ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಚ್ಚಿಬಿದ್ದು ಕೇಳಿ ನೀವು, ಹೆಣ್ಣು ತೊಡೆತಟ್ಟಿ ನಿಂತಾಗಿದೆ’

ಸಮಾಜವಾದಿ ಕ್ರಾಂತಿ ಶತಮಾನೋತ್ಸವ
Last Updated 12 ಮಾರ್ಚ್ 2017, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಚ್ಚಿಬಿದ್ದು ಕೇಳಿ ನೀವು, ಹೆಣ್ಣು ತೊಡೆತಟ್ಟಿ ನಿಂತಾಗಿದೆ... ತೊಟ್ಟಿಲು ತೂಗುವ ಕೈ ದೂಳೆಬ್ಬಿಸಿ ಮುನ್ನುಗ್ಗಿಯಾಗಿದೆ...’ ಎಂಬ ಕವಯತ್ರಿ ಶಾಕಿರಾ ಬಾನು ಅವರ ಸಾಲುಗಳು ಕೇಳುತ್ತಿದ್ದಂತೆ ಅಸಂಘಟಿತ ವಲಯದ ಮಹಿಳೆಯರ ಕರತಾಡನ ಮುಗಿಲುಮುಟ್ಟಿತ್ತು.

ನಗರದ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣ­ದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮನೆಗೆಲಸ, ಕೂಲಿ ಕೆಲಸ, ಗಾರ್ಮೆಂಟ್ಸ್‌ ಕೆಲಸದ ಮಹಿಳೆಯರೇ ತುಂಬಿದ್ದರು.

‘ಎಲ್ಲವನ್ನೂ ಸಹಿಸಿಕೊಳ್ಳಬೇಕಮ್ಮ, ಏರುದನಿಯಲ್ಲಿ ಮಾತಾಡ್ಬಾರ್ದು ಎಂದು ನಾನು ಸಣ್ಣಾಕಿ ಇದ್ದಾಗ ಅಪ್ಪ ಸದಾ ಹೇಳುತ್ತಿದ್ದ. ಅದೇ ಬಹಳಷ್ಟು ಕಾಲ ದೌರ್ಜನ್ಯವನ್ನು ಮೌನದಿಂದ ಸಹಿಸಿಕೊಳ್ಳುವಂತೆ ಮಾಡಿತ್ತು. ನನ್ನಂತೆ ಇತರರಿಗೂ ಆ ಸಮಸ್ಯೆ ಆಗುತ್ತಿದೆ ಎಂದು ತಿಳಿದಾಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದೆ’ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ಶಾಂತಮ್ಮ  ತಮ್ಮ ನೋವುಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ ಆರ್‌. ಇಂದಿರಾ, ‘ನಮ್ಮೆದುರಿಗೆ ಹೋರಾಟದ ಆಯ್ಕೆ, ಹೊಂದಾಣಿಕೆ ಆಯ್ಕೆ ಎರಡೂ ಇವೆ. ವೈಯಕ್ತಿಕ ನೆಮ್ಮದಿ ಎನ್ನುವ ಭ್ರಮೆಯನ್ನು ಬಿಟ್ಟು ಸಾಮಾಜಿಕ ಹೋರಾಟಕ್ಕೆ ಅಣಿಯಾಗಬೇಕು’ ಎಂದು  ನುಡಿದರು.

‘ಪುರುಷರೇ ನೀವು ನಮ್ಮ ಜತೆ ಯಾವುದೇ ತರಹದ ದುರ್ವರ್ತನೆಗಳನ್ನು ಮಾಡುವಂತಿಲ್ಲ. ಮಾಡಿದರೆ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸುವ ಜವಾಬ್ದಾರಿ ಮಹಿಳಾ ಚಳವಳಿಗಳಿವೆ’ ಎಂದು ಅವರು ತಿಳಿಸಿದರು.

ಪ್ರಾಧ್ಯಾಪಕಿ ಎಂ.ಎಸ್‌. ಆಶಾದೇವಿ ಮಾತನಾಡಿ, ‘ಎಲ್ಲಾ ವಿರೋಧಗಳ ನಡುವೆಯೂ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆದರೆ, ಕೊಳೆಯಾದ ಕೈಯನ್ನು ಹೇಗೆ ತೊಳೆದು ಕೊಳ್ಳುತ್ತೇವೆಯೊ ಹಾಗೆಯೇ ದೇಹವನ್ನು ಸ್ವಚ್ಛಗೊಳಿಸಿ ಮುಂದಿನ ಹೆಜ್ಜೆ ಇಡಬೇಕು’ ಎಂದು  ಅವರು ಹೇಳಿದರು.

ಶಿಕ್ಷಣಕ್ಕೆ ತೊಂದರೆ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸಿ ಹೋದರೆ ಕಾಲೇಜಿನಲ್ಲಿ ವಿರೋಧಿಸುತ್ತಾರೆ. ಆದರೆ, ಧರಿಸದೆ ಹೋದರೆ ಕುಟುಂಬದವರು ವಿರೋಧಿಸುತ್ತಾರೆ. ಎಷ್ಟೋ ವರ್ಷಗಳ ನಂತರ

ಹೆಣ್ಣುಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಅದು ಖುಷಿಯ ಸಂಗತಿ. ಆದರೆ ಈ ಬುರ್ಖಾದ ಪರ-ವಿರೋಧದ ವಾದದಿಂದ
ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ.
–ಡಾ. ಕೆ. ಷರೀಫಾ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT