ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಕಟ್ಟಡ ಕಾಮಗಾರಿ ನನೆಗುದಿಗೆ

Last Updated 13 ಮಾರ್ಚ್ 2017, 5:11 IST
ಅಕ್ಷರ ಗಾತ್ರ

ಕುಮಟಾ: ಪಟ್ಟಣದ ಹೃದಯ ಭಾಗದಲ್ಲಿ  ಐದು ತಿಂಗಳ ಹಿಂದೆ ಆರಂಭಗೊಂಡಿದ್ದ  ₹ 5 ಕೋಟಿ ವೆಚ್ಚದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರ ಕಟ್ಟಡ ಕಾಮಗಾರಿ ಹಣಕಾಸು ತೊಂದರೆ ಯಿಂದಾಗಿ ಈಗ ನನೆಗುದಿಗೆ ಬಿದ್ದಿದೆ.

ಕಳೆದ ಅಕ್ಟೋಬರ್ 15 ರಂದು ಅಂದಿನ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರು ಸರ್ಕಾರಿ ಪದವಿ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸಗೈದಿದ್ದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆ.ಆರ್‌.ಐ.ಡಿ.ಎಲ್‌) ಕಟ್ಟಡ ಕಾಮಗಾರಿ ನಿರ್ವಹಿಸುವ ಜವಾಬ್ದಾರಿ ನೀಡಲಾಗಿತ್ತು. ಕಟ್ಟಡದ ನೆಲ ಅಂತಸ್ತಿಗೆ  ₹2 ಕೋಟಿ, ಮೊದಲ ಹಾಗೂ ಎರನೇ ಅಂತಸ್ತು ನಿರ್ಮಾಣಕ್ಕೆ ರೂ. ಮೂರು ಕೋಟಿ ಸೇರಿ ಒಟ್ಟೂ ₹ 5 ಕೋಟಿ  ಮಂಜೂರಾಗಿತ್ತು.

‘ಆರಂಭದಲ್ಲಿ ₹27 ಲಕ್ಷ ಬಿಡುಗಡೆಯಾಗಿ, ಶಿಲಾನ್ಯಾಸಗೈದ ಮರುದಿನದಿಂದಲೇ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು.  ಬಿಡುಗಡೆಯಾದ ಮೊತ್ತ ಬಳಸಿ ಅಡಿಪಾಯ ಹಾಗೂ ಅದರ ಸಿಮೆಂಟ್ ಕಂಬಗಳನ್ನುಆರಂಭಿಸಿ ಹಾಗೆಯೇ ಬಿಡಲಾಗಿದೆ. ಮುಂದಿನ ಹಣ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು’ ಎಂದು ಕಟ್ಟಡ ಕಾಮಗಾರಿ ಉಸ್ತುವಾರಿ ವಹಿಸಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯ ಎಂಜಿನಿಯರ್ ಲೋಹಿತ್ ನಾಯ್ಕ ತಿಳಿಸುತ್ತಾರೆ.

ಇತಿಹಾಸ: ಸುಮಾರು ಏಳು ವರ್ಷಗಳ ಹಿಂದೆ ಮಾಜಿ ಶಾಸಕ ದಿವಂಗತ ಮೋಹನ ಶೆಟ್ಟಿ ಅವರ ಅವಧಿಯಲ್ಲಿ ಕುಮಟಾ ಪಟ್ಟಣಕ್ಕೆ ಮಂಜೂರಾಗಿದ್ದ ಸರ್ಕಾರಿ ಪದವಿ ಕಾಲೇಜು ಆರಂಭಿಸಲು ಆಗ ಕಟ್ಟಡವೇ ಇರಲಿಲ್ಲ. ಪಟ್ಟಣದ ಮೂರೂರು ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ ಸಂಸ್ಥೆಯ ಸುಮಾರು 40 ಎಕರೆ ಜಾಗದಲ್ಲಿ ಹಿಂದೆ ಶಿಕ್ಷಕ ಅಭ್ಯರ್ಥಿಗಳ ತರಬೇತಿ ಸಂಸ್ಥೆಗೆ ಬಳಸುತ್ತಿದ್ದ ಹಳೆಯ ಕಟ್ಟಡವನ್ನೇ ( ಟಿ.ಸಿ.ಎಚ್ ಕಾಲೇಜು) ಕೊಂಚ ದುರಸ್ತಿ ಮಾಡಿ ಸರ್ಕಾರಿ ಪದವಿ ಕಾಲೇಜು ಆರಂಭಿಸಲಾಯಿತು.

ಮುಂದೆ ಕಾಲೇಜಿನ ಕಟ್ಟಡಕ್ಕೆ ಎಲ್ಲೂ ಸೂಕ್ತ ಸ್ಥಳ ದೊರೆಯದಿದ್ದಾಗ ಹಳೆಯ ಕಟ್ಟಡದ ಪಕ್ಕದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ  ಮೂರು ಎಕರೆ ಜಾಗವನ್ನೇ ಮಂಜೂರಿ ಮಾಡಿಸಲಾಯಿತು. ಈಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಸುಮಾರು 1,750 ವಿದ್ಯಾರ್ಥಿಗಳು ಓದುತ್ತಿದ್ದು ಅವರಲ್ಲಿ ಮುಕ್ಕಾಲು ಪಾಲು ವಿದ್ಯಾರ್ಥಿನೀಯರೇ ಇದ್ದಾರೆ. ಸುಮಾರು 125 ಜನ ಅಧ್ಯಾಪಕ ಹಾಗೂ ಇತರೆ ಸಿಬ್ಬಂದಿ ಇದ್ದಾರೆ. ಈಗ ಇರುವ ಹಳೆಯ ಕಟ್ಟಡದಲ್ಲಿ ಶೌಚಾಲಯ, ತರಗತಿ ಕೋಣೆ ಸೇರಿದಂತೆ ಯಾವುದೂ ಸಮರ್ಪಕ ವಾಗಿಲ್ಲ. ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣ ಇಲಾಖೆಯಿಂದ ಕಟ್ಟಡಕ್ಕೆ ಮಂಜೂರಾದ ₹ 5 ಕೋಟಿ ಪೈಕಿ ಕಾಮಗಾರಿಗೆ ಕೇವಲ ₹27 ಲಕ್ಷ ಮಾತ್ರ  ಬಿಡುಗಡೆಯಾಗಿರುವುದರಿಂದ ಕಳೆದ ಐದು ತಿಂಗಳಿಂದ ಕಟ್ಟಡ ಕಾಮಗಾರಿ ನನೆಗುದಿಗೆ ಬೀಳುವಂತಾಗಿದೆ.

**

ಬಿಡುಗಡೆಯಾದ ಮೊತ್ತ ಬಳಸಿ  ಕೆಲ ಕಾಮಗಾರಿ ಆರಂಭಿಸಲಾಗಿದೆ. ಮುಂದಿನ ಹಣ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು.
–ಲೋಹಿತ್ ನಾಯ್ಕ, ಕಾಮಗಾರಿ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT