ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸಮಯ ಈ ಕ್ಷಣವೂ...

12,700 ಅಡಿಗಳ ಎತ್ತರದಿಂದ ಭುವಿಗೆ ಧುಮುಕಿದ ಅಂಗವಿಕಲ
Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಾಹಕ್ಕೆ ಎದುರಾಗಿ ಈಜುವ ತಾಕತ್ತಿನಲ್ಲಿರುವ ಮಜಾ ಆ ಪ್ರವಾಹದ ಜೊತೆಯಲ್ಲಿಯೇ ಈಜುತ್ತಾ, ತೇಲುತ್ತಾ, ಹೋಗುವುದರಲ್ಲಿ ಸಿಗಲಾರದು. ಸವಾಲು ಇಲ್ಲದ ಸಾಹಸ ನೀಡುವ ಮಜವಾದರೂ ಏನು? 
 
ಈಚೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಸಾಹಸಿಯೊಬ್ಬರು ಸುಮಾರು 12,700 ಅಡಿಗಳ ಎತ್ತರದಿಂದ ಭುವಿಗೆ ಧುಮುಕಿದಾಗ ಹಾಗೆನಿಸಿದ್ದು ನಿಜ. 
 
ಸಾವಿರಾರು ಅಡಿ ಎತ್ತರದಿಂದ ಪ್ಯಾರಾಚೂಟ್‌ ಕಟ್ಟಿಕೊಂಡು ಭುವಿಗೆ ಜಿಗಿಯುವ ಸ್ಕೈಡೈವಿಂಗ್‌ ಸಾಹಸ ಹೊಸತೇನಲ್ಲ. ಆದರೆ, ಈ ಸಾಹಸ ಕ್ರೀಡೆಯಲ್ಲಿ ಪ್ರತಿಬಾರಿಯೂ ಹೊಸ ಅನುಭವ ಸಿಗುತ್ತದೆ. ರೋಮಾಂಚನ ಉಂಟು ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ‘ನನ್ನಿಂದ ಸಾಧ್ಯ’ ಎಂಬ ಭಾವನೆ ಮೂಡಿಸುತ್ತದೆ.
 
ಸಾಹಸಕ್ಕಿಳಿಯುವ ಮುನ್ನ ಆತಂಕವಿದ್ದರೂ ಆ ಪ್ರಕ್ರಿಯೆ ಬಳಿಕ ಸಿಗುವ ಆನಂದವೇ ಬೇರೆ. ವಿದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಸಾಹಸ ಕ್ರೀಡೆ ಭಾರತದಲ್ಲೂ ಪ್ರಚಲಿತಕ್ಕೆ ಬರುತ್ತಿದೆ. ಆದರೆ, ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ರಾಜ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಹಸ ಕೇಂದ್ರವನ್ನೇ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ.
 
ಏನಿದು ಸ್ಕೈಡೈವಿಂಗ್‌..?
ಹೆಲಿಕಾಪ್ಟರ್‌ ಮೂಲಕ ಸಾವಿರಾರು ಅಡಿ ಎತ್ತರದಿಂದ ಪ್ಯಾರಾಚೂಟ್‌ ಕಟ್ಟಿಕೊಂಡು ಭುವಿಗೆ ಜಿಗಿಯುವ ಸಾಹಸ ಕ್ರೀಡೆಯೇ ಸ್ಕೈಡೈವಿಂಗ್‌. ಪ್ಯಾರಾಚೂಟ್‌ ಜಂಪ್‌ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಟೆಂಡೆಮ್‌, ಸೋಲೊ, ಲೈಸೆನ್ಸ್‌ ಜಂಪ್‌ಗಳಿರುತ್ತವೆ. ಸೋಲೊ ಎಂದರೆ ಒಬ್ಬರೇ ಜಂಪ್ ಮಾಡುವುದು. ಟೆಂಡೆಮ್ ಜಂಪಿಂಗ್‌ನಲ್ಲಿ ಮಾರ್ಗದರ್ಶಕರ ಸಹಾಯದಿಂದ ಭುವಿಗೆ ಜಿಗಿಯುವುದು.
 
ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಸಾಹಸಿಗರನ್ನು ಹೊತ್ತ ನಾಲ್ಕು ಸೀಟಿನ ಹೆಲಿಕಾಪ್ಟರ್‌ ಹಾರಾಡುತ್ತಿರುತ್ತದೆ. ಒಬ್ಬ ಪೈಲಟ್‌, ಇಬ್ಬರು ಮಾರ್ಗದರ್ಶಿಗಳು ಹಾಗೂ ಒಬ್ಬ ಸಾಹಸ ಪ್ರದರ್ಶನ ಆಕಾಂಕ್ಷಿ ಇರುತ್ತಾರೆ. ಹೆಲಿಕಾಪ್ಟರ್‌ನಿಂದ ವ್ಯಕ್ತಿ ಜಿಗಿದ ಹಲವು ಸೆಕೆಂಡ್‌ಗಳ ಬಳಿಕ ಸ್ವಯಂಚಾಲಿತ ಪ್ಯಾರಾಚೂಟ್‌ ಬಿಚ್ಚಿಕೊಳ್ಳುತ್ತದೆ. ಅಲ್ಲಿಂದ ಭುವಿಗೆ ತಲುಪಲು ಹತ್ತಾರು ನಿಮಿಷ ಹಿಡಿಯುತ್ತದೆ.

ಟೆಂಡೆಮ್‌ ಜಂಪಿಂಗ್ ವೇಳೆ ಅಂತರ ರಾಷ್ಟ್ರೀಯ ಪ್ರಮಾಣಪತ್ರ ಹೊಂದಿರುವ ತರಬೇತುದಾರರು ಜೊತೆಗಿರುತ್ತಾರೆ. ಐದಾರು ಬಾರಿ ಮಾರ್ಗದರ್ಶಕರ ನೆರವಿನಿಂದ ಜಂಪ್‌ ಮಾಡಿದ ಮೇಲೆ ಸೋಲೊ ಜಂಪ್‌ನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ನಂತರ ಲೈಸೆನ್ಸ್‌ ಜಂಪಿಂಗ್ ಮಾಡಬಹುದು.
ಜಕ್ಕೂರಿನಲ್ಲಿ ಮೊದಲು...
 
ಮೊದಲ ಮಹಾಯುದ್ಧದಿಂದಲೇ ಪ್ಯಾರಾಚೂಟ್‌ ಪ್ರಚಲಿತಕ್ಕೆ ಬಂತು. ಭಾರತದಲ್ಲಿ ವಾಯುಪಡೆಯಲ್ಲಿ ಮೊದಲು ಬಳಸಲಾಯಿತು. 1966ರಲ್ಲಿ ಟರ್ಕಿಯಲ್ಲಿ ನಡೆದ ವರ್ಲ್ಡ್ ಏರ್‌ ಗೇಮ್ಸ್‌ನಲ್ಲಿ ಭಾರತೀಯ ವಾಯುಪಡೆ ಸ್ಕೈಡೈವಿಂಗ್ ತಂಡ ಪಾಲ್ಗೊಂಡಿತ್ತು. ಸಾಹಸಮಯ ಕ್ರೀಡೆಯಾಗಿ 1994ರಲ್ಲಿ ಚಟುವಟಿಕೆಗಳು ಆರಂಭವಾದವು. ಬೆಂಗಳೂರಿನ ಸಮೀಪದ ಜಕ್ಕೂರು ವಾಯುನೆಲೆಯಲ್ಲಿ ಮೊದಲ ಬಾರಿ ಸ್ಕೈಡೈವಿಂಗ್‌ ಪ್ರದರ್ಶನ ಜರುಗಿತು.
 
ಸ್ಕೈಡೈವಿಂಗ್‌ ದುಬಾರಿ ಸಾಹಸ ಕೂಡ. ಏಕೆಂದರೆ ಒಮ್ಮೆ ಜಂಪ್‌ ಮಾಡಲು ₹ 30 ಸಾವಿರ ವೆಚ್ಚ ತಗಲುತ್ತದೆ. ಏಕೆಂದರೆ ಪರವಾನಗಿ ಪಡೆಯಲು ತಗಲುವ ವೆಚ್ಚ, ಹೆಲಿಕಾಪ್ಟರ್‌, ಪೈಲಟ್‌, ವಿಮಾನ ನಿಲ್ದಾಣ, ತರಬೇತುದಾರ ಎಂದೆಲ್ಲಾ ತುಂಬಾ ಖರ್ಚು ಮಾಡಬೇಕಾಗುತ್ತದೆ. ವಯಸ್ಸು 18 ದಾಟಿದವರಿಗೆ ಮಾತ್ರ ಸ್ಕೈಡೈವಿಂಗ್‌ಗೆ ಅವಕಾಶ ವಿರುತ್ತದೆ. ಸಾಹಸಿಗರಿಗೆ ತಂತ್ರ, ಕೌಶಲದ ತರಬೇತಿ ನೀಡಲಾಗುತ್ತದೆ. 14 ಸಾವಿರ ಅಡಿ ಎತ್ತರದಿಂದಲೂ ಕೆಳಗೆ ಧುಮುಕಲು ಅವಕಾಶವಿರುತ್ತದೆ.
 
ಭಾರತದಲ್ಲಿ ಸ್ಕೈಡೈವಿಂಗ್‌ ಇನ್ನೂ ಒಂದು ಕ್ರೀಡೆಯಾಗಿ ಮಾನ್ಯವಾಗಿಲ್ಲ. ಎಲ್ಲಿ ಬೇಕಾದರೂ ಸ್ಕೈಡೈವಿಂಗ್ ಮಾಡಲು ಅವಕಾಶ ಇಲ್ಲ. ಭಾರತದ ರಾಚೆಲ್‌ ಥಾಮಸ್‌, ಶೀತಲ್‌ ಮಹಾಜನ್ ಸೇರಿದಂತೆ ಹಲವರು ವಿದೇಶದಲ್ಲೂ ಗಮನ ಸೆಳೆದಿದ್ದಾರೆ.

100ಕ್ಕೂ ಅಧಿಕ ಸ್ಕೈಡೈವಿಂಗ್‌ ಜಂಪ್‌ ಮಾಡಿದ್ದಾರೆ. ಸ್ಕೈಡೈವಿಂಗ್‌ಗೆ ಸಂಬಂಧಿಸಿದಂತೆ ಹಲವು ಫೆಡರೇಷನ್‌, ಸಂಸ್ಥೆಗಳು ಇದ್ದು, ತರಬೇತಿ ನೀಡುತ್ತಿವೆ. ಅಲ್ಲದೆ, ಹಲವು ಖಾಸಗಿ ಸಂಸ್ಥೆಗಳೂ ಇವೆ.

ಇದು ಅಪಾಯಕಾರಿ ಸಾಹಸ ಕ್ರೀಡೆ ಕೂಡ. ಎಷ್ಟು ರೋಚಕವೋ ಅಷ್ಟೇ ಸಾವಿನೊಂದಿಗೆ ಸೆಣಸಾಟವೂ ಆಗಿರುತ್ತದೆ. ತಾಂತ್ರಿಕ ಎಡವಟ್ಟುಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
 
ಮೈಸೂರಿನಲ್ಲಿ ‘ಏರೋ ಕ್ರೀಡಾ’ ತಾಣ
ಪ್ರವಾಸಿ ತಾಣ ಅರಮನೆಗಳ ನಗರಿಯನ್ನು ‘ಏರೋ ಕ್ರೀಡಾ’ ತಾಣವನ್ನಾಗಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅದಕ್ಕಾಗಿ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣ ಹಾಗೂ ವರುಣಾ ಕೆರೆಯನ್ನು ಆಯ್ಕೆ ಮಾಡಿಕೊಂಡಿದೆ. ವಿವಿಧ ಸಾಹಸ ಕ್ರೀಡೆಗಳನ್ನು ಶಾಶ್ವತವಾಗಿ ಆಯೋಜಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಟೆಂಡರ್‌ ಕೂಡ ಆಹ್ವಾನಿಸಿದೆ. ಇನ್ನೆರಡು ತಿಂಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಸ್ಕೈಡೈವಿಂಗ್‌, ಪ್ಯಾರಾಗ್ಲೈಡಿಂಗ್, ಏರ್‌ ಬಲೂನ್ ರೈಡ್‌, ಹ್ಯಾಂಗ್‌ಗ್ಲೈಡಿಂಗ್, ಜಾಯ್‌ ರೈಡ್‌, ಪ್ಯಾರಾ ಸೇಲಿಂಗ್ ಸೇರಿದಂತೆ ಹಲವು ಸಾಹಸ ಕ್ರೀಡೆಗಳನ್ನು ನಿತ್ಯ ಆಯೋಜಿಸಲಿದೆ.

‘ನಿರ್ದಿಷ್ಟ ಶುಲ್ಕ ನೀಡಿ ಕ್ರೀಡಾಪಟುಗಳು, ಪ್ರವಾಸಿಗರು ಸೇರಿದಂತೆ ಯಾರು ಬೇಕಾದರೂ ಈ ಸೇವೆ ಬಳಸಿಕೊಳ್ಳಬಹುದು. ವಿಮಾನ ನಿಲ್ದಾಣ ಬಳಸಿಕೊಳ್ಳಲು ಅನುಮತಿ ಕೋರಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ.

ಏರೋ ಕ್ರೀಡೆ ಆಯೋಜಿಸಲು ಮೈಸೂರು ನೆಚ್ಚಿನ ಹಾಗೂ ಸುರಕ್ಷಿತ ವಲಯ’ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್ ಪ್ರತಿಕ್ರಿಯಿಸಿದರು.

* ಸ್ಕೈಡೈವಿಂಗ್‌ನಂಥ ಸಾಹಸಮಯ ಕ್ರೀಡೆಗಳು ಹೆಚ್ಚಾಗಿ ವಿದೇಶದಲ್ಲಿ ನಡೆಯುತ್ತವೆ. ಈಗ ಮೈಸೂರು ಕೂಡ ಪ್ರಸಿದ್ಧಿಗೆ ಬರುತ್ತಿದೆ. ಸ್ಕೈಡೈವಿಂಗ್‌ನಲ್ಲಿ ಪಾಲ್ಗೊಳ್ಳಲು ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಬರುತ್ತಿದ್ದಾರೆ.
–ಟೈಗರ್‌ ಸೋಲಂಕಿ, ಸಾಹಸ ಕ್ರೀಡಾ ಆಯೋಜಕ
 
 
ರಘುರಾಮ್‌ ಭಟ್‌ ಎಂಬ ಅಂಗವಿಕಲ ಸ್ಕೈಡೈವರ್‌
ಅಂಗವಿಕಲ ಸ್ಕೈಡೈವಿಂಗ್ ಸಾಹಸಿ ರಘುರಾಮ್‌ ಭಟ್‌ ಈಚೆಗೆ ಮೈಸೂರಿನಲ್ಲಿ 12 ಸಾವಿರ ಅಡಿ ಎತ್ತರದಿಂದ ಜಿಗಿದು ಹೊಸ ದಾಖಲೆ ಬರೆದರು. ಅಂಗವಿಕಲರೊಬ್ಬರು ಇಷ್ಟು ಅಡಿ ಎತ್ತರದಿಂದ ಸ್ಕೈಡೈವಿಂಗ್‌ ಜಂಪ್‌ ಪ್ರದರ್ಶನ ನೀಡಿದ್ದು ಭಾರತದ ಮಟ್ಟಿಗೆ ಇದೇ ಮೊದಲು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ನಾಲ್ಕು ಆಸನದ ಸೆಸ್ನಾ ಹೆಲಿಕಾಪ್ಟರ್‌ನಿಂದ ಪ್ಯಾರಾಚೂಟ್‌ ಬಳಸಿ ಮಾರ್ಗದರ್ಶಕರ ನೆರವಿನಿಂದ ಜಿಗಿದರು.

ಈಜುವಾಗ ಸಂಭವಿಸಿದ ಅವಘಡದಲ್ಲಿ ಕಾಸರಗೋಡಿನ ರಘುರಾಮ್‌ ಅವರು ಭುಜದ ಕೆಳಗಿನ ಭಾಗದಲ್ಲಿ ಸ್ವಾಧೀನ ಕಳೆದುಕೊಂಡಿದ್ದಾರೆ. ವ್ಹೀಲ್‌ಚೇರ್‌ನಲ್ಲೇ ಅವರ ತಿರುಗಾಟ. 30 ವರ್ಷ ವಯಸ್ಸಿನ ರಘುರಾಮ್ ಅವರೊಂದಿಗಿನ ಸಂದರ್ಶನ ಇಲ್ಲಿದೆ.

-ಸಮರ್ಥರಿಗೇ ಸವಾಲಾಗಿರುವ ಸ್ಕೈಡೈವಿಂಗ್‌ನತ್ತ ಒಲವು ಮೂಡಲು ಕಾರಣ?
ಅವಘಡದಿಂದ ಸ್ವಾಧೀನ ಕಳೆದುಕೊಂಡು 11  ವರ್ಷಗಳಾಗಿವೆ. ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತನಾಗಿದ್ದೆ. ಹೀಗೆ ಎಷ್ಟು ದಿನ ಬದುಕಬೇಕು ಎಂಬ ಯೋಚನೆಯಲ್ಲಿ ನಿರತನಾಗಿದ್ದಾಗ ವಾಹಿನಿಯೊಂದರಲ್ಲಿ ನಟ ಅಮೀರ್‌ ಖಾನ್‌ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇ ಕಾರ್ಯಕ್ರಮ ನನ್ನ ಬದುಕಿಗೆ ತಿರುವು ನೀಡಿತು. ಕಾರ್ಯಕ್ರಮದಲ್ಲಿ ಅಂಗವಿಕಲರೊಬ್ಬರು ನೀಡಿದ ಪ್ರದರ್ಶನ ನನ್ನ ಕಣ್ಣು ತೆರೆಸಿತು. ಅಂತರ್ಜಾಲ ಮೂಲಕ ಸ್ಕೈಡೈವಿಂಗ್ ಸಾಹಸದ ಬಗ್ಗೆ ತಿಳಿದುಕೊಂಡೆ.

-ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಲ್ಲಿ ಯಾವ ರೀತಿ ನಂಬಿಕೆ ಮೂಡಿಸಿದಿರಿ?
ಸ್ಕೈಡೈವಿಂಗ್ ಜಂಪ್ ಮಾಡುತ್ತೇನೆ ಎಂದು ಹೇಳಿದಾಗ ಕೆಲವರು ನಗು ಬೀರಿದ್ದು ನಿಜ. ಆದರೆ, ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ. ಸಮಸ್ಯೆ ಇರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ತರಬೇತಿ ವೇಳೆ ಮಾರ್ಗದರ್ಶಕರ ನಿರೀಕ್ಷೆಗೆ ಸ್ಪಂದಿಸಿ ಅವರ ಮನಸ್ಸು ಗೆದ್ದೆ. ಅಂಗವಿಕಲರಿಂದಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆ.

-ಸ್ಕೈಡೈವಿಂಗ್‌ ಜಂಪ್‌ಗೆ ಯಾವ ರೀತಿ ಸಿದ್ಧತೆ ನಡೆಸಿದಿರಿ?
ಬರೋಬ್ಬರಿ ಎರಡು ವರ್ಷ ತರಬೇತಿಯಲ್ಲಿ ಪಾಲ್ಗೊಂಡೆ. ವೈದ್ಯರ ಸಲಹೆ ಪಡೆದೆ. ಸ್ಕೈಡೈವಿಂಗ್‌ ವಿಡಿಯೊ ವೀಕ್ಷಿಸಿ ಸಿದ್ಧತೆ ನಡೆಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಬಳಿ ಧೈರ್ಯ ಹಾಗೂ ಛಲವಿತ್ತು. ಅಸ್ತಿತ್ವಕ್ಕೆ ಹೋರಾಟ ಎಂದಾಗ ಯಾವುದೇ ರೀತಿಯ ಭಯ ಇರೋದಿಲ್ಲ.

-ಈ ಸಾಹಸಕ್ಕಿಳಿಯಲು ಮುಂದಾದಾಗ ಕುಟುಂಬದವರಿಂದ ವಿರೋಧ ವ್ಯಕ್ತವಾಗಲಿಲ್ಲವೇ?
ಆರಂಭದಲ್ಲಿ ಪೋಷಕರಾದ ಸುಬ್ಬಣ್ಣ ಭಟ್‌ ಹಾಗೂ ಕಾವೇರಿ ಭಟ್‌ ವಿರೋಧ ವ್ಯಕ್ತಪಡಿಸಿದ್ದು ನಿಜ. ಏಕೆಂದರೆ, ಸ್ಕೈಡೈವಿಂಗ್‌ ಸಾಹಸವೇ ಅಂಥದ್ದು. ಅವರಂತೂ ತುಂಬಾ ಭಯಪಟ್ಟರು. ಇದು ಸಹಜ ಕೂಡ. ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆ. ನನ್ನ ಸಾಧನೆ ಕಂಡ ಅವರು ಈಗ ಖುಷಿಪಡುತ್ತಿದ್ದಾರೆ.

-ಸ್ಕೈಡೈವಿಂಗ್‌ ಸಾಹಸದ ಅನುಭವ ಹೇಗಿತ್ತು?
ರೋಮಾಂಚನ ಉಂಟು ಮಾಡಿತು ಎನ್ನುವುದಕ್ಕಿಂತ ನನ್ನ ಕನಸು ಈಡೇರಿದ ಕ್ಷಣವದು. ಆ ಅನುಭವವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಆ ಕ್ಷಣಕ್ಕೆ ನನ್ನ ಅಂಗವೈಕಲ್ಯ ಮರೆತು ಹೋಗಿತ್ತು. ನಾನು ಯಾರಿಗಿಂತ ಕಡಿಮೆಯೇನಲ್ಲ ಎಂಬ ಭಾವನೆ ಬಂತು.

-ಸ್ಕೈಡೈವಿಂಗ್ ಕನಸು ಈಡೇರಿದೆ. ಮುಂದೆ?
ಸ್ಕೈಡೈವಿಂಗ್‌ ಜಂಪ್ ಪೂರೈಸಿದ ಮೇಲೆ ನನ್ನ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ನನಗೂ ನನ್ನ ಮೇಲೆ ವಿಶ್ವಾಸ ದುಪ್ಪಟ್ಟಾಗಿದೆ. ಹೀಗೆಯೇ, ಬೇರೆ ಬೇರೆ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತೇನೆ. ವ್ಹೀಲ್‌ಚೇರ್‌ ಆಚೆಗೂ ಜಗತ್ತು ಇದೆ ಎಂದು ತೋರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT