ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಗಳ ಅನುಷ್ಠಾನಕ್ಕಾಗಿ ಹೆಚ್ಚಿತು ಸಾಲದ ಹೊರೆ

ಸಹಾಯಧನ, ಬಡ್ಡಿ ಪಾವತಿಯ ಮೊತ್ತ 10 ವರ್ಷಗಳಲ್ಲಿ ಭರ್ಜರಿ ಏರಿಕೆ
Last Updated 13 ಮಾರ್ಚ್ 2017, 4:07 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ  ಕಳೆದ ನಾಲ್ಕು ವರ್ಷಗಳಲ್ಲಿ ಘೋಷಿಸಿದ ವಿವಿಧ ‘ಭಾಗ್ಯ’ಗಳ ಅನುಷ್ಠಾನದ ಕಾರಣಕ್ಕೆ ರಾಜ್ಯ ಸರ್ಕಾರದ ಸಾಲದ ಹೊರೆ ಹೆಚ್ಚಳವಾಗುತ್ತಲೆ ಇದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸರ್ಕಾರದ ಸಾಲದ ಮೊತ್ತ ಭಾರೀ ಪ್ರಮಾಣದಲ್ಲಿ  ಹೆಚ್ಚಳವಾಗಿರುವುದು ನಿಜ. ಆದರೆ, ಅದನ್ನು ಅನುತ್ಪಾದಕ ವೆಚ್ಚಕ್ಕೆ ಬಳಸಿಲ್ಲ. ಮಾನವಸಂಪನ್ಮೂಲ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಕೆಲವು ಆರ್ಥಿಕ ತಜ್ಞರು ಹೇಳಿದರೆ ಇನ್ನು ಕೆಲವರು  ಕಲ್ಯಾಣ ರಾಜ್ಯದ ನಿರ್ಮಾಣ ಮತ್ತು ಜನರ ಆದಾಯದ ಹೆಚ್ಚಳಕ್ಕೆ ಇದು ಬಳಕೆಯಾಗಿಲ್ಲ. ಜನಪ್ರಿಯ ಯೋಜನೆಗಳ ಮೇಲೆ ಸವಾರಿ ಮಾಡಿ ಮತಗಳನ್ನು ಗಿಟ್ಟಿಸಲು ಮಾತ್ರ ಬಳಕೆಯಾಗಿದೆ ಎಂಬ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರಾಜ್ಯ ಸರ್ಕಾರ ಪ್ರಕಟಿಸಿರುವ ಮಧ್ಯಮಾವಧಿ ವಿತ್ತೀಯ ಯೋಜನೆ 2016–2020 ರ ಅಂಕಿ ಅಂಶಗಳ ಪ್ರಕಾರ, ವಿವಿಧ  ಭಾಗ್ಯಗಳಿಗೆ ನೀಡುತ್ತಿರುವ ಸಹಾಯಧನದ ಮೊತ್ತ 2011ರಲ್ಲಿ ₹9,287 ಕೋಟಿಯಷ್ಟಿತ್ತು. 2015–16ರಲ್ಲಿ ಈ ಮೊತ್ತ ₹18,688 ಕೋಟಿ ಗಳಿಗೆ ಏರಿಕೆಯಾಗಿದೆ.

ಕಳೆದ 10 ವರ್ಷಗಳ ಅಂಕಿ– ಅಂಶ ಗಮನಿಸಿದರೆ ಆಹಾರ, ಸಾರಿಗೆ ಸಹಾಯಧನ 5 ಪಟ್ಟು, ವಿದ್ಯುತ್‌ ಸಹಾಯಧನ 8 ಪಟ್ಟು, ಶಿಕ್ಷಣ, ಆರೋಗ್ಯ, ಕೃಷಿ ಸಹಾಯಧನ 7 ಪಟ್ಟು, ಸಾಲದ ಮೇಲಿನ ಬಡ್ಡಿ ಮತ್ತು ಋಣಸೇವೆಗಳಿಗೆ ಮಾಡುತ್ತಿರುವ ವೆಚ್ಚ 4 ಪಟ್ಟು  ಏರಿಕೆಯಾಗಿದೆ.
2007 ರಿಂದ ಈಚೆಗೆ ಆಶ್ವಾಸನೆಗಳ ಈಡೇರಿಕೆ ಎಂಬ ವಿಶೇಷ ಲೆಕ್ಕ ಶೀರ್ಷಿಕೆಯನ್ನು ಹಣಕಾಸು ಇಲಾಖೆ ಆರಂಭಿಸಿದೆ.  ಈ ಮೊತ್ತ ಎರಡೂವರೆ ಪಟ್ಟು ಹೆಚ್ಚಳವಾಗಿದೆ.

2007ರಲ್ಲಿ ಬಂಡವಾಳ ಮತ್ತು ಆಸ್ತಿ ಸೃಜನೆಗೆ ₹3,794 ಕೋಟಿ ಖರ್ಚಾಗಿದ್ದರೆ, 2016ರಲ್ಲಿ ₹26,341 ಕೋಟಿ ಮೀಸಲಿಡಲಾಗಿತ್ತು.
ತಜ್ಞರು ಹೇಳುವುದೇನು?: ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ  ಏರಿದ ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ಮುಗಿಯುವವರೆಗೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಜನಪ್ರಿಯ ಯೋಜನೆಗಳನ್ನಷ್ಟೇ ಜಾರಿ ಮಾಡಿ, ಖಜಾನೆಯ ಮೇಲೆ ಒತ್ತಡ ಹೇರುತ್ತಾ ಬರುತ್ತಿವೆ.  ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯುವವರು ಸಾಲ ತೀರಿಸಲಿ ಎಂಬ ಭಾವನೆಯಿಂದ ನಡೆದುಕೊಳ್ಳುವುದು ಸಾಮಾನ್ಯ  ಎಂಬಂತಾಗಿದೆ’ ಎನ್ನುತ್ತಾರೆ ಪಿಇಎಸ್‌ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್ ಸ್ಟಡೀಸ್‌ ನಿರ್ದೇಶಕ, ಆರ್ಥಿಕ ತಜ್ಞ ಪ್ರೊ.ಆರ್‌.ಎಸ್‌. ದೇಶಪಾಂಡೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವವರೆಗೆ ಅವರಲ್ಲಿ ಆರ್ಥಿಕ ಶಿಸ್ತು ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯಾದ ಮೇಲೆ ಭಾರಿ ಆರ್ಥಿಕ ಅಶಿಸ್ತು ಅವರ ಧೋರಣೆಯಾಗಿದೆ. ಹೀಗಾಗಿ ಸರ್ಕಾರದ ಸಾಲದ ಹೊರೆ ಬೃಹದಾಕಾರವಾಗಿ ಏರುತ್ತಿದೆ. ಸರ್ಕಾರ ದೊಡ್ಡ ಮೊತ್ತ ಸಾಲ ಮಾಡಿ, ಬಳಕೆ ಮಾಡಿದ್ದರೂ ಅದು ಮತಬ್ಯಾಂಕ್‌  ಹೆಚ್ಚಿಸಲು ಉಪಯೋಗಿವಾಗಿದೆ ವಿನಃ  ರಾಜ್ಯದ ಕಲ್ಯಾಣಕ್ಕೆ ಬಳಕೆಯಾಗಿಲ್ಲ’ ಎಂದು ವಿಶ್ಲೇಷಿಸಿದರು.

‘ಸಿದ್ದರಾಮಯ್ಯ ಅವರು ತಮ್ಮ ಸ್ವಂತ ದುಡ್ಡನ್ನು ಹೀಗೆ ಬೇಕಾಬಿಟ್ಟಿ ಖರ್ಚು ಮಾಡಿದ್ದರೆ ಆಕ್ಷೇಪಿಸುವ ಅಗತ್ಯವಿರಲಿಲ್ಲ. ಅವರು ಖರ್ಚು ಮಾಡುತ್ತಿರುವುದು ಜನರ ದುಡ್ಡು. ಅವರ ಕಾರ್ಯವೈಖರಿಯಲ್ಲಿ ಹಣಕಾಸಿನ ಅಸಮರ್ಪಕ ನಿರ್ವಹಣೆ ಎದ್ದುಕಾಣುವ ಅಂಶ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಿಸ್ತಿನಿಂದ ಹಣಕಾಸು ನಿರ್ವಹಿಸಿದ್ದರು. ಆ ಆರ್ಥಿಕ ಶಿಸ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಕಾಣಲು ಸಾಧ್ಯವಾಗಲಿಲ್ಲ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಅಭಿವೃದ್ಧಿಯ ಕುರುಹೂ ಕಾಣಿಸುತ್ತಿಲ್ಲ’ ಎಂದು ಹೇಳಿದರು.

‘ಎರಡು ಹೊತ್ತು ಊಟ ಕೊಟ್ಟರೆ ಜನ ಉಂಡು ಮಲಗುತ್ತಾರೆ. ಅದರ ಬದಲು ಜನರ ತಲಾದಾಯ ಹೆಚ್ಚಿಸಿ, ಉತ್ತಮ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಫಲವನ್ನು ಹೆಚ್ಚಾಗಿ ಬಳಸಿಕೊಂಡರೂ ಗ್ರಾಮೀಣಾಭಿವೃದ್ಧಿಯಲ್ಲಿ  ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಬಡತನ ನಿವಾರಣೆಯಾಗಿಲ್ಲ.   ಇಷ್ಟೆಲ್ಲಾ ಸಾಲ ಮಾಡಿದ ಮೇಲೆ ಅದನ್ನು ಕಲ್ಯಾಣಕ್ಕೆ ಬಳಸಿಕೊಳ್ಳಬೇಕಾಗಿತ್ತು’ ಎಂದೂ ಅವರು ಪ್ರತಿಪಾದಿಸಿದರು.

ಆರ್ಥಿಕ ತಜ್ಞ ಅಬ್ದುಲ್ ಅಜೀಜ್‌, ‘ಆದಾಯಕ್ಕಿಂತ ಖರ್ಚು ಹೆಚ್ಚಾದಾಗ  ಸಾಲ ಮಾಡುತ್ತಾರೆ. ಅಹಿಂದ ಸಿದ್ಧಾಂತವನ್ನು ನಂಬಿಕೊಂಡ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಕಾರ್ಯಕ್ರಮಗಳನ್ನುಜಾರಿ ಮಾಡಿದ್ದಾರೆ. ತೆರಿಗೆ ಮೂಲದಿಂದ ಬರುವ ಆದಾಯ ಇಂತಹ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಾಲದೇ ಇದ್ದಾಗ, ಸಾಲ ಮಾಡಲೇಬೇಕಾಗುತ್ತದೆ’ ಎಂದು ವಿವರಿಸಿದರು.

‘ಸಿದ್ದರಾಮಯ್ಯ ಅವರು ಸಂಬಳ, ಸಾರಿಗೆ ಖರ್ಚುಗಳಿಗಾಗಿ, ಸರ್ಕಾರದ ನಿರ್ವಹಣೆಗಾಗಿ ಸಾಲ ಮಾಡಿಲ್ಲ. ವಿತ್ತೀಯ ಕೊರತೆಯ ಮಿತಿಯಲ್ಲಿ ಸಾಲ ಎತ್ತಿದ್ದಾರೆ.  ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಮಾಡುವ ಖರ್ಚುಗಳನ್ನು ಅಭಿವೃದ್ಧಿ ವೆಚ್ಚ ಎಂದೇ ಇತ್ತೀಚಿನ ದಿನಗಳಲ್ಲಿ ಪರಿಭಾವಿಸಲಾಗುತ್ತಿದೆ.  ಕೇಂದ್ರ ಹಣಕಾಸು ಸಚಿವ ಅರುಣ್‌  ಜೇಟ್ಲಿ ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯ ಅನುತ್ಪಾದಕ ವೆಚ್ಚಗಳಿಗಾಗಿ ಸಾಲ ಮಾಡಿಲ್ಲ’ ಎಂದು ಅವರು ಹೇಳಿದರು.

‘ರಾಜಕಾರಣಿಗಳಿಗೆ ಮತದಾರರು ಪ್ರೇಮಿಗಳಿದ್ದಂತೆ. ಪ್ರೇಮಿಸುವ ಮುನ್ನ ನೀಡಿದ ಭರವಸೆಯನ್ನು ಹೇಗಾದರೂ ಈಡೇರಿಸಲೇಬೇಕು. ಪ್ರಣಾಳಿಕೆ ಮತ್ತು ಬಜೆಟ್‌ನಲ್ಲಿ ಘೋಷಿಸುವ ಭರವಸೆಗಳನ್ನು ಈಡೇರಿಸಬೇಕಲ್ಲವೇ. ಹೀಗಾಗಿ ಸಾಲ ಮಾಡಲೇಬೇಕಾಗಿದೆ’  ಎಂದು ಅಜೀಜ್‌ ಹೇಳಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಸ್‌. ಜಾಫೆಟ್‌, ‘ತಳ ಸಮುದಾಯಗಳ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸಾಕಷ್ಟು ವೆಚ್ಚ ಮಾಡಿದ್ದಾರೆ. ಅದನ್ನು ಅನುತ್ಪಾದಕ ವೆಚ್ಚ ಎನ್ನಲಾಗದು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ ಯೋಜನೆ ಹಾಗೂ ಅನುದಾನಗಳ ಸಾಮಾಜಿಕ ಪರಿಣಾಮ ಮುಂದಿನ ದಿನಗಳಲ್ಲಿ ಕಾಣಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT