ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂಬೈ ಬಾರ್‌ಗಳಲ್ಲಿ ಖಾಸಗಿತನವಿಲ್ಲ’

Last Updated 11 ಮಾರ್ಚ್ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂಬೈ ಬಾರ್‌ಗಳಲ್ಲಿ ಖಾಸಗಿತನವೆಂಬುದೇ ಇಲ್ಲ.  ಸಿಟಿ ಬಸ್‌ಗಳಲ್ಲಿರುವಂತಹ ವಾತಾವರಣ ಅಲ್ಲಿರುತ್ತದೆ’ ಎಂದು ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಹೇಳಿದರು.

‘ಮಂದ್ರ’ ಕಾದಂಬರಿ ರಚಿಸುವಾಗ ಮುಂಬೈನ ಸಂಗೀತಗಾರರೊಬ್ಬರನ್ನು ಬಾರ್‌ನಲ್ಲಿ ಮಾತನಾಡಿಸಬೇಕಾಗಿ ಬಂದ ಸ್ವಾರಸ್ಯಕರ ಪ್ರಸಂಗವನ್ನು ಅವರು ಮೆಲುಕು ಹಾಕಿದರು.

ಹೊನ್ನಾವರದ ಡಾ. ಕೃಷ್ಣಾನಂದ ಕಾಮತ್‌ ಪ್ರತಿಷ್ಠಾನ, ಕೃಷ್ಣಾಪುರದೊಡ್ಡಿಯ  ಕೆ.ಎಸ್‌.ಮುದ್ದಪ್ಪ ಸ್ಮಾರಕ್ ಟ್ರಸ್ಟ್‌ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಸಂಗೀತ ಸಂಶೋಧಕ ಹಾಗೂ ವಿಮರ್ಶಕ ಪ್ರಕಾಶ್‌ ಬುರ್ಡೆ ಅವರ ಸಂಗೀತ ಬರಹಗಳ ಸಂಕಲನ ‘ಸಂಗೀತ ಸರಸಿ’   ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಂಗೀತದ ಬಗ್ಗೆ ಚೆನ್ನಾಗಿ ತಿಳಿದಿರುವ  ಮುಂಬೈನ ಸಂಗೀತಗಾರನನ್ನು ಭೇಟಿ ಮಾಡಿಸುತ್ತೇನೆ. ಆ ವ್ಯಕ್ತಿ ಸಂಜೆ ಹೊತ್ತಿನಲ್ಲಿ ಬಾರ್‌ನಲ್ಲಿ ಮಾತ್ರ ಸಿಗುತ್ತಾನೆ ಎಂದು ಬುರ್ಡೆ ಹೇಳಿದ್ದರು. ನಾನು ಒಪ್ಪಿದೆ. ಆದರೆ, ಬಾರ್‌ನಲ್ಲಿ ಖಾಸಗಿತನ ಇಲ್ಲದಿದ್ದುದರಿಂದ ಆ ಸಂಗೀತಗಾರನಿಂದ ಯಾವುದೇ ಫಾಯಿದೆ ಆಗಲಿಲ್ಲ. ಮುಂಬೈ ಕರ್ನಾಟಕ ಸಂಘದಲ್ಲಿ ಆತನನ್ನು ಮಾತನಾಡಿಸೋಣ ಎಂದರೆ, ಅಲ್ಲೂ ಪಾನೀಯ ಸೇವನೆಗೆ ಅವಕಾಶ ಇರಲಿಲ್ಲ’  ಎಂದರು. 

ಕೀರ್‌ ಹುಸೇನ್‌ ತಬಲಾದಲ್ಲಿ ಎಷ್ಟು ಸಂಗೀತ ಇದೆ?: ‘ತಬಲಾ ವಾದಕ ಜಾಕೀರ್‌ ಹುಸೇನ್‌ ಅವರು ವಿದ್ಯುತ್‌ಸಂಚಾರದಂತಹ  ಕೈಚಳಕ ಹೊಂದಿದ್ದಾರೆ. ಆದರೆ, ಅವರ ತಬಲಾ ವಾದನದಲ್ಲಿ ಎಷ್ಟರ ಮಟ್ಟಿಗೆ ಸಂಗೀತ ಇದೆ’ ಎಂದು ಭೈರಪ್ಪ ಪ್ರಶ್ನಿಸಿದರು.

‘1964– 65ರಲ್ಲಿ ಅಹಮದಾಬಾದ್‌ನಲ್ಲಿ ನಾನು ಸರೋದ್‌ ವಾದಕ ಅಮ್ಜದ್‌ ಅಲಿ ಖಾನ್‌ ಅವರ ಮೊದಲ ಸಂಗೀತ ಕಛೇರಿ  ಕೇಳಿದ್ದೆ. ಆಗ  ಖಾನ್‌ ಯಾರೆಂದೇ ಗೊತ್ತಿರಲಿಲ್ಲ. ಆ ಕಾರ್ಯಕ್ರಮಕ್ಕೆ ಶಾಂತಾ ಪ್ರಸಾದ್‌ ಅವರು ತಬಲಾದಲ್ಲಿ ಸಾಥ್‌ ನೀಡಿದ್ದರು.  ಅವರ  ತಬಲಾದಲ್ಲಿ ನಿಜವಾದ ಸಂಗೀತ ಇತ್ತು. ಅವರು, ಈಗಿನ ಜಾಕೀರ್‌ ಹುಸೇನ್‌ ಅವರಷ್ಟೇ ಪ್ರಸಿದ್ಧರಾಗಿದ್ದರು’ ಎಂದು ಅಭಿಪ್ರಾಯಪಟ್ಟರು. 

‘ಖಾನ್‌ ಹಾಗೂ ಶಾಂತಾ ಪ್ರಸಾದ್‌ ನಡುವೆ ಒಪ್ಪಂದವಾಗಿತ್ತು. ಒಂದು ವರ್ಷ  ಪೂರ್ತಿ ಖಾನ್‌ ಅವರ ಕಛೇರಿಗೆ ಅವರೇ ತಬಲಾ ನುಡಿಸಬೇಕಿತ್ತು. ಅದಕ್ಕಾಗಿ ಖಾನ್‌ ಅವರ ಸಂಭಾವನೆಯ ಹಣವೂ  ಅವರಿಗೇ ಸಿಗುತ್ತಿತ್ತು’ ಎಂದು ಅಮ್ಜದ್‌ ಖಾನ್‌ ಖ್ಯಾತರಾದ ಬಗೆಯನ್ನು ಭೈರಪ್ಪ ಬಿಚ್ಚಿಟ್ಟರು.

‘ನನ್ನ ಮೊದಲ ಪ್ರೀತಿ ಏನಿದ್ದರೂ ಸಂಗೀತದ ಮೇಲೆ. ಸಾಹಿತ್ಯ ನನಗೆ ಎರಡನೇ ಆದ್ಯತೆ. ಸಂಗೀತದಲ್ಲಿ ಸಿಗುವಷ್ಟು ಭಾವ ಹಾಗೂ ರಸ ಪ್ರಚೋದನೆ ಸಾಹಿತ್ಯದಿಂದ ಸಿಗದು.  ನಾನು ಈಗಲೂ ಬರವಣಿಗೆ ವೇಳೆ ತೊಡಕು ಎದುರಾದರೆ ಸಂಗೀತ ಆಲಿಸುತ್ತೇನೆ. ಅದರಿಂದ ನನ್ನ ಕಲ್ಪನಾಶಕ್ತಿ ಮುಂದಕ್ಕೆ ಸಾಗುತ್ತದೆ’ ಎಂದು ವಿವರಿಸಿದರು.

**

‘ಸೆಮಿಸ್ಟರ್‌ನಲ್ಲಿ ಸಂಗೀತ ಕಲಿಸಲು ಸಾಧ್ಯವೇ?’

‘ನಮ್ಮಲ್ಲಿ ಸಂಗೀತಕ್ಕೂ ಒಂದು ವಿಶ್ವವಿದ್ಯಾಲಯ ಸ್ಥಾಪಿಸಿದ್ದಾರೆ. ನೀವು ಯಾವ ವೇಳಾಪಟ್ಟಿ ಅನುಸರಿಸುತ್ತಿದ್ದೀರಿ? ಸೆಮಿಸ್ಟರ್‌ ಪದ್ಧತಿ ಜಾರಿಗೊಳಿಸಿದ್ದೀರಾ?  ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದವರು (ಯುಜಿಸಿ) ಕುಲಪತಿಗೆ ನೋಟಿಸ್‌ ನೀಡುತ್ತಾರೆ. ಸೆಮಿಸ್ಟರ್‌ ಪದ್ಧತಿಯಿಂದ ಸಂಗೀತ ಕಲಿಸಲು ಸಾಧ್ಯವೇ?  ಇಲ್ಲಿ ಕಲಿಯುವವರು ವಿಜಯನಗರ ಶಿಲ್ಪದಲ್ಲಿ ಸಂಗೀತದ ರಾಗಗಳ ಕುರಿತು ಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಪಡೆಯುತ್ತಾರೆ. ಅಂತಹವರು ಇನ್ನಾವುದೋ ಸಂಗೀತ ಶಾಲೆಗೆ ಉಪನ್ಯಾಸಕರಾಗಿ ಹೋಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸುಗಮ ಸಂಗೀತ ಇತ್ತೀಚೆಗೆ ಬಹಳ ಸದ್ದು ಮಾಡುತ್ತಿದೆ. ಕಾವ್ಯವನ್ನು ಹಾಡುವುದು ನಮಗೆ ಹೊಸತಲ್ಲ. ಪದ್ಯದ ಅರ್ಥ ಹಾಗೂ ಭಾವವನ್ನು ಶೋತೃಗಳಿಗೆ ದಾಟಿಸುವ ಕಾರ್ಯ ಗಮಕದ ಮೂಲಕ ನಡೆಯುತ್ತಾ ಬಂದಿದೆ. ಈಗ ಸುಗಮ ಸಂಗೀತವನ್ನು 50 ಜನ ಸೇರಿ ಹಾಡುತ್ತಾರೆ.  ಇದಕ್ಕೆ ಸಂಗೀತ ಎಂದು ಏಕೆ
ಹೆಸರಿಟ್ಟರೋ ಅರ್ಥವಾಗುತ್ತಿಲ್ಲ’ ಎಂದರು.

**

ಪುಸ್ತಕದ ಬೆಲೆ: ₹ 400
ಪ್ರಕಾಶನ: ಪ್ರಗತಿ ಗ್ರಾಫಿಕ್ಸ್‌ ಬೆಂಗಳೂರು
ಲೇಖಕ: ಪ್ರಕಾಶ್‌ ಬುರ್ಡೆ
ಸಂಪಾದನೆ: ಡಾ.ಜ್ಯೋತ್ಸ್ನಾ ಕಾಮತ್‌ ಮತ್ತು  ಡಾ.ಸುಷಮಾ ಆರೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT