ ‘ವಿಧವಾ ಕಬರೀಬಂಧೋ ಭರ್ತೃ ಬಂಧಾಯ ಜಾಯತೇ’ (ನಿರ್ಣಯಸಿಂಧು) – ವಿಧವೆಯರ ಮುಡಿಯು ತೀರಿಹೋದ ಗಂಡನಿಗೆ ಪ್ರತಿಬಂಧಕವಾಗಿ ಪರಿಣಮಿಸುತ್ತದೆ ಎಂದಾಯಿತು.  ಪರಕೀಯರಿಂದ ಸ್ತ್ರೀಯರ ಮೇಲಾಗುವ ಅತ್ಯಾಚಾರ–ಅನಾಚಾರಗಳನ್ನು ತಡೆಗಟ್ಟಲು ಈ ನಿಬಂಧನೆಗಳನ್ನು ಧರ್ಮಶಾಸ್ತ್ರಕಾರರು ಕಾಲಕ್ಕನುಗುಣವಾಗಿ ವಿಧಿಸಿದರು.

ಇಂದು ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜ್ಞಾವಂತ ಪುರುಷಸಮೂಹವಿದೆ. ಸ್ತ್ರೀಯರೆಲ್ಲರೂ ವಿದ್ಯಾಸಂಪನ್ನೆಯರಾಗಿದ್ದಾರೆ. ಅವರಿಗೆ ಬಾಲ್ಯವಿವಾಹದ ಪಿಡುಗಿಲ್ಲ. ಬಹುಸಂತಾನದ ಹೊಣೆಗಾರಿಕೆಯಿಲ್ಲ. ನಮ್ಮೊಟ್ಟಿಗಿರುವ ಅನ್ಯಧರ್ಮೀಯರು ಪರಧರ್ಮ ಸಹಿಷ್ಣುಗಳು. ಇವುಗಳನ್ನೆಲ್ಲ ಅನುಲಕ್ಷಿಸಿ ನಮ್ಮ ಸಂವಿಧಾನದ ಅಂಗಗಳು ಕಾರ್ಯನಿರ್ವಹಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT