ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆ ಜೂಲಿಯಾ ಹೋರಾಟದ ದಿನಗಳು...

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜೂಲಿಯಾ ಲೊರೇನ್ ಹಿಲ್ ಏಳು ವರ್ಷದವಳಿದ್ದಾಗ, ಅವಳ ಬೆರಳ ಮೇಲೆ ಚಿಟ್ಟೆಯೊಂದು ಬಂದು ಕುಳಿತಿತು. ಅಮೆರಿಕದ ಅರಕನ್ಸಾಸ್‌ಗೆ ಪ್ರವಾಸ ಹೋಗಿದ್ದಾಗ ಕುಳಿತ ಚಿಟ್ಟೆ ಇಡೀ ಪ್ರವಾಸ ಮುಗಿಯುವವರೆಗೂ ಅಲ್ಲಿಂದ ಕದಲಲೇ ಇಲ್ಲ. ಇದರಿಂದಾಗಿ ಜೂಲಿಯಾಗೆ ‘ಬಟರ್‌ಫ್ಲೈ’ ಎಂಬ ಅಡ್ಡಹೆಸರು ಬಂದಿತು.

22ನೇ ವಯಸ್ಸಿನಲ್ಲಿ ಕಾರಿನಲ್ಲಿ ಸಾಗುತ್ತಿದ್ದಾಗ ಜೂಲಿಯಾ ದೊಡ್ಡ ಅಪಘಾತದಿಂದ ಪಾರಾದರು. ಆ ಘಟನೆ ಅವರ ಬದುಕನ್ನೇ ಬದಲಿಸಿತು. ಅವರು ಪರಿಸರ ಹೋರಾಟಗಾರ್ತಿಯಾದರು.

ಕ್ಯಾಲಿಫೋನಿರ್ಯಾದ ಹುಂಬೋಲ್ಟ್ ಕೌಂಟಿಯಲ್ಲಿ ನಡೆಯುತ್ತಿದ್ದ ‘ರೆಡ್‌ವುಡ್ ಅರಣ್ಯ ಉಳಿಸಿ’ ಹೋರಾಟಕ್ಕೆ ಜೂಲಿಯಾ ಸೇರ್ಪಡೆಯಾದರು. ಪೆಸಿಫಿಕ್ ಲ್ಯೂಂಬರ್ ಕಂಪೆನಿಯು ನೂರಾರು ಬೃಹತ್ ರೆಡ್‌ವುಡ್ ಮರಗಳನ್ನು ಕಡಿಯಲು ನಿರ್ಧರಿಸಿತ್ತು. ಅನೇಕ ಚಳವಳಿಗಾರರು ಕಡಿಯಲು ನಿಗದಿಯಾಗಿದ್ದ ಮರಗಳನ್ನೇರಿ, ಗಂಟೆಗಟ್ಟಲೆ ಅದರ ಮೇಲೆಯೇ ಕುಳಿತು ಪ್ರತಿರೋಧ ವ್ಯಕ್ತಪಡಿಸಿದರು.

ಕೆಲವು ಹೋರಾಟಗಾರರು ದಿನಗಟ್ಟಲೆ ಮರದ ಮೇಲೆಯೇ ಕುಳಿತದ್ದೂ ಇದೆ. ಜೂಲಿಯಾ 55 ಮೀಟರ್ ಎತ್ತರದ ಮರವನ್ನು ಏರಲು ಆಯ್ಕೆ ಮಾಡಿಕೊಂಡರು. 1500 ವರ್ಷಗಳಷ್ಟು ಹಳೆಯದಾದ ಆ ಮರವನ್ನು 1997ರ ಡಿಸೆಂಬರ್ 10ರಂದು ಏರಿದರು. ಹುಣ್ಣಿಮೆಯ ದಿನ ಅದನ್ನು ಏರಿದ್ದರಿಂದ, ಆ ಮರಕ್ಕೆ ‘ಲ್ಯೂನಾ’ ಎಂದು ಹೆಸರಿಟ್ಟರು.

ಮರ ಏರಿದಾಗ ಎಷ್ಟು ದಿನಗಳವರೆಗೆ ಹೋರಾಟ ನಡೆಯಬಹುದು ಎಂದು ಜೂಲಿಯಾಗೆ ಅಂದಾಜಿರಲಿಲ್ಲ. 42 ದಿನಗಳ ಕಾಲ ಮರದ ತುದಿಯಲ್ಲೇ ಬದುಕಬೇಕಾಯಿತು. ಎಲ್ಲ ಹೋರಾಟಗಾರರಿಗಿಂತ ಹೆಚ್ಚು ಅವಧಿ ಮರದ ಮೇಲೆ ಉಳಿದವರು ಜೂಲಿಯಾ. ‘ಅರ್ತ್ ಫಸ್ಟ್’ ಎಂಬ ಸ್ವಯಂ ಸೇವಾ ಸಂಸ್ಥೆಯಿಂದ ಎಲ್ಲ ಹೋರಾಟಗಾರರೂ ಮರಗಳನ್ನು ಏರಿದ್ದರು.

ಹೋರಾಟ ಅಷ್ಟಕ್ಕೇ ನಿಲ್ಲಲಿಲ್ಲ. ಮರದ ಮೇಲೆಯೇ ಸಣ್ಣ ಮನೆ ಮಾಡಿಕೊಳ್ಳಲು ಹೋರಾಟಗಾರರೆಲ್ಲ ಜೂಲಿಯಾಗೆ ಸಹಾಯ ಮಾಡಿದರು. ಚಳವಳಿಕಾರರ ಉತ್ಸಾಹ ಉಡುಗಿಸಲು ಕಂಪೆನಿಯವರು ಬೃಹತ್ ದೀಪದ ಬೆಳಕನ್ನು ಕಣ್ಣಿಗೆ ರಾಚುವಂತೆ ಬಿಟ್ಟರು. ಶಬ್ದ ಮಾಡುವ ವಾದ್ಯಗಳನ್ನು ಬಡಿದು ತೊಂದರೆ ಕೊಟ್ಟರು. ಹೆಲಿಕಾಪ್ಟರನ್ನು ಮರದ ಪಕ್ಕದಲ್ಲೇ ಹಾರಿಸಿ, ಅದರ ಗಾಳಿ ತಡೆಯಲಾಗದೆ ಜೂಲಿಯಾ ಇಳಿದುಹೋಗಲಿ ಎಂದು ಯತ್ನಿಸಿದರು. ಇವ್ಯಾವುದಕ್ಕೂ ಜೂಲಿಯಾ ಜಗ್ಗಲಿಲ್ಲ.

ಕ್ಯಾಲಿಫೋರ್ನಿಯಾ ಹಿಂದೆಂದೂ ಕಂಡರಿಯದ ಚಳಿಗಾಲದಲ್ಲಿಯೂ ಆ ಮರದ ಮೇಲೆ ವರ್ಷಗಟ್ಟಲೆ ಕಳೆದರು. 1999ರ ಡಿಸೆಂಬರ್ 18ರಂದು ಮರದಿಂದ ಅವರು ಕೆಳಗಿಳಿದದ್ದು. ‘ಲ್ಯೂನಾ’ ರಕ್ಷಿಸಲು ಕಂಪೆನಿಯವರು ಒಪ್ಪಿದ್ದೇ ಅಲ್ಲದೆ, ಆ ಮರದ ಸುತ್ತಮುತ್ತಲಿನ ಮೂರು ಎಕರೆ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರು.

‘ದಿ ಲೆಗಸಿ ಆಫ್ ಲ್ಯೂನಾ’ ಎಂಬ ಕೃತಿಯನ್ನು ಜೂಲಿಯಾ ಬರೆದರು. ಕಾಡುನಾಶದ ವಿರುದ್ಧ ಹೋರಾಟ ಮುಂದುವರಿಸಿದ ಅವರು, ‘ಸರ್ಕಲ್ ಆಫ್ ಲೈಫ್’ ಎಂಬ ಸಂಸ್ಥೆ ಹುಟ್ಟುಹಾಕಿದರು. ಪ್ರಕೃತಿಗೆ ಹಾನಿ ಮಾಡದಂತೆ ಬದುಕುವುದು ಹೇಗೆ ಎನ್ನುವುದನ್ನು ಪ್ರಚಾರಪಡಿಸಿದ ಸಂಸ್ಥೆ ಅದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT