ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಮಲ’ ಬಿಟ್ಟು ‘ಕೈ’ಯತ್ತ ಹೊರಳಿದ ಗೋವನ್ನರು

Last Updated 12 ಮಾರ್ಚ್ 2017, 6:39 IST
ಅಕ್ಷರ ಗಾತ್ರ

ಗೋವಾ: ರಾಜ್ಯದಲ್ಲಿ ನಿರೀಕ್ಷೆಯಂತೆಯೇ ಅತಂತ್ರ ವಿಧಾನಸಭೆ ರಚನೆಯಾಗಿದ್ದು ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಲಕ್ಷ್ಮಿಕಾಂತ ಪಾರ್ಸೆಕರ್‌ ಅವರೇ ಸೋಲು ಅನುಭವಿಸಿದ್ದು ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿ ಸಾರ್ವಜನಿಕರಿಗೆ ನೇರವಾಗಿ ಹಣ ನೀಡುವ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿತ್ತು. ಅದರ ಲಾಭ ಪಡೆದಿದ್ದ ಮತದಾರರು ಕೂಡ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಪಕ್ಷ ಮತ್ತೆ ಗೆಲುವು ಸಾಧಿಸುತ್ತದೆ ಎಂದು ನಿಚ್ಚಳವಾಗಿ ಹೇಳುವ ಸ್ಥಿತಿಯಲ್ಲಿ ಅವರಾಗಲಿ, ಬಿಜೆಪಿ ಕಾರ್ಯಕರ್ತರಾಗಲಿ ಇರಲಿಲ್ಲ. ಅದು ಶನಿವಾರ ಹೊರಬಿದ್ದ ಫಲಿತಾಂಶದಲ್ಲೂ ವ್ಯಕ್ತವಾಗಿದೆ.

ವಿಧಾನಸಭೆಯ 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. 2012ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿದ್ದ ಬಿಜೆಪಿ, ಈ ಬಾರಿ 13 ಸ್ಥಾನ ಗಳಿಸಲು ಬಹಳ ಹೆಣಗಾಡಬೇಕಾಯಿತು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಮಹಾರಾಷ್ಟ್ರವಾದಿ ಗೋಮಂತಕ್‌ ಪಕ್ಷ (ಎಂ.ಜಿ.ಪಿ) ಈ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತಾದರೂ ಅದರ ಶಕ್ತಿ ಮತ್ತೆ ಮೂರು ಸ್ಥಾನಗಳಿಗೇ ಸೀಮಿತವಾಯಿತು. ಎಂ.ಜಿ.ಪಿಯೊಂದಿಗೆ ಕೈ ಜೋಡಿಸಿದ್ದ ಆರ್‌ಎಸ್‌ಎಸ್‌ ಮಾಜಿ ಮುಖಂಡ ಸುಭಾಷ್‌ ವೆಂಗಳೀಕರ್‌ ಅವರ ಗೋವಾ ಸುರಕ್ಷಾ ಪಕ್ಷಕ್ಕೆ ಖಾತೆ ತೆರೆಯಲು ಕೂಡ ಸಾಧ್ಯವಾಗಿಲ್ಲದಿರುವುದು ಸೋಜಿಗ. ಆದರೆ ಈ ಮೈತ್ರಿಕೂಟ ಬಿಜೆಪಿಗೆ ಕಾಲ್ತೊಡಕಾಯಿತು.

ಪ್ರಥಮ ಬಾರಿಗೆ ಅಖಾಡಕ್ಕಿಳಿದಿದ್ದ ಗೋವಾ ಫಾರ್ವರ್ಡ್‌ ಪಕ್ಷದ (ಜಿ.ಎಫ್‌.ಪಿ) ಸಾಧನೆ ಅಮೋಘವಾಗಿದೆ. ಈ ಪಕ್ಷದಿಂದ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳ ಪೈಕಿ ಮೂವರು ಜಯ ಸಾಧಿಸಿದ್ದಾರೆ. ಎನ್‌ಸಿಪಿ ಕೂಡ ಒಂದು ಸ್ಥಾನ ಗಳಿಸಿದೆ. ಒಟ್ಟಾರೆ, ಮತ ವಿಭಜನೆಯ ಲಾಭ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಲಭಿಸಿದೆ.

ಆದರೆ, ಗೋವಾದಲ್ಲಿ ವಿಶಿಷ್ಟ ಪ್ರಚಾರದ ಮೂಲಕ ಭಾರಿ ಭರವಸೆ ಮೂಡಿಸಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಖಾತೆ ತೆರೆಯಲಾಗದೆ ಕೊಚ್ಚಿಕೊಂಡು ಹೋಗಿದೆ. ಆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದ ಎಲ್ವಿಸ್‌ ಗೋಮ್ಸ್‌ ಕೂಡ ದಡ ಸೇರಲಾಗದಿರುವುದು ರಾಜ್ಯದಲ್ಲಿ ಎಎಪಿ ಸ್ಥಾನ ಏನು ಎಂಬುವುದನ್ನು ತೋರಿಸಿಕೊಟ್ಟಿದೆ.

ಬಿಜೆಪಿ ಕೈ ಹಿಡಿಯದ ಯೋಜನೆಗಳು: ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ರಸ್ತೆ, ಸೇತುವೆ ನಿರ್ಮಾಣ ಹೀಗೆ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಆದರೆ ಅವು ಯಾವುವೂ ಸರ್ಕಾರದ ಕೈ ಹಿಡಿಯಲಿಲ್ಲ. ಜತೆಗೆ ರಾಜ್ಯದ ಜನರಿಗೆ ಲಕ್ಷ್ಮಿಕಾಂತ ಪಾರ್ಸೆಕರ್‌ ಬಗ್ಗೆ ವಿಶ್ವಾಸವಿರಲಿಲ್ಲ ಎಂಬುದು ಸಾಬೀತಾಗಿದೆ. ಅವರು ಬಹುಸಂಖ್ಯಾತ ಮರಾಠ ಸಮಾಜಕ್ಕೆ ಸೇರಿದವರಾದರೂ ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್‌ ಅವರಷ್ಟು ಜನಪ್ರಿಯತೆ ಇರಲಿಲ್ಲ. ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿ ಕಾರ್ಯಕರ್ತರಿಗೆ ಅವರ ಬಗ್ಗೆ ಅಂತಹ ಒಲವು ಇರಲಿಲ್ಲ. ಅದೇ ಪರಿಕ್ಕರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಪರಿಸ್ಥಿತಿ ಬೇರೆ ಆಗಿರುತ್ತಿತ್ತು.


ಎಎಪಿ ಕೂಡ ಬಿಜೆಪಿಯ ಮಾದರಿಯನ್ನೇ ಅನುಸರಿಸಿ, ನಾಗರಿಕರಿಗೆ ಇನ್ನಷ್ಟು ಹೆಚ್ಚು ಹಣ ನೀಡುವ ವಿವಿಧ ಕಾರ್ಯಕ್ರಮಗಳ ಮೂಲಕ ಆಮಿಷ ಒಡ್ಡಿತ್ತು. ಆದರೆ ಮತದಾರ ಅದಕ್ಕೆ ಒಲಿಯಲಿಲ್ಲ. ಕಳೆದ ಬಾರಿ ಬಿಜೆಪಿಯ ಕೈ ಹಿಡಿದಿದ್ದ  ಕ್ರೈಸ್ತರು, ಈ ಬಾರಿ ಅದನ್ನು ತಿರಸ್ಕರಿಸಿ, ಕಾಂಗ್ರೆಸ್‌ನತ್ತ ವಾಲಿರುವುದು ಫಲಿತಾಂಶದಲ್ಲಿ ಬಿಂಬಿತವಾಗಿದೆ.

ಬಿಷಪ್ ನೀಡಿದ್ದ ಸಂದೇಶ ಇಲ್ಲಿ ಕೆಲಸ ಮಾಡಿದೆ. ಅವರ ಸಂದೇಶ ಆಧರಿಸಿಯೇ ಕ್ರೈಸ್ತರು ಮತ ಚಲಾಯಿಸಿರುವುದು ಕಳೆದ ಮೂರು ಚುನಾವಣೆಗಳ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಕನ್ನಡಿಗರೇ ಹೆಚ್ಚಾಗಿ ನೆಲೆಸಿರುವ ಕೊರ್ತಾಲಿಮ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕನ್ನಡಿಗ ಶರಣು ಮೇಟಿ ಸೋಲು ಅನುಭವಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಸಾಧ್ಯತೆ: ಹದಿನೇಳು ಸ್ಥಾನಗಳಲ್ಲಿ ಗೆದ್ದು ಮೇಲುಗೈ ಸಾಧಿಸಿರುವ ಕಾಂಗ್ರೆಸ್‌ಗೆ, ಸರಳ ಬಹುಮತಕ್ಕೆ ನಾಲ್ವರು ಸದಸ್ಯರ ಬೆಂಬಲ ಬೇಕಿದೆ. ಅದೇ ಬಿಜೆಪಿಗೆ ಎಂಟು ಸ್ಥಾನಗಳ ಕೊರತೆ ಇದೆ. ಗೋವಾ ಫಾರ್ವರ್ಡ್‌ ಪಕ್ಷ ಮತ್ತು ಎನ್‌ಸಿಪಿ ನೆರವಿನೊಂದಿಗೆ ಕಾಂಗ್ರೆಸ್‌ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ.

ಗೋವಾ ಫಾರ್ವರ್ಡ್‌ ಪಕ್ಷ ಕೂಡ ಬಿಜೆಪಿಗೆ ವಿರುದ್ಧವಾಗಿದೆ. ಪ್ರಚಾರದ ಸಂದರ್ಭದಲ್ಲೂ ಆದು ಬಿಜೆಪಿಯನ್ನೇ ಗುರಿಯಾಗಿಸಿಕೊಂಡು, ‘ಬಿಜೆಪಿ ನಮ್ಮ ಪ್ರಥಮ ಶತ್ರು’ ಎಂದು  ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೇ, ಕಾಂಗ್ರೆಸ್‌ ಬಗ್ಗೆ ಮೃದು ಧೋರಣೆ ತಾಳಿತ್ತು.

ಆದರೆ, ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಸದಸ್ಯರ ಬೆಂಬಲ ಪಡೆದರೆ ಬಿಜೆಪಿಗೂ ಸರ್ಕಾರ ರಚಿಸಲು ಅವಕಾಶವಿದೆ. ಜತೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇರುವುದರಿಂದ ಇಲ್ಲೂ ಸರ್ಕಾರ ರಚನೆಗೆ ಅದು ಪ್ರಯತ್ನಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT