ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ವೇಳೆಗೆ ‘ನವ ಭಾರತ’: ಪ್ರಧಾನಿ ಆಶಯ

Last Updated 13 ಮಾರ್ಚ್ 2017, 5:03 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲರನ್ನೂ ಒಳಗೊಳ್ಳುವ ನೀತಿ ಮೂಲಕ 2022ರ ವೇಳೆಗೆ ‘ನವ ಭಾರತ’ ನಿರ್ಮಿಸುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಯ ಗೆಲುವು ನವ ಭಾರತದ ನಿರ್ಮಾಣಕ್ಕೆ ತಳಹದಿ ಎಂದು ವ್ಯಾಖ್ಯಾನಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅವರು ಭಾನುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಮುಖಂಡರು ಮತ್ತು ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಈ ಗೆಲುವು ನವ ಭಾರತದ ತಳಹದಿಯಾಗಲಿದೆ. ಶೇ 65ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. ನವ ಭಾರತವು ಅಭೂತಪೂರ್ವ ಜಾಗೃತ ಮಹಿಳೆಯರದ್ದಾಗಲಿದೆ’ ಎಂದು ಪ್ರಧಾನಿ ಹೇಳಿದರು.

‘ನವಭಾರತದಲ್ಲಿ ಬಡಜನರು ಯಾವುದನ್ನೂ ದಾನಧರ್ಮದ ಮೂಲಕ ಪಡೆಯಲು ಬಯಸುವುದಿಲ್ಲ. ಆದರೆ ತಮ್ಮದೇ ಸ್ವಂತ ಮಾರ್ಗದಲ್ಲಿ ಸಂಪಾದಿಸುವ ಅವಕಾಶವನ್ನು ಕೇಳುತ್ತಾರೆ. ಈ ಬದಲಾವಣೆ ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ’ ಎಂದರು.

ಪ್ರಧಾನಿ ಅವರ ಪ್ರತಿ ಮಾತಿಗೂ ‘ಮೋದಿ! ಮೋದಿ! ಮೋದಿ!’ ಎಂಬ ಹರ್ಷೋದ್ಗಾರದ ಘೋಷಣೆಗಳು ಪ್ರತಿಧ್ವನಿಸುತ್ತಿದ್ದವು. ಇದಕ್ಕೂ ಮುನ್ನ ಬೆಳಿಗ್ಗೆ ಟ್ವೀಟ್‌ ಮಾಡಿದ್ದ ಪ್ರಧಾನಿ, ‘125 ಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲದಿಂದ ಅಭಿವೃದ್ಧಿಯ ನವ ಭಾರತ ಉದಯಿಸುತ್ತಿದೆ’ ಎಂದು  ಹೇಳಿದರು.

ನವ ಭಾರತ ನಿರ್ಮಾಣಕ್ಕೆ ಬದ್ಧತೆಯನ್ನು ತೋರಿಸುವ ಸಂದೇಶವನ್ನು ತಮ್ಮ ಮೊಬೈಲ್ ಆ್ಯಪ್‌ಗೆ ಕಳುಹಿಸುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ.

2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಗಾಂಧೀಜಿ, ಸರ್ದಾರ್ ವಲಭ ಭಾಯ್‌ ಪಟೇಲ್ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬಯ ಸಿದ್ದ ಹೆಮ್ಮೆಯ ರಾಷ್ಟ್ರ ನಮ್ಮದಾಗಬೇಕು ಎಂದು ಹೇಳಿದ್ದಾರೆ.

‘ದೇಶವು ಪ್ರತಿಯೊಬ್ಬ ನಾಗರಿಕನ ಶಕ್ತಿಯ ಬಲದಿಂದ ರೂಪಾಂತರ ಗೊಳ್ಳುತ್ತಿದೆ’ ಎಂದು ಮೋದಿ ಹೇಳಿದರು.

ವಿಧೇಯತೆಯ ಪ್ರತಿಪಾದನೆ: ‘ಮರದಲ್ಲಿ ಕಾಯಿಗಳು ಬೆಳೆದಂತೆ, ಎಷ್ಟು ದೊಡ್ಡದಿದ್ದರೂ ಅವು ಬಾಗತೊಡಗುತ್ತವೆ. ಪ್ರಕೃತಿ ನಮ್ಮನ್ನು ಪ್ರಭಾವಿಸುತ್ತದೆ. ಬಿಜೆಪಿ ಎಂಬ ಈ ಮರವನ್ನು ವಿಜಯದ ಹಣ್ಣುಗಳು ಆವರಿಸಿದಂತೆ, ಇನ್ನಷ್ಟು ವಿಧೇಯರಾಗಲು ಬಾಗುವುದು ನಮ್ಮ ಜವಾಬ್ದಾರಿ’ ಎಂದು ಪ್ರಧಾನಿ ಮೋದಿ ತಿಳಿಸಿದರು.

ಜನಸಂಘ ಮತ್ತು ಬಿಜೆಪಿಯ ಮುಖಂಡರಾದ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಕುಶಭಾವು ಠಾಕ್ರೆ ಮತ್ತು ಜನಾ ಕೃಷ್ಣಮೂರ್ತಿ ಅವರನ್ನು ಉಲ್ಲೇಖಿಸಿದ ಪ್ರಧಾನಿ, ‘ಈ ಆಲದ ಮರವನ್ನು ಬೆಳೆಸುವ ಸಲುವಾಗಿ ಅವರು ತಮ್ಮ ಯೌವನ ಮತ್ತು ಜೀವನವನ್ನು ಮುಡಿಪಾಗಿಟ್ಟರು’ ಎಂದರು.

‘ಅಧಿಕಾರವು ಆಡಳಿತ ನಡೆಸಲು ದೊರೆತ ಉಪಕರಣವಲ್ಲ, ಜನರ ಸೇವೆಯ ಸಾಧನ’ ಎಂದರು.

ದೇಶದ ಪ್ರತಿ ಭೂಪ್ರದೇಶದಲ್ಲಿಯೂ  ಪಕ್ಷವನ್ನು ಅಸ್ತಿತ್ವಕ್ಕೆ ತಂದಿರುವುದಕ್ಕಾಗಿ ಪಕ್ಷದ ಅಧ್ಯಕ್ಷ ಅಮಿತ್‌ ಷಾ, ಕೇಂದ್ರ ಮತ್ತು ರಾಜ್ಯಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

‌ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮತ್ತು ಪಕ್ಷದ ಮುಖಂಡರು ರಾಜಧಾನಿಯಲ್ಲಿ ರೋಡ್‌ಷೋ ನಡೆಸಿದರು.

ಬಡವರ ಪರ ನೀತಿಗೆ ಜಯ: ‘ಐದು ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿರುವ ಗೆಲವು 2014ರ ಲೋಕಸಭಾ ಚುನಾವಣೆ ಗೆಲುವಿಗಿಂತಲೂ ದೊಡ್ಡದು. 2019ರ ಲೋಕಸಭಾ ಚುನಾವಣೆಯಲ್ಲಿ ಇದಕ್ಕಿಂತ ದೊಡ್ಡ ಜಯ ಸಾಧಿಸುತ್ತೇವೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದರು.

ನವದೆಹಲಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಷಾ, ಎನ್‌ಡಿಎ ಸರ್ಕಾರದ ಬಡವರ ಪರ ಕಾರ್ಯಕ್ರಮವು ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ದೊಡ್ಡಮಟ್ಟದ ಗೆಲುವಿಗೆ ಕಾರಣ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT