ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ಹಾಲಕ್ಕಿಗಳ ಸುಗ್ಗಿ ಕುಣಿತ

Last Updated 13 ಮಾರ್ಚ್ 2017, 5:40 IST
ಅಕ್ಷರ ಗಾತ್ರ

ಅಂಕೋಲಾ: ಪ್ರತಿ ವರ್ಷದಂತೆ ಹೋಳಿ ಹಬ್ಬದ ಮುನ್ನಾ ದಿನವಾದ ಭಾನುವಾರ ಸಮೀಪದ ಬೆಳಂಬಾರದ ಹಾಲಕ್ಕಿಗಳ ಸುಗ್ಗಿ ಕುಣಿತ ಹಾಗೂ ವಿವಿಧ ಸಾಮಾಜಿಕ, ರಾಜಕೀಯ ವಿದ್ಯಮಾನ ಗಳ ವಿಡಂಬನೆಗಳ ಪ್ರದರ್ಶನ ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿತು.

ಹಿನ್ನೆಲೆ: ಬ್ರಿಟಿಷರ ಕಾಲದಿಂದಲೂ ಹಾಲಕ್ಕಿಗಳ ವ್ಯಂಗ್ಯ ವಿಡಂಬನಾ ಸ್ವಾತಂತ್ರ್ಯವನ್ನು ಮನ್ನಿಸಲಾಗಿದೆ. ಇಡೀ ವರ್ಷದಲ್ಲಿ ನಡೆಯುವ ಹತ್ತು ಹಲವಾರು ಹಗರಣಗಳನ್ನು ವರ್ಣರಂಜಿತವಾಗಿ ವೇಷಭೂಷಣಗಳೊಂದಿಗೆ ಎತ್ತಿನ ಬಂಡಿಯಲ್ಲಿ ನಿಂತುಕೊಂಡು ಪಟ್ಟಣದಾದ್ಯಂತ ಸಂಚರಿಸುತ್ತ ಹಾಲಕ್ಕಿಗಳ ಅಭಿಜಾತ ಕಲೆಯಾದ ಸುಗ್ಗಿ ಕುಣಿತವನ್ನು ಪ್ರದರ್ಶಿಸುವುದು ವಾಡಿಕೆಯಾಗಿದೆ. ಬೆಳಂಬಾರದ ಸುಗ್ಗಿ ಬಂದಿತೆಂದರೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಹತ್ತು ಹಲವಾರು ಗ್ರಾಮಗಳ ಜನರಿಗೆ ಸಡಗರ-ಸಂಭ್ರಮಗಳು ಮೇಳೈಸುತ್ತವೆ.

ವರ್ಣರಂಜಿತ ತುರಾಯಿಗಳನ್ನು ತಲೆಗೆ ಕಟ್ಟಿಕೊಂಡು ಮದ್ದಲೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ಜಾನಪದ ಹಾಡುಗಳನ್ನು ಹಾಡುತ್ತ ಸಂಚರಿಸುವ ಸುಗ್ಗಿ ತಂಡಗಳು ಸಾರ್ವಜನಿಕರಿಂದ ಮತ್ತು ಕಲಾಭಿಮಾನಿಗಳಿಂದ ತಳಿಗೆ (ತೆಂಗಿನ ಕಾಯಿ, ವೀಳ್ಯದೆಲೆ ಮತ್ತು ಅಡಕೆ, ನಗದು) ಸ್ವೀಕರಿಸಿ ಅವರನ್ನು ಆಶೀರ್ವದಿಸುತ್ತವೆ. ಹತ್ತಾರು ಹಳ್ಳಿಗಳಲ್ಲಿ ಹೀಗೆ ಸುತ್ತಾಡುವ ಸುಗ್ಗಿ ತಂಡಗಳಿಗೆ ಸ್ಥಳೀಯರು ಊಟೋಪಚಾರ ನೀಡಿ ಗೌರವಿಸುತ್ತಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬೆಳಂಬಾರದ ಸುಗ್ಗಿ ಕುಣಿತ ಪ್ರದರ್ಶನವಾದ ನಂತರ ಬ್ರಿಟಿಷರ ಕಾಲದ ತಾಮ್ರದ ಮುದ್ರೆ ಇರುವ ದಂಡವನ್ನು ಗೌರವದ ಪ್ರತೀಕವಾಗಿ ತಂಡದ ಮುಖ್ಯಸ್ಥರಾದ ಊರ ಗೌಡರಿಗೆ ದಂಡಾಧಿಕಾರಿಗಳು ನೀಡುತ್ತಾರೆ.

ಗಮನ ಸೆಳೆದ ಹಗರಣಗಳು: ಇಂದಿನ ಸುಗ್ಗಿ ಪ್ರದರ್ಶನದಲ್ಲಿ ರಾಘವೇಶ್ವರ ಶ್ರೀಗಳ ಗೋ ರಕ್ಷಣೆ, ಮಹದಾಯಿ ಹೋರಾಟದಲ್ಲಿ ಪೊಲೀಸ್ ದೌರ್ಜನ್ಯ, ಮೋದಿಯ ನೋಟು ರದ್ದು, ದಕ್ಷಯಜ್ಞ, ಯಮ, ಕೈಲಾಸದಿಂದ ಬಂದ ದೇವತೆಗಳು ಸೇರಿದಂತೆ ವಿವಿಧ ವಿಡಂಬನೆಗಳು ಗಮನ ಸೆಳೆದವು. ಸಾವಿ ರಾರು ಜನರೊಂದಿಗೆ ಸುಗ್ಗಿ ಪ್ರದರ್ಶನ ವನ್ನು ಕೆಲವು ವಿದೇಶಿ ಪ್ರವಾಸಿಗರು ಕಣ್ಣು ತುಂಬಿಕೊಂಡು ಸಂಭ್ರಮಪಟ್ಟರು.

ಬಹುಮಾನ: ಹಗಣದ ಕಾಲು ನಡಿಗೆ ವಿಭಾಗದಲ್ಲಿ ಮಹಾದಾಯಿ ಹೋರಾಟ ಪ್ರಥಮ, ಕೈಲಾಸದಲ್ಲಿ ಶಿವ ದ್ವಿತೀಯ, ರಾಘವೇಶ್ವರ ಶ್ರೀಗಳ ಗೋ ರಕ್ಷಣೆ ತೃತೀಯ. ಚಕ್ಕಡಿ ಗಾಡಿ ವಿಭಾಗದಲ್ಲಿ ದಕ್ಷಯಜ್ಞ ಪ್ರಥಮ, ಬರಗಾಲ ನಿಧಿ ದ್ವಿತೀಯ, ಯಮ ತೃತೀಯ ಬಹುಮಾನವನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT