ಸಾಲ ಮರುಪಾವತಿಗೆ ದಾರಿ ಹುಡುಕುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಮೂಲೆ ನಿವೇಶನ, ಫ್ಲ್ಯಾಟ್‌ಗೆ ಬೇಡಿಕೆ ಕುಸಿತ

ಆರ್ಥಿಕ ಮುಗ್ಗಟ್ಟಿನಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸದ್ಯಕ್ಕೆ ಇದರಿಂದ ಪಾರಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮೂಲೆ ನಿವೇಶನ, ಫ್ಲ್ಯಾಟ್‌ಗೆ ಬೇಡಿಕೆ ಕುಸಿತ

ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸದ್ಯಕ್ಕೆ ಇದರಿಂದ  ಪಾರಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿರುವ ಫ್ಲ್ಯಾಟ್‌ಗಳ ಮಾರಾಟ ಹಾಗೂ ಮೂಲೆ ನಿವೇಶನಗಳ ಹರಾಜಿನಿಂದ ಬರುವ ಆದಾಯದಿಂದ ಸಾಲ ತೀರಿಸುವ ಪ್ರಾಧಿಕಾರದ ಲೆಕ್ಕಾಚಾರವೂ ತಲೆ ಕೆಳಗಾಗಿದೆ. ಇನ್ನೊಂದೆಡೆ, ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಯಿಂದ ಬರಬೇಕಾದ  ಶುಲ್ಕದ ಮೊತ್ತವನ್ನು ಪಾವತಿಸಲು ನಿವೇಶನ ಪಡೆದವರು ಕಾಲಾವಕಾಶ ಕೇಳಿದ್ದಾರೆ. ಹಾಗಾಗಿ ಸಾಲ ಮರುಪಾವತಿಗೆ ಬಿಡಿಎ ಹೊಸ ದಾರಿ ಕಂಡುಕೊಳ್ಳಬೇಕಾದ ಅನಿವಾರ್ಯ ಎದುರಿಸುತ್ತಿದೆ.

ಹರಾಜು ಆಗಿದ್ದು 5 ನಿವೇಶನ: ಬಿಡಿಎ ಇತ್ತೀಚೆಗೆ 30 ಮೂಲೆ ನಿವೇಶನಗಳ ಹರಾಜಿಗೆ ಅರ್ಜಿ ಆಹ್ವಾನಿಸಿತ್ತು. 2017ರ ಜನವರಿ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಹರಾಜಿನಲ್ಲಿ ಕೇವಲ ಐದು ನಿವೇಶನಗಳು ಮಾತ್ರ ಹರಾಜಾಗಿವೆ. ನಿವೇಶನ ಖರೀದಿಗೆ ಪೈಪೋಟಿಯೇ ಇರದ ಕಾರಣ ಬಿಡಿಎ ನಿರೀಕ್ಷಿಸಿದಷ್ಟು ಆದಾಯ ಹರಾಜಿನಿಂದ ಬಂದಿಲ್ಲ. ಡಿಸೆಂಬರ್‌ ತಿಂಗಳಲ್ಲಿ 50 ಮೂಲೆ ನಿವೇಶನಗಳ ಹರಾಜು ನಡೆಸಿದಾಗಲೂ ಕೇವಲ 5 ಮಂದಿ ಭಾಗವಹಿಸಿದ್ದರು.

ದರ ಹೆಚ್ಚಿಸಿದ್ದ ಬಿಡಿಎ: ಮೂಲೆ ನಿವೇಶನಗಳಿಂದ ಹೆಚ್ಚು ಆದಾಯ ಗಳಿಸುವ ಉದ್ದೇಶದಿಂದ ಬಿಡಿಎ ಅವುಗಳ ಹರಾಜಿನ ಆರಂಭಿಕ ದರವನ್ನು ಇತ್ತೀಚೆಗೆ ಹೆಚ್ಚಳ ಮಾಡಿತ್ತು. ನಿವೇಶನದಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ನಿವೇಶನವನ್ನು ಆಧಾರವಾಗಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ದೊಡ್ಡ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ, ಆರ್ಥಿಕ ವಹಿವಾಟುಗಳ ಮೇಲೆ ನಿಗಾ ಹೆಚ್ಚಿಸಿದ್ದರಿಂದ ಬಿಡಿಎ ಲೆಕ್ಕಾಚಾರ ಏರುಪೇರಾಯಿತು.

ಹರಾಜು ಹೇಗೆ?: ಮಾರುಕಟ್ಟೆ ದರವನ್ನು ಆಧರಿಸಿ ಬಿಡಿಎ ಪ್ರತಿ ಬಡಾವಣೆಯ ಮೂಲೆ ನಿವೇಶನಕ್ಕೆ ಮೂಲ ದರವನ್ನು ನಿಗದಿಪಡಿಸುತ್ತದೆ.  ಪ್ರತಿ ಚದರ ಅಡಿ ಜಾಗದ ಬೆಲೆಯ ಮೇಲೆ ₹ 500ರ ಗುಣಕಗಳಲ್ಲಿ ಹರಾಜಿನ ದರವನ್ನು ಹೆಚ್ಚಿಸುತ್ತಾ ಸಾಗಬೇಕು.

‘ಹರಾಜಿಗೆ ಇಟ್ಟಿರುವ ನಿವೇಶನಗಳ ಸಂಖ್ಯೆಗಿಂತ ಅದನ್ನು ಖರೀದಿಸಲು ಆಸಕ್ತಿ ಹೊಂದಿರುವವರ ಸಂಖ್ಯೆ ಹೆಚ್ಚು ಇದ್ದರೆ, ಆ ನಿವೇಶನಕ್ಕೆ  ಉತ್ತಮ ಬೆಲೆ ಸಿಗುತ್ತದೆ. ಆದರೆ, ಹರಾಜಿನಲ್ಲಿ ಬೆರಳೆಣಿಕೆಯಷ್ಟೇ ಮಂದಿ ಭಾಗವಹಿಸಿದ್ದಾರೆ. ಹಾಗಾಗಿ ನಿರೀಕ್ಷೆ ಮಾಡಿದಷ್ಟು ಆದಾಯ ಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬಿಡಿಎ ಮೂಲೆ ನಿವೇಶನಗಳಿಗೆ ಈ ಹಿಂದೆ ಉತ್ತಮ ಬೇಡಿಕೆ ಇತ್ತು. ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟು ರದ್ದತಿ ಬಳಿಕ ಮೂಲೆ ನಿವೇಶನಗಳ ಬೇಡಿಕೆ ಕಡಿಮೆ ಆಗಿದೆ. ಆದಾಯ ತೆರಿಗೆ ಇಲಾಖೆ ಭಾರಿ ಮೊತ್ತದ ಆರ್ಥಿಕ ವಹಿವಾಟುಗಳ ಮೇಲೆ ಹೆಚ್ಚು ನಿಗಾ ವಹಿಸುತ್ತಿವೆ. ಹಾಗಾಗಿ ಬಿಡಿಎ ಮೂಲೆ ನಿವೇಶನಗಳ ಖರೀದಿಗೆ, ಫ್ಲ್ಯಾಟ್‌ಗಳ ಖರೀದಿಗೆ ಜನ ಹೆಚ್ಚು ಆಸಕ್ತಿ ತೋರುತ್ತಿಲ್ಲ’ ಎಂದು  ಅವರು ವಿಶ್ಲೇಷಿಸಿದರು.

ನಿವೇಶನದ ದರ ಇಳಿಸಲು ಚಿಂತನೆ: ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಲು ದಾರಿ ಹುಡುಕುತ್ತಿರುವ ಬಿಡಿಎ ಮೂಲೆ ನಿವೇಶನಗಳ ಹರಾಜಿನ ವೇಳೆ ಆರಂಭಿಕ ದರವನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ.

‘ಎರಡು ಬಾರಿ ಹರಾಜು ನಡೆಸಿದಾಗಲೂ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗವಹಿಸಿಲ್ಲ. ಮೂಲೆ ನಿವೇಶನಗಳನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಿಂತ ಅವುಗಳ ಮೂಲ ದರವನ್ನು ಕಡಿಮೆ ಮಾಡುವ ಚಿಂತನೆ ಇದೆ. ನಿರ್ದಿಷ್ಟ ನಿವೇಶನಕ್ಕೆ ಹೆಚ್ಚು ಬೇಡಿಕೆ ಇದ್ದರೆ ಹರಾಜಿನಲ್ಲಿ ತನ್ನಿಂದ ತಾನೆ ಅದು ಹೆಚ್ಚು ಮೊತ್ತಕ್ಕೆ ಮಾರಾಟವಾಗಲಿದೆ’ ಎಂದು ಅವರು ವಿವರಿಸಿದರು. 

ಕೆಂಪೇಗೌಡ ಬಡಾವಣೆ ಶುಲ್ಕ ಪಾವತಿ  ವಿಳಂಬ: ‘ವಿವಿಧ ಖಾಸಗಿ ಬ್ಯಾಂಕ್‌ಗಳಿಂದ ಪಡೆದ ಅಲ್ಪಾವಧಿ ಸಾಲವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆಯಿಂದ ಬರುವ ಹಣದಿಂದ ಮರುಪಾವತಿ ಮಾಡುತ್ತೇವೆ. ಇದರಿಂದ  ಬಿಡಿಎಗೆ ₹ 1,100 ಕೋಟಿ ಬರಬೇಕಿದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ರಾಜಕುಮಾರ್‌ ಖತ್ರಿ ತಿಳಿಸಿದ್ದರು. ಶುಲ್ಕ ಪಾವತಿಗೆ 2 ತಿಂಗಳು ಕಾಲಾವಕಾಶ ವಿಸ್ತರಿಸಲಾಗಿದೆ. ಹಾಗಾಗಿ ಬಿಡಿಎಗೆ ಹಣ ಬರುವುದು ಇನ್ನಷ್ಟು ತಡವಾಗಲಿದೆ.

‘ಆರ್ಥಿಕ ಮುಗ್ಗಟ್ಟಿನಿಂದ ಹೊರಗೆ ಬರಲು ಬಿಡಿಎ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಸರ್ಕಾರ ಬಿಡಿಎ ನೆರವಿಗೆ ಬರಬೇಕು. ಇಲ್ಲದಿದ್ದರೆ ಜಾರಿಯಲ್ಲಿರುವ ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಉಂಟಾಗಲಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ ಅಭಿಪ್ರಾಯಪಡುತ್ತಾರೆ.

ಸಾಲದ ಸುಳಿಗೆ ಸಿಲುಕಿದ್ದು ಹೇಗೆ?
‘ಕೆರೆ, ಉದ್ಯಾನಗಳ ಅಭಿವೃದ್ಧಿ, ಮೇಲ್ಸೇತುವೆ, ಗ್ರೇಡ್‌ ಸೆಪರೇಟರ್‌ ಕಾಮಗಾರಿಗಳಿಗಾಗಿ ಪ್ರಾಧಿಕಾರವು  ₹ 3 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿದೆ. ಇವುಗಳಿಂದ ಬಿಡಿಎಗೆ ಆದಾಯ ಬರುವುದಿಲ್ಲ. ಇವುಗಳಲ್ಲಿ ಅನೇಕ ಯೋಜನೆಗಳು ಬಜೆಟ್‌ನಲ್ಲಿ ಸೇರಿರಲಿಲ್ಲ. ಬಜೆಟ್‌ ಕೊರತೆ ಉಂಟಾಗಿದ್ದರಿಂದ ಸಾಲ ಮಾಡಬೇಕಾದ ಇಕ್ಕಟ್ಟಿನಲ್ಲಿ ಬಿಡಿಎ ಸಿಲುಕಿದೆ’ ಎಂದು  ಅಧಿಕಾರಿಯೊಬ್ಬರು ವಿವರಿಸಿದರು. 

ಆರು ವಸತಿ ಯೋಜನೆಗಳಿಗೆ ಬಿಡಿಎ ಹುಡ್ಕೊದಿಂದ  ₹ 200 ಕೋಟಿ ಸಾಲ ಪಡೆದಿದೆ. ಇದರಲ್ಲಿ ₹ 174.54 ಕೋಟಿಯನ್ನು  ಬಳಸಿಕೊಂಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಿಂದ ಪಡೆದ ₹ 73.61 ಕೋಟಿ ಸಾಲಕ್ಕೆ ವಿಶ್ವೇಶ್ವರಯ್ಯ ಬಡಾವಣೆಯ 150 ಮೂಲೆ ನಿವೇಶನಗಳನ್ನು, ಕಾರ್ಪೊರೇಷನ್‌ ಬ್ಯಾಂಕ್‌ನಿಂದ ಪಡೆದ  ₹ 46.99 ಕೋಟಿ ಸಾಲಕ್ಕೆ ವಿಶ್ವೇಶ್ವರಯ್ಯ ಬಡಾವಣೆಯ 100 ಮೂಲೆ ನಿವೇಶನಗಳನ್ನು, ಕೆನರಾ ಬ್ಯಾಂಕ್‌ನಿಂದ ಪಡೆದ ₹ 250 ಕೋಟಿ ಅಲ್ಪಾವಧಿ (ಆರು ತಿಂಗಳು) ಸಾಲಕ್ಕೆ ವಿಶ್ವೇಶ್ವರಯ್ಯ ಬಡಾವಣೆಯ 150 ಮೂಲೆ ನಿವೇಶನಗಳನ್ನು ಅಡಮಾನ ಇಟ್ಟಿದೆ.

ಫ್ಲ್ಯಾಟ್‌ ಹಂಚಿಕೆ– ಕಾಲಾವಕಾಶ ವಿಸ್ತರಣೆ
ಆಲೂರು, ಕೊಮ್ಮಘಟ್ಟ, ದೊಡ್ಡಬನಹಳ್ಳಿ, ಕಣಿಮಣಿಕೆ, ಮಾಳಗಾಲ, ವಳಗೇರಹಳ್ಳಿಗಳಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ 3,512 ಫ್ಲ್ಯಾಟ್‌ಗಳ ಹಂಚಿಕೆಗೆ ಬಿಡಿಎ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಬಾರದಿದ್ದುದರಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಈ ಹಿಂದೆ ಎರಡು ಬಾರಿ ವಿಸ್ತರಿಸಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿಯನ್ನು ಬಿಡಿಎ ಮೂರನೇ ಬಾರಿ ವಿಸ್ತರಣೆ ಮಾಡಿದೆ.

‘ಅರ್ಜಿ ಸಲ್ಲಿಸಲು ಫೆಬ್ರುವರಿ 28 ಕೊನೆಯ ದಿನವಾಗಿತ್ತು. ಅಷ್ಟರವರೆಗೆ ಕೇವಲ 1,800 ಅರ್ಜಿಗಳು ಮಾತ್ರ ಬಂದಿವೆ. ಹಾಗಾಗಿ ಅವಧಿಯನ್ನು ಮಾರ್ಚ್‌ 18ರವರೆಗೆ ವಿಸ್ತರಣೆ ಮಾಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

3 ಸಾವಿರ ಮೂಲೆ ನಿವೇಶನಗಳಿವೆ
‘ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮೂಲೆ ನಿವೇಶನಗಳಿವೆ. ಅವುಗಳ ಹರಾಜಿನಿಂದ ಬಿಡಿಎಗೆ ಆದಾಯವೂ ಬರಲಿದೆ. ನೋಟು ರದ್ದತಿ ಕಾರಣ ನಿವೇಶನಗಳಿಗೆ ಬೇಡಿಕೆ ಕುಸಿದಿರುವುದು ನಿಜ. ಆದರೆ, ಅದು ಶಾಶ್ವತವೇನಲ್ಲ. ಈ ನಿವೇಶನಗಳಿಗೆ ಮತ್ತೆ ಬೇಡಿಕೆ ಕುದುರಲಿದೆ’ ಎಂದು ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರಿದ ಶೋಧ

ಬೆಂಗಳೂರು
ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರಿದ ಶೋಧ

23 May, 2017
‘ಮಕ್ಕಳು ಲೋಗೊ ಇರುವ ಸಮವಸ್ತ್ರದಲ್ಲೇ ಬರಬೇಕು’

ಬೆಂಗಳೂರು
‘ಮಕ್ಕಳು ಲೋಗೊ ಇರುವ ಸಮವಸ್ತ್ರದಲ್ಲೇ ಬರಬೇಕು’

23 May, 2017
ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ

ಬೆಂಗಳೂರು
ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ

23 May, 2017
ರೌಡಿ ನಾಗ ಮತ್ತೆ ಕಸ್ಟಡಿಗೆ

ಬೆಂಗಳೂರು
ರೌಡಿ ನಾಗ ಮತ್ತೆ ಕಸ್ಟಡಿಗೆ

23 May, 2017

ಬೆಂಗಳೂರು
27ರಂದು ಎಂಡೋ ಪೀಡಿತರ ಆಮರಣಾಂತ ಉಪವಾಸ

‘ಯಾವುದೇ ಸರ್ಕಾರಗಳು ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನ್ಯಾಯಾಲಯಗಳ ಆದೇಶಗಳನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ’ ಎಂದು ದೂರಿದರು.

23 May, 2017