ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗೆ ‘ಗಣಕಯಂತ್ರ’ ಎಂದರೆ ಜನರಿಗೇನು ಪ್ರಯೋಜನ?!

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್‌ ಹೊರತುಪಡಿಸಿ ಬೇರೆ ಭಾಷೆಗಳನ್ನು ಬಳಸಲು ಅವಕಾಶ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವ ಮೂಲಕ ಸಂಸತ್ತಿನ ಸಮಿತಿಯೊಂದು ಹೈಕೋರ್ಟ್‌ಗಳಲ್ಲಿ ಇಂಗ್ಲಿಷೇತರ ಭಾಷೆಗಳ ಬಳಕೆಗೆ ಉತ್ತೇಜನ ನೀಡಿದೆ. ಹೈಕೋರ್ಟ್‌ನಲ್ಲಿ ಕನ್ನಡವನ್ನು ಬಳಕೆಗೆ ತರುವಲ್ಲಿ ಇರುವ ಸವಾಲುಗಳು ಏನು ಎಂಬುದನ್ನು ಈ ಕಿರು ಲೇಖನದಲ್ಲಿ ನಾನು ಪರಿಶೀಲಿಸುತ್ತೇನೆ.

ಹೈಕೋರ್ಟ್‌ನ ಅಧಿಕೃತ ಭಾಷೆಗಳಲ್ಲೊಂದಾಗಿ ಕನ್ನಡವನ್ನು ಬಳಸುವ ವಿಚಾರದಲ್ಲಿ ನಾವು ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಮೊದಲನೆಯದು, ಕಾನೂನಿನ ಜ್ಞಾನ ಮತ್ತು ನ್ಯಾಯಶಾಸ್ತ್ರ. ಎರಡನೆಯದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಸಂಬಂಧಿಸಿದ್ದು.

ಕಾನೂನಿನ ಜ್ಞಾನ, ಅರಿವಿಗೆ ವಿವಿಧ ರೂಪಗಳಿವೆ.

ಮೊದಲನೆಯದು: ಸಂಸತ್ತು ಮತ್ತು ವಿಧಾನಮಂಡಲ ರೂಪಿಸುವ ಕಾಯ್ದೆಗಳು, ಈ ಕಾಯ್ದೆಗಳ ಅಡಿ ಕಾರ್ಯಾಂಗ ಹೊರಡಿಸುವ ನಿಯಮಗಳು ಮತ್ತು ಅಧಿಸೂಚನೆಗಳಿಗೆ ಸಂಬಂಧಿಸಿದ್ದು.

ಎರಡನೆಯದು: ಎಲ್ಲ ಕೋರ್ಟ್‌ಗಳಿಗೆ, ಎಲ್ಲ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಕಾನೂನಿನ ತತ್ವಗಳು ಏನು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ವರ್ಷಗಳಿಂದ ಹೊರಡಿಸಿರುವ ಆದೇಶಗಳು.

ಮೂರನೆಯದು: ವರ್ಷಗಳಿಂದ ವಿಕಸನಗೊಂಡಿರುವ ಶಾಸನಗಳು ಮತ್ತು ಕಾನೂನಿನ ಪರಿಕಲ್ಪನೆಯ ಅರ್ಥ. ಇವೆಲ್ಲವೂ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿವೆ. ಇವುಗಳನ್ನೆಲ್ಲ ಕನ್ನಡಕ್ಕೆ ಅನುವಾದಿಸಲು ದಶಕಗಳ ಕಾಲ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳು ಇಲ್ಲ.

ಶಾಸನಸಭೆಗಳು ರಚಿಸುವ ಕಾನೂನುಗಳನ್ನು ಮೊದಲು ಪರಿಶೀಲಿಸೋಣ. ಇವೆಲ್ಲವುಗಳ ಅಧಿಕೃತ ಪಠ್ಯ ಇಂಗ್ಲಿಷ್‌ನಲ್ಲಿದೆ. ನಮ್ಮ ವಿಧಾನಮಂಡಲ ಕೂಡ ಶಾಸನಗಳ ಪಠ್ಯವನ್ನು ಎಲ್ಲಾ ಸಂದರ್ಭಗಳಲ್ಲಿ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ತಂದಿಲ್ಲ. ಅಷ್ಟೂ ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸಲು ಸುದೀರ್ಘ ಅವಧಿ ಮತ್ತು ಪ್ರಯತ್ನ ಬೇಕು. ಇದು ಮೊದಲ ಹೆಜ್ಜೆ ಮಾತ್ರ. ಇವುಗಳ ಅರ್ಥವನ್ನು ಕನ್ನಡದಲ್ಲಿ ಗ್ರಹಿಸಲು ಇನ್ನೂ ಹೆಚ್ಚಿನ ಶ್ರಮ ಬೇಕು. ಅದರಲ್ಲೂ ಮುಖ್ಯವಾಗಿ, ಹಿಂದಿನ ಆದೇಶ ಹಾಗೂ ತೀರ್ಪುಗಳ ಕನ್ನಡ ಅನುವಾದ ಬೇಕು, ಇಂಗ್ಲಿಷ್‌ನಲ್ಲಿರುವ ತತ್ವಗಳ ಅರ್ಥವನ್ನು ಕನ್ನಡದಲ್ಲಿ ವಿವರಿಸುವ ಅಧಿಕೃತ ಗ್ರಂಥ ಬೇಕು.

ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ಕಲಾಪ ಆರಂಭಿಸಲು ಈವರೆಗಿನ ಅಷ್ಟೂ ಪ್ರಕರಣ, ಆದೇಶಗಳ ಕನ್ನಡ ಅನುವಾದ ಬೇಕಿಲ್ಲ ಎಂಬುದು ನಿಜ. ಆದರೆ ಅಷ್ಟೂ ಶಾಸನಗಳು, ನಿಯಮಗಳ ಕನ್ನಡ ಅನುವಾದ ಖಂಡಿತ ಬೇಕು. ಇವುಗಳನ್ನು ಅಧಿಕೃತ ಎಂದು ಒಪ್ಪಿಕೊಳ್ಳಬೇಕಾದರೆ ಅನುವಾದವನ್ನು ಸರ್ಕಾರವೇ ಮಾಡಿಸಬೇಕು. ಇದು ಯಾವ ರೀತಿಯಿಂದಲೂ ಸುಲಭದ ಕೆಲಸವಲ್ಲ. ಏಕೆಂದರೆ, ಕನ್ನಡವು ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿದ್ದರೂ, ಇಂಗ್ಲಿಷ್‌ನ ಕಾನೂನು ಪದಗಳಿಗೆ ಅತ್ಯಂತ ಸೂಕ್ತವಾದ ಕನ್ನಡ ಪದಗಳು ಎಲ್ಲ ಸಂದರ್ಭಗಳಲ್ಲೂ ಸಿಗುವುದಿಲ್ಲ. ಕಾನೂನಿಗೆ ಸಂಬಂಧಿಸಿದ ಬರಹ ಮತ್ತು ಸಾಹಿತ್ಯಕ ಬರಹಗಳು ಬೇರೆ ಬೇರೆ. ಇಂಗ್ಲಿಷ್‌ ಪ್ರಭಾವದ ಕಾರಣ ಇದುವರೆಗೆ ಕಾನೂನಿಗೆ ಸಂಬಂಧಿಸಿದ ಬರಹಗಳು ಕನ್ನಡದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂದಿಲ್ಲ. ಸ್ವಾತಂತ್ರ್ಯಾನಂತರದ ನಮ್ಮ ಕಾನೂನು ಜ್ಞಾನ ಮತ್ತು ಸ್ವಾತಂತ್ರ್ಯಪೂರ್ವದ 50–60 ವರ್ಷಗಳ ಕಾನೂನು ಜ್ಞಾನ ಇಂಗ್ಲಿಷ್‌ನಲ್ಲಿದೆ. ಅದನ್ನೆಲ್ಲ ಕನ್ನಡಕ್ಕೆ ತರುವುದು ಬಹುದೊಡ್ಡ ಸವಾಲು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರದ್ದು ಇನ್ನೊಂದು ಸಮಸ್ಯೆ. ಇದು ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಶಾಸನದ ಕರಡು ಸಿದ್ಧಪಡಿಸುವವರು, ಅಧಿಕಾರಶಾಹಿ, ಪೊಲೀಸರು ಮತ್ತು ಕಾಲೇಜುಗಳಲ್ಲಿ ಕಾನೂನು ಪಾಠ ಮಾಡುವವರನ್ನೂ ಇಲ್ಲಿ ಪರಿಗಣಿಸಬೇಕು. ನ್ಯಾಯಾಂಗ ವ್ಯವಸ್ಥೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದಾದರೆ ಈ ಎಲ್ಲ ವರ್ಗಗಳ ಜನ ಕೂಡ ಕನ್ನಡದಲ್ಲಿ ಕಾನೂನಿನ ಪಾಂಡಿತ್ಯ ಸಂಪಾದಿಸಬೇಕು.

ಹೈಕೋರ್ಟ್‌ನಲ್ಲಿ ಕನ್ನಡ ಬಳಸುವುದು ಎಂದರೆ ವಕೀಲರು ಕನ್ನಡದಲ್ಲಿ ವಾದ ಮಂಡಿಸುವುದು ಮಾತ್ರವಲ್ಲ. ಪ್ರಕರಣದ ಆದೇಶದ ಮೇಲೆ ಪರಿಣಾಮ ಬೀರುವಂತಹ ಕಾನೂನಿನ ತತ್ವಗಳು ಹಾಗೂ ಅವುಗಳ ಪರಿಕಲ್ಪನೆಗಳನ್ನು ಕನ್ನಡದಲ್ಲೇ ವಿವರಿಸುವುದೂ ಇದರಲ್ಲಿ ಸೇರುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ, ಈ ಪ್ರಕ್ರಿಯೆಯ ಭಾಗವಾಗುವ ಪ್ರತಿ ವ್ಯಕ್ತಿಯೂ ಕನ್ನಡದಲ್ಲಿ ಕಾನೂನಿನ ಪರಿಕಲ್ಪನೆಗಳನ್ನು, ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನಿಜ ಹೇಳಬೇಕೆಂದರೆ, ಇವರೆಲ್ಲರೂ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳ ಮೇಲೆ ಹಿಡಿತ ಸಾಧಿಸಲು ಹಾಗೂ ಕನ್ನಡವು ಕಾನೂನಿನ ಭಾಷೆಯಾಗಿ ಸ್ವತಂತ್ರವಾಗಿ ನೆಲೆ ನಿಲ್ಲಲು ದಶಕಗಳೇ ಬೇಕು. ಇಂದು ನಾವು ನೀಡುತ್ತಿರುವ ಕಾನೂನು ಶಿಕ್ಷಣ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲೇ ಇರುವುದನ್ನು ಪರಿಗಣಿಸಿದರೆ, ಇದನ್ನು ಸಾಧ್ಯವಾಗಿಸುವುದು ಬಹುದೊಡ್ಡ ಸವಾಲು.

ಹೈಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ಹೊರ ರಾಜ್ಯಗಳಿಗೆ ಸೇರಿದವರು ಎಂಬುದು ಇನ್ನೊಂದು ಸವಾಲು. ಹೈಕೋರ್ಟ್‌ನ ಯಾವುದೇ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು, ಆಗ ಆ ಆದೇಶವನ್ನು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲೇಬೇಕು. ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್‌ ಒಂದು ನಿರ್ಣಯ ನೀಡಿದ ತಕ್ಷಣ ಅದನ್ನು ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳು ಅನುಷ್ಠಾನಕ್ಕೆ ತರಲು ತೀರ್ಪಿನ ಪ್ರತಿಯನ್ನು ಕನ್ನಡಕ್ಕೆ ತರಬೇಕಾಗುತ್ತದೆ. ಕನ್ನಡದಿಂದ ಇಂಗ್ಲಿಷ್‌ಗೆ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದದ ಕೆಲಸ ಮಾಡುವ ಸಿಬ್ಬಂದಿ ವೃಂದ ರಚಿಸಲು ವರ್ಷಗಳೇ ಬೇಕು.

ಹೈಕೋರ್ಟ್‌ ಕಲಾಪ ಕನ್ನಡದಲ್ಲಿ ನಡೆಯುವ ಅಗತ್ಯವಿದೆ ಎಂದು ಪರಿಗಣಿಸಲು ಕಾರಣವೇನು ಎಂಬುದು ಮುಖ್ಯ ಪ್ರಶ್ನೆ. ಇದರ ಉದ್ದೇಶ, ವಾದಿಗಳು ಹಾಗೂ ಪ್ರತಿವಾದಿಗಳು ನ್ಯಾಯಾಲಯದ ಕಲಾಪಗಳನ್ನು ಅನುವಾದಕರ ಸಹಾಯವಿಲ್ಲದೆ ಅರ್ಥ ಮಾಡಿಕೊಳ್ಳಲಿ ಎಂದಾಗಿದ್ದರೆ, ಆ ನಿಟ್ಟಿನಲ್ಲಿ ಮುಂದುವರಿಯುವುದರಲ್ಲಿ ಅರ್ಥವಿದೆ. ಕಕ್ಷಿದಾರರಿಗೆ ಅರ್ಥವಾಗದ ಭಾಷೆಯಲ್ಲಿ ಕೋರ್ಟ್‌ ಕಲಾಪ ನಡೆಸುವುದು ನ್ಯಾಯಸಮ್ಮತವಲ್ಲ. ಆದರೆ, ಭಾಷೆಯಲ್ಲಿ ಬದಲಾವಣೆ ತಂದ ಮಾತ್ರಕ್ಕೆ ಕಾನೂನು ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಸಾಮಾನ್ಯ ಪ್ರಜೆಗೆ ಅರ್ಥವಾಗುವಂತೆ ಪರಿವರ್ತನೆ ಆಗುವುದಿಲ್ಲ. ಆ ಪರಿವರ್ತನೆ ಆಗಬೇಕು ಎಂದಾದರೆ, ಬಳಸುವ ಭಾಷೆಯಲ್ಲಿ ಬದಲಾವಣೆ ತರುವ ಜೊತೆಗೆ ಕಾನೂನು ಪ್ರಕ್ರಿಯೆಗಳು ಇನ್ನಷ್ಟು ಸರಳವಾಗಬೇಕು.

ಕಂಪ್ಯೂಟರ್‌ ಅನ್ನು ಕನ್ನಡದಲ್ಲಿ ‘ಗಣಕಯಂತ್ರ’ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಒಮ್ಮೆ ಹೇಳಿದ್ದರು. ಹಾಗೆ ಕರೆಯುವುದರಿಂದ ಜನರಿಗೆ ಪ್ರಯೋಜನವೂ ಇಲ್ಲ, ಕನ್ನಡವೂ ಶ್ರೀಮಂತವಾಗುವುದಿಲ್ಲ ಎಂದು ತೇಜಸ್ವಿ ಅಭಿಪ್ರಾಯಪಟ್ಟಿದ್ದರು.

ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸುವುದು ಆದ್ಯತೆಯ ಕೆಲಸ ಆಗಬೇಕು. ಸರಳಗೊಳಿಸುವುದನ್ನು ಸಾಧ್ಯವಾಗಿಸಲು ಕನ್ನಡದ ಬಳಕೆಯ ಗುರಿ ಇರಬೇಕು. ಕನ್ನಡದ ಬಳಕೆಯಷ್ಟೇ ಗುರಿಯಾಗಿರಬಾರದು.

**

–ಹರೀಶ್‌ ನರಸಪ್ಪ, ವಕೀಲ, ‘ದಕ್ಷ್‌’ ಸಂಸ್ಥೆಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT