ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೊಂದು ಮರದ ಪತ್ರ

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯ ಗೆಳೆಯಾ,
ನಾನು ಹೀಗೊಂದು ಪತ್ರ ಬರೆಯುವೆನೆಂಬ ಕಲ್ಪನೆಯೂ ನಿನಗಿರಲಿಕ್ಕಿಲ್ಲ. ಯಾಕೆ ಗೊತ್ತಾ? ನಾನೊಂದು ಮರ! ಮರವೇನು ಬರೆಯುತ್ತದೆ, ಅದಕ್ಕೇನು ಭಾವನೆಗಳಿವೆ ಎಂಬ ತಾತ್ಸಾರ ಎಲ್ಲರಿಗೂ ಇರಬಹುದು. ಆದರೆ ನಿನಗೆ ನನ್ನ ಭಾವನೆಗಳು ಅರ್ಥವಾಗುತ್ತವೆಯೆಂದು ನನಗೆ ತಿಳಿದಿದೆ.

ಯಾಕೆಂದರೆ ನಿನ್ನ ಅಪ್ಪ–ಅಮ್ಮ ಇಬ್ಬರೂ ಕೆಲಸಕ್ಕೆ ಹೋದ ಆ ದಿನಗಳಲ್ಲಿ ನೀನು ನನ್ನೊಂದಿಗೆ ಮಾತನಾಡುತ್ತಾ ಕಾಲ ಕಳೆಯುತ್ತಿದುದನ್ನು ನಾನಿನ್ನೂ ಮರೆತಿಲ್ಲ.

ನಮಗೂ ಜೀವವಿದೆ, ಭಾವನೆಗಳಿವೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಜಗದೀಶ್‌ಚಂದ್ರ ಬೋಸ್ ಕೂಡ ನಿನ್ನಂತೆಯೇ ನಮ್ಮೊಂದಿಗೆ ಮಾತನಾಡುತ್ತಿದ್ದರು. ಹಾಗಾಗಿಯೇ ನಿಮ್ಮವರಿಗೆ ಹೇಳಲಾಗದ ಅನೇಕ ವಿಷಯಗಳನ್ನು ನಿನಗೆ ಹೇಳಬಹುದೆಂಬ ಭರವಸೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ.

ನನಗಂತೂ ನಿನ್ನಲ್ಲಿ ಹೇಳಲು ಅನೇಕ ವಿಷಯಗಳಿವೆ. ಯಾಕೆ ಗೊತ್ತಾ? ನಿನ್ನ ಹಿರಿಯರು ಇತ್ತೀಚೆಗೆ ಬಹಳ ಬದಲಾಗಿಬಿಟ್ಟಿರುವರು. ಹಿಂದಿನ ಕಾಲದಲ್ಲಾದರೆ ನಿಮ್ಮ ಪೂರ್ವಜರು ನಮ್ಮನ್ನು ದೇವರೆಂದು, ದೇವತೆಯರೆಂದು ಪೂಜಿಸುತ್ತಿದ್ದರು. ನಿಮಗೆ ಹಾಗೇನು ಅನಿಸುವುದೇ ಇಲ್ಲ.

ಸ್ವಾರ್ಥ ನಿಮ್ಮ ಮನಸ್ಸನ್ನು ಆವರಿಸಿಬಿಟ್ಟಿದೆ. ಅದರ ಎದುರು ಎಲ್ಲವೂ ತೃಣಸಮಾನ ನಿಮಗೆ. ನನ್ನ ವಂಶಾವಳಿಯನ್ನೇ ಮುಗಿಸಲು ಹಟ ತೊಟ್ಟವರಂತೆ ನಾಶಮಾಡುತ್ತಿದ್ದೀರಿ. ನೀವು ಬರಿಯ ವಿದ್ಯೆ ಕಲಿತಿರಲ್ಲದೇ ಅದರ ಅರ್ಥ ತಿಳಿಯಲೇ ಇಲ್ಲ. ಬಹಳ ಹಿಂದೆ ನಿನ್ನ ಪೂರ್ವಜಳೊಬ್ಬಳು ಹೀಗೆ ಹಾಡಿದ್ದಳು:

ಹೆಣ್ಣಾಗಿ ಹುಟ್ಟುವುದ, ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರಬೆಳೆದರಾ ಮರವು
ಪುಣ್ಯವಂತರಿಗೆ ನೆರಳಾಯ್ತು ಎಂದು.

ನೀವೇನು ಮಾಡುತ್ತಿರುವಿರಿ? ಹೆದ್ದಾರಿ ಅಗಲೀಕರಣವೆಂದು ಸಾಲು ಸಾಲಾಗಿ ನಿಂತ ನನ್ನ ಸಂಬಂಧಿಕರಿಗೆ ಸ್ವರ್ಗ ತೋರಿಸುತ್ತಿರುವಿರಿ. ವಿದ್ಯುತ್ ತಯಾರಿಕೆಯ ನೆಪವೊಡ್ಡಿ ನನ್ನ ಜೀವಸಂಕುಲವನ್ನೇ ಮುಳುಗಿಸುತ್ತಿರುವಿರಿ. ಪೀಠೋಪಕರಣಗಳಿಗೆಂದು ನನ್ನ ತಲೆ ಕಡಿಯುತ್ತಿರುವಿರಿ. ಕಾಗದ, ಬಟ್ಟೆ, ಕೈಗಾರಿಕೆ, ಗಣಿಗಾರಿಕೆ – ಒಂದೇ ಎರಡೇ ನಿಮ್ಮ ಸ್ವಾರ್ಥಲಾಲಸೆ? ಎಲ್ಲದಕ್ಕೂ ನನ್ನ ನಾಶವೇ ನಿಮ್ಮ ಉತ್ತರ.

ಸರಿಯೇ ಇದು? ನಾನು ನಿಮಗೆ ಏನೆಲ್ಲವನ್ನೂ ಕೊಟ್ಟಿರುವೆ? ಅನ್ನ, ನೀರು, ನೆರಳು, ಉಸಿರಾಡುವ ಪ್ರಾಣವಾಯು... ಎಲ್ಲವೂ ನನ್ನಿಂದಲೇ ನಿಮಗೆ ಸಿಗುವುದು. ಅದಕ್ಕಾಗಿ ನಿಮ್ಮನ್ನು ಬೇಡುವುದಿಷ್ಟೆ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ. ನಾನೋ ನನ್ನ ಮಕ್ಕಳು, ಮರಿಗಳನ್ನೆಲ್ಲ ಬೆಳೆಸಿಕೊಂಡು ಹಾಯಾಗಿರುತ್ತೇನೆ.

ಛೇ! ನಿನ್ನ ಹಿರಿಯರಿಗೆ ಹೇಳಬೇಕಾದ್ದನ್ನೆಲ್ಲ ನಿನಗೆ ಹೇಳುತ್ತಿರುವೆ. ಒಂದು ಲೆಕ್ಕದಲ್ಲಿ ಇದೇ ಸರಿ. ಯಾಕೆ ಗೊತ್ತಾ? ನೀನೂ ಮುಂದೆ ಅವರಂತೆ ದೊಡ್ಡವನಾಗುವಿಯಲ್ಲ. ನಿನ್ನ ಕಾಲದಲ್ಲಿಯಾದರೂ ನಾವೆಲ್ಲ ಖುಷಿಯಿಂದ ಬದುಕುವಂತಾಗಲಿ. ನಿನಗೊಂದು ಕಥೆ ಹೇಳುತ್ತೇನೆ ಕೇಳು. ರವೀಂದ್ರನಾಥ ಟ್ಯಾಗೋರ್ ಒಂದು ಕಥೆ ಬರೆದಿದ್ದಾರೆ. ಅದರಲ್ಲಿ ಒಬ್ಬ ಹುಡುಗನನ್ನ ಅವ್ರು ಕೇಳುತ್ತಾರೆ: ‘ನೀನು ಬಯಸಿದಂತೆ ಆಗಬಹುದು ಎಂದಾದರೆ ಏನಾಗಲು ಬಯಸುವೆ?’

ಆ ಹುಡುಗ ಹೇಳುತ್ತಾನ: ‘ಹಾಗೇನಾದರೂ ಆದರೆ ನಾನೊಂದು ಮರವಾಗಲು ಬಯಸುತ್ತೇನೆ. ಬೀಸುವ ತಂಗಾಳಿ ಮರವನ್ನು ಸೋಕಿದಾಗ ಅದರ ರೆಂಬೆಕೊಂಬೆಗಳೆಲ್ಲಾ ಕುಣಿದಾಡುವ ಪುಟ್ಟ ಮಗುವಿನಂತೆ ಕಾಣುತ್ತವೆ. ಮರವೊಂದು ಅಚಲವಾಗಿ ನಿಲ್ಲುವ ವಿಷಯವೇ ಎಂಥ ವಿಸ್ಮಯ!’.
ನಿನಗೂ ತಿಳಿದಿರಲಿ, ನನ್ನ ಪ್ರತಿ ಎಲೆಯೂ ನನ್ನ ಪಿಸುಮಾತುಗಳು! ಪ್ರತಿ ಬೀಜವೂ ನನ್ನದೊಂದು ಪುಟ್ಟ ಕನಸು! ನನ್ನ ಕನಸುಗಳನ್ನು ಕೊಲ್ಲದಿರು.

ಪುಟಾಣಿ, ನಾನೂ ನನ್ನ ಪರಿವಾರವೂ ನಿಮಗಿಂತ ಮೊದಲು ಭೂಮಿಗೆ ಬಂದವರು. ನಿಮ್ಮ ನಂತರವೂ ಇಲ್ಲಿಯೇ ಇರುವವರು. ಬಾ ನಾವಿಬ್ಬರೂ ಮುಂಚಿನಂತೆಯೇ ಸ್ನೇಹಿತರಾಗಿಯೇ ಇರೋಣ. ಕೂಡಿ ಬಾಳೋಣ. ನಮ್ಮ ಹಸಿರು ನಿಮ್ಮ ಉಸಿರಿನೊಂದಿಗೆ ಬೆರೆತಾಗ ಮಾತ್ರವೇ ಈ ಭೂಮಿ ಸ್ವರ್ಗವಾಗುವುದು.

ನೋಡಿಲ್ಲಿ ನನ್ನ ರೆಂಬೆಯ ಮೇಲೆ ಪುಟ್ಟ ಹಕ್ಕಿಯ ಗೂಡು! ಅದನ್ನು ಹಾಳುಗೆಡವಬೇಡ. ನೀನೂ ನನ್ನ ಮಡಿಲಲ್ಲಿ ಮಗುವಾಗು. ನಾನು ಇಬ್ಬರಿಗೂ ಲಾಲಿ ಹಾಡುತ್ತೇನೆ. ಅನಂತವಾದ ಸುಖದ ಸೆಲೆಯನ್ನು ಧಾರೆಯೆರೆಯುತ್ತೇನೆ.
-ಇಂತಿ ನಿನ್ನ ಸ್ನೇಹಿತ
ಮರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT