ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಕ್ಕೆ ಬೆಂಕಿಯಿಟ್ಟರೂ ನಗರಸಭೆ ಮೌನ!

ಕಸದ ಸಮಸ್ಯೆಗೆ ಸಿಗದ ಮುಕ್ತಿ, ಅಲ್ಲಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ
Last Updated 13 ಮಾರ್ಚ್ 2017, 6:34 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯಲ್ಲಿ ಕಸದ ಸಮಸ್ಯೆಗೆ ಸದ್ಯಕ್ಕೆ ಮುಕ್ತಿ ಸಿಗುವಂತೆ ಕಾಣಿಸುತ್ತಿಲ್ಲ. ನಗರಸಭೆ ನಿರ್ಲಕ್ಷ್ಯದಿಂದ ಪ್ರತಿನಿತ್ಯ ನೂರಾರು ಕ್ವಿಂಟಲ್‌ ತ್ಯಾಜ್ಯ ಪರಿಸರದ ಒಡಲು ಸೇರಿ ಹಾನಿ ಉಂಟು ಮಾಡುತ್ತಿದೆ. ನಾಲ್ಕು ತಿಂಗಳ ಹಿಂದೆ ನಗರಸಭೆ ಪೌರಾಯುಕ್ತರಾಗಿ ಬಂದ ಬಿ.ಶುಭಾ ಸರ್ಕಾರದ ಆದೇಶದಂತೆ ನಗರದಲ್ಲಿದ್ದ 40ಕ್ಕೂ ಹೆಚ್ಚು ಕಂಟೈನರ್‌ಗಳನ್ನು ತೆರವು ಮಾಡಿ ‘ಕಂಟೈನರ್‌ ಮುಕ್ತ ನಗರ’ವೆಂದು ಘೋಷಿಸಿಕೊಂಡರು. ಆದರೆ, ಕಸ ವಿಲೇವಾರಿಗೆ ಇಂದಿಗೂ ಪರ್ಯಾಯ ಮಾರ್ಗ ಕಂಡುಕೊಳ್ಳದ ಕಾರಣ ಕಸದ ಸಮಸ್ಯೆಗೆ ಮುಕ್ತಿ ಕಂಡಿಲ್ಲ. ಕಸ ಮುಕ್ತ ರಸ್ತೆ ಮಾಡಲು ನಗರಸಭೆ ಸಂಪೂರ್ಣ ವಿಫಲವಾಗಿದೆ.

ನೆಪಮಾತ್ರಕ್ಕೆ ಕಸ ಸಂಗ್ರಹಿಸಲು ಮನೆಯ ಬಳಿಗೆ ಬರುವ ಟ್ರ್ಯಾಕ್ಟರ್‌ಗಳು, ಐದು ನಿಮಿಷಗಳ ಕಾಲವೂ ಸ್ಥಳದಲ್ಲಿ ನಿಲ್ಲುವುದಿಲ್ಲ. ಇನ್ನು ಬಡಾವಣೆಗಳಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆ ಟ್ರ್ಯಾಕ್ಟರ್‌ ಕಾಣಿಸಿಕೊಳ್ಳುತ್ತವೆ. ಬೆಳ್ಳಂ ಬೆಳಿಗ್ಗೆಯೇ ಬಂದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದರೆ, ಟ್ರ್ಯಾಕ್ಟರ್‌ ವಿವಿಧ ಬಡಾವಣೆಗಳಿಗೆ ಬರುವುದು 10 ಗಂಟೆಯ ಬಳಿಕವಷ್ಟೆ! ಮನೆಯರೆಲ್ಲಾ ಬಾಗಿಲು ಹಾಕಿಕೊಂಡು ಕಚೇರಿಗೋ, ಕೆಲಸಕ್ಕೋ ಹೋದ ಬಳಿಕ ಬಂದರೆ ಏನು ಪ್ರಯೋಜನ ಎಂದು ನಾಗರಿಕರು ಪ್ರಶ್ನಿಸುತ್ತಾರೆ.

ಟ್ರ್ಯಾಕ್ಟರ್‌ ಮೂಲಕ ಕಸ ಸಂಗ್ರಹಿಸುವ ಕಾರ್ಯ ಮಡಿಕೇರಿಯಲ್ಲಿ ಸಂಪೂರ್ಣ ವಿಫಲವಾಗಿದ್ದರೂ ಸದಸ್ಯರು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಬಲವಾಗಿವೆ.

ಕಸಕ್ಕೆ ಬೆಂಕಿ; ಉಸಿರುಗಟ್ಟುವ ವಾತಾವರಣ: ನಗರಸಭೆ ಸಿಬ್ಬಂದಿ ಕಸವನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಅತ್ತ ಕಂಟೈನರ್‌ ಸುರಿದ ಸ್ಥಳದಲ್ಲಿ ಕಸ ಹಾಕಲು ಬಿಡುತ್ತಿಲ್ಲ. ಆದರೆ, ಕೆಲವೊಂದು ಬಡಾವಣೆಗಳಲ್ಲಿ ಸಿಮೆಂಟ್‌ನ ತೊಟ್ಟಿ ಇಡಲಾಗಿದೆ. ಇಲ್ಲಿಯೂ ನಿತ್ಯ ಕಸ ಸಂಗ್ರಹಿಸದ ಕಾರಣ ಬೇಸತ್ತು ಸುತ್ತಮುತ್ತಲ ಜನರು ಕಸಕ್ಕೆ ಬೆಂಕಿಯಿಡುತ್ತಿದ್ದಾರೆ. ಕಸ ಹೆಚ್ಚಾದರೆ ನಗರಸಭೆ ಸಿಬ್ಬಂದಿಯೇ ಬೆಂಕಿ ಹಾಕುತ್ತಿದ್ದಾರೆ ಎಂಬ ಆರೋಪವೂ ಬಲವಾಗಿದೆ.
ಒಂದು ವೇಳೆ ಕಸ ಸಂಗ್ರಹಿಸಿದ ಜಾಗದಲ್ಲಿ ಒಣಗಿದ ಹುಲ್ಲು, ಲಂಟಾನ, ಮರದ ಎಲೆಗಳಿದ್ದು ಬೆಂಕಿಯು ಕಾಡು ಅಥವಾ ಬೇಲಿಗೆ ವ್ಯಾಪಿಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿದೆ.

ಇನ್ನು ವಾಣಿಜ್ಯ ಮಳಿಗೆಗಳು ತಮ್ಮ ಅಂಗಡಿ ಕಸವನ್ನು ಸೂಕ್ತ ಸ್ಥಳ ಅಥವಾ ನಗರಸಭೆಯ ವಾಹನಗಳಿಗೆ ವಿಲೇವಾರಿ ಮಾಡುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸುತ್ತಮುತ್ತಲಿರುವ ಹೋಟೆಲ್‌, ಅಂಗಡಿಗಳು ತ್ಯಾಜ್ಯವನ್ನು ಎಲ್ಲಿ ಬೇಕೋ ಅಲ್ಲಿ ಹಾಕುತ್ತಿರುವ ಕಾರಣ ಪ್ರವಾಸಿ ತಾಣ ಮಡಿಕೇರಿಗೆ ಕಪ್ಪು ಚುಕ್ಕೆಯಾಗಿದೆ. ರಸ್ತೆ ಬದಿಯ ಪಾಸ್ಟ್‌ಫುಡ್‌ ತಳ್ಳುಗಾಡಿಗಳು ಸಂಜೆಯ ವೇಳೆ ವ್ಯಾಪಾರ ನಡೆಸಿ ಅಲ್ಲಿಯೇ ಕಸ ಸುರಿದು ಹೋಗುತ್ತಿದ್ದಾರೆ. ಸಾಕಷ್ಟು ಬಾರಿ ನಗರಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದರೂ ಅನುಷ್ಠಾನಕ್ಕೆ ಮಾತ್ರ ಬರುತ್ತಿಲ್ಲ. ಕಸ ಸಂಗ್ರಹಿಸಲು ಟಿಪ್ಪರ್‌ ಖರೀದಿಯೂ ನಡೆದಿಲ್ಲ.
ಪ್ರಮುಖ ವೃತ್ತಗಳಲ್ಲಿ ಕಸದ ತೊಟ್ಟಿಗಳಿಲ್ಲ..! ಇನ್ನು ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ನಗರಕ್ಕೆ ಲಗ್ಗೆಯಿಡುತ್ತಾರೆ. ಪ್ರಮುಖ ವೃತ್ತಗಳಲ್ಲಿ ಕಸ ಹಾಕಲು ಬುಟ್ಟಿಗಳಿಗೆ ಪರದಾಟ ನಡೆಸುವ ಪರಿಸ್ಥಿತಿಯಿದೆ.

ಮಡಿಕೇರಿ ಸಂತೆ ನಡೆಯುವ ಸ್ಥಳಗಳಲ್ಲೂ ತೊಟ್ಟಿಗಳಿಲ್ಲ. ಇದರಿಂದ ನೂರಾರು ಕ್ವಿಂಟಲ್‌ನಷ್ಟು ತ್ಯಾಜ್ಯ ಪರಿಸರ ಮಡಿಲಿಗೆ ಸೇರುತ್ತಿದೆ. ಹೋಮ್‌ಸ್ಟೇ ಹಾವಳಿಯೂ ವಿಪರೀತವಾಗಿದ್ದು, ಇವುಗಳೂ ಕಸ ವಿಲೇವಾರಿಗೆ ಮಾರ್ಗ ಕಂಡುಕೊಂಡಿಲ್ಲ. ಭವಿಷ್ಯದಲ್ಲಿ ಮಡಿಕೇರಿಗೆ ಕಸವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎನ್ನುತ್ತಾರೆ ನಾಗರಿಕರು.

ವಾರ್ಡ್‌ನತ್ತ ಸುಳಿಯದ ಸದಸ್ಯರು: ವಾರ್ಡ್‌ ನಾಗರಿಕರ ಸಮಸ್ಯೆ ಆಲಿಸಲೂ ನಗರಸಭೆ ಸದಸ್ಯರು ತಿರುಗಿಯೂ ನೋಡುತ್ತಿಲ್ಲ. ಒಳಚಂರಡಿಯಿಂದ ರಸ್ತೆ ಗಳೆಲ್ಲವೂ ಹಾಳಾಗಿವೆ. ಚಾಮುಂಡೇಶ್ವರಿ ನಗರ, ಪುಟಾಣಿ ನಗರ, ನಗರಸಭೆ ಹಿಂಭಾಗದ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಯುಜಿಡಿಗೆ ಬಲಿಯಾಗಿವೆ. ಗುಂಡಿಗೆ ಕಳಪೆ ಗುಣನಮಟ್ಟದ ಡಾಂಬರ್‌ ಹಾಕಿ ಮುಚ್ಚಲಾಗಿದ್ದು ಅಪಾಯ ಆಹ್ವಾನಿಸುತ್ತಿವೆ. ವಾಹನಗಳು ಹೋಗಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ತೀವ್ರವಾಗಲಿದೆ ಎಂದು ಆಪಾದನೆ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT