ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತುಗಳ ಕಳ್ಳಸಾಗಣೆ ಮೇಲೆ ನಿಗಾ

‘ಎನ್‌ಡಿಪಿಎಸ್‌’ ಕಾಯ್ದೆ ಪ್ರಕಾರ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಐಜಿಪಿ ಭರವಸೆ
Last Updated 11 ಮಾರ್ಚ್ 2017, 12:02 IST
ಅಕ್ಷರ ಗಾತ್ರ
ಕಾರವಾರ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮಾಫಿಯಾ ಅಧಿಕವಾಗಿದ್ದು, ಇದನ್ನು ತಡೆಗಟ್ಟಲು ಆರೋಪಿಗಳ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯ್ದೆ (ಎನ್‌ಡಿಪಿಎಸ್‌) ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಹರಿಸೆೇಖರನ್‌ ಹೇಳಿದರು. 
 
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾದಕ ವಸ್ತುಗಳ ವ್ಯಸನಕ್ಕೆ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಅಂಟಿಕೊಳ್ಳುತ್ತಿರುವುದು ದುರದೃಷ್ಟಕರ. ಮಾದಕ ವಸ್ತು ತೆಗೆದುಕೊಳ್ಳುವಾಗ 45 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದರು. ಅವರ ಭವಿಷ್ಯ ಹಾಳಾಗಬಾರದು ಎನ್ನುವ ಉದ್ದೇಶದಿಂದ ಅವರಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ.
 
ಕಾಲೇಜು ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಆಯಾ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಗಮನಹರಿಸಬೇಕು’ ಎಂದ ಅವರು, ಪ್ರಮುಖವಾಗಿ ಮಾದಕ ವಸ್ತುಗಳನ್ನು ಸರಬರಾಜು ಮಾಡುವವರ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದರು. 
 
‘ಜಿಲ್ಲೆಯಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
 
ಜಿಲ್ಲೆಯ ಸೀಬರ್ಡ್‌ ನೌಕಾನೆಲೆಯ 2ನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಅಲ್ಲದೇ ಕೈಗಾ ಅಣು ವಿದ್ಯುತ್‌ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಈ ಭಾಗದ ಜನಸಂಖ್ಯೆ ಹೆಚ್ಚಳವಾಗಲಿದೆ.

ಸುಮಾರು 20–30 ಸಾವಿರ ಜನರು ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಅನುಗುಣವಾಗಿ ಪೊಲೀಸ್‌ ಸಿಬ್ಬಂದಿಯನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೂರ್‍ನಾಲ್ಕು ತಿಂಗಳಲ್ಲಿ ಸುಮಾರು 400 ಸಿಬ್ಬಂದಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು. 
 
ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆಗೆ ಸಲಹೆ: ಶಿರಸಿಯ ಬ್ಯಾಂಕ್‌ ಎಟಿಎಂನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾ ಗುವುದು. ಬ್ಯಾಂಕ್‌ಗಳ ಎಟಿಎಂಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು. 
 
ಅಲ್ಲದೇ ಎಟಿಎಂಗಳಿಗೆ ರಾತ್ರಿ ಹೊತ್ತು ಹಣ ತುಂಬುವ ಬದಲು ಹಗಲಿನಲ್ಲೇ ಆ ಕೆಲಸ ಮಾಡಬೇಕು. ಸಾರ್ವಜನಿಕರ ಹಣ ಜೋಪಾನ ಮಾಡುವುದಕ್ಕಾಗಿ ಬ್ಯಾಂಕ್‌ನವರು ಅಗತ್ಯ ಸಿಬ್ಬಂದಿ ನೇಮಕ ಮಾಡಿ ಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು. 
 
ಟ್ವಿಟರ್‌ ಖಾತೆ ತೆರೆಯಲು ಸೂಚನೆ: ಪೊಲೀಸ್‌ ಅಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಘಟನೆಗಳ ಮಾಹಿತಿಯನ್ನು ಮಾಧ್ಯಮದವರಿಗೆ ತಲುಪಿಸುವಂತೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಟ್ವಿಟರ್‌, ವಾಟ್ಸ್‌್ಆ್ಯಪ್‌ ಹಾಗೂ ಫೇಸ್‌ಬುಕ್‌ ಖಾತೆ ನಿರ್ವಹಿಸಲು ಅವರಿಗೆ ಸೂಚನೆ ನೀಡಲಾಗುವುದು ಎಂದರು. 
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ, ಹೆಚ್ಚುವರಿ ಎಸ್ಪಿ ಕೆ.ಜಿ.ದೇವರಾಜು ಹಾಗೂ ಡಿವೈಎಸ್ಪಿ ಪ್ರಮೋದರಾವ್‌ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT