ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಗೆಲುವು ನಿಶ್ಚಿತ: ಮುಖ್ಯಮಂತ್ರಿ ವಿಶ್ವಾಸ

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಮಾರ್ಮಿಕ ಎಚ್ಚರಿಕೆ
Last Updated 13 ಮಾರ್ಚ್ 2017, 6:47 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಆದರೆ, ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳಬಾರದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. 1999ರ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ನಾನು ಕೂಡ ಸೋತಿದ್ದೆ...’
–ಇದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತ ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಮಾರ್ಮಿಕ ಎಚ್ಚರಿಕೆ.

ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದ ಮುಂಭಾಗ ಭಾನುವಾರ ಗುಂಡ್ಲುಪೇಟೆ ಮತ್ತು ಬೇಗೂರು ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಕಾರ್ಯ ಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹದೇವಪ್ರಸಾದ್‌ ನನ್ನ ಆಪ್ತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅವರ ನಿಧನವನ್ನು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಭಾರೀ ನಷ್ಟವಾಗಿದೆ’ ಎಂದರು.

‘ಗೀತಾ ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸ ಲಿದ್ದಾರೆ. ಹಾಗೆಂದುಕೊಂಡು ನಾವು ಸುಮ್ಮನೆ ಕುಳಿತು ಕೊಳ್ಳಬಾರದು. 1999ರ ಚುನಾವಣೆಯಲ್ಲಿ ಮತದಾನಕ್ಕೆ ಎರಡು ದಿನ ಇದ್ದಾಗ ಕ್ಷೇತ್ರಕ್ಕೆ ಬಂದೆ. ಮುಖಂಡರೆಲ್ಲರೂ ಆಗಲೇ ನೀವು ಗೆಲುವು ಸಾಧಿಸಿದ್ದೀರಿ ಎಂದರು. ನಾನು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಿಲ್ಲ. ಫಲಿತಾಂಶ ಬಂದಾಗ ಸೋತಿದ್ದೆ. ಹಾಗಾಗಿ, ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳಬಾರದು’ ಎಂದು ಹೇಳಿದರು.
ಹಾಲಹಳ್ಳಿಯಲ್ಲಿ ನಡೆದ ಮಹದೇವಪ್ರಸಾದ್ ಅವರ ಮಹಾಸ್ಮರಣೆಯಲ್ಲಿ ಪಕ್ಷದಿಂದ ಯಾರು ಸ್ಪರ್ಧಿಸಬೇಕೆಂಬ ಬಗ್ಗೆ ಕಾರ್ಯಕರ್ತರನ್ನೇ ಕೇಳಿದ್ದೆ. ಗೀತಾ ಅವರೇ ಸ್ಪರ್ಧಿಸ ಬೇಕೆಂದು ಒಕ್ಕೊರಲಿನಿಂದ ಹೇಳಿದ್ದೀರಿ. ಹಾಗಾಗಿ, ಅವರೇ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದರು.

‘ಈ ಕ್ಷೇತ್ರದ ಚುನಾವಣೆಯು ಏಕಪಕ್ಷೀಯವಾಗಿ ನಡೆಯ ಬೇಕೆಂಬುದು ನನ್ನಾಸೆ. ಗೀತಾ ಅವರು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಬೇಕು. ಇದೇ ನಾವು ಮಹದೇವಪ್ರಸಾದ್‌ ಅವರಿಗೆ ಸಲ್ಲಿಸುವ ಗೌರವವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸ ಬೇಕು’ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅನಗತ್ಯವಾಗಿ ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆ ಪಕ್ಷದ ಉಳಿದ ಮುಖಂಡರು ಇದೇ ಮನಸ್ಥಿತಿ ಹೊಂದಿದ್ದಾರೆ. ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ರೈತರಿಗೆ ₹ 42 ಸಾವಿರ ಕೋಟಿ ಸಾಲ ನೀಡಿದೆ. ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ₹ 10 ಸಾವಿರ ಕೋಟಿ ಸಾಲ ನೀಡಿದೆ. ಕೇಂದ್ರ ಶೇ 50ರಷ್ಟು ಸಾಲ ಮನ್ನಾ ಮಾಡಿದರೆ ರಾಜ್ಯವೂ ಅರ್ಧದಷ್ಟು ಸಾಲ ಮನ್ನಾ ಮಾಡಲಿದೆಯೆಂದು ಪ್ರಧಾನಿ ಮೋದಿಗೆ 6 ತಿಂಗಳ ಹಿಂದೆ ಪತ್ರ ಬರೆದಿದ್ದೆ. ಇಂದಿಗೂ ಉತ್ತರ ಬಂದಿಲ್ಲ ಎಂದು ದೂರಿದರು.

ಮೋದಿ ಹೇಳಿದಂತೆ ದೇಶದಲ್ಲಿ ಒಳ್ಳೆಯ ದಿನಗಳು ಬಂದಿಲ್ಲ. ವಿದೇಶದಲ್ಲಿರುವ ಭಾರತೀಯರ ಕಾಳಧನ ತಂದು ಜನರ ಖಾತೆಗಳಿಗೆ ₹ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. 15 ಪೈಸೆಯನ್ನೂ ಜಮೆ ಮಾಡಿಲ್ಲ. ಬಡವರಿಗೆ ಜನಪರ ಯೋಜನೆ ರೂಪಿಸಿಲ್ಲ ಎಂದು ಟೀಕಿಸಿದರು.

ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಗೀತಾ ಮಹದೇವಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಚಿವರಾದ ಬಸವರಾಜ ರಾಯರೆಡ್ಡಿ, ತನ್ವೀರ್‌ ಸೇಟ್‌, ಡಾ.ಎಚ್‌.ಸಿ. ಮಹದೇವಪ್ಪ, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎಸ್. ಜಯಣ್ಣ, ಕೆ. ವೆಂಕಟೇಶ್‌, ಎಸ್‌.ಕೆ. ಸೋಮಶೇಖರ್, ಆರ್‌. ಧರ್ಮಸೇನ, ಪಿ.ಎಂ. ನರೇಂದ್ರಸ್ವಾಮಿ, ಪಕ್ಷದ ಜಿಲ್ಲಾ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಎಸ್. ಬಸವರಾಜು, ಮುಖಂಡ ಎಚ್‌.ಎಂ. ಗಣೇಶ್‌ಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT