ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಕಲಾಪಕ್ಕೆ ಉಪಚುನಾವಣೆ ಕರಿನೆರಳು

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಂಜನಗೂಡು ಮತ್ತು  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು  ಮಹತ್ವದ ಬಜೆಟ್‌ ಅಧಿವೇಶನದ ಕಲಾಪದ ಮೇಲೆ ಕರಿನೆರಳಂತೆ ಕಾಡುವ ಸಾಧ್ಯತೆ ಇದೆ.

ಇದೇ 15 ರಂದು ಬಜೆಟ್‌ ಮಂಡನೆಯಾಗಲಿದ್ದು, 28ರವರೆಗೆ ಅಧಿವೇಶನ ನಿಗದಿಯಾಗಿದೆ.  ಏ.9 ರಂದು ನಡೆಯುವ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಇದೇ 14 ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ಈ ಚುನಾವಣೆ ಆಡಳಿತಾರೂಢ ಕಾಂಗ್ರೆಸ್‌, ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿವೆ. ಚುನಾವಣೆ ಪ್ರಚಾರದ ತರಾತುರಿಯಲ್ಲಿ ಎಷ್ಟು ದಿನಗಳ ಕಾಲ ಅಧಿವೇಶನ ನಡೆಯುತ್ತದೆ ಎಂಬ ಜಿಜ್ಞಾಸೆಯೂ ಆರಂಭವಾಗಿದೆ.

ಎರಡೂ ಕ್ಷೇತ್ರಗಳ ಚುನಾವಣಾ ಪ್ರಚಾರ ಮಾ.15 ರ ನಂತರ ಕಾವೇರಲಿರುವುದು ಸಹಜ.  ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಚಿತ್ತ ಬಜೆಟ್‌ಗಿಂತಲೂ ಚುನಾವಣೆಯ ಮೇಲೆ ಇರುವುದು ದಿಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ  ಗೆಲುವು ಅವರಿಗೆ ಪ್ರತಿಷ್ಠೆಯಾಗಿದೆ.

ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ ಪ್ರಸಾದ್, ತಮ್ಮ ಎದುರಾಳಿ ಸಿದ್ದರಾಮಯ್ಯ ಅವರೇ ಎಂದು ಘೋಷಿಸಿದ್ದಾರೆ. ಹೀಗಾಗಿ ಈ ಕ್ಷೇತ್ರ ಪ್ರಸಾದ್‌ ಮತ್ತು ಸಿದ್ದರಾಮಯ್ಯ ಅವರ ಜಿದ್ದಾಜಿದ್ದಿಯ ಅಖಾಡವಾಗಿ ಪರಿಣಮಿಸಿದೆ.

ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನಿಂದ ದೇಶದಲ್ಲೇ ಕಾಂಗ್ರೆಸ್‌ ಪಕ್ಷ ಕಂಗೆಟ್ಟು ಹೋಗಿದೆ. ಈ ಕಳವಳ ಸಿದ್ದರಾಮಯ್ಯ ಅವರನ್ನೂ ಕಾಡಿದ್ದು ಈ ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲು  ಸಂಪುಟದ ಎಲ್ಲಾ ಸಚಿವರು ಮತ್ತು ಪಕ್ಷದ ಎಲ್ಲಾ ಶಾಸಕರನ್ನು ಎರಡೂ ಕ್ಷೇತ್ರಗಳಿಗೂ ಕಳುಹಿಸಲು ತೀರ್ಮಾನಿಸಿದ್ದಾರೆ.  ಪ್ರತಿ ಕ್ಷೇತ್ರಕ್ಕೆ ತಲಾ 12 ಸಚಿವರು ಮತ್ತು  ತಲಾ 50 ಶಾಸಕರನ್ನು ಚುನಾವಣೆ ಉಸ್ತುವಾರಿಗೆ ನಿಯೋಜಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಜೆಟ್‌ ಮಂಡನೆ ಬಳಿಕ ಸದನದಲ್ಲಿ ಚರ್ಚೆ ಮತ್ತು ಅನುಮೋದನೆಗೆ  ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಉಪಸ್ಥಿತಿ ಅಗತ್ಯ. ಆದರೆ, ಮುಖ್ಯಮಂತ್ರಿ ಮತ್ತು ಇತರ ಸಚಿವರು ಎಷ್ಟರ ಮಟ್ಟಿಗೆ ಸದನದಲ್ಲಿ ಹಾಜರಿರುತ್ತಾರೆ ಎಂಬುದು ಈಗ ಯಕ್ಷ ಪ್ರಶ್ನೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಯಡಿಯೂರಪ್ಪ ಅಲ್ಲಿ ಬೀಡು ಬಿಟ್ಟು ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರೂ ಚುನಾವಣೆ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

ಉಭಯ ಪಕ್ಷಗಳ ನಾಯಕರು ಚುನಾವಣೆಯ ಹಣಾಹಣಿಯಲ್ಲಿ ತೊಡಗುವುದರ ಪರಿಣಾಮ ಅಧಿವೇಶನದಲ್ಲಿ ಶಾಸಕರ ಗೈರು ಹಾಜರಿ  ಹೆಚ್ಚಾಗುವ ಸಂಭವ ಇದೆ. ಹೀಗಾಗಿ ಬಜೆಟ್‌ ಅಧಿವೇಶನದ ಅವಧಿ ಮೊಟಕುಗೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT