ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದಲ್ಲಿ ಮಿಂದೇಳುವ ಮುನ್ನ...

ಚರ್ಮರೋಗ ತಜ್ಞೆ ಡಾ.ಭೂಮಿಕಾ ಎಸ್. ಅವರ ಕೆಲ ಸಲಹೆ
Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ರಂಗು ರಂಗಿನ ಬಣ್ಣದೋಕುಳಿಯಲ್ಲಿ ಮಿಂದೇಳುವ ಯುವ ಜನರು, ಮಕ್ಕಳು ವಯಸ್ಸಿನ ಭೇದವಿಲ್ಲದೆ ಪರಸ್ಪರ ಬಣ್ಣ ಎರಚಿಕೊಂಡು ಸಂತಸದ ಹೊನಲಿನಲ್ಲಿ ಮುಳುಗುತ್ತಾರೆ. ಹೋಳಿ ಹಬ್ಬದ ಸಡಗರದಲ್ಲಿ ಕೆಲ ಎಚ್ಚರಿಕೆ ವಹಿಸದಿದ್ದರೆ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ವೈದ್ಯರು  ಎಚ್ಚರಿಸುತ್ತಾರೆ. 

ಹೌದು, ರಾಸಾಯನಿಕ ಬಣ್ಣಗಳ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚರ್ಮರೋಗ ಮತ್ತು ಕಣ್ಣಿನ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮದರ್ ವುಡ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ.ಭೂಮಿಕಾ ಎಸ್. ಅವರು ‘ಮೆಟ್ರೊ’ದೊಂದಿಗೆ ನಡೆಸಿದ ಮಾತುಕತೆಯಲ್ಲಿ ಕೆಲ ಸಲಹೆಗಳನ್ನು ನೀಡಿದ್ದಾರೆ. 
 
 
- ಹೋಳಿಯಾಟದಲ್ಲಿ ಬಳಸುವ ಬಣ್ಣಗಳಿಂದ ಆಗುವ ದುಷ್ಟರಿಣಾಮ ಏನು?  
ಮಾರುಕಟ್ಟೆಯಲ್ಲಿ ಕೆಂಪು, ಹಸಿರು, ಹಳದಿ, ನೀಲಿ, ಗುಲಾಬಿ, ಸಿಲ್ವರ್‌, ಗೋಲ್ಡ್‌ ಸೇರಿದಂತೆ ಬಗೆಬಗೆಯ ಬಣ್ಣಗಳು ಕಂಗೊಳಿಸುತ್ತಿವೆ. ಬಣ್ಣಗಳಲ್ಲಿ ಟಾಕ್ಸಿಕ್‌ ಕೆಮಿಕಲ್‌ ಇರುತ್ತದೆ. ಇಂತಹ ಬಣ್ಣಗಳನ್ನು ಉಪಯೋಗಿಸುವುದರಿಂದ ಚರ್ಮದ ತುರಿಕೆ, ದದ್ದು ಉಂಟಾಗಿ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಬಣ್ಣ  ಕಣ್ಣಿಗೆ ಬಿದ್ದರೆ ಕಾರ್ನಿಯಾಗೆ ಹಾನಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
 
ಈ ಹಿಂದೆ ಸಿಗುತ್ತಿದ್ದ ಗುಣಮಟ್ಟದ ಬಣ್ಣಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಸಾಕಷ್ಟು ಕಡೆ ಮಾರಾಟವಾಗುವ ಬಣ್ಣಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಯೋಗ್ಯವಲ್ಲದ ಬಣ್ಣಗಳನ್ನು ಬಳಕೆ ಮಾಡುವುದರಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. 
 
- ಹೋಳಿ ಹಬ್ಬದಲ್ಲಿ ಯಾವ ರೀತಿಯ ಬಣ್ಣಗಳನ್ನು ಉಪಯೋಗಿಸಬೇಕು?
ಈಗೆಲ್ಲಾ ಪರಿಸರ ಸ್ನೇಹಿ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದನ್ನೇ ಬಳಸಬೇಕು. ಕೆಲ ಮರಮಟ್ಟುಗಳನ್ನು ಉಪಯೋಗಿಸಿ ಮನೆಯಲ್ಲೂ ಕೂಡ ನೈಸರ್ಗಿಕ ಬಣ್ಣಗಳನ್ನು ತಯಾರಿಸಲಾಗುತ್ತದೆ. ಅಂತಹ ಬಣ್ಣಗಳ ಖರೀದಿಗೆ ಗಮನ  ಕೊಡಬೇಕು. 
 
- ಯಾವ ಬಣ್ಣ ಹೆಚ್ಚು ಹಾನಿಕಾರಕ ?
ಕೆಂಪು ಬಣ್ಣದಲ್ಲಿ ಮರ್ಕ್ಯೂರಿ ಸಲ್ಫೈಟ್ ಅಂಶ ಇರುವುದರಿಂದ ಚರ್ಮಕ್ಕೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಅಲ್ಲದೆ, ಗಾಢವಾದ ಎಲ್ಲ ಬಣ್ಣಗಳಲ್ಲೂ ಈ ರಾಸಾಯನಿಕ ಅಂಶ ಇರುವುದರಿಂದ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
 
- ಬಣ್ಣದಿಂದ ಆರೋಗ್ಯದ ಮೇಲೆ ಬೀರುವ ದೀರ್ಘಾವಧಿ ಪರಿಣಾಮ ಏನು ?
ಎಲ್ಲ ಬಣ್ಣಗಳಲ್ಲಿ ಮೆಟಲ್ ಎನ್ನುವ ರಾಸಾಯನಿಕ ಅಂಶ ಇರುವುದರಿಂದ ಅದು ನಿಧಾನವಾಗಿ ಚರ್ಮದೊಳಗೆ ಇಳಿದು, ಕ್ಯಾನ್ಸರ್ ತಂದೊಡ್ಡುವ ಅಪಾಯವೂ ಇರುತ್ತದೆ.
 
- ಮುನ್ನೆಚ್ಚರಿಕೆ ಕ್ರಮಗಳೇನು ? 
ಹೋಳಿಯಾಟದ ಸಂಭ್ರಮಕ್ಕೂ ಮುನ್ನ ಮೈ ತುಂಬಾ ಬಟ್ಟೆ ತೊಡಬೇಕು. ಮೈಗೆ ಕೊಬ್ಬರಿ ಅಥವಾ ಬಾದಾಮಿ ಎಣ್ಣೆ  ಲೇಪಿಸಿಕೊಳ್ಳಬೇಕು. ಕಣ್ಣು ಮತ್ತು ಕಿವಿ ಹಿಂಭಾಗ ಮತ್ತು ಉಗುರಿನ ತೆಳುವಾದ ಚರ್ಮದ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಎಣ್ಣೆ ಲೇಪಿಸಿಕೊಳ್ಳಬೇಕು. ಹೆಚ್ಚು ನೀರು ಕುಡಿಯಬೇಕು. ಇದರಿಂದ ಬಣ್ಣ ಚರ್ಮದ ಅಳಕ್ಕೆ ಇಳಿಯುವುದನ್ನು ನೀರಿನ ಅಂಶ ತಡೆಯುತ್ತದೆ.
 
- ಮೈಕಾಂತಿ ಮತ್ತು ಮುಖದ ತ್ವಚೆ, ತುಟಿ ಹಾಗೂ ಕಣ್ಣಿನ ರಕ್ಷಣೆ ಹೇಗೆ?   
ಹೋಳಿ ಸಂಭ್ರಮ ಸಾಮಾನ್ಯವಾಗಿ ಅಂಗಳದಲ್ಲಿ ನಡೆಯುವ ಹಬ್ಬ. ಹಾಗಾಗಿ ಬಿಸಿಲಿನ ಕಾವು ಇದ್ದೇ ಇರುತ್ತದೆ. ವಿವಿಧ ರೀತಿಯ ವ್ಯಾಸಲಿನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮೈ ಹಾಗೂ ಮುಖಕ್ಕೆ ಯಥೇಚ್ಚವಾಗಿ ಲೇಪಿಸಿಕೊಳ್ಳಬೇಕು.
 
ಸಕ್ಕರೆ, ಜೇನುತುಪ್ಪ, ಚಿಟಿಕೆ ನಿಂಬೆ ರಸ ಬೆರೆಸಿದ ಲೇಪನ ಮೈಗೆ ಹಚ್ಚಿಕೊಂಡು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡರೆ  ಮೈ ಕಾಂತಿ ಮತ್ತು ತ್ವಚೆ ಹಾಳಾಗುವುದಿಲ್ಲ. 
 
ಆಚರಣೆ ವೇಳೆ ಮುನ್ನೆಚ್ಚರಿಕೆಯಾಗಿ ಕನ್ನಡಕ ಧರಿಸುವುದು ಸೂಕ್ತ. ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜದೆ, ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಕೂಡಲೇ ಶುದ್ಧವಾದ ನೀರಿನಿಂದ ಕಣ್ಣಿನಲ್ಲಿ ಸೇರಿರುವ ಬಣ್ಣ ಸಂಪೂರ್ಣವಾಗಿ ಹೋಗುವವರೆಗೂ ತೊಳೆದು, ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. 
 
ಹೋಳಿ ಹಬ್ಬವನ್ನು ಸಂತೋಷ ಹಾಗೂ ಇನ್ನೊಬ್ಬರಿಗೆ ನೋವಾಗದಂತೆ ಆಡುವುದು ಒಳ್ಳೆಯದು. ಓಕುಳಿಯ ನೆಪದಲ್ಲಿ ರಾಸಾಯನಿಕ ಬಣ್ಣ ಎರಚಾಡುವುದು ಒಳ್ಳೆಯದಲ್ಲ. ಬಣ್ಣ ಹಚ್ಚುವಾಗ ಸಂತೋಷದಿಂದ ಹಾಕುತ್ತೇವೆ. ಆದರೆ, ಬಣ್ಣದ ರಾಸಾಯನಿಕ ಅಂಶಗಳು ದೇಹ ಸೇರಿ ನಾನಾ ರೀತಿಯ ಅನಾರೋಗ್ಯ ಉಂಟಾಗಲು ಕಾರಣವಾಗುತ್ತದೆ. 
 
- ಯಾರೆಲ್ಲಾ ಬಣ್ಣದ ಆಟದಿಂದ ದೂರವಿರಬೇಕು ?
ಚರ್ಮದ ಅಲರ್ಜಿ, ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ದೂರವಿರಬೇಕು. ಅಲ್ಲದೆ, ಫೇಷಿಯಲ್ ಮಾಡಿಸಿಕೊಂಡವರು ಮುಖದ ಮೇಲೆ ಬಣ್ಣ ಬೀಳದಂತೆ ಎಚ್ಚರಿಕೆ ವಹಿಸಬೇಕು.  
 
ಮಕ್ಕಳ ಬಾಯಿಗೆ ಬಣ್ಣ ಹೋಗದಂತೆ ಪೋಷಕರು ಕೂಡ ನಿಗಾ ವಹಿಸಬೇಕು. ಬಣ್ಣದ ವಾಟರ್ ಗನ್, ವಾಟರ್ ಬಲೂನ್  ಉಪಯೋಗಿಸುವ ಸಂದರ್ಭದಲ್ಲಿ ಅತಿ ಎಚ್ಚರ ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT